ಉದ್ಘಾಟನೆ ಭಾಗ್ಯ ಕಾಣದ ಶತಮಾನ ಕಂಡ ಮಲ್ಲೇಶ್ವರಂ ಹಳೆ ಮಾರುಕಟ್ಟೆ
ಬೆಂಗಳೂರು, ಜು.28: ಶತಮಾನ ಪೂರೈಸಿರುವ ಮಲ್ಲೇಶ್ವರಂನ ಹಳೆ ಮಾರುಕಟ್ಟೆ (ತರಕಾರಿ ಮಾರುಕಟ್ಟೆ) ನಿರ್ಮಾಣಗೊಂಡು ಒಂದು ವರ್ಷ ಕಳೆದರೂ ಉದ್ಘಾಟನೆ ಭಾಗ್ಯವನ್ನು ಇನ್ನೂ ಕಂಡಿಲ್ಲ.
ನಾಲ್ಕು ವರ್ಷಗಳ ಹಿಂದೆ ಹಳೆ ಮಾರುಕಟ್ಟೆಯನ್ನು ಬಹು ಬೇಗನೆ ಪುನರ್ ನಿರ್ಮಾಣ ಮಾಡುವುದಾಗಿ ಮೊದಲಿದ್ದ ವ್ಯಾಪಾರಸ್ಥರಿಗೆ ಬಿಬಿಎಂಪಿ ಭರವಸೆ ನೀಡಿತ್ತು. ಆದರೆ, ಪುನರ್ ನಿರ್ಮಾಣ ಮಾಡಲು ಮೂರು ವರ್ಷ ತೆಗೆದುಕೊಂಡ ಪಾಲಿಕೆಯೂ ನಿರ್ಮಾಣವಾದ ಮೇಲೂ ಉದ್ಘಾಟನೆಗೊಳಿಸಲು ಮೀನಾಮೇಷ ಎಣಿಸುತ್ತಿರುವುದರಿಂದ ವ್ಯಾಪಾರಸ್ಥರಲ್ಲಿ ಆತಂಕದ ಛಾಯೆ ಮೂಡಿದೆ.
ಹಳೆಯ ತರಕಾರಿ ಮಾರುಕಟ್ಟೆಯಲ್ಲಿ ಸುಮಾರು ನೂರು ವರ್ಷಗಳಿಂದ ವ್ಯಾಪಾರಸ್ಥರು ವ್ಯಾಪಾರ ಮಾಡಿಕೊಂಡು ಬರುತ್ತಿದ್ದರೂ ಪಾಲಿಕೆಯು ನಾಲ್ಕು ವರ್ಷಗಳ ಹಿಂದೆ ಬಂದು ವ್ಯಾಪಾರಸ್ಥರಿಗೆ ಮಾರುಕಟ್ಟೆಯನ್ನು ಪುನರ್ ನಿರ್ಮಾಣ ಮಾಡಿ, ಹೊಸ ಮಳಿಗೆಗಳನ್ನು ತೆರೆದು ಮೊದಲಿದ್ದ ವ್ಯಾಪಾರಸ್ಥರಿಗೆ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ನಿರ್ಮಾಣಗೊಂಡಿರುವ 48 ಮಳಿಗೆಗಳೂ ಇನ್ನೂ ವ್ಯಾಪಾರಸ್ಥರ ಹಂಚಿಕೆಯಾಗಿಲ್ಲ. ಉದ್ಘಾಟನೆಯನ್ನೂ ಕಂಡಿಲ್ಲ.
ಹಳೆ ಮಾರುಕಟ್ಟೆ ಇದ್ದಾಗ ವ್ಯಾಪಾರಸ್ಥರು ತಗಡಿನ ಸೀಟುಗಳನ್ನು ಹಾಕಿಕೊಂಡು ಬೆಳಗ್ಗೆಯಿಂದ ರಾತ್ರಿಯವರೆಗೆ ತರಕಾರಿ ವ್ಯಾಪಾರ ಮಾಡುತ್ತಿದ್ದರು. ಮಳೆ ಬಂದರೆ ವ್ಯಾಪಾರಸ್ಥರು ಹಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದರು. ಇದರ ಜೊತೆಗೆ ಇಲಿಗಳ ಕಾಟ, ಹೆಗ್ಗಣಗಳ ಕಾಟ, ನೀರಿನ ಸಮಸ್ಯೆಯೂ ಹೆಚ್ಚಾಗಿಯೆ ಇತ್ತು. ಈ ಎಲ್ಲ ಸಮಸ್ಯೆಗಳನ್ನು ಹೋಗಲಾಡಿಸಲು ಭರವಸೆ ನೀಡಿದ್ದ ಬಿಬಿಎಂಪಿಯು ಮಾರುಕಟ್ಟೆಯನ್ನು ಪುನರ್ ನಿರ್ಮಾಣ ಮಾಡಿದರೂ ಒಂದು ವರ್ಷದಿಂದ ಮಳಿಗೆಗಳನ್ನು ವ್ಯಾಪಾರಸ್ಥರಿಗೆ ನೀಡಿಲ್ಲ.
