varthabharthi


ಬುಡಬುಡಿಕೆ

ಶಾಲಾ ಮೆಟ್ಟಿಲು ತುಳಿಯದವರಿಗೂ ಉದ್ಯೋಗ....!

ವಾರ್ತಾ ಭಾರತಿ : 4 Aug, 2019
*ಚೇಳಯ್ಯ chelayya@gmail.com

ಬಜಾಜ್, ಗೋದ್ರೆಜ್, ಎಚ್‌ಡಿಎಫ್‌ಸಿ ಮೊದಲಾದ ಉದ್ದಿಮೆಗಳ ಮುಖ್ಯಸ್ಥರು ‘ಉದ್ಯಮ ನಷ್ಟದಲ್ಲಿದೆ... ಅಭಿವೃದ್ಧಿಯಾಗುತ್ತಿಲ್ಲ...ಜಿಡಿಪಿ ಇಳಿಕೆಯಾಗಿದೆ...’ ಎಂದೆಲ್ಲ ಬಡಬಡಿಸುತ್ತಿರುವಾಗಲೇ, ಪತ್ರಕರ್ತ ಎಂಜಲು ಕಾಸಿ ಈ ಬಗ್ಗೆ ಸ್ಪಷ್ಟೀಕರಣ ಕೇಳಲು ನೇರವಾಗಿ ದೇಶದ ಓಂ ಮಿನಿಸ್ಟರ್ ಅಮಿತ್ ಶಾ ಅವರನ್ನು ಭೇಟಿ ಮಾಡಿದ. ಅದಾಗಲೇ ವಿವಿಧ ಗೋರಕ್ಷಕ ತಂಡಗಳ ಜೊತೆಗೆ ಕಾನೂನು ಸುವ್ಯವಸ್ಥೆಗಳ ಮಾರ್ಗದರ್ಶನ ಪಡೆದು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಶಾ ಅವರು ಕಾಸಿಯನ್ನು ಕಂಡದ್ದೇ ‘ಗುರ್ರ್‌’ ಎಂದರು.
‘‘ಸಾರ್...ದೇಶದ ಕಾನೂನು ವ್ಯವಸ್ಥೆ....’’ ಎಂದು ಕಾಸಿ ಶುರು ಮಾಡಿದ್ದೇ...ಶಾ ಮುಂದುವರಿಸಿದರು ‘‘ಕಾನೂನು ವ್ಯವಸ್ಥೆ ಎಲ್ಲವೂ ಚೆನ್ನಾಗಿದೆ ಎಂದು ಈಗಾಗಲೇ ನಮ್ಮ ಗೋರಕ್ಷಕರ ತಂಡ ವರದಿ ಮಾಡಿದೆ....ಈಗಷ್ಟೇ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ.’’
‘‘ಜೈ ಶ್ರೀರಾಮ್ ಎಂದು ಒತ್ತಾಯ...’’ ಕಾಸಿ ಬಾಯಿ ತೆರೆಯುತ್ತಿದ್ದಂತೆಯೇ ಅಮಿತ್ ಶಾ ಮತ್ತೆ ತಡೆದರು ‘‘ಹೌದು...ಜೈ ಶ್ರೀರಾಮ್ ಎಂದು ಒತ್ತಾಯದಿಂದ ಹೇಳುವುದು ತಪ್ಪು. ಎಲ್ಲರೂ ಸ್ವಯಂ ಮುಂದೆ ಬಂದು ಜೈಶ್ರೀರಾಮ್ ಎಂದು ಘೋಷಿಸಬೇಕು. ಆಗಲೇ ದೇಶ ರಾಮ ರಾಜ್ಯ ಆಗಲು ಸಾಧ್ಯ...’’
‘‘ಸಾರ್ ದೇಶದಲ್ಲಿ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಉದ್ಯಮಿಗಳು ಹೇಳುತ್ತಿದ್ದಾರೆ...’’ ಕಾಸಿ ನಿಜವಾದ ವಿಷಯಕ್ಕೆ ಬಂದ. ‘‘ಯಾರು ಹೇಳಿದ್ದು? ಕಳೆದ ಐದು ವರ್ಷಗಳಲ್ಲಿ ಬಿಜೆಪಿ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಪಕ್ಷವಾಗಿದೆ. ದೇಶ ಲಾಭದಾಯಕವಾಗಿ ಮುನ್ನಡೆಯುವುದಕ್ಕೆ ಇದೇ ಉದಾಹರಣೆ....’’
‘‘ಹಾಗಲ್ಲ ಸಾರ್...ಉದ್ಯಮಿಗಳೆಲ್ಲ ನಷ್ಟದಲ್ಲಿದ್ದಾರೆ....’’
