ರೈತರು, ಯುವಜನರ ನಂತರ ಉದ್ದಿಮೆಪತಿಗಳೂ ಈಗ ಆತ್ಮಹತ್ಯೆಯತ್ತ!?
ಸಿದ್ದಾರ್ಥ ಹೆಗ್ಡೆಯಂತಹವರು ಯಾವ ನೀತಿಗಳನ್ನು ಬೆಂಬಲಿಸಿ ಅದರ ಲಾಭಗಳನ್ನು ಬಳಸಿಕೊಂಡು ದೊಡ್ಡ ಉದ್ದಿಮೆಪತಿಗಳಾದರೂ ಅವೇ ನೀತಿಯ ಮುಂದುವರಿದ ಪರಿಣಾಮವಾಗಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳಬೇಕಾಗಿ ಬಂದಿದೆ. ಅಂದರೆ ರೈತರು, ಇನ್ನಿತರರ ಆತ್ಮಹತ್ಯೆಗಳಿಗೆ ಏನು ಕಾರಣಗಳಿದ್ದವೋ ಮೂಲಭೂತವಾಗಿ ಅವೇ ಕಾರಣಗಳು ಸಿದ್ದಾರ್ಥ ಹೆಗ್ಡೆಯಂತಹ ಉದ್ದಿಮೆಪತಿಯ ಆತ್ಮಹತ್ಯೆಗಳಿಗೂ ಕಾರಣವಾಗತೊಡಗಿದೆ. ಇದೆಲ್ಲದರ ಲಾಭ ರಿಲಯನ್ಸ್ ಸೇರಿದಂತೆ ನೆಸ್ ಕೆಫೆ, ಬ್ರೂಕ್ ಬಾಂಡ್, ಸ್ಟಾರ್ ಬಕ್ಸ್, ಕೋಸ್ಟಾ ಕಾಫಿ, ಡಂಕಿನ್ ಡೂನಟ್ಸ್‌ನಂತಹ ಭಾರೀ ಜಾಗತಿಕ ಕಾರ್ಪೊರೇಟ್‌ಗಳಿಗೇ ಆಗುತ್ತದೆ. ನಮ್ಮ ದೇಶವನ್ನು ಇಂತಹ ಜಾಗತಿಕ ಕಾರ್ಪೊರೇಟುಗಳ ಹಿಡಿತದಿಂದ ಬಿಡಿಸಿಕೊಳ್ಳದಿದ್ದರೆ ಯಾರಿಗೂ ಉಳಿಗಾಲವಿಲ್ಲ.
ಭಾರತ ದೇಶ ಇದೇ ಆಗಸ್ಟ್ 15ಕ್ಕೆ ತನ್ನ 74ನೇ ಸ್ವಾತಂತ್ರ್ಯ!? ದಿನಾಚರಣೆಯನ್ನು ಆಚರಿಸಲು ಹೊರಟಿದೆ. 1947ರ ಆಗಸ್ಟ್ ಹದಿನೈದರ ಮಧ್ಯರಾತ್ರಿಯಲ್ಲಿ ಬ್ರಿಟಿಷರು ಅಧಿಕಾರದ ಹಸ್ತಾಂತರವನ್ನು ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಧುರೀಣರಿಗೆ ಮಾಡಿದರು. ಈ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಸ್ಥಾಪಿಸಿದ್ದು ಕೂಡ ಬ್ರಿಟಿಷರೇ ಎನ್ನುವುದನ್ನು ಕೂಡ ನಾವಿಲ್ಲಿ ಗಮನಿಸಬೇಕು.
ನಮ್ಮದು ಸಾರ್ವಜನಿಕ ಖಾಸಗಿ ಹೀಗೆ ಎರಡೂ ರಂಗಗಳ ಮೂಲಕ ಅಭಿವೃದ್ಧಿ ಮಾದರಿ ಎಂದು ಬಿಂಬಿಸಲಾಯಿತು. ಇದಕ್ಕೆ ಸೋವಿಯತ್ ರಶ್ಯದ ಸಮಾಜವಾದಿ ಹಾಗೂ ಪಾಶ್ಚಾತ್ಯದ ಬಂಡವಾಳಶಾಹಿ ಮಾದರಿಗಳ ಒಳ್ಳೆಯ ಗುಣಗಳನ್ನು ಭಾರತಕ್ಕೆ ಅಳವಡಿಸಿ ಮಿಶ್ರ ಆರ್ಥಿಕ ವ್ಯವಸ್ಥೆಯನ್ನು ಪಾಲಿಸಲಾಗುತ್ತದೆ ಎಂದೇ ಹೇಳುತ್ತಾ ಬರಲಾಯಿತು.