ಈಗ ನಿರ್ಮಾಣಗೊಂಡಿರುವ ಮಳಿಗೆಗಳು ವಿದ್ಯುತ್ ಸೇರಿ ಎಲ್ಲ ಸೌಲಭ್ಯಗಳನ್ನು ಹೊಂದಿದ್ದರೂ ಮಳಿಗೆಗಳು ಸ್ವಲ್ಪ ಎತ್ತರ ಮಟ್ಟದಲ್ಲಿದ್ದು ವ್ಯಾಪಾರಸ್ಥರಿಗೆ ಮಳಿಗೆಗಳ ಒಳಗಡೆ ಹೋಗಲು ಹೊಸದೊಂದು ಬಿದರಿನ ಏಣಿಯನ್ನು ಖರೀದಿಸುವ ಪರಿಸ್ಥಿತಿ ಬಂದಿದೆ. ಬಿಬಿಎಂಪಿ ಅವರ ಸೂಚನೆಯಂತೆ ವ್ಯಾಪಾರದ ಜಾಗವನ್ನು ಖಾಲಿ ಮಾಡಿಕೊಟ್ಟಿದ್ದ ವ್ಯಾಪಾರಸ್ಥರು, ಮಾರುಕಟ್ಟೆಯ ಹತ್ತಿರದಲ್ಲಿಯೆ ಇರುವ ಕೆಲ ಮನೆಗಳ ಮುಂದೆ, ಮಾರುಕಟ್ಟೆಯ ಮುಂದೆ, ಅಂಚೆ ಇಲಾಖೆಯ ಮುಂದೆ ಅಂಗಡಿಗಳನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಾರೆ. ಬಿಬಿಎಂಪಿ ಅವರು ಇಂದಲ್ಲ ನಾಳೆ ಮಳಿಗೆಗಳನ್ನು ಹಂಚಿಕೆ ಮಾಡುತ್ತಾರೆ ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಹಳೆ ಮಾರುಕಟ್ಟೆಯಲ್ಲಿ ಯಾವುದೆ ಮೂಲಭೂತ ಸೌಲಭ್ಯಗಳು ಇಲ್ಲವೆಂದು ಕಡಿಮೆ ಸಂಖ್ಯೆಯಲ್ಲಿ ವ್ಯಾಪಾರಸ್ಥರಿದ್ದರು. ಆದರೆ, ಈಗ 48 ಮಳಿಗೆಗಳು ನಿರ್ಮಾಣಗೊಂಡಿದ್ದು, ವ್ಯಾಪಾರಸ್ಥರ ಸಂಖ್ಯೆಯೂ ಹೆಚ್ಚಾಗಿದೆ. ಮೊದಲು ಅದೇ ಜಾಗದಲ್ಲಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರು ಪಾಲಿಕೆಯವರು ನಮ್ಮ ಪೋಟೊಗಳನ್ನು ತೆಗೆದುಕೊಂಡು, ಹೆಸರನ್ನು ಬರೆದುಕೊಂಡಿದ್ದಾರೆ. ಹೀಗಾಗಿ, ಮೊದಲು ನಮಗೆ ಮಳಿಗೆಗಳನ್ನು ನೀಡಿ ನಂತರ ಇತರರಿಗೆ ನೀಡುತ್ತಾರೆ ಎಂದು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.
ನಮ್ಮ ತಾತ-ಮುತ್ತಾತನ ಕಾಲದಿಂದಲೂ ಮಲ್ಲೇಶ್ವರಂನ ಹಳೆ ಮಾರುಕಟ್ಟೆಯಲ್ಲಿಯೆ ನಾವು ವ್ಯಾಪಾರ ಮಾಡುತ್ತಿದ್ದೇವೆ. ನಮಗೆ ಬೇಗನೆ ಮಳಿಗೆಗಳನ್ನು ಹಂಚಿಕೆ ಮಾಡಿದರೆ ಅನುಕೂಲವಾಗುತ್ತದೆ. ವ್ಯಾಪಾರವೂ ಸ್ವಲ್ಪ ಮಟ್ಟಿಗೆ ಸುಧಾರಿಸಬಹುದು.
-ನಳಿನಿ, ವ್ಯಾಪಾರಸ್ಥೆ
ನಾವು ಮಲ್ಲೇಶ್ವರಂನ ಹಳೆ ಮಾರುಕಟ್ಟೆಯಿಂದ ಹೊರ ಬಂದ ಮೇಲೆ ಮನೆಯೊಂದರ ಮುಂದೆ ಕುಳಿತು ವ್ಯಾಪಾರ ಮಾಡುತ್ತಿದ್ದೇನೆ. ಮಳಿಗೆಗಳು ಹಂಚಿಕೆಯಾದರೆ ಮಳಿಗೆಗಳನ್ನು ಸ್ವಚ್ಛವಾಗಿಟ್ಟುಕೊಂಡು ವ್ಯಾಪಾರ ಮಾಡುತ್ತೇವೆ.
-ಹರೀಶ್, ವ್ಯಾಪಾರಸ್ಥ