ಹಳೆಗನ್ನಡದ ಹೊಸ ನೋಟಗಳು....
ಈ ಹೊತ್ತಿನ ಹೊತ್ತಿಗೆ
ಇಂದು ಹಳೆಗನ್ನಡ ಕೇವಲ ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಿಗೆ ಅನಿವಾರ್ಯ ಎನ್ನುವ ಕಾರಣಕ್ಕಾಗಿ ಮೀಸಲಾಗಿ ಉಳಿದಿದೆ. ನಾಲ್ಕೈದು ದಶಕಗಳ ಹಿಂದೆ, ಹೊಸಗನ್ನಡದ ನಡುವೆಯೂ ಹಳೆಗನ್ನಡದಲ್ಲಿ ಕಾವ್ಯಗಳನ್ನು ಬರೆದ ಹಿರಿಯ ಕವಿಗಳಿದ್ದಾರೆ. ಹಲವು ಕವಿಗಳು ಈ ದಿನಗಳಲ್ಲೂ ಹಳೆಗನ್ನಡದ ಮೇಲೆ ಆಸಕ್ತಿ ತೋರಿಸುತ್ತಾರಾದರೂ, ಅವುಗಳಿಗೆ ಓದುಗರ ಸಂಖ್ಯೆ ತೀರಾ ಕಡಿಮೆ. ವಿದ್ವಾಂಸರು, ಶಿಕ್ಷಕರು ಕುತೂಹಲಕ್ಕಾಗಿಯಷ್ಟೇ ಅವುಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಹೊಸತಲೆಮಾರು ಕನ್ನಡದ ಗಂಭೀರ ಸಾಹಿತ್ಯವನ್ನು ತಲೆಯೆತ್ತಿ ನೋಡದ ಈ ದಿನಗಳಲ್ಲಿ ಹಳೆಗನ್ನಡವನ್ನು ಓದುತ್ತದೆ ಎಂದು ನಿರೀಕ್ಷಿಸುವುದೇ ತಪ್ಪಾಗುತ್ತದೆ. ಇಷ್ಟಾದರೂ, ಕನ್ನಡದ ಬೇರುಗಳನ್ನು ಉಳಿಸಿಕೊಳ್ಳುವುದು ನಮ್ಮ ಭಾಷೆಯ ಅಸ್ಮಿತೆಯ ದೃಷ್ಟಿಯಿಂದ ಅತ್ಯಗತ್ಯ. ಕನ್ನಡ ಸಾಹಿತ್ಯ ಪರಂಪರೆಗಳನ್ನು ಗುರುತಿಸಬೇಕಾದರೆ ಹಳೆಗನ್ನಡವನ್ನು ನಾವು ನಿರ್ಲಕ್ಷಿಸುವಂತೆಯೇ ಇಲ್ಲ. ಹಳೆಗನ್ನಡವನ್ನು ತಿರಸ್ಕರಿಸುವುದೆಂದರೆ, ಕನ್ನಡ ಸಾಹಿತ್ಯ ಪರಂಪರೆಯನ್ನೇ ತಿರಸ್ಕರಿಸುವುದೆಂದರ್ಥ. ಈ ನಿಟ್ಟಿನಲ್ಲಿ 2018ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಖಿಲ ಭಾರತ ಪ್ರಪ್ರಥಮ ಹಳೆಗನ್ನಡ ಸಾಹಿತ್ಯ ಸಮ್ಮೇಳನ ಶ್ರವಣಬೆಳಗೊಳದಲ್ಲಿ ನಡೆಯಿತು.ಹಲವು ಹಿರಿ-ಕಿರಿಯರು ಈ ಸಮ್ಮೇಳನದಲ್ಲಿ ಪ್ರಬಂಧ ಮಂಡಿಸಿದರು. ಆ ಪ್ರಬಂಧಗಳನ್ನು ಕನ್ನಡ ಸಾಹಿತ್ಯ ಪರಿಷತ್ ಒಟ್ಟುಗೂಡಿಸಿ ಪುಸ್ತಕ ರೂಪದಲ್ಲಿ ಹೊರತಂದಿದೆ. ‘ಹಳತು-ಹೊನ್ನು’ ಹೆಸರಿನ ಈ ಕೃತಿಯ ಪ್ರಧಾನ ಸಂಪಾದಕರು ನಾಡೋಜ ಡಾ. ಮನು ಬಳಿಗಾರ್. ಸಂಪಾದಕರಾಗಿ ಡಾ. ಪದ್ಮರಾಜ ದಂಡಾವತಿ ಕೈ ಜೋಡಿಸಿದ್ದಾರೆ.