‘‘ವ್ಯಾಪಾರದಲ್ಲಿ ಲಾಭ ಹೆಚ್ಚಿಸುವುದು ಹೇಗೆ ಎನ್ನುವುದನ್ನು ನೂರಾರು ವರ್ಷಗಳ ಹಿಂದೆ ಚಾಣಕ್ಯ ತನ್ನ ಅರ್ಥ ಶಾಸ್ತ್ರದಲ್ಲಿ ಬರೆದಿದ್ದಾನೆ. ಈ ಉದ್ಯಮಿಗಳೆಲ್ಲ ಮನಮೋಹನ್ ಸಿಂಗ್ ಅವರ ವಿದೇಶಿ ಅರ್ಥಶಾಸ್ತ್ರವನ್ನು ಓದಿರುವುದೇ ನಷ್ಟಕ್ಕೆ ಕಾರಣ. ಆರೆಸ್ಸೆಸ್ ಸಂಘಟನೆ ಯಾವ ಉದ್ದಿಮೆಯನ್ನು ಮಾಡದೆಯೇ ಚಾಣಕ್ಯನ ಅರ್ಥ ಶಾಸ್ತ್ರ ಓದಿ ಕೋಟ್ಯಂತರ ರೂಪಾಯಿ ಮಾಡಿಕೊಂಡಿದೆ. ರಾಮ್‌ದೇವ್ ಅವರನ್ನು ನೋಡಿ ನಮ್ಮ ಉದ್ಯಮಿಗಳು ಕಲಿಯಬೇಕಾಗಿದೆ....’’
‘‘ಉದ್ಯಮಿಗಳೆಲ್ಲ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಸಾರ್...’’
‘‘ಉದ್ಯಮಿಗಳ ಅಭಿವೃದ್ಧಿಗಾಗಿ ಹೊಸದಾಗಿ ಬೇರೆ ಬೇರೆ ಬಗೆಯ ತೆರಿಗೆಗಳನ್ನು ನಾವು ಘೋಷಿಸಲಿದ್ದೇವೆ. ಈ ಮೂಲಕ ಉದ್ಯಮವನ್ನು ಲಾಭದಾಯಕವಾಗಿ ಮಾಡಲಿದ್ದೇವೆ....’’
‘‘ಹೆಚ್ಚು ತೆರಿಗೆ ವಿಧಿಸಿದರೆ ಉದ್ಯಮ ಲಾಭದಾಯ ಕವಾಗುವುದು ಹೇಗೆ ಸಾರ್?’’
‘‘ನೋಡಿ...ಹೆಚ್ಚು ಹೆಚ್ಚು ತೆರಿಗೆ ವಿಧಿಸಿದರೆ, ಹೆಚ್ಚು ಹೆಚ್ಚು ಐಟಿ ದಾಳಿ ಮಾಡಿಸುವುದಕ್ಕಾಗುತ್ತದೆ. ಹೆಚ್ಚು ಹೆಚ್ಚು ಐಟಿ ದಾಳಿ ಮಾಡಿದರೆ ಪಕ್ಷಕ್ಕೆ ಹೆಚ್ಚು ಹೆಚ್ಚು ಹಣ ಹೂಡಿಕೆಯಾಗುತ್ತದೆ. ಇದು ಪಕ್ಷದ ಪಾಲಿಗೆ ಲಾಭದಾಯಕವಲ್ಲವೇ?’’
‘‘ಆದರೆ ದೇಶದ ಪಾಲಿಗೆ?’’
‘‘ನೋಡ್ರಿ...ಪಕ್ಷವೆಂದರೆ ದೇಶ. ದೇಶವೆಂದರೆ ಪಕ್ಷ. ಪಕ್ಷ ಉಳಿದರೆ ದೇಶ ಉಳಿದಂತೆ...’
‘‘ಜನರಿಗೆ ಉದ್ಯೋಗವಿಲ್ಲ....’’ ಕಾಸಿ ಮತ್ತೆ ಗೊಣಗಿದ.
‘‘ಯಾಕ್ರೀ ಉದ್ಯೋಗವಿಲ್ಲ? ಈ ಹಿಂದೆ ಉದ್ಯೋಗಕ್ಕೆ ಡಿಗ್ರಿಗಳು ಬೇಕಾಗಿತ್ತು. ನಮ್ಮ ಆಡಳಿತದಲ್ಲಿ ಕಾಲೇಜು ಮೆಟ್ಟಿಲು ಹತ್ತದವರಿಗೂ ಕರೆದು ಕರೆದು ಉದ್ಯೋಗ ಕೊಡುತ್ತಿದ್ದೇವೆ....’’ ಅಮಿತ್ ಶಾ ಹೇಳಿದರು.
‘‘ಎಲ್ಲಿ ಸಾರ್?’’ ಕಾಸಿ ಅಚ್ಚರಿಯಿಂದ ಕೇಳಿದ.
