ಆನ್‌ಲೈನ್ ಮರಳು ಬುಕ್ಕಿಂಗ್ ಗೆ ತಾತ್ಕಾಲಿಕ ಸ್ಥಗಿತ!
ನೇತ್ರಾವತಿ ನದಿ ನೀರಿನ ಒಳಹರಿವು-ಪ್ರತಿಕೂಲ ಹವಾಮಾನ
►ಸ್ವೀಕೃತ ಬುಕ್ಕಿಂಗ್ ಗಳಿಗೆ ಆದ್ಯತೆ ಮೇರೆಗೆ ಸರಬರಾಜು
ಬಂಟ್ವಾಳ, ಜು. 26: ಡಿ.ಕೆ. ಸ್ಯಾಂಡ್ ಬಝಾರ್‌ನಿಂದ ಆನ್‌ಲೈನ್ ಮೂಲಕ ಸಾರ್ವಜನಿಕರಿಗೆ ಕಡಿಮೆ ದರಲ್ಲಿ ವಿತರಣೆಯಾಗುತ್ತಿದ್ದ ಮರಳು ಬುಕ್ಕಿಂಗ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾ ಗಿದೆ. ನೇತ್ರಾವತಿ ನದಿಯಲ್ಲಿ ನೀರಿನ ಒಳಹರಿವು ಹಾಗೂ ಪ್ರತಿಕೂಲ ಹವಾಮಾನದಿಂದಾಗಿ ಮರಳು ಕಾಯ್ದಿರಿಸುವಿಕೆ ಹಾಗೂ ಮರಳು ವಿತರಣಾ ಕಾರ್ಯ ವನ್ನು ನಿಲ್ಲಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮರಳುಗಾರಿಕೆಯಲ್ಲಿ ಪಾರದರ್ಶಕತೆ ತರಲು ಹಾಗೂ ಸುಲಭ ನಿರ್ವಹಣೆಗಾಗಿ ದ.ಕ. ಜಿಲ್ಲಾಧಿಕಾರಿ ನೇತೃತ್ವದ ದ.ಕ. ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಹಾಗೂ ಭೂವಿಜ್ಞಾನ ಮತ್ತು ಗಣಿ ಇಲಾಖೆಯ ಅಧೀನದಲ್ಲಿ ಆನ್‌ಲೈನ್ ಬುಕ್ಕಿಂಗ್ ಮೂಲಕ ಮರಳು ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಇದಕ್ಕಾಗಿ ತುಂಬೆ ವೆಂಟೆಡ್ ಡ್ಯಾಂನಿಂದ ಸುಮಾರು 500 ಮೀಟರ್ ದೂರದ ತಲಪಾಡಿ ಬಳಿ ನದಿಯಿಂದ ಡ್ರೆಜ್ಜಿಂಗ್ ಮೂಲಕ ಮೇಲೆತ್ತಲ್ಪಟ್ಟ ಮರಳನ್ನು ಪಕ್ಕದ ವಿಶಾಲವಾದ 2 ಯಾರ್ಡ್‌ನಲ್ಲಿ ಸಂಗ್ರಹಿಸಿ, ಆನ್‌ಲೈನ್ ಮೂಲಕ ಕಡಿಮೆ ದರಲ್ಲಿ ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತಿತ್ತು.
