ಜನದನಿಯ ಗಾಯಕಿ ಕಡುಬಾಯಿ ಖರಟ್
ಕಡುಬಾಯಿ ಅವರ ಹಾಡು, ಬದುಕಿನ ಕುರಿತು ಇಂದು ಪ್ರೀತಿ, ಅನುಕಂಪ ತೋರುವವರ ಸಂಖ್ಯೆ ಹೆಚ್ಚಾಗಿದೆ. ಜೊತೆಗೆ ಅನೇಕ ಸಾರ್ವಜನಿಕ ವೇದಿಕೆಗಳಲ್ಲಿ, ಮಾಧ್ಯಮಗಳಲ್ಲಿ ಅವರಿಗೆ ಹಾಡಲು ಅವಕಾಶ ಸಿಕ್ಕಿದೆ ಎನ್ನುವುದು ನಿಜವಾದರೂ; ಅವರ ಬದುಕು ಇದರಿಂದ ಸಂಪೂರ್ಣವಾಗಿ ಸುಧಾರಿಸುತ್ತದೆಯೇ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ; ಯಾಕೆಂದರೆ ಇಂದಿಗೂ ಆಕೆಗೆ ವಾಸಿಸಲು ಸರಿಯಾದ ಮನೆಯಿಲ್ಲ.
ಪುಟ್ಟ ಜೋಪಡಿ ಅದರೊಳಗೆ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಬುದ್ಧನ ಎರಡು ಚಿತ್ರಗಳು ಜೊತೆ ಗೊಂದು ಏಕತಾರಿ; ಹಾಸಿ ಹೊದ್ದು ಕೊಳ್ಳುವಷ್ಟು ಬಡತನ..! ಇದು ಇತ್ತೀಚೆಗೆ ಜಾಲತಾಣಗಳಲ್ಲಿ ತನ್ನ ಕಂಠಸಿರಿಯಿಂದಲೇ ರಾಷ್ಟ್ರ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಜನಮನ್ನಣೆ ಪಡೆದುಕೊಂಡಿ ರುವ ಭೀಮ್ ಗೀತ್ ಗಾಯಕಿ, ಕಡುಬಾಯಿ ದೇವದಾಸ್ ಖರಟ್ ಅವರ ಹಿನ್ನೆಲೆ.
ಮಹಾರಾಷ್ಟ್ರದ ಔರಂಗಾಬಾದ್‌ನ ಕೊಳಗೇರಿ ನಿವಾಸಿಯಾದ ಈ ಜನಪದ ಹಾಡುಗಾರ್ತಿಯನ್ನು ಸ್ಥಳೀಯರು ಭೀಮ್ ಕನ್ಯಾ ಎಂದು ಕರೆಯುತ್ತಾರೆ. ಇಲ್ಲಿನ ಶ್ರಮಿಕರು, ಬಡವರು ವಾಸಿಸುವ ಕೊಳಗೇರಿ ಪ್ರದೇಶಗಳಲ್ಲಿ ಭೀಮರಾವ್ ಅಂಬೇಡ್ಕರ್ ಅವರ ಜೀವನ ಮತ್ತು ಚಿಂತನೆಗಳ ಕುರಿತು ಶಾಯಿರಿಗಳನ್ನು ಹಾಡಿ ಅವರು ನೀಡುವ ಪ್ರೀತಿಯ ಭಿಕ್ಷೆಯಿಂದ ತನ್ನ ಬದುಕನ್ನು ನಡೆಸುವ ಮೂವರು ಮಕ್ಕಳ ತಾಯಿ ಖರಟ್ ತನ್ನ ಬಡತನಕ್ಕೂ ಮೀರಿ ಅಪ್ಪಟ ಅಂಬೇಡ್ಕರ್ ಅನುಯಾಯಿ.
ಕಡುಬಾಯಿ ದೇವದಾಸ್ ಖರಟ್ ಹಾಡುವ ಶಾಯಿರಿ ಶೈಲಿಯು ಮಹಾರಾಷ್ಟ್ರದಲ್ಲಿ ಹೆಚ್ಚು ಬಳಕೆಯಲ್ಲಿರುವ ಒಂದು ಜನಪದ ಕಲಾ ಪ್ರಕಾರ. ಈ ಕಲಾ ಪ್ರಕಾರಕ್ಕೆ ಸ್ಥಳೀಯವಾಗಿ ಹಲವು ಶತಮಾನಗಳಷ್ಟು ಇತಿಹಾಸವಿದೆ. ಆದರೆ 18ನೇ ಶತಮಾನದ ಕೊನೆಯ ಕೆಲವು ದಶಕಗಳಲ್ಲಿ ಮಹಾತ್ಮಾ ಜೋತಿಬಾ ಫುಲೆ ಅವರು ತಮ್ಮ ಸತ್ಯಶೋಧಕ ಸಮಾಜದ ಮೂಲಕ ಈ ಶಾಯಿರಿಗಳನ್ನು ಜಾತಿ ವ್ಯವಸ್ಥೆಯ ವಿರುದ್ಧವಾಗಿ ಜನಸಾಮಾನ್ಯರ ಸಂಗೀತ ಅಸ್ತ್ರವಾಗಿ ಬಳಕೆಗೆ ತಂದರು ಎಂಬುದು ವಿಶೇಷ. ಇದು ಕಡುಬಾಯಿ ಅವರ ತಂದೆಯ ಮೇಲೆ ಸಹಜವಾಗಿಯೇ ಪ್ರಭಾವ ಬೀರಿದೆ. ಎಲ್ಲರು ಕೇಳುತ್ತಾರೆ ನೀನು ಹಾಡುವುದನ್ನು ಹೇಗೆ ಕಲಿತೆ ಎಂದು? ಉತ್ತಮ ಜಾತಿಯವರಂತೆ ಹಾಡುವುದು ನಮಗೆ ಹವ್ಯಾಸವಲ್ಲ ಬದಲಿಗೆ ಜೀವನೋಪಾಯ. ನನಗೆ ಹಾಡುವುದು ನನ್ನ ಹೆತ್ತವರಿಂದ ಬಳುವಳಿಯಾಗಿ ಬಂದಿದೆ. ನಾನು ಎಂಟು ವರ್ಷದವಳಾಗಿದ್ದಾಗ ಭೀಮ ಗೀತೆಗಳನ್ನು ಹಾಡಲು ಮತ್ತು ಏಕತಾರಿಯನ್ನು ನುಡಿಸಲು ಪ್ರಾರಂಭಿಸಿದೆ. ನನ್ನ ಹೆತ್ತವರು ಬಾಬಾ ಸಾಹೇಬ್ ಅವರ ಭಜನೆಗಳನ್ನು ಹಾಡುತ್ತಿದ್ದರು. ಒಮ್ಮೆ ನಾನು ಗೋಪಾಲಕೃಷ್ಣ ದೇವಸ್ಥಾನಕ್ಕೆ ಹೋಗಿದ್ದೆ. ಈ ವಿಷಯ ನನ್ನ ತಂದೆಗೆ ತಿಳಿಯಿತು. ಅವರು ನನ್ನನ್ನ ಎಲ್ಲಿಗೆ ಹೋಗಿದ್ದೆ ಎಂದು ಕೇಳಿದರು. ನಾನು ದೇವಸ್ಥಾನಕ್ಕೆ ಸಾಂಪ್ರದಾಯಿಕ ಭಜನೆಗಳನ್ನು ಕೇಳಲು ಹೋಗಿದ್ದೆ ಎಂದು ಹೇಳಿದೆ. ಅವರು ನನ್ನನ್ನು ಹತ್ತಿರಕ್ಕೆ ಕರೆದು ಕೇಳಿದರು ದೇವರು ಎಲ್ಲಿದ್ದಾನೆ..? ನಾನು ಮೌನವಾಗಿದ್ದೆ; ನಮ್ಮ ನಿಜವಾದ ದೇವರು ಬಾಬಸಾಹೇಬರು ಏಕೆಂದರೆ ಅವರು ಲಕ್ಷಾಂತರ ಮನುಷ್ಯರನ್ನು ಸ್ವತಂತ್ರಗೊಳಿಸಿದ್ದಾರೆ. ಅವರು ನಮಗೆ ಮಾನವೀಯತೆಯ ಪಾಠ ಕಲಿಸಿದ್ದಾರೆ. ಹಾಗಾಗಿ ನಾವು ಅವರ ಸಂದೇಶಗಳನ್ನು ಹಾಡುವುದು ಮುಖ್ಯವಾದುದು. ನೀನು ಎಂದು ಬೇರೆ ಹಾಡುಗಳನ್ನು ಹಾಡಬಾರದು, ಬಾಬಾ ಸಾಹೇಬರದ್ದು ಮಾತ್ರ ಹಾಡಬೇಕು ಮಗಳೆ ಎಂದು ನನ್ನ ಅಪ್ಪ ಹೇಳಿದ್ದರು.