ಆದರೆ 1945ರಿಂದಲೂ ಭಾರತ ದೇಶದ ಅಭಿವೃದ್ಧಿ ಎನ್ನುವುದು ಪ್ರಧಾನವಾಗಿ ಬ್ರಿಟಿಷರ ದಲ್ಲಾಳಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಬಂಡವಾಳಿಗರ ಜೊತೆಗೆ ಸಾವಿರಾರು ಎಕರೆಗಳ ಭೂ ಒಡೆಯರ ನೇತೃತ್ವದ ಅಭಿವೃದ್ಧಿ ಎಂಬುದೇ ಆಗಿತ್ತು. ಅಲ್ಲಿ ವಸಾಹತುಶಾಹಿ ಕಂಪೆನಿಗಳಿಗೆ ಹೆಚ್ಚಿನ ಅನುಕೂಲತೆಗಳಿದ್ದವು. ಅವುಗಳಿಗೆ ಸಹಾಯಕ ಕೆಲಸಗಳನ್ನಷ್ಟೇ ಇಲ್ಲಿನ ದಲ್ಲಾಳಿ ಕಂಪೆನಿಗಳು ವಹಿಸುತ್ತಾ ಬಂದವು. ಅದರಲ್ಲಿ ಟಾಟಾ, ಬಿರ್ಲಾ, ಸಿಂಘಾನಿಯಾ, ಮಫತ್ ಲಾಲ್‌ಗಳಂತಹ ಫಾರ್ಸಿ ಹಾಗೂ ಮಾರವಾಡಿಗಳದೇ ಪ್ರಧಾನ ಹಿಡಿತವಾಗಿತ್ತು. ಭಾರೀ ಬಂಡವಾಳ ಬಯಸುವ ಕಬ್ಬಿಣ ಮತ್ತು ಉಕ್ಕು, ರೈಲ್ವೆ, ದೂರವಾಣಿ, ವಿದ್ಯುತ್‌ಗಳಂತಹ ಭಾರೀ ಬೃಹತ್ ಉದ್ಯಮಗಳನ್ನು ಸಾರ್ವಜನಿಕ ರಂಗದಲ್ಲೇ ಸ್ಥಾಪಿಸಲಾಯಿತು. ಅಂದಿನಿಂದ ಜಗತ್ತಿನ ಎಲ್ಲಾ ಭಾರೀ ಕಾರ್ಪೊರೇಟ್‌ಗಳ ಹಿಡಿತದಲ್ಲಿ ಭಾರತ ಸಿಲುಕಿಕೊಂಡಿತು. ನಂತರ ಈ ದೇಶದ ತೊರೆ-ಹಳ್ಳ-ನದಿಗಳಲ್ಲಿ ಸಾಕಷ್ಟು ನೀರು ಹರಿದಿವೆ. ಜಾಗತಿಕವಾಗಿಯೂ ಸಾಕಷ್ಟು ನೀರು ಸಮುದ್ರಕ್ಕೆ ಹರಿಯಿತು.
ತೀವ್ರ ರೀತಿಯ ಆರ್ಥಿಕ ಬಿಕ್ಕಟ್ಟುಗಳ ಕಾರಣದಿಂದಾಗಿ ಎರಡು ಜಾಗತಿಕ ಯುದ್ಧಗಳು ನಡೆದು ಜನಸಾಮಾನ್ಯರು ಅಪಾರ ಪ್ರಮಾಣದಲ್ಲಿ ಪ್ರಾಣಗಳನ್ನು ಕಳೆದುಕೊಂಡು ಭಾರೀ ನಷ್ಟಗಳನ್ನು ಅನುಭವಿಸಬೇಕಾಗಿ ಬಂದಿತ್ತು. ಇದರ ಪಾಠಗಳಿಂದಾಗಿ ಯುದ್ಧವಿಲ್ಲದೇ ಜಾಗತಿಕ ಹಿಡಿತಗಳನ್ನು ಹೊಂದುವ ಸಾಂಸ್ಥಿಕ ರಚನೆಗಳನ್ನು ಮಾಡಿಕೊಂಡು ವಿಶ್ವಸಂಸ್ಥೆ, ವಿಶ್ವ ಬ್ಯಾಂಕ್ ಗಳಂತಹವುಗಳನ್ನು ಸ್ಥಾಪಿಸಿಕೊಂಡರು. ಆದರೂ ಜಾಗತಿಕ ಬಂಡವಾಳಶಾಹಿ ಬಿಕ್ಕಟ್ಟುಗಳಿಗೆ ಪರಿಹಾರ ಕಾಣದೆ ಆರ್ಥಿಕ ಬಿಕ್ಕಟ್ಟುಗಳ ನಿರಂತರ ಚಕ್ರ ಏರುಗತಿಯಲ್ಲಿ ಕಾಣಿಸಲು ತೊಡಗಿತು. ಅದಕ್ಕೆ ತಕ್ಕಂತೆ ಜಾಗತಿಕ ಭಾರೀ ಕಾರ್ಪೊರೇಟ್‌ಗಳು ಜಾಗತೀಕರಣವೆಂಬ ಹೊಸ ಅಸ್ತ್ರದೊಂದಿಗೆ ತನ್ನ ಆಕ್ರಮಣ ನಡೆಸತೊಡಗಿತು. ಅದರ ಭಾಗವಾಗಿ ಭಾರತ ದೇಶವೂ ಕೂಡ ಜಾಗತೀಕರಣದ ತೆಕ್ಕೆಗೆ ಸಿಲುಕಿತು. ಉದಾರೀಕರಣ, ಖಾಸಗೀಕರಣಗಳು ಅಭಿವೃದ್ಧಿಯ ಮಂತ್ರವೆಂಬಂತೆ ಬಿಂಬಿಸುತ್ತಾ ಜಾರಿಗೊಳಿಸಲಾಯಿತು. ಸಾರ್ವಜನಿಕ ರಂಗಗಳು ಖಾಸಗೀಕರಣಗೊಳ್ಳತೊಡಗಿದವು. ಇಲ್ಲವೇ ಖಾಸಗಿ ರಂಗಕ್ಕೆ ಅನುಕೂಲವಾಗಿ ಪ್ರವರ್ತಿಸುವಂತೆ ಮಾಡಲಾಯಿತು. ಅದರ ಪರಿಣಾಮಗಳನ್ನು ಈಗ ನಾವು ದೂರವಾಣಿ, ತೈಲ ಮತ್ತು ಅನಿಲ, ವಿದ್ಯುತ್, ಗಣಿಯಂತಹ ಕ್ಷೇತ್ರಗಳಲ್ಲಿ ನೋಡುತ್ತಿದ್ದೇವೆ. ನಷ್ಟಗಳು ಪೇರಿಸುತ್ತಾ ಖಾಸಗಿಯವರಿಗೆ ಸಾಗುವಂತೆ ಮಾಡುತ್ತಾ ಈಗ ಚಿಲ್ಲರೆ ವ್ಯವಹಾರಕ್ಷೇತ್ರ ಕೂಡ ಭಾರೀ ಕಾರ್ಪೊರೇಟ್‌ಗಳ ಕೈಗೆ ಸೇರಿಕೊಳ್ಳುವಂತೆ ಮಾಡಲಾಯಿತು. ಅದರ ಲಾಭ ಪಡೆದು ನಡೆದ ಒಂದು ವಿದ್ಯಮಾನವೇನೆಂದರೆ ಹೆಚ್ಚಾಗಿ ದಲ್ಲಾಳಿಗಳಾಗಿದ್ದ ಅಂಬಾನಿ, ಟಾಟಾ, ಅದಾನಿಯಂತಹ ಭಾರತೀಯ ಮೂಲದ ಭಾರೀ ಕಾರ್ಪೊರೇಟ್‌ಗಳು ಜಾಗತಿಕ ವ್ಯಾಪ್ತಿಯನ್ನು ಪಡೆದುಕೊಂಡಿದ್ದು.
ಅವುಗಳಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕ್ಷೇತ್ರ ಪ್ರಾಮುಖ್ಯತೆ ಪಡೆದುಕೊಂಡು ನಂತರ ಅದನ್ನು ಕಳೆದುಕೊಂಡ ವಿದ್ಯಮಾನವೂ ನಡೆಯಿತು. ಶೇರು ವ್ಯವಹಾರ ಭಾರೀ ವ್ಯವಹಾರವನ್ನಾಗಿಸಲಾಯಿತು. ಇದರ ಜೊತೆಯಲ್ಲಿ ನೂರಾರು ಮಧ್ಯಮಗಾತ್ರದ ಕಂಪೆನಿಗಳು ಚಾಲ್ತಿಗೆ ಬಂದವು
ಇದೇ ಸಂದರ್ಭದ ಲಾಭಗಳನ್ನು ಹಾಗೂ ಕೌಟುಂಬಿಕ, ರಾಜಕೀಯ ಲಾಭಗಳನ್ನು ಪಡೆದುಕೊಂಡು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮೂಲದ ಸಿದ್ದಾರ್ಥ ಹೆಗ್ಡೆಯಂತಹವರು ಮುನ್ನೆಲೆಗೆ ಬಂದು ಮಧ್ಯಮ ಗಾತ್ರದ ಉದ್ಯಮಗಳ ಮಾಲಕರಾಗಿ ಹೊರಹೊಮ್ಮಿದ್ದರು. ಸಿದ್ದಾರ್ಥ ಹೆಗ್ಡೆ ‘ಅಮಾಲ್ಗಮೇಟೆಡ್ ಬೀನ್ ಕಾಫಿ ಲಿಮಿಟೆಡ್’ ಎಂಬ ಕಾಫಿ ಬೀಜದ ಕಂಪೆನಿ ಸ್ಥಾಪಿಸಿ ನಂತರ ‘ಕೆಫೆ ಕಾಫಿ ಡೆ’, ‘ಮೈಂಡ್ ಟ್ರಿ’ ಯಂತಹ ಕಂಪೆನಿಗಳ ಮಾಲಕನಾದರು. 18,000 ಕೋಟಿ ರೂಪಾಯಿಗಳ ಆಸ್ತಿಯ ಸಾಮ್ರಾಜ್ಯವನ್ನು ಸ್ಥಾಪಿಸಿದರು. 13,000 ಎಕರೆಗಳ ಕಾಫಿ ತೋಟಗಳ ಮಾಲಕರಾದರು. ಭಾರೀ ಕಟ್ಟಡಗಳು, ಅಪಾರ್ಟ್‌ಮೆಂಟುಗಳ ಒಡೆಯರಾದರು. ಭಾರತದ ಹೊರಗೂ ವ್ಯವಹಾರ ನಡೆಸಿ ಅಲ್ಲೂ ಕೂಡ ಆಸ್ತಿಗಳನ್ನು ಗಳಿಸತೊಡಗಿದರು. ಮೊದಲು ಕೇಂದ್ರ ಸರಕಾರಿ ನಿಯಂತ್ರಣದಲ್ಲಿದ್ದ ಭಾರತೀಯ ಕಾಫಿ ಬೋರ್ಡ್‌ನ ಮೂಲಕ ವ್ಯವಹಾರ ನಡೆಸುತ್ತಿದ್ದ ಕಾಫಿ ಉದ್ಯಮ ಜಾಗತೀ ಕರಣದ ಸಂದರ್ಭದಲ್ಲಿ ಸಂಪೂರ್ಣವಾಗಿ ಮುಕ್ತ ಮಾರುಕಟ್ಟೆಯ ವ್ಯಾಪ್ತಿಗೆ ಬಿಡಲಾಯಿತು. ಅದುವರೆಗೆ ಕಾಫಿ ಬೆಳೆಗಾರರು ಸಾಪೇಕ್ಷವಾಗಿ ನಿಶ್ಚಿತವಾದ ಮತ್ತು ಖಾತ್ರಿಯಾದ ವರಮಾನವನ್ನು ಪಡೆಯುತ್ತಿದ್ದರು.
