varthabharthi


ಭೀಮ ಚಿಂತನೆ

ಸ್ವತಂತ್ರ ದೇಶದಲ್ಲಿ ಅಸ್ಪಶ್ಯರಿಗೆ ಸಮಾನ ಹಕ್ಕಿನಿಂದ ಬದುಕುವ ಅವಕಾಶ ಇರಬೇಕು

ವಾರ್ತಾ ಭಾರತಿ : 8 Aug, 2019

ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸ್ವಾಗತಿಸಿ, ಸನ್ಮಾನ ಮಾಡಬೇಕೆಂದು ಮುಂಬೈ ಇಲಾಖೆಯ ದಲಿತ ಸಮಾಜದ ಜನ ನಿರ್ಧರಿಸಿದರು. ಅದರಂತೆ ಆ ಸ್ವಾಗತ ಸಮಾರಂಭವನ್ನು ರವಿವಾರ ತಾರೀಖು 1ನೇ ಮಾರ್ಚ್ 1932ರಂದು ಆಯೋಜಿಸಲಾಗಿತ್ತು. ಈ ಜಾಹೀರು ಸಮಾರಂಭಕ್ಕೆ ತಲಾ ಎರಡಾಣೆ ಟಿಕೇಟನ್ನು ಇಟ್ಟು ಇದರಿಂದ ಒಟ್ಟಾಗುವ ಹಣವನ್ನು ನಾಸಿಕ್ ದೇವಸ್ಥಾನ ಪ್ರವೇಶದ ಸತ್ಯಾಗ್ರಹಕ್ಕಾಗಿ ಕೊಡುವುದೆಂದು ನಿರ್ಧರಿಸಲಾಯಿತು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ದಲಿತರಿಗಾಗಿ ಮಾಡಿದ ಕೆಲಸಗಳ ಬಗ್ಗೆ. ಅವರಾಡಲಿರುವ ಮಾತು ಕೇಳಲು ಈ ಜಾಹೀರು ಸಭೆಗೆ ಸುಮಾರು ಹತ್ತು ಸಾವಿರದಷ್ಟು ದಲಿತರು ನೆರೆದಿದ್ದರು. ಪರೇಲ್‌ನ ದಾವೋದರ್ ಹಾಲ್‌ನ ಹಿಂದಿರುವ ದೊಡ್ಡ ಮೈದಾನ ಜನರಿಂದ ಕಿಕ್ಕಿರಿದು ತುಂಬಿತ್ತು. ಈ ಸಭೆಯ ಅಧ್ಯಕ್ಷ ಸ್ಥಾನವನ್ನು ಡಾ. ಜಿ.ಪಿ. ಸೋಲಂಕಿಯವರು ವಹಿಸಿಕೊಂಡಿದ್ದರು. ಸಭೆಗಾಗಿ ಮುಂಬೈ ಇಲಾಖೆಯ ಬೇರೆ ಬೇರೆ ನಗರಗಳಿಂದ ಹಾಗೂ ತಾಲೂಕುಗಳಿಂದ ದಲಿತರ ಪ್ರತಿನಿಧಿಗಳು ಹಾಜರಿದ್ದರು. ಸಾಯಂಕಾಲ ಏಳು ಘಂಟೆಗೆ ಸಮತಾ ಸಂಘದ ಅಧ್ಯಕ್ಷರಾದ ಶ್ರೀ ದೇವರಾವ್ ನಾಯಿಕ್ ಅವರು ತಮ್ಮ ಭಾಷಣದಿಂದ ಸಭೆಯನ್ನಾರಂಭಿಸಿದರು. ಅವರು ಡಾಕ್ಟರರ ಲಂಡನ್ನಿನಲ್ಲಿಯ ಕೆಲಸಗಳ ಬಗ್ಗೆ ಮಾತನಾಡಿ ಡಾ. ಸಾಹೇಬರು ಮಾಡಿರುವ ಸಾಧನೆಯಿಂದ ಅವರಿಗೆ ಕೇವಲ ದಲಿತರ ನಾಯಕರಷ್ಟೇ ಅಲ್ಲ ಸಾಮಾನ್ಯ ಜನತೆಯ ಹಾಗೂ ಮುಸಲ್ಮಾನರ ಬೆಂಬಲವೂ ಸಾಕಷ್ಟಿದೆ. ಮುಂಬರುವ ದಿನಗಳಲ್ಲಿ ಅವರು ಬಹುಜನ ಸಮಾಜದ ಜನಪ್ರಿಯ ನಾಯಕರಾಗುವುದರಲ್ಲಿ ಅನುಮಾನವಿಲ್ಲ. ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ದೃಷ್ಟಿಯಿಂದ ಅವರಿಂದ ಕ್ರಾಂತಿಕಾರಿ ಸೇವೆಯಾಗುತ್ತದೆ ಅನ್ನುವ ನಂಬಿಕೆ ನನಗಿದೆ. ನಿಮ್ಮೆಲ್ಲರ ವತಿಯಿಂದ ಜನತೆಯ ಈ ನಿಜವಾದ ನಾಯಕನನ್ನು ಸ್ವಾಗತಿಸಲು ನನಗೆ ಬಹಳ ಸಂತೋಷವಾಗುತ್ತದೆ ಎಂದರು.