ಹೀಗೆ ನನ್ನ ಹೆತ್ತವರು ಮತ್ತು ಗಂಡ ತೀರಿಕೊಂಡ ನಂತರ ನಾನು ಮತ್ತೊಮ್ಮೆ ಏಕತಾರಿಯನ್ನು ಹಿಡಿಯಬೇಕಾಯಿತು ಅದು ಹೊಟ್ಟೆ ಬಟ್ಟೆಗಾಗಿ. ಅದರ ಜೊತೆಗೆ ಅಂಬೇಡ್ಕರ್ ಚಿಂತನೆ ಮತ್ತು ಸಂದೇಶಗಳನ್ನು ಹರಡಲು ನನ್ನ ಹಾಡು ಮತ್ತು ಬದುಕನ್ನು ಅರ್ಪಿಸಿಕೊಳ್ಳುವುದಕ್ಕೆ ಹೆಮ್ಮೆ ಎನಿಸುತ್ತದೆ ಎನ್ನುತ್ತಾರೆ ಕಡುಬಾಯಿ ಖರಟ್.
ಸಾಮಾನ್ಯವಾಗಿ ಸಂಗೀತವೆಂದರೆ ಅದೊಂದು ಶಾಸ್ತ್ರಕಲೆಯೆಂದು ಹಾಗೂ ಕೇವಲ ಮನುಷ್ಯನ ಮನರಂಜನೆಯ ಭಾಗವೆಂದುಕೊಂಡಿರುವ ಕಾಲದಲ್ಲಿ ಕಡುಬಾಯಿ ಖರಟ್ ಅವರ ಪ್ರತಿಯೊಂದು ಹಾಡಿನ ರಾಗವೂ ನೊಂದವರ ಧ್ವನಿ ಮತ್ತು ವಂಚಿತರ ಪ್ರತಿಭಟನೆಯಂತೇ ತೋರುತ್ತದೆ. ಜೊತೆಗೆ ಅವರ ಹಾಡಿಗೆ ಅವರದೇ ಆದ ಜನ ಭಾಷೆಯ ಸ್ಪರ್ಶವಿದೆ. ಜೊತೆಗೆ ಜನಚರಿತ್ರೆ ಮತ್ತು ಅಂಬೇಡ್ಕರ್ ಸಿದ್ಧಾಂತದ ಹಿನ್ನೆಲೆ ಇದೆ.
ಜಗತ್ತಿನ ಮುಖ್ಯವಾದ ಚಳವಳಿಗಳನ್ನು ಹೋರಾಟದ ಹಾಡುಗಳು ಮುನ್ನಡೆಸಿವೆ. ವಿಶೇಷವೆಂದರೆ ಕರ್ನಾಟಕದ ಜನಾಂದೋಲನಗಳಾದ ದಲಿತ, ರೈತ, ಮಹಿಳಾ, ಕಾರ್ಮಿಕ ಚಳವಳಿಗಳಲ್ಲಿ ಹೋರಾಟದ ಹಾಡುಗಳು ಕಲಾ ಮಾಧ್ಯಮವಾಗಿ ಸಾಮಾಜಿಕ ಬದಲಾವಣೆಯಲ್ಲಿ ಎಂತಹ ಪಾತ್ರವಹಿಸಬಹುದು ಎಂಬುದನ್ನು ಸಾಬೀತು ಪಡಿಸಿವೆ. ಈ ಹಿನ್ನೆಲೆಯಲ್ಲಿ ಕಡುಬಾಯಿ ಖರಟ್ ಅವರ ಹಾಡು ಲಕ್ಷಾಂತರ ಜನರ ಹೃದಯಗಳನ್ನು ಬಡಿದೆಚ್ಚರಿಸುವ ಸಮಾಜ ಬದಲಾವಣೆಯ ಪ್ರಬಲ ಮಾಧ್ಯಮವಾಗಿ ರೂಪುಪಡೆದಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ದುರಂತವೆಂದರೆ ಜನಪರ ಚಳವಳಿಗಳು ನಿಷ್ಕ್ರಿಯಗೊಂಡಿರುವ, ಪ್ರಬಲವಾದ ಹೋರಾಟದ ಹಾಡು ಹುಟ್ಟದಿರುವ ಕಾಲದಲ್ಲಿ ಕಡುಬಾಯಿ ಅವರ ಧ್ವನಿ ಕೇಳುಗರಲ್ಲಿ ಕೇವಲ ಭಾವುಕತೆಯನ್ನಷ್ಟೇ ಉಂಟುಮಾಡುವುದಿಲ್ಲ; ಬದಲಿಗೆ ಎಚ್ಚರಿಕೆಯನ್ನು ಉಂಟುಮಾಡುತ್ತದೆ. ಈ ಕಾರಣಕ್ಕೆ ಕಡುಬಾಯಿ ಅವರ ಧ್ವನಿ ಅಂಬೇಡ್ಕರ್‌ವಾದಿ, ಪ್ರಜಾಪ್ರಭುತ್ವವಾದಿಗಳಲ್ಲಿ, ಸಮಾನತೆಗಾಗಿ ತುಡಿಯುವ ಪ್ರತಿಯೊಬ್ಬರಲ್ಲೂ ಹೊಸ ಆಶಾಭಾವನೆಯನ್ನು ಮೂಡಿಸಿದೆ. ಸಾಮಾನ್ಯವಾಗಿ ಕಡುಬಾಯಿ ಅವರ ಹಾಡು, ಬದುಕಿನ ಕುರಿತು ಇಂದು ಪ್ರೀತಿ, ಅನುಕಂಪ ತೋರುವವರ ಸಂಖ್ಯೆ ಹೆಚ್ಚಾಗಿದೆ. ಜೊತೆಗೆ ಅನೇಕ ಸಾರ್ವಜನಿಕ ವೇದಿಕೆಗಳಲ್ಲಿ, ಮಾಧ್ಯಮಗಳಲ್ಲಿ ಅವರಿಗೆ ಹಾಡಲು ಅವಕಾಶ ಸಿಕ್ಕಿದೆ ಎನ್ನುವುದು ನಿಜವಾದರೂ; ಅವರ ಬದುಕು ಇದರಿಂದ ಸಂಪೂರ್ಣವಾಗಿ ಸುಧಾರಿಸುತ್ತದೆಯೇ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ; ಯಾಕೆಂದರೆ ಇಂದಿಗೂ ಆಕೆಗೆ ವಾಸಿಸಲು ಸರಿಯಾದ ಮನೆಯಿಲ್ಲ. ಹಾಗಾಗಿ ಕಡುಬಾಯಿ ತನ್ನನ್ನು ಭೇಟಿ ಮಾಡಲು ಬರುವ ಮಾಧ್ಯಮದವರಲ್ಲಿ ಸದಾ ಕೇಳುವ ಮಾತೆಂದರೆ ನೀವು ನಮ್ಮ ಹಾಡು, ಸಂಗೀತದ ಬಗ್ಗೆ ಬರೆಯುತ್ತೀರ. ಇದರ ಜೊತೆಗೆ ಸರಕಾರ ನಾವು ವಾಸಿಸಲು ನಿರ್ಮಿಸಿಕೊಂಡಿರುವ ಗುಡಿಸಲುಗಳನ್ನು ಅನಧಿಕೃತವೆಂದು ಎಷ್ಟು ಅಮಾನವೀಯವಾಗಿ ಧ್ವಂಸಗೊಳಿಸುತ್ತಿದೆ ಎನ್ನುವುದನ್ನು ವಿವರವಾಗಿ ಬರೆಯಿರಿ ಎಂದು ಕಣ್ಣೀರಿಟ್ಟು ಮನವಿ ಮಾಡಿಕೊಳ್ಳುತ್ತಾಳೆ. ಅವಳ ಹಾಡಿನ ದನಿಯಂತೆ ಅವಳ ಕಣ್ಣೀರ ದನಿಯು ಈ ದುಷ್ಟ ವ್ಯವಸ್ಥೆಗೆ ಕೇಳುವಂತಾಗಲಿ.
ಜೈ ಭೀಮ್ ಲಾಲ್ ಸಲಾಮ್
(ಲೇಖಕರು: ಕನ್ನಡ ಉಪನ್ಯಾಸಕರು ಕೆ.ಎಸ್.ಜಿ.ಎಚ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ, ಮೈಸೂರು)