‘‘ನಮ್ಮ ಆಡಳಿತಾವಧಿಯಲ್ಲಿ ಪೊಲೀಸರಿಗೆ ಪರ್ಯಾಯವಾಗಿ ಗೋರಕ್ಷಕ ದಳವನ್ನು ಸೃಷ್ಟಿಸಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದೇವೆ. ಗೋಶಾಲೆಗಳನ್ನು ಸೃಷ್ಟಿಸಿ ಅದನ್ನು ನೋಡಿಕೊಳ್ಳಲು ಇನ್ನೊಂದಷ್ಟು ಸಾವಿರ ಜನರಿಗೆ ಉದ್ಯೋಗ ಕೊಟ್ಟಿದ್ದೇವೆ. ಜೈ ಶ್ರೀರಾಮ್ ಘೋಷಣಾ ದಳ, ಲವ್ ಜಿಹಾದ್ ತಡೆ ದಳ, ಸಂಸ್ಕೃತಿ ರಕ್ಷಣಾ ದಳ ಹೀಗೆ ಹಲವು ದಳಗಳನ್ನು ಸೃಷ್ಟಿಸಿ ಅವರಿಗೆ ಉದ್ಯೋಗ ಕೊಟ್ಟಿದ್ದೇವೆ. ವಿದ್ಯಾರ್ಹತೆಗಳಿಲ್ಲದೆಯೇ ಉದ್ಯೋಗ ಕೊಟ್ಟ ಏಕೈಕ ಸರಕಾರ ನಮ್ಮದು...’’
‘‘ಇದರಿಂದ ಉದ್ದಿಮೆಗಳಿಗೆ ಸಹಾಯ ವಾಗುತ್ತದೆಯೇ?’’
‘‘ಯಾಕೆ ಆಗುವುದಿಲ್ಲ? ಈಗ ಚಾಕು, ಚೂರಿ, ತ್ರಿಶೂಲಗಳಿಗೆ ಮಾರುಕಟ್ಟೆಗಳಲ್ಲಿ ಭಾರೀ ಬೇಡಿಕೆಗಳಿವೆ. ಈ ಗೋದ್ರೆಜ್, ಬಜಾಜ್‌ನವರು ಅದೇನೇನೋ ಬೇಡದ್ದು ಉತ್ಪಾದನೆ ಮಾಡದೆ, ಚಾಕು, ಚೂರಿಗಳಿಗೆ ಬಂಡವಾಳ ಹಾಕಲಿ...ಉದ್ದಿಮೆ ಲಾಭದಾಯಕವಾಗುತ್ತದೆ’’
‘‘ಮುಂದಿನ ದಿನಗಳಲ್ಲಿ ನಿಮ್ಮ ಸರಕಾರದ ಯೋಜನೆಗಳು...’’
‘‘ಹತ್ತು ಸರ್ಜಿಕಲ್ ಸ್ಟ್ರೈಕ್, ಉರಿ ಚಿತ್ರದ ಹತ್ತು ಭಾಗಗಳು ವಿವಿಧ ಥಿಯೇಟರ್‌ಗಳಲ್ಲಿ ಬಿಡುಗಡೆ. ದೇಶಾದ್ಯಂತ ಪೌರತ್ವ ನೋಂದಣಿ. ನೋಂದಣಿಯಾಗದವರನ್ನು ಬಂಧನದಲ್ಲಿಡಲು ಪ್ರತಿ ತಾಲೂಕಿಗೆ ಎರಡೆರಡು ಬಂಧನಾ ಕೇಂದ್ರಗಳು...ಸಾಧ್ಯವಾದರೆ ಮಗದೊಮ್ಮೆ ನೂರು ರೂಪಾಯಿ ನೋಟುಗಳ ನಿಷೇಧ, ರೈತರ ಆತ್ಮಹತ್ಯೆಗಳಿಗೆ ಪ್ರತಿ ಜಿಲ್ಲೆಯಲ್ಲಿ ವಿಶೇಷ ಆತ್ಮಹತ್ಯಾ ಕೇಂದ್ರಗಳು, ಐಟಿ ಅಧಿಕಾರಿಗಳಿಗೆ ದಾಳಿ ನಡೆಸಲು 500 ಲಘುವಿಮಾನಗಳ ಆಮದು...ಅತ್ಯಾಚಾರ ಆರೋಪದಲ್ಲಿ ಜೈಲು ಸೇರುತ್ತಿರುವ ಪಕ್ಷದ ಸಂಸದರು, ಶಾಸಕರಿಗೆ ಬಿಡುಗಡೆಯ ಬಳಿಕ ಮಾಸಿಕ ಪಿಂಚಣಿ... ’’
ಅಮಿತ್ ಶಾ ಅವರು ಒಂದೊಂದಾಗಿ ವಿವರಿಸುತ್ತಿದ್ದಂತೆಯೇ ಪತ್ರಕರ್ತ ಕಾಸಿ ಎಸಿಯ ತಂಪುಗಾಳಿಯ ನಡುವೆಯೂ ಬೆವರ ತೊಡಗಿದ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)