ಮೊಳಕೆ ಬರಿಸಿದ ಕಾಳುಗಳನ್ನು ಹಸಿಯಾಗಿಯೇ ತಿನ್ನುವುದು ಹಾನಿಕರ ಎನ್ನುವುದು ನಿಮಗೆ ಗೊತ್ತಿರಲಿ
ಮೊಳಕೆ ಬರಿಸಿದ ಕಾಳುಗಳು ಪೋಷಕಾಂಶಗಳ ಆಗರ ಎನ್ನುವುದನ್ನು ನಿರಾಕರಿಸುವಂತಿಲ್ಲ. ಈ ಕಾಳುಗಳಲ್ಲಿ ಸಮೃದ್ಧವಾಗಿರುವ ಪೌಷ್ಟಿಕಾಂಶಗಳು ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತವೆ,ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತವೆ. ಹೃದಯದ ಆರೋಗ್ಯವನ್ನು ಕಾಯ್ದುಕೊಳ್ಳುತ್ತವೆ,ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇವು ಈ ಕಾಳುಗಳು ಒದಗಿಸುವ ಕೆಲವು ಆರೋಗ್ಯಲಾಭಗಳಾಗಿವೆ. ಮೊಳಕೆ ಬರಿಸಿದ ಕಾಳುಗಳನ್ನು ಹಸಿಯಾಗಿಯೇ ತಿನ್ನಲು ಹೆಚ್ಚಿನವರು ಇಷ್ಟಪಡುತ್ತಾರೆ. ಆದರೆ ಹೀಗೆ ಹಸಿಯಾಗಿ ತಿನ್ನುವುದು ನಮ್ಮ ಶರೀರ ಮತ್ತು ಆರೋಗ್ಯಕ್ಕೆ ಹಾನಿಕರ ಎನ್ನುವುದು ವೈಜ್ಞಾನಿಕವಾಗಿ ರುಜುವಾತಾಗಿದೆ. ಮೊಳಕೆ ಬರಿಸಿದ ಕಾಳುಗಳನ್ನು ಹಸಿಯಾಗಿ ತಿನ್ನುವುದು ಹಲವೊಮ್ಮೆ ವಿಷಾಹಾರ,ಅಜೀರ್ಣ,ಮಲಬದ್ಧತೆ ಇತ್ಯಾದಿಗಳಿಗೆ ಕಾರಣವಾಗುತ್ತದೆ. ದೀರ್ಘಾಯಸ್ಸು ಮತ್ತು ಆರೋಗ್ಯಯುತ ಬದುಕಿಗಾಗಿ ಆಹಾರವನ್ನು ಅದರ ಸರಿಯಾದ ರೂಪದಲ್ಲಿ ಸೇವಿಸುವುದು ಅಗತ್ಯ. ಹಸಿ ಮೊಳಕೆ ಕಾಳುಗಳನ್ನು ತಿನ್ನುವುದರ ಸಂಭಾವ್ಯ ಅಪಾಯಗಳ ಕುರಿತು ಮಾಹಿತಿಯಿಲ್ಲಿದೆ......
► ಅವುಗಳಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಇರಬಹುದು.
ಬೆಚ್ಚಗಿನ ಮತ್ತು ಆರ್ದ್ರ ವಾತಾವರಣದಲ್ಲಿ ಮಾತ್ರ ಕಾಳುಗಳು ಮೊಳಕೆಯೊಡೆಯುತ್ತವೆ. ಹೀಗಾಗಿ ಅವುಗಳಲ್ಲಿ ಬ್ಯಾಕ್ಟೀರಿಯಾಗಳಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮೊಳಕೆ ಕಾಳುಗಳನ್ನು ತಿನ್ನುವುದು ರುಚಿಕಟ್ಟಾಗಿರಬಹುದು,ಆದರೆ ವಾಸ್ತವದಲ್ಲಿ ಅದು ಅಪಾಯದ ಗಂಟೆಯನ್ನು ಬಾರಿಸುತ್ತಿರುತ್ತದೆ.
► ಬ್ಯಾಕ್ಟೀರಿಯಾಗಳ ಬೆಳವಣಿಗೆ ವಿಷಾಹಾರಕ್ಕೆ ಕಾರಣವಾಗುತ್ತದೆ
ಪ್ರತಿದಿನ ಮೊಳಕೆ ಕಾಳುಗಳನ್ನು ತಿನ್ನುವುದು ವಿಷಾಹಾರದ ಅಪಾಯಕ್ಕೆ ಕಾರಣವಾಗುತ್ತದೆ. ಈ ಕಾಳುಗಳ ಬೀಜಗಳಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಸುಲಭವಾಗಿ ಆಶ್ರಯವನ್ನು ಪಡೆದುಕೊಳ್ಳುತ್ತವೆ. ಇವು ಹೊಟ್ಟೆಯನ್ನು ಕೆಡಿಸುತ್ತವೆ ಮತ್ತು ಕರುಳಿನ ಆರೋಗ್ಯಕ್ಕೆ ವ್ಯತ್ಯಯವನ್ನುಂಟು ಮಾಡುತ್ತವೆ.
► ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ
ಮೊಳಕೆ ಕಾಳುಗಳನ್ನು ಹಸಿಯಾಗಿ ತಿನ್ನುವುದರಿಂದ ಶರೀರದ ರೋಗ ನಿರೋಧಕ ಶಕ್ತಿಯು ಕಡಿಮೆಯಾಗುತ್ತದೆ. ವಿಶೇಷವಾಗಿ ವಯಸ್ಸಾದವರು,ಮಕ್ಕಳು ಮತ್ತು ಗರ್ಭಿಣಿಯರು ಈ ಕಾಳುಗಳ ಸೇವನೆಯಿಂದ ದೂರವೇ ಇರಬೇಕು. ಏಕೆಂದರೆ ಈ ವರ್ಗದವರು ಹಸಿ ಮೊಳಕೆ ಕಾಳುಗಳನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು ಮಾತ್ರವಲ್ಲ,ಜೀವಕ್ಕೂ ಅಪಾಯವುಂಟಾಗಬಹುದು. ಇವು ಬ್ಯಾಕ್ಟೀರಿಯಾಗಳಿಂದ ಕಲುಷಿತಗೊಂಡಿರುವುದರಿಂದ ಶರೀರವನ್ನು ದುರ್ಬಲಗೊಳಿಸುತ್ತವೆ ಮತ್ತು ಕಾಯಿಲೆಗಳಿಗೆ ಸುಲಭಭೇದ್ಯವಾಗಿಸುತ್ತವೆ. ಹೀಗಾಗಿ ಸಂಭಾವ್ಯ ಆರೋಗ್ಯ ಸಮಸ್ಯೆಗಳಿಂದ ಪಾರಾಗಲು ಮೊಳಕೆ ಕಾಳುಗಳನ್ನು ಸೇವಿಸುವ ಮುನ್ನ ಅವುಗಳನ್ನು ಕಡ್ಡಾಯವಾಗಿ ಬೇಯಿಸಲೇಬೇಕು.
► ಬಹು ರೋಗಗಳಿಗೆ ಕಾರಣವಾಗಬಹುದು
ಪ್ರತಿ ದಿನ ನಿಯಮಿತವಾಗಿ ಹಸಿ ಮೊಳಕೆ ಕಾಳುಗಳನ್ನು ತಿನ್ನುವುದರಿಂದ ಮೂತ್ರಪಿಂಡ ವೈಫಲ್ಯ, ಹೃದಯಾಘಾತ, ರುಮಟೈಡ್ ಸಂಧಿವಾತ,ಗರ್ಭಪಾತಗಳಿಂತಹ ಹಲವಾರು ಅರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆಯಿದೆ. ಅಷ್ಟೇ ಏಕೆ,ಸಾವು ಕೂಡ ಸಂಭವಿಸಬಹುದು.
ಆರೋಗ್ಯಲಾಭಗಳು
ಮೊಳಕೆ ಬರಿಸಿದ ಕಾಳುಗಳು ಅಸಂಖ್ಯಾತ ಆರೋಗ್ಯ ಲಾಭಗಳನ್ನು ನೀಡುತ್ತವೆ, ಆದರೆ ಸರಿಯಾಗಿ ಬೇಯಿಸಿ ಸೇವಿಸಿದರೆ ಮಾತ್ರ. ಅವು ಕೂದಲಿನ ಸಮಸ್ಯೆಗಳನ್ನು ಕಡಿಮೆಗೊಳಿಸುವ ಮೂಲಕ ಅದನ್ನು ಸದೃಢಗೊಳಿಸುತ್ತವೆ ಮತ್ತು ಅಕಾಲಿಕ ನರೆಯನ್ನು ತಡೆಯುತ್ತವೆ. ಶರೀರದಲ್ಲಿ ರಕ್ತ ಪರಿಚಲನೆ ಉತ್ತಮಗೊಳ್ಳುತ್ತದೆ. ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತವೆ. ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತವೆ ಮತ್ತು ದೇಹತೂಕವನ್ನು ಇಳಿಸಲು ನೆರವಾಗುತ್ತವೆ. ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತವೆ. ರಕ್ತಹೀನತೆಗೆ ಚಿಕಿತ್ಸೆ ನೀಡುತ್ತವೆ. ಶರೀರದ ಚಯಾಪಚಯವನ್ನು ಹೆಚ್ಚಿಸುತ್ತವೆ ಮತ್ತು ಚರ್ಮದ ಆರೋಗ್ಯವನ್ನು ಕಾಯ್ದುಕೊಳ್ಳುತ್ತವೆ. ಇವು ಮೊಳಕೆ ಕಾಳುಗಳು ನೀಡುವ ಆರೋಗ್ಯಲಾಭಗಳಲ್ಲಿ ಸೇರಿವೆ. ಆದರೆ ಇವೆಲ್ಲ ಆರೋಗ್ಯಲಾಭಗಳು ಬೇಯಿಸಿದ ಮೊಳಕೆ ಕಾಳುಗಳನ್ನು ಸೇವಿಸಿದರೆ ಮಾತ್ರ ದೊರೆಯುತ್ತವೆ ಎನ್ನುವುದು ನಿಮ್ಮ ಗಮನದಲ್ಲಿರಲಿ.