ಡ್ರೆಜ್ಜಿಂಗ್ ಆಗುತ್ತಿಲ್ಲ: ಡ್ರೆಜ್ಜಿಂಗ್ ಯಂತ್ರದ ಮೂಲಕ ಪಂಪ್ ಮಾಡಲಾದ ಹೂಳನ್ನು ಕಾಂಕ್ರೀಟಿಕೃತ ಹೊಂಡದಲ್ಲಿ ಸಂಗ್ರಹಿಸಿ ಅಲ್ಲಿಂದ ಹಿಟಾಚಿಗಳ ಮೂಲಕ ಲಾರಿಗಳಿಗೆ ತುಂಬಿ ಯಾರ್ಡ್‌ಗೆ ಸಾಗಿಸಲಾಗುತ್ತಿದೆ. ಆದರೆ, ನೇತ್ರಾವತಿ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಾದ ಕಾರಣ ಡ್ರೆಜ್ಜಿಂಗ್ ಕಾರ್ಯಕ್ಕೆ ಅಡಚಣೆ ಉಂಟಾಗುತ್ತಿದೆ. ಈ ಸಂದರ್ಭದಲ್ಲಿ ಡ್ರೆಜ್ಜಿಂಗ್ ಮಾಡಿದರೂ ಪೈಪ್‌ನಲ್ಲಿ ನೀರು ಮಾತ್ರ ಬರುತ್ತವೆ ಎಂದು ಮರಳು ಸಂಗ್ರಹಗಾರ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬಾರೀ ಬೇಡಿಕೆ: ದಿನದಿಂದ ದಿನಕ್ಕೆ ಮರಳಿಗಾಗಿ ಬೇಡಿಕೆ ಹೆಚ್ಚಾಗ ತೊಡಗಿದೆ. ಈ ಮೊದಲು ಆನ್‌ಲೈನ್ ಮೂಲಕ ಕಾಯ್ದಿರಿಸಿದ ಎಲ್ಲರಿಗೂ ಮರಳು ಪೂರೈಕೆ ಮಾಡಲಾಗುತ್ತಿತ್ತು. ಇದರಿಂದ ದಿನಾಲೂ ನೂರಾರು ಟಿಪ್ಪರ್, ಲಾರಿಗಳು ಈ ಪರಿಸರದಲ್ಲಿ ಓಡಾಟ ನಡೆಸುತ್ತಿದ್ದವು. ಮರಳಿನ ಬೇಡಿಕೆ ಹೆಚ್ಚಾದರಿಂದ ಯಾರ್ಡ್‌ನಲ್ಲಿ ಮರಳಿನ ಕೊರತೆ ಉಂಟಾದ ಬಳಿಕ ದಿನಕ್ಕೆ 100 ಬುಕ್ಕಿಂಗ್‌ಗಳಿಗೆ ಮಾತ್ರ ಮರಳು ಪೂರೈಕೆ ಮಾಡಲಾಗುತ್ತಿದ್ದವು. ಇದೀಗ ಮತ್ತಷ್ಟು ಬೇಡಿಕೆ ಹಿನ್ನೆಲೆಯಲ್ಲಿ ದಿನಕ್ಕೆ ಒಂದು ಮೊಬೈಲ್ ನಂಬರಿಗೆ ಒಂದೇ ಲೋಡ್ ಮರಳು ನೀಡುವ ವ್ಯವಸ್ಥೆ ಮಾಡಲಾಗಿದೆ.
ಕಾಯ್ದಿರಿಸುವಿಕೆ ಸ್ಥಗಿತಕ್ಕೆ ಕಾರಣವೇನು?
ಮೂರ್ನಾಲ್ಕು ದಿನಗಳಿಂದ ಆನ್‌ಲೈನ್‌ನಲ್ಲಿ ಮರಳು ಬುಕ್ಕಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರತಿಕೂಲ ಹವಾಮಾನದಿಂದ ಮುಂದಿನ ಪ್ರಕಟನೆವರೆಗೆ ಮರಳು ಬುಕ್ಕಿಂಗ್ ಅನ್ನು ಸ್ಥಗಿತಗೊಳಿಸಲಾಗಿದೆ. ಪ್ರಸಕ್ತ ಸ್ವೀಕರಿಸಿರುವ ಬುಕ್ಕಿಂಗ್‌ಗಳನ್ನು ಆದ್ಯತೆಯ ಮೇರೆಗೆ ಸರಬರಾಜು ಮಾಡಲಾಗುವುದು. ಅದೇ ರೀತಿ ಮನೆಕಟ್ಟುವವರು ಆಯಾಯ ಗ್ರಾಪಂನ ಅನುಮತಿ ಪತ್ರ, ಆರ್‌ಟಿಸಿ, ಅಗತ್ಯ ಬೇಕಾಗಿರುವ ಮರಳಿನ ಅಂದಾಜು ಹಾಗೂ ಮನೆ ಅಥವಾ ಜಾಗದ ಭಾವಚಿತ್ರದೊಂದಿಗೆ ದಾಖಲೆಗಳನ್ನು ಸಲ್ಲಿಸಬೇಕು. ಅದಲ್ಲದೆ, ಸಾಲೆತ್ತೂರು ಗ್ರಾಮದ ಬುಕ್ಕಿಂಗ್ ಅನ್ನು ತಡೆಹಿಡಿಯಲಾ ಗಿದೆ ಎಂದು ದ.ಕ. ಜಿಲ್ಲಾ ಮರಳು ಉಸ್ತುವಾರಿ ಸಮಿತಿಯ ವೆಬ್‌ಸೈಟ್ ಪ್ರಕಟನೆ ತಿಳಿಸಿದೆ.
ತುಂಬೆ ಸಮೀಪದ ತಲಪಾಡಿ ದಕ್ಕೆಯಿಂದ ಆನ್‌ಲೈನ್ ಮೂಲಕ ಪೂರೈಕೆಯಾಗುತ್ತಿರುವ ಮರಳಿಗೆ ಬೇಡಿಕೆ ಹೆಚ್ಚಾಗತೊಡಗಿದೆ. ಆದರೆ, ಮಳೆಗಾಲದಿಂದಾಗಿ ಡ್ರೆಜ್ಜಿಂಗ್‌ನಿಂದ ಮರಳಿನ ಲಭ್ಯತೆ ಕಡಿಮೆ ಇರುವುದರಿಂದ ಹಾಗೂ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ಬುಕ್ಕಿಂಗ್ ಕಾರ್ಯವನ್ನು ನಿಲ್ಲಿಸಲಾಗಿದೆ.
-ಸಸಿಕಾಂತ್ ಸೆಂಥಿಲ್,
ದ.ಕ. ಜಿಲ್ಲಾಧಿಕಾರಿ
ಅಕ್ರಮ ಮರಳುಗಾರಿಕೆಯಿಂದಾಗಿ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಹಾಗೂ ಅಕ್ರಮ ಚಟುವಟಿಕೆಗಳಿಗೆ ಹಣ ಪೂರೈಕೆಯಾಗಿದ್ದು, ಇದನ್ನು ತಡೆಗಟ್ಟುವಲ್ಲಿ ಜಿಲ್ಲಾಧಿಕಾರಿ ಅವರ ಈ ಯೋಜನೆಯು ಯಶಸ್ವಿಯಾಗಿದೆ. ಇದೇ ರೀತಿಯಲ್ಲಿ ಜಿಲ್ಲೆಯ ವಿವಿಧ ಕಡೆ ಮರಳು ದಕ್ಕೆ ನಿರ್ಮಿಸುವ ಮೂಲಕ ಮಾಜಿ ಸಚಿವರು, ಶಾಸಕರು ರಾಜಕೀಯ ರಹಿತವಾಗಿ ಬಡ ಕಾರ್ಮಿಕರಿಗೆ ಅನುಕೂಲವಾಗುವಂತೆ ಮರಳು ನೀತಿ ವ್ಯವಸ್ಥೆಗೆ ಸಂಪೂರ್ಣ ಬೆಂಬಲ ನೀಡಬೇಕಾಗಿದೆ.
-ಬೊಂಡಾಲ ಚಿತ್ತರಂಜನ್ ಶೆಟ್ಟಿ,
ಕಾರ್ಮಿಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ (ಇಂಟೆಕ್)