ಎ.ಕೆ. ಸುಬ್ಬಯ್ಯ 85
ಇಂದು ಎ.ಕೆ ಸುಬ್ಬಯ್ಯ ಜನ್ಮದಿನ
ಅವರ ಪಕ್ಷ ತ್ಯಜಿಸುವಿಕೆ ತಮ್ಮ ಸಿದ್ಧಾಂತಕ್ಕಾಗಿ ವೇದಿಕೆಗಳ ಹುಡುಕಾಟವಾಗಿತ್ತೇ ವಿನಃ, ಅಧಿಕಾರಕ್ಕಾಗಿ ಪಕ್ಷವನ್ನು ಸೇರಿದವರಾಗಿರಲಿಲ್ಲ. ಅಧಿಕಾರವನ್ನು ಬಯಸಿದ್ದರೆ 1983ರಲ್ಲಿ ಬಿಜೆಪಿಗೆ ಅವರ ಅಧ್ಯಕ್ಷತೆಯಲ್ಲಿ 18 ಸ್ಥಾನ ಲಭಿಸಿದ್ದ ವೇಳೆಯಲ್ಲಿ, ಜನತಾ ಪಕ್ಷಕ್ಕೆ ಬಾಹ್ಯ ಬೆಂಬಲವನ್ನು ನೀಡುವ ಬದಲು, ಸರಕಾರದೊಂದಿಗೆ ಸೇರಿಕೊಂಡಿದ್ದರೆ ಅನಾಯಾಸವಾಗಿ ಉಪಮುಖ್ಯಮಂತ್ರಿ ಸ್ಥಾನವನ್ನು ಅಧಿಕಾರಯುತವಾಗಿ ಪಡೆಯಲು ಅವಕಾಶವಿತ್ತು. ಇದು ಇಂದಿನ ಪಕ್ಷಾಂತರಕ್ಕೂ, ಸುಬ್ಬಯ್ಯನವರ ಪಕ್ಷಾಂತರಕ್ಕೂ ಇರುವಂತಹ ವ್ಯತ್ಯಾಸವಾಗಿದೆ.
ಸುದ್ದಿ ಸುಬ್ಬಯ್ಯ ಎಂದು ಒಂದು ಕಾಲಘಟ್ಟದಲ್ಲಿ ಪ್ರಚಾರದಲ್ಲಿದ್ದ ಎ.ಕೆ. ಸುಬ್ಬಯ್ಯ ಈಗ ಮೌನವಾಗಿದ್ದಾರೆ. ವಯೋ ಸಹಜವಾದ ಕಾಯಿಲೆಯಿಂದ ಬಳಲುತ್ತಿರುವ ಅವರು, ಬಹಿರಂಗ ಸಭೆಗಳಲ್ಲಿ, ಸಮಾರಂಭಗಳಲ್ಲಿ ಭಾಗವಹಿಸಲು ಅಶಕ್ತರಾಗಿರುವುದರಿಂದ, ಅವರ ಧ್ವನಿ ಈಗ ಕೇಳಲು ಸಾಧ್ಯವಾಗುತ್ತಿಲ್ಲ. ಆದರೂ ಕೂಡ ಅವರ ನಿವಾಸಕ್ಕೆ ತೆರಳಿ, ಅವರಲ್ಲಿ ಮಾತಿಗೆ ತೊಡಗಿದಾಗ, ಅವರ ಮೆದುಳು ಇನ್ನೂ ಚುರುಕಾಗಿಯೇ ಕಾರ್ಯ ನಿರ್ವಹಿಸುತ್ತಿದೆ. 20ರ ಹರೆಯದ ಚುರುಕುತನ ಅವರ ಮಾತಿನಲ್ಲಿ ನಮಗೆ ಕಂಡು ಬರುತ್ತದೆ.