ಜಾಗತೀಕರಣಕ್ಕೆ ತೆರೆದುಕೊಂಡ ನಂತರದ ಆರಂಭದ ವರ್ಷಗಳಲ್ಲಿ ಬೃಹತ್ ಪ್ರಮಾಣದ ಲಾಭ ಸಿಗತೊಡಗಿತು. ಆಗ ಜಾಗತೀಕರಣ ಒದಗಿಸಿದ ಇಂತಹ ಅದ್ಭುತ ಲಾಭದ ಬಗ್ಗೆ ಕಾಫಿ ಬೆಳೆಗಾರರು ರೋಮಾಂಚನಗೊಂಡಿದ್ದು ನಿಜ. ಅದು ಶಾಶ್ವತವೆಂದು ಅಂದುಕೊಂಡು ಐಷಾರಾಮಿ ಗೀಳಿಗೆ ಈಡಾದರು. ಕಾಫಿ ಆದಾಯದಿಂದಲೇ ನಂತರ ತೀರಿಸಬಹುದೆಂದು ಕೊಂಡು ಭಾರೀ ಸಾಲಗಳನ್ನು ಮಾಡಿಕೊಂಡರು. ಆದರೆ ಕೆಲವೇ ವರ್ಷಗಳಲ್ಲಿ ಕಾಫಿ ಉದ್ಯಮ ನೆಲಕಚ್ಚತೊಡಗಿತು. ಅಂತರ್‌ರಾಷ್ಟ್ರೀಯ ಕಾಫಿ ಕಂಪೆನಿಗಳು ಆ ಉದ್ಯಮದ ಮೇಲೆ ಹಿಡಿತ ಸಾಧಿಸಿ ಮಾರುಕಟ್ಟೆಯನ್ನು ನಿರ್ಧರಿಸತೊಡಗಿದವು. ಸೂಪರ್ ಲಾಭ ಗಳಿಸಲು ಎಲ್ಲಾ ಕಳ್ಳ ಹಾದಿ, ಒತ್ತಡ ತಂತ್ರಗಳನ್ನು ಅನುಸರಿಸತೊಡಗಿದರು. ಕಾಫಿಯ ಬೆಲೆ ಕುಸಿದು ತೋಟಗಳು ಹಾಳುಬೀಳತೊಡಗಿದವು. ಸಾಕಷ್ಟು ಕಾಫಿ ಬೆಳೆಗಾರರು ಪರ್ಯಾಯ ಮಾರ್ಗವಾಗಿ ತಮ್ಮ ತೋಟಗಳನ್ನು ಹೋಮ್ ಸ್ಟೇ, ರೆಸಾರ್ಟ್‌ಗಳನ್ನಾಗಿ ಮಾಡಿಕೊಂಡರು. ಭಾರತೀಯ ಬೆಳೆಗಾರರು ಅದರಲ್ಲೂ ಅತೀ ಸಣ್ಣ, ಸಣ್ಣ ಹಾಗೂ ಮಧ್ಯಮ ಬೆಳೆಗಾರರನ್ನು ಇದು ಬರ್ಬಾದು ಮಾಡಿತು. ಆ ಸನ್ನಿವೇಶದ ಲಾಭವನ್ನು ಸಿದ್ದಾರ್ಥ ಹೆಗ್ಡೆಯಂತಹವರೂ ಪಡೆದು ತಮ್ಮ ಸಣ್ಣವ್ಯವಹಾರವನ್ನು ಹತ್ತಾರು ಸಾವಿರ ಕೋಟಿಯ ವ್ಯವಹಾರವಾಗಿಸಿ ಹತ್ತಾರು ಸಾವಿರ ಎಕರೆಗಳ ಕಾಫಿತೋಟಗಳನ್ನು ತಮ್ಮದಾಗಿಸಿಕೊಂಡರು.
