ಓ ಮೆಣಸೇ…
*ಎಚ್.ಡಿ. ದೇವೇಗೌಡರಿಗೆ ಅಧಿಕಾರದ ದುರಾಸೆ ಜಾಸ್ತಿ
- ಕೆ.ಆರ್. ಪೇಟೆ ಕೃಷ್ಣ, ಮಾಜಿ ಸ್ಪೀಕರ್
ಅದನ್ನು ದುರಾಸೆ ಎನ್ನುವುದಕ್ಕಿಂತ ಮಕ್ಕಳ ಕುರಿತ ಧೃತರಾಷ್ಟ್ರ ಪ್ರೀತಿ ಅನ್ನುವುದೇ ಚೆನ್ನ.
---------------------
ಕೇಂದ್ರದಲ್ಲಿ ಪ್ರಧಾನಿ ಮೋದಿಯ ಪ್ರಭಾವ ಎಷ್ಟಿದೆಯೋ ಕರ್ನಾಟಕದಲ್ಲಿ ಸಿಎಂ ಯಡಿಯೂರಪ್ಪರ ಪ್ರಭಾವವೂ ಅಷ್ಟೇ ಇದೆ
- ಕೆ.ಎನ್. ರಾಜಣ್ಣ, ಕಾಂಗ್ರೆಸ್ ಮಾಜಿ ಶಾಸಕ
ಮತದಾರರ ಪ್ರಜ್ಞಾವಂತಿಕೆಯ ಅಭಾವವೂ ಅಷ್ಟೇ ಇದೆ.
---------------------
ಅತೃಪ್ತ ಶಾಸಕರನ್ನು ಅನರ್ಹಗೊಳಿಸಿರುವುದು ಬಿಜೆಪಿಗೆ ಒಳಗೊಳಗೆ ಖುಷಿಯಾಗಿದೆ - ಬಸವರಾಜ ಹೊರಟ್ಟಿ, ವಿ.ಪ. ಸದಸ್ಯ
ನಿಮಗೆ ಹೊರಗೊರಗೆ ಖುಷಿಯಾದಂತಿದೆ.
---------------------
ಬುಲೆಟ್ ಮತ್ತು ಬಾಂಬ್ಗಿಂತಲೂ ಅಭಿವೃದ್ಧಿಯೇ ಶಕ್ತಿಶಾಲಿ - ನರೇಂದ್ರ ಮೋದಿ, ಪ್ರಧಾನಿ
ಅದು ಬಾಂಬ್ಗಿಂತ ಶಕ್ತಿಶಾಲಿ ಎನ್ನುವ ಕಾರಣಕ್ಕೆ ಅಭಿವೃದ್ಧಿಯಾಗದಂತೆ ನೋಡಿಕೊಳ್ಳುತ್ತಿದ್ದೀರಾ?
---------------------
ಪಾಶ್ಚಾತ್ಯ ಶಿಕ್ಷಣದಿಂದ ಇಂದಿನ ಯುವ ಜನತೆ ವಿದ್ಯೆ ಕಲಿಸಿದ ಗುರುಗಳನ್ನೇ ಮರೆಯುತ್ತಿದ್ದಾರೆ - ಕುಂಬ್ಳೆ ಸುಂದರ ರಾವ್, ಯಕ್ಷಗಾನ ಕಲಾವಿದ
ಸುರತ್ಕಲ್ ಗಲಭೆಗೆ ಪಾಶ್ಚಾತ್ಯ ಶಿಕ್ಷಣವೇ ಕಾರಣವಿರಬಹುದೇ?
---------------------
ಕಾಶ್ಮೀರ ವಿವಾದ ಬಗೆಹರಿಸಲು ಅಮೆರಿಕ ಅಧ್ಯಕ್ಷ ಟ್ರಂಪ್ ಮಧ್ಯಸ್ಥಿಕೆ ವಹಿಸಲು ಸಿದ್ಧವಿರುವುದಾಗಿ ಹೇಳಿರುವುದು ಪಾಕ್ ನಿರೀಕ್ಷೆಗೂ ಮೀರಿದ್ದಾಗಿದೆ - ಮುಹಮ್ಮದ್ ಖುರೇಷಿ, ಪಾಕ್ ಸಚಿವ
ಯಾರೋ ಮಧ್ಯಸ್ಥಿಕೆ ವಹಿಸಲು ಕಾಶ್ಮೀರವೆಂದರೆ, ಮದುವೆ ಸಂಬಂಧ ಅಲ್ಲ.