ಸಭೆಯ ಅಧ್ಯಕ್ಷರಾದ ಡಾ. ಸೋಲಂಕಿಯವರು ಡಾ. ಅಂಬೇಡ್ಕರ್ ಅವರ ಭಾಷಣ ಕೇಳಲು ಉತ್ಸುಕರಾಗಿದ್ದ ಜನತೆಯ ಆತುರವನ್ನು ಗಮನಿಸಿ ಡಾ. ಸಾಹೇಬರಿಗೆ ಭಾಷಣ ಮಾಡಲು ವಿನಂತಿಸಿದಾಗ ಡಾ. ಅಂಬೇಡ್ಕರ್ ಅವರು ಭಾಷಣ ಮಾಡಲು ಎದ್ದರು. ತಮ್ಮ ಭಾಷಣದಲ್ಲವರು,

 ಇಂದು ಸುಮಾರು ಐದು ತಿಂಗಳ ನಂತರ ನನ್ನ ನಿಮ್ಮ ಭೇಟಿಯಾಗುತ್ತಿದೆ. ನಿಮ್ಮೆಲ್ಲರನ್ನು ನೋಡಿ ನನಗೆ ಬಹಳ ಸಂತೋಷವಾಗುತ್ತಿದೆ. ನೀವೆಲ್ಲರೂ ನನ್ನನ್ನು ನಂಬಿ ನನ್ನ ಜೊತೆ ಸಹಕರಿಸುತ್ತೀರಿ ಅನ್ನುವುದನ್ನು ನೋಡಿ ನಾನು ಧನ್ಯನಾದೆ ಅನಿಸುತ್ತದೆ ಆದರೆ ಜೊತೆಗೆ ನನ್ನ ಜವಾಬ್ದಾರಿಯೂ ಅಷ್ಟೇ ಹೆಚ್ಚುತ್ತದೆ. ಮನುಷ್ಯನಿಗೆ ತನ್ನೆಲ್ಲ ಕೆಲಸಗಳಿಂದ ಸಮಯ ತೆಗೆಯುವುದು ಬಹಳ ಸುಲಭ ಆದರೆ ನಿಮ್ಮೆಲ್ಲ ದಲಿತರ ಪ್ರಶ್ನೆಗಳನ್ನು ಬಿಡಿಸುವುದು ನನಗಾಗಿ ಬಹಳ ಕಷ್ಟದ ಕೆಲಸ. ಈ ಕಠಿಣ ಪರಿಸ್ಥಿತಿಯಿಂದ ಹೊರಬರುವ ದಾರಿಯನ್ನು ನಾನೇ ಹುಡುಕಬೇಕಿದೆ. ಇಲ್ಲಿಂದ ದುಂಡು ಮೇಜಿನ ಪರಿಷತ್ತಿಗಾಗಿ ಲಂಡನ್‌ಗೆ ಹೋದ ಮುಸಲ್ಮಾನ, ಸಿಖ್, ಮವಾಳ್‌ಗಳ ಪ್ರತಿನಿಧಿಗಳಿಗೆ ಅವರ ಪಕ್ಷದ ಜನರು ಇಂತಿಷ್ಟು ಕೆಲಸಗಳಾಗಬೇಕು ಎಂದು ಹೇಳಿ ಕಳಿಸಿದ್ದರು. ಆದರೆ ನೀವು ನನ್ನನ್ನು ಬೀಳ್ಕೊಡುವಾಗ ಪರಿಷತ್ತಿನೆದುರು ಏನು ಮಾತಾಡಬೇಕು ಇಲ್ಲವೇ ನಿಮ್ಮ ಯಾವ ಯಾವ ಕೆಲಸಗಳಾಗಬೇಕು ಅನ್ನುವುದರ ಎಲ್ಲ ಜವಾಬ್ದಾರಿಯನ್ನು ನನಗೇ ಬಿಟ್ಟುಕೊಟ್ಟಿದ್ದಿರಿ. ನಿಮ್ಮ ಏಳಿಗೆಯ ಮಾರ್ಗ ಕಂಡುಹಿಡಿಯುವ ಜವಾಬ್ಧಾರಿಯನ್ನೂ ನನ್ನ ಮೇಲೆ ಹಾಕಿದಿರಿ. ಈ ಪರಿಷತ್ತಿಗೆ ಹೋದ ಇತರ ಪ್ರತಿನಿಧಿಗಳಿಗೂ ಹಾಗೂ ನನಗೂ ಇದ್ದ ವ್ಯತ್ಯಾಸ ಇದೇ. ಪರಿಷತ್ತಿನಲ್ಲಿ ನಾನು ಮಾತುಕತೆಯಲ್ಲಿ ಕಂಡುಕೊಳ್ಳುವ ಮಾರ್ಗ ನನಗೆ ಸರಿ ಅನಿಸಿದಂತೆ ನಿಮಗೂ ಸರಿ ಅನಿಸಬಹುದೆ? ಅನ್ನುವ ಅನುಮಾನ ನನಗಿತ್ತು. ಆದರೆ ಮಹತ್ಪ್ರಯಾಸದಿಂದ ಕಂಡುಕೊಂಡ ಮಾರ್ಗ ಹಾಗೂ ಅದರ ಯೋಜನೆಯ ಬಗ್ಗೆ ನಿಮಗೇನೂ ಅಭ್ಯಂತರವಿಲ್ಲದಿರುವುದರಿಂದ ನಾನೀಗ ಅದನ್ನು ಸ್ವಲ್ಪದರಲ್ಲೇ ವಿವರಿಸುತ್ತೇನೆ. ನಾನು ರಾ. ಬ. ಶ್ರೀನಿವಾಸನ್ ಅವರ ಸಹಾಯದಿಂದ ಪರಿಷತ್ತಿನೆದುರು ಮಂಡಿಸಿದ ಯೋಜನೆಯಲ್ಲಿ ಒಟ್ಟು ಎಂಟು ಬೇಡಿಕೆಗಳನ್ನು ಮುಂದಿಟ್ಟಿದ್ದೆ. ಸಮಾನ ಹಕ್ಕಿನ ನಾಗರಿಕತ್ವ, ಭಾರತಕ್ಕೆ ಸ್ವಾತಂತ್ರ ಸಿಗಬೇಕೆ? ಬೇಡವೇ? ಸಿಕ್ಕರೂ ಅದು ಹೇಗಿರಬೇಕು? ಸ್ವಾತಂತ್ರ ಹೇಗಿದ್ದರೂ ಅದರಲ್ಲಿ ದಲಿತರು ಸಮಾನ ಹಕ್ಕಿನಿಂದ ಬದುಕುವಂತಾಗಬೇಕು. ಆ ಸ್ವತಂತ್ರ ಭಾರತದಲ್ಲಿ ನಮಗೆ ಜಾಗವಿಲ್ಲದಿದ್ದರೆ ಅದು ನೂರಕ್ಕೆ ನೂರರಷ್ಟು ಒಳ್ಳೆಯ ಸ್ವಾತಂತ್ರವಾಗಿದ್ದರೂ ನಮಗದು ಬೇಡ. ಹಾಗೆಯೇ ಸ್ವತಂತ್ರ ಭಾರತದ ರಾಜಕೀಯ ಅಧಿಕಾರಿಗಳು ಮೇಲ್ವರ್ಗದ ಜನರ ಕೈ ಸೇರಲಿವೆ ಅನ್ನುವ ಮಾತು ಸತ್ಯ, ಆ ಅಧಿಕಾರಗಳು ಅವರ ಕೈ ಸೇರುವ ಮುನ್ನ ನಮ್ಮ ಅಸ್ಪಶ್ಯತೆ ತೊಲಗಿದರೆ ಮಾತ್ರ ನಾವು ನಿಮ್ಮ ತತ್ವಗಳನ್ನು ಒಪ್ಪಿಕೊಳ್ಳುತ್ತೇವೆ.