ಆದರೆ ಜಾಗತೀಕರಣದ ಮೂಲಕ ಜಾಗತಿಕ ಕಾರ್ಪೊರೇಟ್‌ಗಳು ಕೃಷಿ, ಕೈಗಾರಿಕೆ, ಸೇವಾ ವಲಯ, ಶಿಕ್ಷಣ, ಮೂಲಸೌಕರ್ಯ, ಆರೋಗ್ಯ, ಚಿಲ್ಲರೆ ವ್ಯವಹಾರ ಹೀಗೆ ಎಲ್ಲಾ ರಂಗಗಳ ಜಾಗತಿಕ ಮಾರುಕಟ್ಟೆಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಗಳು ವೇಗ ಪಡೆಯುತ್ತಿದ್ದ ಹಾಗೆಯೇ ರೈತರ, ಯುವಜನರ, ಸಣ್ಣ ಪುಟ್ಟ ವ್ಯವಹಾರಸ್ಥರ ಆತ್ಮಹತ್ಯಾ ಸರಣಿಗಳೇ ಆರಂಭವಾದವು. ಸಾಲ ಹಾಗೂ ನಷ್ಟಗಳ ಸುಳಿಗೆ ಸಿಲುಕಿದ ರೈತರು ಜೀವವುಳಿಸಿಕೊಳ್ಳುವ ಪರಿಸ್ಥಿತಿಯೇ ಇಲ್ಲದಂತಹ ಸ್ಥಿತಿ ನಿರ್ಮಾಣವಾದಾಗ ತಮ್ಮ ಜೀವಗಳನ್ನೇ ಕಳೆದುಕೊಳ್ಳತೊಡಗಿದರು. ಈಗಾಗಲೇ ದೇಶಾದ್ಯಂತ 5ರಿಂದ 6 ಲಕ್ಷ ರೈತರು ಆತ್ಮಹತ್ಯೆಗಳಿಗೆ ದೂಡಲ್ಪಟ್ಟಿದ್ದಾರೆಂಬ ವರದಿ ಕೂಡ ಇದೆ. ಇತರ ರಂಗದವರ ಆತ್ಮಹತ್ಯೆಗಳ ಬಗ್ಗೆ ಪ್ರತ್ಯೇಕ ಅಂಕಿ ಅಂಶಗಳನ್ನು ಮಾಡುವ ಪರಿಪಾಟ ಇಲ್ಲದ್ದರಿಂದಾಗಿ ಅದು ಸದ್ದು ಮಾಡಿರುವುದು ಕಡಿಮೆ ಎನ್ನಬಹುದು. ರೈತರ ಆತ್ಮಹತ್ಯೆಗಳು ಈಗಲೂ ನಿಂತಿಲ್ಲ. ಆದರೆ ಅದು ಈಗ ಮೊದಲಿನಂತೆ ಮಾಧ್ಯಮಗಳಲ್ಲಿ ಸುದ್ದಿಯ ವಸ್ತುವಾಗಿಲ್ಲ. ಹಾಗೆ ಆತ್ಮಹತ್ಯೆಗೆ ದೂಡಲ್ಪಟ್ಟವರಲ್ಲಿ ಕಾಫಿ ಬೆಳೆಗಾರರೂ ಸೇರಿದ್ದಾರೆ.
ಕಾಂಗ್ರೆಸ್ ನೇತೃತ್ವದಲ್ಲಿ ಮಾಜಿ ವಿಶ್ವಬ್ಯಾಂಕ್‌ನ ಉದ್ಯೋಗಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಮಯದಲ್ಲಿ ಜಾಗತೀಕರಣಕ್ಕೆ ಇಡೀ ದೇಶದ ಎಲ್ಲಾ ಕ್ಷೇತ್ರಗಳನ್ನು ಒಪ್ಪಿಸಲು ಬೇಕಾದ ಎಲ್ಲಾ ನೀತಿಗಳನ್ನೂ ತಯಾರು ಮಾಡಲಾಯಿತು, ಅದಕ್ಕೆ ತಕ್ಕಂತೆ ಕಾನೂನುಗಳ ತಿದ್ದುಪಡಿಗಳನ್ನೂ ಮಾಡುತ್ತಾ ಬಂದಿದ್ದು ಕಾಂಗ್ರೆಸ್ ನೇತೃತ್ವದ ಸರಕಾರಗಳೇ ಆಗಿದ್ದವು. ಜೊತೆಗೆ ವಿರೋಧ ಪಕ್ಷಗಳ ನೇರ ಹಾಗೂ ಪರೋಕ್ಷ ಬೆಂಬಲಗಳೂ ಇದ್ದವು. ಕೆಲವು ಪಕ್ಷಗಳು ಜಾಗತೀಕರಣದ ಅಪಾಯಗಳ ಬಗ್ಗೆ ಮಾತನಾಡಿದ್ದು ಬಿಟ್ಟರೆ ಕಾರ್ಯದಲ್ಲಿ ಏನನ್ನೂ ಮಾಡಲಿಲ್ಲ. ಹಿಂದಿನ ಸರಕಾರಗಳಲ್ಲಿ ಒಂದೇ ಪಕ್ಷಕ್ಕೆ ಬಹುಮತ ಇಲ್ಲದಿದ್ದುದರಿಂದಾಗಿ ಎಲ್ಲವನ್ನೂ ಸಲೀಸಾಗಿ ತೀರ್ಮಾನಿಸಿ ಹೇರಲು ಆಗುತ್ತಿರಲಿಲ್ಲ. ಕೆಲವು ಅಂತರ್ ವೈರುಧ್ಯಗಳು ಅದಕ್ಕೆ ತೊಡಕನ್ನುಂಟುಮಾಡುತ್ತಿದ್ದವು. ಹಾಗಾಗಿಯೇ ಇದೀಗ ಮೋದಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಭಾರೀ ಬಹುಮತವನ್ನು ಪಡೆಯುವಂತೆ ಮಾಡಲಾಗಿದೆ. ಹತ್ತಾರು ಸಾವಿರ ಕೋಟಿ ರೂ.ಗಳನ್ನು ಸುರಿದು ಚುನಾವಣೆಯನ್ನು ತಮ್ಮ ಮೂಗಿನ ನೇರಕ್ಕೇ ತಿರುಗಿಸಿಕೊಂಡು, ನಡೆಸಿದ ನೇರ ಹಾಗೂ ಪರೋಕ್ಷ ಕಾರ್ಪೊರೇಟ್ ನಿರ್ವಹಣೆಗಳೇ ಇದಕ್ಕೆ ಕಾರಣ.