---------------------
ಗುಂಪು ಹಲ್ಲೆ, ಗೋರಕ್ಷಣೆ ವಿಚಾರ ಮುಂದಿಟ್ಟು ಕೊಂಡು ಹಿಂದೂ ಧರ್ಮದ ಹೆಸರು ಕೆಡಿಸುವ ಕೆಲಸ ನಡೆಯುತ್ತಿದೆ - ಮೋಹನ್ ಭಾಗವತ್, ಆರೆಸ್ಸೆಸ್ ಸರಸಂಘಚಾಲಕ
ಹಿಂದೂ ಧರ್ಮದ ಹೆಸರು ಕೆಡಿಸುವುದಕ್ಕಾಗಿಯೇ ಆರೆಸ್ಸೆಸ್ ಸ್ಥಾಪನೆಯಾಗಿರುವಾಗ, ಅವೆಲ್ಲದರ ಅಗತ್ಯವಿದೆಯೇ?
---------------------
2014 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ನನ್ನ ಜೀವನದಲ್ಲಿ ನಾನು ಮಾಡಿದ ಅತಿದೊಡ್ಡ ತಪ್ಪು - ನಂದನ್ ನಿಲೇಕಣಿ, ಇನ್ಫೋಸಿಸ್ ಸಂಸ್ಥಾಪಕ
ತಮ್ಮ ಪರವಾಗಿ ಕರಪತ್ರ ಹಿಡಿದು ಪ್ರಚಾರ ಮಾಡಿದ್ದು ನನ್ನ ಜೀವನದ ಅತಿ ದೊಡ್ಡ ತಪ್ಪು ಎಂದು ಕಾರ್ನಾಡ್ ಆತ್ಮ ಮರುಗುತ್ತಿದೆಯಂತೆ.
---------------------
ಕಾಂಗ್ರೆಸ್ನಲ್ಲಿ ಒಬ್ಬ ಟ್ರಬಲ್ ಶೂಟರ್ ಇದ್ದರೆ, ಬಿಜೆಪಿಯಲ್ಲಿ ಹತ್ತು ಟ್ರಬಲ್ ಕಿಲ್ಲರ್ಸ್ ಇದ್ದಾರೆ - ಕಟ್ಟಾ ಸುಬ್ರಮಣ್ಯ ನಾಯ್ಡು, ಮಾಜಿ ಸಚಿವ
ಅಲ್ಲಿ ಕುಖ್ಯಾತ ಶೂಟರ್ಗಳಷ್ಟೇ ಇದ್ದಾರೆ.
---------------------
ಲಿಂಗಾಯತ ಧರ್ಮದ ಬಗ್ಗೆ ಮಾತನಾಡಲು ಮಾಜಿ ಸಿಎಂ ಸಿದ್ದರಾಮಯ್ಯ ಲಿಂಗಾಯತರೇ?
- ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ
ಯಡಿಯೂರಪ್ಪರು ಲಿಂಗಾಯತರಾದರೆ ಸಿದ್ದರಾಮಯ್ಯ ಯಾಕಲ್ಲ? ಎಂದು ಲಿಂಗಾಯತ ಸ್ವಾಮೀಜಿಗಳೇ ಕೇಳಿದ್ದಾರೆ.
---------------------
ನನ್ನನ್ನು ನಾನು ಮಾರಿಕೊಂಡಿಲ್ಲ
- ಎಚ್. ವಿಶ್ವನಾಥ್, ಅನರ್ಹ ಶಾಸಕ
ನಿಮ್ಮನ್ನು ನೀವು ಕೊಂದು ಕೊಂಡಿದ್ದೀರಿ ಅಷ್ಟೇ.
---------------------
ಅಧಿಕಾರವಿದ್ದರೂ ನಾವು ನಮ್ಮ ಕಾರ್ಯಕರ್ತರನ್ನು ಕಡೆಗಣಿಸಿದ್ದು ಮಹಾಪರಾಧ -ದೇವೇಗೌಡ, ಮಾಜಿಪ್ರಧಾನಿ
ಅಧಿಕಾರವಿಲ್ಲದೇ ಇರುವಾಗ ಕಾರ್ಯಕರ್ತರ ನೆನಪಾಗುವುದು ಸಹಜ.
---------------------
ನನ್ನ ಮಾತು ಕೇಳಲಿಲ್ಲ, ಅದಕ್ಕೆ ಸಮ್ಮಿಶ್ರ ಸರಕಾರ ಪತನವಾಯಿತು - ಸತೀಶ್ ಜಾರಕಿಹೊಳಿ. ಮಾಜಿ ಸಚಿವ
ಅಂತೂ ಪತನದ ಹಿಂದೆ ನಿಮ್ಮ ಕೈವಾಡ ಇದೆಯೆಂದಾಯಿತು.