ಕಾಯ್ದೆಯಲ್ಲಿ ಅಸ್ಪಶ್ಯತೆಯನ್ನು ತೊಲಗಿಸುವ ಕಲಮು ಜಾರಿಗೊಳಿಸಿದರೂ ಎಲ್ಲಾ ಅಂತಸ್ತಿನ ಜನ ಸಮಾನ ಹಕ್ಕಿನಿಂದ ಬದುಕುವಂತಾಗಬೇಕು ಅನ್ನುವುದನ್ನು ನಿರ್ಧರಿಸುವುದು ಅಗತ್ಯವಿತ್ತು. ದಲಿತರನ್ನು ಯಾರಾದರೂ ಕಾಲ ಕೆಳಗೆ ತುಳಿಯಲು ಪ್ರಯತ್ನಿಸಿದ್ದರೆ ಅವನು ದೇಶದ ಅಪರಾಧಿ ಎಂದು ಘೋಷಣೆ ಆಗಬೇಕು ಅನ್ನುವ ಬಗ್ಗೆ ಮುಖ್ಯ ಪ್ರಧಾನಿಗಳಾದ ಮಿ. ರಾಮ್ಸೇ ಮ್ಯಾಕ್ ಡೊನಾಲ್ಡ್ ಅವರ ಆಶ್ವಾಸನೆ ಮಾತ್ರ ಸಿಕ್ಕಿದೆ. ಮುಂದಾಗುವ ಕಮಿಟಿಯ ಚರ್ಚೆಯಲ್ಲಿ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ. ಏನೇ ಆದರೂ ಹಾಗೂ ನಮಗೆ ರಾಜಕೀಯ ಅಧಿಕಾರಿಗಳು ಎಷ್ಟೇ ಸಿಕ್ಕರೂ ಮುಂದಿನ ಕೆಲವು ಯೋಜನೆಗಳಲ್ಲಿ ಕಾಯ್ದೆಯ ಇಲ್ಲವೇ ಕಾರ್ಯಕಾರಿ ಮಂಡಳದ ಆಜ್ಞೆಯಿಂದ ಭೇದ ಭಾವ ಮಾಡುವ ಸಾಧ್ಯಗಳಿವೆ ಎಂದು ದಲಿತರಿಗೆ ಭಯವಾಗುತ್ತದೆ. ಆದ್ದರಿಂದ ಕಾಯ್ದೆಯ ಮಂಡಳವು ಇಲ್ಲವೆ ಕಾರ್ಯಕಾರಿ ಮಂಡಳವು ಇಂತಹ ದ್ವೇಷಕಾರಕ ಯಾವುದೇ ಭೇದ ಭಾವ ಮಾಡದಂತೆ ಅವರನ್ನು ತಡೆಗಟ್ಟದೆ ಬಹುಸಂಖ್ಯೆ ಜನರ ಅಧಿಕಾರದಡಿ ಬದುಕಲು ಒಪ್ಪುವುದು ದಲಿತರಿಂದ ಸಾಧ್ಯವಿಲ್ಲ. ಮುಂಬರುವ ಕಾಯ್ದೆ ಮಂಡಳದಲ್ಲಿ ನಾವು ಅಲ್ಪಸಂಖ್ಯಾತರಾಗಿಯೇ ಉಳಿಯುತ್ತೇವೆ, ನೂರರಲ್ಲಿ 10-15 ಪ್ರತಿನಿಧಿಗಳೆಂದರೆ ತುಂಬಾ ಕಡಿಮೆ ಪ್ರಮಾಣ. ಹಾಗಾಗಿ ಜಾತಿ ಜಾತಿಗಳಲ್ಲಿ ಯಾವುದೇ ರೀತಿ ಅನ್ಯಾಯ ಮಾಡಿ ಕಾಯ್ದೆ ತಯಾರಿಸುವ ಅವಕಾಶ ಇರಕೂಡದು. ಕೇವಲ ಮನುಷ್ಯತ್ವದ ಹಕ್ಕು ಸಿಗುವಂತಾಗಬೇಕು ಅನ್ನುವ ಧೋರಣೆಯನ್ನು ಸ್ವೀಕರಿಸಬೇಕು ಅನ್ನುವ ಬೇಡಿಕೆಯನ್ನು ಪರಿಷತ್ತು ಒಪ್ಪಿಕೊಂಡಿದೆ. ಮತದಾನದ ಬಗೆಗಿನ ಇಂದಿನ ಪರಿಸ್ಥಿತಿ ಸಮಾಧಾನಕಾರಕವಾಗಿಲ್ಲ. ಕೇವಲ ಹಣವಂತರಿಗೆ ಹಾಗೂ ಮಧ್ಯಮ ವರ್ಗದವರಿಗೆ ಮಾತ್ರ ಮತದಾನ ಮಾಡುವ ಹಕ್ಕುಗಳಿವೆ. ಬಡವರು, ಶ್ರಮಜೀವಿಗಳಿಗೆ, ತಮ್ಮ ಯೋಗ್ಯ ಪ್ರತಿನಿಧಿಗಳನ್ನು ಅರಿಸಿ ಕಳುಹಿಸಲಾಗುತ್ತಿಲ್ಲ. ದೇಶದಲ್ಲಿ ಬಡವರ ಸಂಖ್ಯೆ ನೂರಕ್ಕೆ ತೊಂಬತ್ತರಷ್ಟಿದೆ. ಅವರು ತಮ್ಮ ಜನರ ಪ್ರಶ್ನೆಗಳನ್ನು ಬಿಡಿಸಲು ಸರಕಾರಕ್ಕೆ ಮೊರೆ ಹೋಗಬೇಕಾಗುತ್ತದೆ. ಹಾಗಾಗಿ ಪರಾವಲಂಬಿಗಳಾಗಬೇಕಾಗುತ್ತದೆ. ಮುಂಬರುವ ಸ್ವತಂತ್ರ ದೇಶದಲ್ಲಿ ಈ ಅವಮಾನಕರ ಪರಿಸ್ಥಿತಿ ನಷ್ಟವಾಗಲು ಸಾರ್ವತ್ರಿಕ ಮತದಾನ ಯೋಜನೆಯ ಬೇಡಿಕೆಯನ್ನು ನಾನು ಮುಂದಿಟ್ಟಿದ್ದೇನೆ. ಈ ಪ್ರಶ್ನೆಗಳ ಬಗ್ಗೆ ಸಾಕಷ್ಟು ಮಾರಾಮಾರಿಯಾಯಿತು. ನಾವು ನಾಲ್ಕು ಜನ ಪ್ರತಿನಿಧಿಗಳು ಮಾತ್ರ ಈ ಪ್ರಶ್ನೆಗೆ ಒತ್ತು ಕೊಟ್ಟೆವು. ಆದರೆ ಯಾವುದೇ ಲಾಭವಾಗಲಿಲ್ಲ. ದಲಿತರಿಗೆ ಸಂಯುಕ್ತ ಮತದಾನ ಬೇಕೇ ಅಥವಾ ಸ್ವತಂತ್ರ ಮತದಾನ ಬೇಕೇ ಅನ್ನುವ ಪ್ರಶ್ನೆ ಕೇಳಿದಾಗ ನಾನು ಒಂದೋ ಸಾರ್ವತ್ರಿಕ ಮತದಾನ ಪದ್ಧತಿ ಇಲ್ಲವಾದರೆ ಮೊದಲ ಹತ್ತು ವರ್ಷಗಳ ಸ್ವತಂತ್ರ ಮತದಾನ ಪದ್ಧತಿ, ಆನಂತರ ಸಂಯುಕ್ತ ಮತದಾನ ಪದ್ಧತಿ ಹಾಗೂ ಕಾಯ್ದಿರಿಸಲಾದ ಸ್ಥಾನಗಳನುಸಾರವಾಗಿ ವ್ಯವಸ್ಥೆಯಾಗಬೇಕು ಎಂದು ಸೂಚಿಸಿದ್ದೇನೆ. ಇದರ ಬಗೆಗಿನ ಎಲ್ಲ ಜವಾಬ್ದಾರಿಯ ಹಕ್ಕು ಕೇವಲ ಗವರ್ನರ್ ಅವರ ಕೈಯಲ್ಲಿರುತ್ತವೆ.