ಬಹುಮತದ ಹೆಸರಿನಲ್ಲಿ ಮೋದಿ ಸರಕಾರ ಹೇರಿದ ನೋಟು ರದ್ಧತಿ, ಜಿಎಸ್‌ಟಿಯಂತಹ ಕ್ರಮಗಳು ಪರಿಸ್ಥಿತಿಯನ್ನು ಬಾಣಲೆಯಿಂದ ಬೆಂಕಿಗೇ ಹಾರುವಂತೆ ಮಾಡಿದೆ. ಕೋಟ್ಯಂತರ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು, ಚಿಲ್ಲರೆ ವ್ಯವಹಾರಗಳು, ವ್ಯಾಪಾರ ವಹಿವಾಟುಗಳು ನೆಲಕಚ್ಚುವಂತೆ ಮಾಡಲಾಯಿತು. ಜನಸಾಮಾನ್ಯರ ಕೈಯಲ್ಲಿದ್ದ ಹಣವನ್ನೆಲ್ಲಾ ಬರಿದು ಮಾಡಿ ಎತ್ತಿಕೊಂಡು ಭಾರೀ ಕಾರ್ಪೊರೇಟ್‌ಗಳ ಬಂಡವಾಳದ ಕೊರತೆಯನ್ನು ನೀಗಿಸಲು ಬಳಸಲಾಯಿತು. ಯಾಕೆಂದರೆ ಬ್ಯಾಂಕುಗಳು ಕಾರ್ಪೊರೇಟ್‌ಗಳು ವಾಪಾಸ್ ಮಾಡದ ಸಾಲಗಳ ಭಾರ ತಡೆದುಕೊಳ್ಳಲಾಗದೆ ನಷ್ಟದಲ್ಲಿ ಕುಸಿದುಬೀಳತೊಡಗಿದ್ದವು. ಮತ್ತೆ ಬಂಡವಾಳ ಒದಗಿಸಲು ಹಣವೇ ಇಲ್ಲದ ಸ್ಥಿತಿ ಬಂದು ಬಿಟ್ಟಿತ್ತು. ಇದೀಗ ಪುನಃ ಹಿಂದೆ ಚಲಾವಣೆಯಲ್ಲಿದ್ದಷ್ಟೇ ನೋಟುಗಳು ಚಲಾವಣೆಗೆ ಬಂದಿದ್ದರೂ ಅದಕ್ಕೆ ಹೆಚ್ಚು ಕಡಿಮೆ ಒಂದು ವರ್ಷ ತೆಗೆದುಕೊಂಡಿತು. ಅಷ್ಟು ಸಮಯ ಜನರ ಕೈಯಲ್ಲಿದ್ದ ಹತ್ತಾರು ಲಕ್ಷ ಕೋಟಿ ರೂಪಾಯಿಗಳು ಬ್ಯಾಂಕುಗಳ ಹಿಡಿತಕ್ಕೊಳಪಟ್ಟಿತ್ತು. ಆದರೆ ನೋಟು ರದ್ದತಿಯ ಹಿಂದೆಯೇ ಜಿಎಸ್‌ಟಿ ಹೇರಿದ್ದರಿಂದಾಗಿ ಪರಿಸ್ಥಿತಿ ಮತ್ತೂ ಬಿಗಡಾಯಿಸಿತು. ತೆರಿಗೆಯ ಮೇಲೆ ತೆರಿಗೆ ಕಟ್ಟುವಂತಹ ಸ್ಥಿತಿ ಹೇರಲಾಯಿತು.