ಪ್ರೊ. ಹಂಪ ನಾಗರಾಜಯ್ಯ, ಷ. ಶೆಟ್ಟರ್, ಪುರುಷೋತ್ತಮ ಬಿಳಿಮಲೆ, ಚಂದ್ರಶೇಖರ ನಂಗಲಿ, ಡಾ. ಶಾಂತಿನಾಥ ದಿಬ್ಬದ, ಡಾ. ದುರ್ಗಾದಾಸ್, ಗೀತಾ ವಸಂತ, ಡಾ. ಪ್ರಮೀಳಾ ಮಾಧವ್, ಡಾ. ಶ್ರೀಕಂಠ ಕೂಡಿಗೆ, ಡಾ. ಕೆ. ವೈ. ನಾರಾಯಣ ಸ್ವಾಮಿ, ಎಂ.ಎಸ್. ಆಶಾದೇವಿ, ಡಾ. ಪಿ.ವಿ. ನಾರಾಯಣ, ಮೇಟಿ ಮಲ್ಲಿಕಾರ್ಜುನ, ಡಾ. ಮಾಧವ ಪೆರಾಜೆ, ಡಾ. ಶ್ರೀವತ್ಸ ಎಸ್. ವಟಿ, ಡಾ. ಎಸ್.ಪಿ. ಪದ್ಮಪ್ರಸಾದ್, ವೆಂಕಟಗಿರಿ ದಳವಾಯಿ, ಡಾ. ತಮಿಳ್ ಸೆಲ್ವಿ, ಡಾ. ಜಿನದತ್ತ ಹಡಗಲಿ, ಪ್ರೊ. ಪ್ರೀತಿ ಶುಭಚಂದ್ರ ಇಷ್ಟು ಲೇಖಕರು ಮಂಡಿಸಿದ ಹಳೆಗನ್ನಡಕ್ಕೆ ಸಂಬಂಧಿಸಿದ ಮಹತ್ವದ ಪ್ರಬಂಧಗಳನ್ನು ಇಲ್ಲಿ ಒಟ್ಟುಗೂಡಿಸಲಾಗಿದೆ.
ಷ. ಶೆಟ್ಟರ್ ಅವರ ಸಮ್ಮೇಳನಾಧ್ಯಕ್ಷರ ಭಾಷಣ, ಹಳೆಗನ್ನಡ ಸಾಹಿತ್ಯದ ಪ್ರೇರಣೆ-ಪರಿಕಲ್ಪನೆಗಳ ವಿನ್ಯಾಸಗಳ ಕುರಿತ ಹಂಪ ನಾಗರಾಜಯ್ಯ ಲೇಖನ, ಮರುಸೃಷ್ಟಿಯ ಸವಾಲುಗಳ ಕುರಿತ ಬಿಳಿಮಲೆಯ ಒಳನೋಟ, 11ನೇ ಶತಮಾನದ ಸಾಹಿತ್ಯದಲ್ಲಿ ಹಿಂಸೆ-ಅಹಿಂಸೆಗಳ ನಿರ್ವಹಣೆಯ ಕುರಿತಂತೆ ಶ್ರೀಕಂಠ ಕೂಡಿಗೆಯವರ ವಿಶ್ಲೇಷಣೆ, ಸ್ತ್ರೀ ದೃಷ್ಟಿಯಲ್ಲಿ ಹಳೆಗನ್ನಡ ಸಾಹಿತ್ಯದ ಪ್ರಸ್ತುತತೆಯ ಕುರಿತಂತೆ ಆಶಾದೇವಿಯವರ ಬರಹ, ತಮಿಳ್ ಸೆಲ್ವಿ ಅವರ ಕವಿರಾಜಮಾರ್ಗದ ಅನನ್ಯತೆ ಈ ಕೃತಿಯೊಳಗಿನ ಮಹತ್ವದ ಲೇಖನಗಳಾಗಿವೆ. ಒಟ್ಟು ಸಮ್ಮೇಳನದ ಭಾಷಣಗಳ ಕುರಿತಂತೆ ಡಾ. ಪದ್ಮರಾಜ ದಂಡಾವತಿ ಅವರ ದೀರ್ಘ ಅವಲೋಕನವೂ ಇದರೊಳಗೆ ಸೇರಿಕೊಂಡಿದೆ. 276 ಪುಟಗಳ ಕೃತಿಯ ಮುಖಬೆಲೆ 210 ರೂಪಾಯಿ. ಕನ್ನಡ ಸಾಹಿತ್ಯ ಪರಿಷತ್ ಕೃತಿಯನ್ನು ಹೊರತಂದಿದೆ.