ಭಾವ ಜಂಗಮ
ಈಕೆ ಬಂಜಾರ ಸಮುದಾಯದ ತಾಯಿ. ಬದುಕು ಜಂಗಮ; ಅಸುರಕ್ಷತೆ ಅನಿರೀಕ್ಷಿತಗಳ ಸಂಗಮ. ಒಡವೆಗಳನ್ನು ಮಾಡುವುದು ಮಾರುವುದು ಕಾಯಕ. ಇವತ್ತಿಗೆ ಅಲ್ಲ ಈ ಗಳಿಗೆಗೆ ಸ್ತ್ರೀಯರ ಉಡುಪು ಮಾರುವ ಮಳಿಗೆಯ ಮುಂದೆ ತನ್ನ ಅಂಗಡಿ. ಉಡುಪು ಖರೀದಿಸಿ ಹೊರಬಂದವರು ಅದಕ್ಕೆ ತಕ್ಕ ಕೈಬಳೆ, ಸರಕ್ಕಾಗಿ ತನ್ನಲ್ಲಿ ಬರಬಹುದೆಂಬ ಅಂದಾಜು, ಆಶೆ.
ಕೊಳ್ಳುವ ಗಿರಾಕಿ ಬಂದಾಗಿದೆ. ‘ಬರಬಾರದ ಹೊತ್ತಲ್ಲಿ’ ಎನ್ನುವ ಸ್ಥಿತಿಯಲ್ಲಿ ತಾನಿಲ್ಲ. ಅದೇ ಸರಿಯಾಗಿ ಕೈಗೂಸು ಕಕ್ಕ ಮಾಡಿಕೊಂಡಿದೆ. ಸಂದಿಗ್ಧ. ದುರದೃಷ್ಟಕ್ಕೆ ಸೆರಗೂ ಜಾರಿದೆ. ಹಾಲ್ಕುಡಿವ ಕಂದ. ಹಾಲಿನಿಂದ ಎದೆಯೂ ತುಂಬಿದೆ. ಅದು ತನ್ನ ಗಲ್ಲದ ಪೆಟ್ಟಿಗೆಯೂ ಹೌದು, ಚಿಲ್ಲರೆ ಕಾಸಿನಿಂದ ತುರುಕಿದ ನೋಟಿನಿಂದ ಮತ್ತೂ ಉಬ್ಬಿದೆ. ಮುಚ್ಚಿಕೊಳ್ಳುವ ಅನಿವಾರ್ಯತೆ ಇದೆ, ಇದು ಮಾನ ಮುಚ್ಚಿಕೊಳ್ಳುವ ಸಲುವಾಗಿ ಅಲ್ಲದಿದ್ದರೂ ಅಲ್ಲಿರುವ ಆ ದಿನದ ಸಂಪಾದನೆಯು ಪೊಲೀಸರ, ಕಳ್ಳಕಾಕರ ಕಣ್ಣಿಂದ ತಪ್ಪಿಸಿಕೊಳ್ಳಲು. ಆದರೆ ಕೈಗಳಿಗೆ ಬಿಡುವಿಲ್ಲ. ಇವುಗಳ ನಡುವೆಯೇ ತನ್ನನ್ನು, ತನ್ನ ಅಂಗಡಿಯನ್ನು ಎತ್ತಿಸಿ ಓಡಿಸಲು ಬರುವ ಪೊಲೀಸನನ್ನು ತಡಕಾಡುತ್ತಿವೆ ಆಕೆಯ ಕಂಗಳು.
ಇದಾವುದರ ಪರಿವೇ ಇಲ್ಲದೆ ಕಿವಿಗೆ ನೆಚ್ಚಿನ ಸಂಗೀತ ತುಂಬಿಸಿಕೊಂಡು ಬೇಕಾದನ್ನು ಅರಸುತ್ತಿರುವ ಗಿರಾಕಿಯದೇ ಬೇರೆ ಲೋಕ. ವಿಸರ್ಜನೆಯಿಂದ ಸಿಕ್ಕ ಆರಾಮ ಭಾವ ಕೂಸಿನ ಮೊಗದಲ್ಲಿ ನಗೆಯನ್ನು ಮೂಡಿಸಿದೆ. ಅದರ ಕಣ್ಣ ಕಾಂತಿಯು ಭವಿಷ್ಯದ ಸಂಕೇತದಂತಿದೆ!