ಇಂದು ಅಂದರೆ ಆಗಸ್ಟ್ 9ರಂದು ಅವರ ಹುಟ್ಟಿದ ದಿನ. ಅವರಿಂದು 85ನೇ ವಯಸ್ಸಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ವಿಧಾನಸಭಾ ಅಧ್ಯಕ್ಷರಾಗಿದ್ದ ಕೆ. ಆರ್. ರಮೇಶ್ ಕುಮಾರ್ರವರು ಇತ್ತೀಚೆಗೆ ವಿಧಾನಸಭೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರು ಮಂಡಿಸಿದ್ದ ವಿಶ್ವಾಸ ನಿರ್ಣಯದ ಚರ್ಚೆಯ ವೇಳೆಯಲ್ಲಿ, ಶಾಂತವೇರಿ ಗೋಪಾಲಗೌಡರ ಹೆಸರನ್ನು ಪ್ರಸ್ತಾಪಿಸಿ, ‘‘ವಿಧಾನ ಮಂಡಲದ ಇತಿಹಾಸವನ್ನು ಬರೆಯುವಾಗ, ಗೋಪಾಲಗೌಡರನ್ನು ಬಿಟ್ಟು ಬರೆಯಲು ಸಾಧ್ಯವೇ’’ ಎಂದು ಪ್ರಶ್ನಿಸಿದ್ದರು.
ಅದಾದ ನಂತರ ಶಾಸಕರ ಅನರ್ಹತೆಯ ಬಗ್ಗೆ ಪತ್ರಿಕಾಗೋಷ್ಠಿಯನ್ನು ನಡೆಸುವ ವೇಳೆಯಲ್ಲಿ ಅವರು ಕರ್ನಾಟಕದ ಶ್ರೇಷ್ಠ ಸಂಸದೀಯ ಪಟುಗಳ ಬಗ್ಗೆ ಉಲ್ಲೇಖಿಸುತ್ತಾ, ಎ.ಕೆ. ಸುಬ್ಬಯ್ಯನವರ ಹೆಸರನ್ನೂ ಪ್ರಸ್ತಾಪಿಸಿದ್ದರು. ಹೇಗೆ ಶಾಂತವೇರಿ ಗೋಪಾಲಗೌಡರ ಹೆಸರನ್ನು ಬಿಟ್ಟು, ವಿಧಾನ ಮಂಡಲದ ಇತಿಹಾಸವನ್ನು ಬರೆಯಲು ಸಾಧ್ಯವಿಲ್ಲವೋ, ಹಾಗೆಯೇ ಎ.ಕೆ. ಸುಬ್ಬಯ್ಯನವರ ಹೆಸರನ್ನು ಉಲ್ಲೇಖಿಸದೆ ಇತಿಹಾಸವನ್ನು ಬರೆಯಲು ಸಾಧ್ಯವಿಲ್ಲ ಎಂಬುದು ವಾಸ್ತವ.
ಇಂದಿನ ಸಂದರ್ಭದಲ್ಲಿ ಅವರು ಸಕ್ರಿಯ ರಾಜಕಾರಣದಲ್ಲಿ ಇರಬೇಕಿತ್ತು ಎನ್ನಿಸುವುದು ಹಲವಾರು ಕಾರಣಗಳಿಗಾಗಿ ಆಗಿದೆ. ಕರ್ನಾಟಕದ ಇತ್ತೀಚಿನ ರಾಜಕೀಯ ಬೆಳವಣಿಗೆಯ ಬಗ್ಗೆ ಅವರು ಸಕ್ರಿಯರಾಗಿದ್ದರೆ, ಸಾಕಷ್ಟು ವಿಶ್ಲೇಷಣೆಗಳು ಬರುತ್ತಿದ್ದವು ಎನ್ನುವುದರಲ್ಲಿ ಸಂಶಯವಿಲ್ಲ. ಸುಮಾರು 20 ಮಂದಿ ಶಾಸಕರು ಅತೃಪ್ತರು ಎನ್ನುವ ನೆಲೆಯಲ್ಲಿ ಹಲವು ದಿನಗಳ ಕಾಲ ಮುಂಬೈನಲ್ಲಿ ಕುಳಿತುಕೊಂಡು ಕಾಲಹರಣ ಮಾಡಿದ್ದರು. ಸರಕಾರವನ್ನು ಪತನಗೊಳಿಸಲು ಕಾರಣರಾದರು.