ಬಹುಸಂಖ್ಯಾತರು ಕಾಯ್ದೆ ಕೌನ್ಸಿಲ್‌ನಲ್ಲಿ ಅಲ್ಪಸಂಖ್ಯಾಕರನ್ನು ಅಸಡ್ಡೆಯಿಂದ ಕಂಡು ಬಜೆಟ್‌ನಲ್ಲಿ ನಮ್ಮ ಬೇಡಿಕೆಗಳನ್ನು ಕಡೆಗಣಿಸಿದರೆ ನಾವೇನು ಮಾಡಬೇಕು? ಅನ್ನುವುದರ ಬಗ್ಗೆ ಅಪೀಲ್ ಮಾಡುವ ಅಧಿಕಾರ ಕೊಡಲಾಗಿದೆ. ನಮ್ಮ ನ್ಯಾಯವಾದ ಬೇಡಿಕೆಗಳನ್ನು ಕಡೆಗಣಿಸಿದರೆ ಗವರ್ನರ್ ಸಾಹೇಬರಲ್ಲಿಗೆ ಅಪೀಲ್ ಮಾಡುವ ಹಾಗೂ ಗವರ್ನರ್ ಕೂಡಾ ನಮ್ಮ ಮಾತು ಕೇಳದಿದ್ದರೆ ವೈಸ್‌ರಾಯ್ ಅವರಲ್ಲಿ ಅಪೀಲ್ ಮಾಡುವ ಅಧಿಕಾರ ಕೊಡಲಾಗಿದೆ. ಇಷ್ಟೇ ಅಲ್ಲದೆ ಅಸ್ಪಶ್ಯತೆಯ ಪ್ರಶ್ನೆ ಅಖಿಲ ಭಾರತೀಯ ಸ್ವರೂಪದ್ದಾಗಿದೆ ಅದಕ್ಕಾಗಿ ನಿರಂಕುಶ ಸರಕಾರ ಬೇಕು, ಹಾಗಾಗಿ ಕೇಂದ್ರ ಕಾಯ್ದೆ ಮಂಡಳದಲ್ಲಿ ಅಸ್ಪಶ್ಯರ ವತಿಯಿಂದ ಒಬ್ಬ ದೀವಾನನನ್ನು ನೇಮಿಸಿ ಎಲ್ಲ ರೀತಿಯ ಸಮಸ್ಯೆಗಳನ್ನು ಅವನಿಂದ ಬಿಡಿಸಿಕೊಳ್ಳಬೇಕು. ಆದರೆ ಈ ವಿಷಯದ ಬಗ್ಗೆ ಇನ್ನೂ ಸಮಾಧಾನಕರ ತೀರ್ಪು ಬಂದಿಲ್ಲ. ಪೊಲೀಸ್ ಹಾಗೂ ಸೇನೆಯಲ್ಲಿ ನಮ್ಮ ಜನರಿಗೆ ಎಲ್ಲ ದರ್ಜೆಯ ಕೆಲಸಗಳು ಸಿಗುವಂತಾಗುವ ಅವಕಾಶಗಳನ್ನು ಕಲ್ಪಿಸಿಕೊಡಲಾಗಿದೆ. ಇನ್ನು ಮುಂದೆ ಈ ಖಾತೆಗಳ ಕೆಲಸಕ್ಕೆ ಅಡಚಣೆಗಳನ್ನು ಗಮನಕ್ಕೆ ತೆಗದುಕೊಳ್ಳಲಾಗುವುದಿಲ್ಲ ಅನ್ನುವ ವಿಷಯದಲ್ಲಿ ಎಲ್ಲ ಪ್ರತಿನಿಧಿಗಳ ಬೆಂಬಲ ಸಿಕ್ಕಿದೆ.

