ಬೀದಿಯಿಂದೆದ್ದ ಕವಿತೆಗಳು...!
ಈ ಹೊತ್ತಿನ ಹೊತ್ತಿಗೆ
ಸೆಫ್ ಜಾನ್ಸೆ ಕೊಟ್ಟೂರು ಅವರ ‘ಹುಲ್ಲಿಗೆ ಹುಟ್ಟಿದ ಬೀದಿ’ ಕವನ ಸಂಕಲ ಹೆಸರೇ ಹೇಳುವಂತೆ ಹುಲ್ಲುಗರಿಯ ಬೀದಿಗೆ ಹುಟ್ಟಿದವುಗಳು. ಇದು ಲೇಖಕರ ಎರಡನೆಯ ಸಂಕಲನ. ಸಾಮಾಜಿಕ ನ್ಯಾಯವನ್ನು ಸಮರ್ಥಿಸುವ, ಜಾತಿ ಧರ್ಮದ ಅನ್ಯಾಯವನ್ನು ಖಂಡಿಸುವ, ಪ್ರೇಮದ ಪರವಾಗಿ ವಾದಿಸುವ, ನೋವಿಗೆ ದನಿ ನೀಡುವ ಸಾಲುಗಳೇ ಈ ಸಂಕಲನದ ಹೆಚ್ಚುಗಾರಿಕೆ. ವಿಮರ್ಶಕ ಕೆ. ಪಿ. ಸುರೇಶ್ ಅವರು ಹೇಳುವಂತೆ ‘‘ಆಯಾಸವಾಗದಂತೆ ಈ ಕವನಗಳು ಓದಿಸಿಕೊಂಡಿವೆ. ಈ ಮನಂಬುಗುವ ಬಗೆ ಕಾವ್ಯಕ್ಕೆ ಮುಖ್ಯ. ಇಲ್ಲಿರುವ ಕವಿತೆಗಳಿಗೆ ಆ ಓಘವಿದೆ. ಆದುದರಿಂದ ಅವರ ಮುಂದಿನ ಕಾವ್ಯದ ಹೆಜ್ಜೆಗತಿಗಳು ಸ್ಪಷ್ಟ. ಸಾಮಾಜಿಕತೆಯನ್ನು ಕಾವ್ಯವಾಗಿಸುವಾಗ ಅದಕ್ಕೊಂದು ಪ್ರಮಾಣ, ಘಟ್ಟ, ಸಮಾಪನದ ಕೌಶಲ್ಯ ಸಾಧಿಸಬೇಕು. ಜಾನ್ಸೆಯವರು ಇದನ್ನು ಕರಗತಗೊಳಿಸಿಕೊಳ್ಳುವ ಸೂಚನೆ ಇಲ್ಲಿನ ಕವನಗಳಲ್ಲಿವೆ....’’
ಸುಮಾರು 42 ಕವಿತೆಗಳು ಇಲ್ಲಿವೆ. ದಮನಿತರಿಗಾಗಿ ಡಿಕ್ಲೇಶನ್‌ಗಳು, ಪ್ರೀತಿ ಮತ್ತು ಮಳೆ, ಬಂಜೆತನದ ಸ್ಲೋಮೋಶನ್‌ಗಳು, ಬಿಲಿಮಿಯಾ, ಅಶಾಂತ ಸ್ವರ್ಗಗಳು, ಅತ್ಯಾಚಾರಿ ಕಡು ಪಶ್ಚಾತ್ತಾಪಗಳು, ಬುರ್ಖಾ ಗುಂಬಜ್, ಸುಟ್ಟ ನಕ್ಷತ್ರಗಳ ಬೀದಿಯಲ್ಲಿ, ಕನಸುಗಳೊಂದಿಗೆ ಮಲಗಲಾಗುವುದಿಲ್ಲ....ಮೊದಲಾದ ಕವನಗಳ ತಲೆಬರಹಗಳೇ ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಕಾವ್ಯದ ಬೆಂಕಿ ಕಾವನ್ನು ಹೊರಗೆಡಹುತ್ತದೆ. ಎಲ್ಲವೂ ಪ್ರತಿಭಟನೆಯ ನೆಲೆಯಿಂದ ಹುಟ್ಟಿದವುಗಳು. ಕಲೆಗಾಗಿ ಕಲೆ ಎನ್ನುವ ಕಾವ್ಯ ರಮ್ಯತೆಯ ಕುಸುರಿತನಗಳನ್ನು ಇಲ್ಲಿ ನಿರೀಕ್ಷಿಸುವಂತಿಲ್ಲ. ಕವಿಯೊಳಗಿರುವ ಬದ್ಧತೆಗಳಿಗೆ ಕಾವ್ಯ ತಲೆಬಾಗಿದಂತಿದೆ. ಕವಿಯೇ ಮೊದಲ ಮಾತಿನಲ್ಲಿ ಹೀಗೇ ಹೇಳಿಕೊಳ್ಳುತ್ತಾರೆ ‘‘ಅಸೂಯಪರ ದುರಾಸೆಯ ಹೊಟ್ಟೆಯಿಂದುದಿಸುತ್ತಿರುವ ಜಾತಿ, ಧರ್ಮ, ಹಣ, ರಾಜಕಾರಣ, ಭೋಗಾತ್ಮಕತೆಯ ಸಮೀಕರಣದ ಪಿಡುಗುಗಳು ಕೊಬ್ಬಿ ಬೋಧಿಸುತ್ತಿರುವ ಸಾಮಾಜಿಕ ಕ್ರೌರ್ಯಗಳನ್ನು ತನ್ನೊಡಲಿನ ಸಹಜ ಪ್ರಕ್ರಿಯೆಯನ್ನಾಗಿ ಸ್ವೀಕರಿಸಬಲ್ಲ ದಿಕ್ಕೆಟ್ಟ ಸ್ಥಿತಿಗೆ ಬಂದು ನಿಂತಿರುವ ರಕ್ತಗತ ಮನುಷ್ಯನ ಆಧುನಿಕ ಅಸ್ಥಿತ್ವದ ಕುರಿತೇ ಕಾವ್ಯ ಮಿಡಿಯಬೇಕಾಗಿದೆ. ಜೀತಕ್ಕಿಟ್ಟ ಕ್ಷುದ್ರ ಆವಾಸಗಳ ಸುತ್ತ ಸುಳಿದಾಡುತ್ತಲೇ ಬೀದಿಯ ತಿರುವುಗಳಲ್ಲಿ ಆರ್ದ್ರಗೊಂಡ ಕೈಗಳ ಹಿಡಿದೇ ಹೊತ್ತುಮೀರಿ ಮಾತನಾಡಬೇಕಾಗಿದೆ....’’ ಕವಿಯ ಈ ಆದೇಶವನ್ನು ಇಲ್ಲಿರುವ ಕವಿತೆಗಳು ಯಥಾವತ್ತಾಗಿ ಪಾಲಿಸುತ್ತವೆ.
‘‘...ಅನ್ನವೆಂಬುದು ಬಣ್ಣದ ಸಮಸ್ಯೆಯಾಗಲಿ
ನಿತ್ಯದ ನಿಯತ್ತಿನ ಕರ್ಮವಾಗಿ ಉಳಿದಿಲ್ಲ
ಬದಲಾಗಿ ಅನ್ನವೇ ಬದುಕಾಗಿ
ಉಸಿರುಗಳಿಗೆ ಅಂಟಿಸಿದ ಬೆಲೆಯ ಚೀಟಿಯಾಗಿವೆ....’’ ‘ಬುಲಿಮಿಯಾ’ ಕವಿತೆ ಹಸಿವಿನ ಒಡಲಲ್ಲಿ ಧಗಿಸುವ ಕಿಚ್ಚಾಗಿದೆ.
‘ಲೇಖನಿಯ ವೀರ್ಯತೆಯನ್ನು/ ಪರ-ವಿರೋಧದ ಟೊಳ್ಳಿಗಿಳಿಸಲಾರೆ/ರಕ್ತ ಸಿಕ್ತ ಹಕ್ಕಿಯ/ ಉರಿಗಟ್ಟುವ ನೋವಿಗೊಂದಿಷ್ಟು ತಣ್ಣನೆಯ ಮದ್ದು /ಅದರಾಚೆ ಅಕ್ಷರವ ದಣಿಸಲಾರೆ....’ ಎನ್ನುವ ಸಾಲು ಕವಿಯ ಕಾವ್ಯದ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಇಂತಹ ಉದ್ದೇಶ ಕಾವ್ಯದ ೆಗ್ಗಳಿಕೆಯೂ ಹೌದು, ಮಿತಿಯೂ ಹೌದು.
ರೇಣುಕಾ ಪ್ರಕಾಶನ ಹಾಸನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 124. ಮುಖಬೆಲೆ 100 ರೂಪಾಯಿ. ಆಸಕ್ತರು 9731709317 ದೂರವಾಣಿಯನ್ನು ಸಂಪರ್ಕಿಸಬಹುದು.