---------------------
ನಾನು ತಪ್ಪು ದಾರಿಯಲ್ಲಿ ನಡೆದರೆ ವಿರೋಧ ಪಕ್ಷದ ಪ್ರಮುಖರು ಒಂದು ಕರೆ ಮಾಡಿದರೆ ಸಾಕು ತಪ್ಪನ್ನು ತಿದ್ದಿ ಕೊಳ್ಳುವೆ - ಯಡಿಯೂರಪ್ಪ, ಮುಖ್ಯಮಂತ್ರಿ
ಅಂದರೆ ಆಡಳಿತ ಪಕ್ಷದ ನಾಯಕರ ಕರೆ ಸ್ವೀಕರಿಸುವುದಿಲ್ಲ ಎಂದಾಯಿತು.
---------------------
ನಾಯಕತ್ವ ಇತ್ಯರ್ಥವಾಗದಿದ್ದರೆ ಕಾಂಗ್ರೆಸ್ ಸರ್ವನಾಶ ಖಚಿತ - ಶಶಿತರೂರು, ಸಂಸದ
ನಾಶವಾಗುವುದಕ್ಕೆ ಅಲ್ಲಿ ಉಳಿದಿರುವುದಾದರೂ ಏನು?
---------------------
ಅತೃಪ್ತರಿಗೂ ನಮಗೂ ಯಾವುದೇ ಸಂಬಂಧವಿಲ್ಲ - ಆರ್. ಅಶೋಕ್, ಶಾಸಕ
ಯಡಿಯೂರಪ್ಪ ಅವರಷ್ಟೇ ನೇರ ಸಂಬಂಧ ಇಟ್ಟುಕೊಂಡಿದ್ದರು ಎಂದಾಯಿತು.
---------------------
ರಾಜ್ಯದಲ್ಲಿ ಜೆಡಿಎಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುವ ದಿನಗಳು ದೂರವಿಲ್ಲ -ಪ್ರಜ್ವಲ್ ರೇವಣ್ಣ, ಸಂಸದ
ಅಂದರೆ ಮತ್ತೆ ರೆಸಾರ್ಟ್ ರಾಜಕೀಯ ಆರಂಭವಾಗಲಿದೆಯೇ?
---------------------
ಬುದ್ಧ ದೇವರನ್ನು ಪೂಜಿಸುತ್ತಿದ್ದ. ಹಾಗಾಗಿ ಅವನೂ ಹಿಂದೂ - ವಿಶ್ವೇಶ ತೀರ್ಥಸ್ವಾಮೀಜಿ, ಪೇಜಾವರ ಮಠ
ಮಠಕ್ಕೆ ಬಂದರೆ ಆತನನ್ನು ಯಾವ ಪಂಕ್ತಿಯಲ್ಲಿ ಕೂರಿಸುತ್ತೀರಿ?
---------------------
ನಾನು ಜಗತ್ತಿನಲ್ಲೇ ಅತ್ಯಂತ ಕಡಿಮೆ ಜನಾಂಗೀಯವಾದಿ ವ್ಯಕ್ತಿ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಜಗತ್ತು ಅಷ್ಟೇನೂ ಕೆಟ್ಟು ಹೋಗಿಲ್ಲ.
---------------------
ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಪ್ಪಟ ಮಣ್ಣಿನ ಮಗ - ಗೋವಿಂದ ಕಾರಜೋಳ, ಮಾಜಿ ಸಚಿವ
ಕಾಗೆ ಹಾರಿಸುವುದೆಂದರೆ ಇದೆ.
---------------------
ಶೂಟಿಂಗ್ ಸೆಟ್ನಲ್ಲಿ ಜೀವಂತಿಕೆ ತುಂಬಿದರೆ ಚಿತ್ರದಲ್ಲಿಯೂ ಜೀವಂತಿಕೆ ಇರುತ್ತದೆ - ಹೃತಿಕ್ ರೋಷನ್, ನಟ
ನಟನೆಯಲ್ಲೂ ಒಂದಿಷ್ಟು ಜೀವಂತಿಕೆ ಬೇಡವೇ?
---------------------
ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ - ಅಮಿತ್ ಶಾ, ಕೇಂದ್ರ ಸಚಿವ
ಅದನ್ನು ಜಗತ್ತಿಗೆ ಸಾಬೀತು ಮಾಡಿ ತೋರಿಸಿದ್ದೀರಿ.
---------------------
ಅನರ್ಹ ಶಾಸಕರ ಬೆನ್ನಿಗೆ ಬಿಜೆಪಿ ನಿಲ್ಲುವುದಿಲ್ಲ - ಪ್ರಹ್ಲಾದ್ ಜೋಷಿ, ಸಂಸದ
ಬೆನ್ನಿಗೆ ಚೂರಿ ಹಾಕುವುದೆಂದರೆ ಇದೇ.
---------------------