ಬಾಲ ನ್ಯಾಯ ಸಮಿತಿಗೆ ನೆರವು ನೀಡುವ ವಿಚಾರ: ಶಾಶ್ವತ ಸಚಿವಾಲಯ ರಚಿಸಲು ಹೈಕೋರ್ಟ್ ನಿರ್ದೇಶನ
ಬೆಂಗಳೂರು, ಜು.30: ಬಾಲ ನ್ಯಾಯ ಕಾಯ್ದೆ-2015ರ ಪ್ರಕಾರ ಜಾರಿಗೆ ಬಂದಿರುವ ಬಾಲ ನ್ಯಾಯ ಸಮಿತಿಗಳಿಗೆ ಅಗತ್ಯ ನೆರವು ನೀಡಲು ಸಣ್ಣ ಮಟ್ಟದ ಶಾಶ್ವತ ಸಚಿವಾಲಯದ ರಚನೆಗೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಒಂದು ತಿಂಗಳು ಗಡುವು ನೀಡಿದೆ.
ಈ ಕುರಿತು ಸುಪ್ರೀಂಕೋರ್ಟ್ ನಿರ್ದೇಶನದಂತೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮುಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಬಾಲ ನ್ಯಾಯ ಕಾಯ್ದೆ-2015ರ ಅನುಷ್ಠಾನಕ್ಕೆ ಆಯಾ ರಾಜ್ಯಗಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಗಮನ ಹರಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಆದರೆ, ಈ ಕಾಯ್ದೆಯ ಅನುಷ್ಠಾನದಲ್ಲಿ ರಾಜ್ಯ ಸರಕಾರಗಳು ನಿರಂತರ ವಿಫಲಗೊಂಡಿರುವುದನ್ನು ಗಮನಿಸಿ ಹೈಕೋರ್ಟ್ ಮಟ್ಟದಲ್ಲಿ ಬಾಲ ನ್ಯಾಯ ಸಮಿತಿಗಳನ್ನು ರಚಿಸಬೇಕು. ಇದರ ನೆರವಿಗೆ ಆಯಾ ರಾಜ್ಯದ ಕಾನೂನು ಇಲಾಖೆ ಅಗತ್ಯ ಸಿಬ್ಬಂದಿ ಹಾಗೂ ಸಮರ್ಪಕ ಮೂಲಸೌಕರ್ಯಗಳ ಜೊತೆಗೆ ಸಣ್ಣ ಮಟ್ಟದ ಶಾಶ್ವತ ಸಚಿವಾಲಯ ರಚಿಸಬೇಕು ಎಂದು ಹೇಳಲಾಗಿತ್ತು ಎಂದು ನ್ಯಾಯಪೀಠ ತಿಳಿಸಿತು.
ಅಲ್ಲದೆ, ಬಾಲ ನ್ಯಾಯ ಸಮಿತಿಗಳ ನೆರವಿಗೆ ಸಿಬ್ಬಂದಿ ಹಾಗೂ ಅಗತ್ಯ ಮೂಲಸೌಕರ್ಯಗಳಿರುವ ಶಾಶ್ವತ ಸಚಿವಾಲಯ ಸ್ಥಾಪಿಸಲು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ ಕಾನೂನು ಇಲಾಖೆಗೆ ಸಲ್ಲಿಸಿದ್ದ ಪ್ರಸ್ತಾವನೆಯಂತೆ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿ ವಿಚಾರಣೆಯನ್ನು ಆ.23ಕ್ಕೆ ಮುಂದೂಡಿತು.