ಎಂಇಪಿ ಅಧ್ಯಕ್ಷೆ ನೌಹೇರಾ ಶೇಕ್ ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರು
ಶಿವಮೊಗ್ಗ, ಜು. 29: ಹೀರಾ ಗೋಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ಮಹಿಳಾ ಎಂಪವರ್ಮೆಂಟ್ ಪಾರ್ಟಿ ಸಂಸ್ಥಾಪಕಿ ನೌಹೇರಾ ಶೇಕ್ರನ್ನು ಸೋಮವಾರ ಸ್ಥಳೀಯ ಪೊಲೀಸರು ಶಿವಮೊಗ್ಗ ನಗರದ ಪ್ರಧಾನ ಹಿರಿಯ ವ್ಯವಹಾರಗಳ ನ್ಯಾಯಾಲಯ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ಮುಂದೆ ಹಾಜರುಪಡಿಸಿದರು.
ಹೆಚ್ಚಿನ ವಿಚಾರಣೆಗಾಗಿ ಏಳು ದಿನಗಳ ಕಾಲ ಆಪಾದಿತೆಯನ್ನು ವಶಕ್ಕೆ ಒಪ್ಪಿಸುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ನ್ಯಾಯಾಲಯವು ಐದು ದಿನ ಕಾಲ ನೌಹೇರಾ ಶೇಕ್ರನ್ನು ಪೊಲೀಸ್ ವಶಕ್ಕೆ ಒಪ್ಪಿಸಿ ಆದೇಶ ಹೊರಡಿಸಿತು.
ಹೀರಾ ಗೋಲ್ಡ್ ಗೆ ಹಣ ಹೂಡಲು ಸಾರ್ವಜನಿಕರಿಗೆ ಆನ್ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿತ್ತು. ಶಿವಮೊಗ್ಗ ನಗರದ ಮಂಜುನಾಥ್ ಬಡಾವಣೆ ನಿವಾಸಿ, ದುಬೈನಲ್ಲಿ ನೆಲಸಿದ್ದ ಶೇಖ್ ಅತೀಕ್ ಎಂಬುವರು 25 ಲಕ್ಷ ಹಣ ಹೂಡಿದ್ದರು. ಕೊಟ್ಟ ಭರವಸೆಯಂತೆ ಕಂಪೆನಿ ನಡೆದುಕೊಂಡಿರಲಿಲ್ಲ. ಕಳೆದ ಎಂಟು ತಿಂಗಳಿಂದ ಹಣಕ್ಕೆ ಬಡ್ಡಿ ಕೂಡ ಸಂದಾಯ ಮಾಡಿರಲಿಲ್ಲ ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ನೌಹೀರಾ ಶೇಕ್ ವಿರುದ್ಧ ಅತೀಕ್ ರವರು ಶಿವಮೊಗ್ಗದ ಸಿಇಎನ್ ಠಾಣೆಗೆ ದೂರು ದಾಖಲಿಸಿದ್ದರು.
ಎಫ್.ಐ.ಆರ್. ದಾಖಲಿಸಿಕೊಂಡ ಶಿವಮೊಗ್ಗ ಸಿಇಎನ್ ಠಾಣೆ ಪೊಲೀಸರು, ಭಾನುವಾರ ದೆಹಲಿಯಲ್ಲಿ ನೌಹೇರಾರನ್ನು ವಶಕ್ಕೆ ಪಡೆದು ಕರೆತಂದಿದ್ದರು. ನಿಯಮಾನುಸಾರ ನ್ಯಾಯಾಲಯದ ಎದುರು ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಅವರನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ಮನವಿ: ಸಿಇಎನ್ ಠಾಣೆಯಲ್ಲಿ 56/2019 ಐಪಿಸಿ ಕಲಂ 406, 420 ರ ಅಡಿ ಪ್ರಕರಣ ದಾಖಲಾಗಿದೆ. ನೌಹೇರಾ ಶೇಕ್ರವರು ಮಧುಮೇಹದಿಂದ ಬಳಲುತ್ತಿದ್ದು, ಅವರ ವಯಸ್ಸು ಸಹ ಸುಮಾರು 55 ಆಗಿದೆ. ಅಲ್ಲದೆ ದೇಶದ ಇತರೆಡೆಯಲ್ಲೂ ಇವರ ಮೇಲೆ ಪ್ರಕರಣ ಇರುವುದರಿಂದ ಐಪಿಸಿ ಕಲಂ 420 ರ ಅಡಿ ಪ್ರಕರಣ ದಾಖಲಿಸಬಾರದು. ಈ ಪ್ರಕರಣವನ್ನ 406 ರ ಅಡಿ ದಾಖಲಿಸಿ ಸಿವಿಲ್ ಪ್ರಕರಣವೆಂದು ಪರಿಗಣಿಸಬೇಕು ಎಂದು ನೌಹೀರಾ ಶೇಖ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.