ಕಡೆಗೆ ಮೇಲಿನ ಎಲ್ಲ ವಿಷಯಗಳನ್ನು ಗಮನಿಸಿದಾಗ ಭಾರತಕ್ಕೆ ಸಿಗಲಿರುವ ಸ್ವಾತಂತ್ರದಲ್ಲಿ ಅಲ್ಪ ಸಂಖ್ಯಾಕರ ಬೇಡಿಕೆಗಳು ನಿರ್ಧಾರವಾಗದೆ ಯಾವುದೇ ರೀತಿಯ ಸಂವಿಧಾನ ವಿಫಲಗೊಳ್ಳಲಿದೆ. ಅದಕ್ಕಾಗಿ ಬಹುಜನರ ಸಮಾಜದ ಸಮತೆಯ ಸ್ವರಾಜ್ಯ ಸಿಗಬೇಕು ಅನ್ನುವ ಆಸೆ ನಮಗಿದ್ದರೆ ವಯಸ್ಸಿಗೆ ಬಂದ ಪ್ರತಿಯೊಬ್ಬನಿಗೆ ಮತದಾನ ಮಾಡುವ ಹಕ್ಕು ಸಿಗಲು ಪ್ರಯತ್ನಿಸಬೇಕು ಅನ್ನುವುದು ಅಷ್ಟೇ ನಿಜ! ಈ ಸಾರ್ವತ್ರಿಕ ಮತದಾನದ ಪ್ರಶ್ನೆ ಬಹಳ ಮಹತ್ವದ್ದಾಗಿದೆ ಹಾಗೂ ಅದಕ್ಕಾಗಿ ಬಡವರ ಬದುಕು ಸುರಕ್ಷಿತವಾಗಿಡದ ಸ್ವಾತಂತ್ರ ಅಪಾಯದ ಸ್ವಾತಂತ್ರ ಅನ್ನುವುದು ನನ್ನ ಪ್ರಾಮಾಣಿಕ ಅನಿಸಿಕೆ.

ಇದರ ನಂತರ ಮುಂದಿನ ತಿಂಗಳಲ್ಲಿ ನಾಸಿಕ್‌ನ ಕಾಳಾರಾಮ್ ದೇವಸ್ಥಾನ ಪ್ರವೇಶ ಸತ್ಯಾಗ್ರಹಕ್ಕೆ ತನುಮನಧನದಿಂದ ಸಹಾಯ ಮಾಡಿ ಎಂದು ವಿನಂತಿಸುತ್ತೇನೆ. ನಾನಿಲ್ಲದಿದ್ದಾಗ ಇಲ್ಲಿಯ ಒಟ್ಟು ಪರಿಸ್ಥಿತಿ ಚಿಂತಾಜನಕವಾಗಿದ್ದರೂ ನನ್ನ ಸಹಚರರು, ಗೆಳೆಯರು, ಅಖಿಲ ಭಾರತೀಯ ಬಹಿಷ್ಕೃತ ಸಮಾಜ ಸೇವಾ ಸಂಘ ಹಾಗೂ ಡಾ.ಅಂಬೇಡ್ಕರ್ ಸೇವಾ ದಳವು ಜವಾಬ್ದಾರಿ ಹೊತ್ತು ಮಾಡಿದ ಕೆಲಸಗಳ ಬಗ್ಗೆ ನಾನವರಿಗೆ ಧನ್ಯವಾದಗಳನ್ನರ್ಪಿಸುತ್ತೇನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)