ಎಲ್ಲಾ ವ್ಯವಹಾರಗಳೂ ತೆರಿಗೆ ವ್ಯಾಪ್ತಿಗೆ ಬರುವಂತೆ ಅವೈಜ್ಞಾನಿಕವಾಗಿ ಮಾಡಲಾಯಿತು. ನೋಟು ನಿಷೇಧದ ಹೊಡೆತದಿಂದ ಮಲಗಿದ ವ್ಯವಹಾರಗಳು ಚೇತರಿಸಿಕೊಳ್ಳಲಾಗಲಿಲ್ಲ. ಇವೆಲ್ಲದರ ಪರಿಣಾಮ ಉದ್ಯೋಗ ಹಾಗೂ ಜನರ ಕೊಳ್ಳುವ ಶಕ್ತಿಯ ಮೇಲೆ ನೇರ ಪ್ರಹಾರ ನಡೆಸತೊಡಗಿತು. ಆದರೆ ಇವೆಲ್ಲದರ ನಡುವೆಯೂ ಅಂಬಾನಿ, ಅದಾನಿಯಂತಹ ಕೆಲವೇ ಉದ್ದಿಮೆಪತಿಗಳು ಭಾರೀ ಲಾಭಗಳನ್ನು ಬಾಚತೊಡಗಿದ್ದರು. ಉಳಿದ ಉದ್ದಿಮೆಪತಿಗಳು ನಷ್ಟದ ಸುಳಿಗಳಿಗೆ ಜಾರತೊಡಗಿದರು. ಭಾರೀ ಉದ್ದಿಮೆಪತಿಗಳು ಇತರ ಉದ್ದಿಮೆಗಳನ್ನು ಕಬಳಿಸುವ ಇಲ್ಲವೇ ನಷ್ಟಕ್ಕೊಳಪಡಿಸಿ ಸ್ವತಹ ಬಿದ್ದು ಹೋಗುವಂತೆ ಮಾಡುವ ಕೆಟ್ಟ ವ್ಯಾಪಾರಿ ಹಾಗೂ ರಾಜಕೀಯ ತಂತ್ರಗಳನ್ನು ಅನುಸರಿಸತೊಡಗಿದರು. ಹಲವಾರು ಮೊಬೈಲ್ ಕಂಪೆನಿಗಳನ್ನು ಸ್ಥಗಿತಗೊಳಿಸಿದ ಜಿಯೋ ಮೊಬೈಲಿನ ಉದಾಹರಣೆಯೊಂದೇ ಇದನ್ನು ನಮಗೆ ಅರ್ಥ ಮಾಡಿಸುತ್ತದೆ.
ಸಿದ್ದಾರ್ಥ ಹೆಗ್ಡೆಯಂತಹವರಿಗೆ ವ್ಯವಹಾರದ ಬಾಗಿಲುಗಳು ಬಂದಾಗತೊಡಗಿದವು. ನಷ್ಟಗಳು ಹೆಚ್ಚತೊಡಗಿದವು. ಸರಕಾರದ ಮೇಲಿನ ಹಿಡಿತವನ್ನು ಬಳಸಿ ಜಾಗತಿಕ ಕಾರ್ಪೊರೇಟುಗಳು ಇಂತಹ ಉದ್ದಿಮೆಗಳನ್ನು ತುಳಿದು ಆ ಮಾರುಕಟ್ಟೆಯನ್ನೂ ತಾವೇ ಕಬಳಿಸುವ ಹುನ್ನಾರ ನಡೆಸತೊಡಗಿದವು. ಅದಕ್ಕೆ ತೆರಿಗೆ ಇಲಾಖೆ ಹಾಗೂ ಖಾಸಗಿ ಸಾಂಸ್ಥಿಕ ಹೂಡಿಕೆದಾರರನ್ನೂ ಬಳಸುತ್ತಾ ಹೂಡಿಕೆಗಳನ್ನು ವಾಪಾಸು ಪಡೆಯುವ ಒತ್ತಡಗಳನ್ನು ಹಾಕಿಸತೊಡಗಿದರು. ಬ್ಯಾಂಕುಗಳಿಂದ ಬಂಡವಾಳ ಗಿಟ್ಟುತ್ತಿಲ್ಲ. ಖಾಸಗಿ ಹೂಡಿಕೆದಾರರೂ ಬಂಡವಾಳ ವಾಪಾಸು ಕೇಳುವ ಪರಿಸ್ಥಿತಿ ನಿರ್ಮಾಣವಾದಾಗ ವ್ಯವಹಾರಗಳನ್ನು ಬಿಟ್ಟು ತಮ್ಮ ತಲೆ ಉಳಿಸಿಕೊಂಡು ತಮ್ಮ ಬೇನಾಮಿ ಆಸ್ತಿಗಳೊಂದಿಗೆ ಐಷಾರಾಮಿ ಜೀವನ ನಡೆಸಲು ವಿದೇಶಗಳಿಗೆ ಹಾರಿಹೋದ ಸಾಕಷ್ಟು ದೊಡ್ಡ ಸಂಖ್ಯೆಯ ಉದ್ದಿಮೆಪತಿಗಳಿದ್ದಾರೆ. ಅದೀಗ ಬಜಾಜ್, ಲಾರ್ಸೆನ್ ಟೂಬ್ರೋ, ಟಾಟಾ ಮೋಟಾರ್ಸ್, ಮಾರುತಿ ಮೋಟಾರ್ಸ್, ಮಹೀಂದ್ರದಂತಹ ಕಂಪೆನಿಗಳಿಗೂ ತಟ್ಟತೊಡಗಿದೆ. ಇಳಿಕೆ ಅಭಿವೃದ್ಧಿಯೇ ಪ್ರಧಾನವಾಗತೊಡಗಿದೆ. ಕಂಪೆನಿಗಳು ಮುಚ್ಚತೊಡಗಿವೆ.
ಸಾವಿರಗಟ್ಟಲೆ ಉದ್ಯೋಗಗಳು ಬಿದ್ದು ಹೋಗ ತೊಡಗಿವೆ. ಮೋಹನದಾಸ್ ಪೈ, ಕಿರಣ ಮಜುಂದಾರ್ ಷಾರಂತಹ ಉದ್ದಿಮೆ ಪತಿಗಳು ‘ತೆರಿಗೆ ಭಯೋತ್ಪಾದನೆ’! ಯ ಬಗ್ಗೆ ಆತಂಕಗಳನ್ನು ವ್ಯಕ್ತಪಡಿಸುವಷ್ಟರ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿದೆ. ಇವರಲ್ಲಿ ಮೋದಿ ಸರಕಾರದ ನೀತಿಗಳನ್ನು ಬೆಂಬಲಿಸಿದ್ದವರೇ ಹೆಚ್ಚಿನ ಜನರು. ಈಗ ಅವರೇ ಮೋದಿ ಸರಕಾರದ ಬಜೆಟ್ ಮಂಡನೆ ಹಾಗೂ ಸಿದ್ದಾರ್ಥ ಹೆಗ್ಡೆಯ ಆತ್ಮಹತ್ಯೆಯ ನಂತರ ಮೋದಿ ನೀತಿಯ ವಿರುದ್ಧ ಮಾತನಾಡತೊಡಗಿದ್ದಾರೆ. ಬಹು ಪ್ರಚಾರ ಪಡೆಯುತ್ತಿದ್ದ ಭಾರತದ ಜಿಡಿಪಿ ಈಗ ಭಾರೀ ಕುಸಿತದತ್ತ ಸಾಗುತ್ತಿದೆ. ಜಿಡಿಪಿಯಲ್ಲಿ ಜಾಗತಿಕವಾಗಿ 5ನೇ ಸ್ಥಾನವೆಂದು ಹೇಳುತ್ತಿದ್ದ ಭಾರತ ಈಗ 7ನೇ ಸ್ಥಾನಕ್ಕೆ ಕುಸಿದಿದೆ. ಕುಸಿತ ಮತ್ತೂ ಮುಂದುವರಿಯುತ್ತಿದೆ.
ಸಿದ್ದಾರ್ಥ ಹೆಗ್ಡೆಯಂತಹವರು ಯಾವ ನೀತಿಗಳನ್ನು ಬೆಂಬಲಿಸಿ ಅದರ ಲಾಭಗಳನ್ನು ಬಳಸಿಕೊಂಡು ದೊಡ್ಡ ಉದ್ದಿಮೆಪತಿಗಳಾದರೂ ಅವೇ ನೀತಿಯ ಮುಂದುವರಿದ ಪರಿಣಾಮವಾಗಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳಬೇಕಾಗಿ ಬಂದಿದೆ. ಅಂದರೆ ರೈತರು, ಇನ್ನಿತರರ ಆತ್ಮಹತ್ಯೆಗಳಿಗೆ ಏನು ಕಾರಣಗಳಿದ್ದವೋ ಮೂಲಭೂತವಾಗಿ ಅವೇ ಕಾರಣಗಳು ಸಿದ್ದಾರ್ಥ ಹೆಗ್ಡೆಯಂತಹ ಉದ್ದಿಮೆಪತಿಯ ಆತ್ಮಹತ್ಯೆಗಳಿಗೂ ಕಾರಣವಾಗತೊಡಗಿದೆ. ಇದೆಲ್ಲದರ ಲಾಭ ರಿಲಯನ್ಸ್ ಸೇರಿದಂತೆ ನೆಸ್ ಕೆಫೆ, ಬ್ರೂಕ್ ಬಾಂಡ್, ಸ್ಟಾರ್ ಬಕ್ಸ್, ಕೋಸ್ಟಾ ಕಾಫಿ, ಡಂಕಿನ್ ಡೂನಟ್ಸ್‌ನಂತಹ ಭಾರೀ ಜಾಗತಿಕ ಕಾರ್ಪೊರೇಟ್‌ಗಳಿಗೇ ಆಗುತ್ತದೆ. ನಮ್ಮ ದೇಶವನ್ನು ಇಂತಹ ಜಾಗತಿಕ ಕಾರ್ಪೊರೇಟುಗಳ ಹಿಡಿತದಿಂದ ಬಿಡಿಸಿಕೊಳ್ಳದಿದ್ದರೆ ಯಾರಿಗೂ ಉಳಿಗಾಲವಿಲ್ಲ.
ಮಿಂಚಂಚೆ: nandakumarnandana67gmail.com