ಎ.ಕೆ. ಸುಬ್ಬಯ್ಯನವರು ಕೂಡಾ ಬಂಡೆಗಲ್ಲಿನಂತಹ ಗುಂಡೂರಾಯರ ಸರಕಾರದ ಪತನಕ್ಕೆ ಕಾರಣರಾಗಿದ್ದವರಲ್ಲಿ ಒಬ್ಬರಾಗಿದ್ದರು. ಸರಕಾರ ಪತನಗೊಳಿಸಲು ಸುಬ್ಬಯ್ಯನವರ ವೈಯಕ್ತಿಕ ವಿಚಾರಗಳು ಕಾರಣವಾಗಿರಲಿಲ್ಲ. ಬದಲಿಗೆ ಸರಕಾರದ ದುರಾಡಳಿತ, ಗೂಂಡಾಗಿರಿ, ರೈತರ ಮೇಲೆ ಗೋಲಿಬಾರ್ ಸೇರಿದಂತೆ ಹಲವಾರು ವಿಚಾರಗಳು ಗುಂಡೂರಾಯರ ಪತನಕ್ಕೆ ಕಾರಣವಾಗಿತ್ತು.
ಆದರೆ ಈಗ ಕುಮಾರಸ್ವಾಮಿ ಸರಕಾರವನ್ನು ಪತನಗೊಳಿಸಿದ್ದು ತಮ್ಮ ವೈಯಕ್ತಿಕ ಬೇಡಿಕೆಗಳು ಈಡೇರಲಿಲ್ಲ ಎನ್ನುವುದರ ಜೊತೆಯಲ್ಲಿ, ತಮಗೆ ವೈಯುಕ್ತಿಕವಾಗಿ ಕುಮಾರಸ್ವಾಮಿ ಹಾಗೂ ಹಿರಿಯ ಸಚಿವರು ಗೌರವ ನೀಡಲಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕಾಗಿಯೇ ವಿನಹ, ಯಾವುದೇ ರೀತಿಯ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಅತೃಪ್ತ(?) ಶಾಸಕರಲ್ಲಿ ಇರಲಿಲ್ಲ ಎನ್ನಬಹುದು.
ಎ.ಕೆ. ಸುಬ್ಬಯ್ಯ ಸಕ್ರಿಯರಾಗಿದ್ದ ವೇಳೆಯಲ್ಲಿ ಹಲವಾರು ರಾಜಕೀಯ ಪಕ್ಷಗಳನ್ನು ಸೇರಿದ್ದರು. ಹಾಗಾಗಿ ಅವರು ಪಕ್ಷಾಂತರಿ ಆಗಿದ್ದರು ಎನ್ನುವಂತಹ ಮಾತುಗಳು ಕೇಳಿ ಬಂದಿದ್ದವು. ಅವರೇ ಹೇಳಿದಂತೆ, ಅವರು ಎಂದೂ ಅಧಿಕಾರದಲ್ಲಿದ್ದ ವೇಳೆಯಲ್ಲಿ ಯಾವುದೇ ಪಕ್ಷವನ್ನು ತ್ಯಜಿಸಲಿಲ್ಲ. ಅವರ ಪಕ್ಷ ತ್ಯಜಿಸುವಿಕೆ ತಮ್ಮ ಸಿದ್ಧಾಂತಕ್ಕಾಗಿ ವೇದಿಕೆಗಳ ಹುಡುಕಾಟವಾಗಿತ್ತೇ ವಿನಃ, ಅಧಿಕಾರಕ್ಕಾಗಿ ಪಕ್ಷವನ್ನು ಸೇರಿದವರಾಗಿರಲಿಲ್ಲ. ಅಧಿಕಾರವನ್ನು ಬಯಸಿದ್ದರೆ 1983ರಲ್ಲಿ ಬಿಜೆಪಿಗೆ ಅವರ ಅಧ್ಯಕ್ಷತೆಯಲ್ಲಿ 18 ಸ್ಥಾನ ಲಭಿಸಿದ್ದ ವೇಳೆಯಲ್ಲಿ, ಜನತಾ ಪಕ್ಷಕ್ಕೆ ಬಾಹ್ಯ ಬೆಂಬಲವನ್ನು ನೀಡುವ ಬದಲು, ಸರಕಾರದೊಂದಿಗೆ ಸೇರಿಕೊಂಡಿದ್ದರೆ ಅನಾಯಾಸವಾಗಿ ಉಪಮುಖ್ಯಮಂತ್ರಿ ಸ್ಥಾನವನ್ನು ಅಧಿಕಾರಯುತವಾಗಿ ಪಡೆಯಲು ಅವಕಾಶವಿತ್ತು. ಇದು ಇಂದಿನ ಪಕ್ಷಾಂತರಕ್ಕೂ, ಸುಬ್ಬಯ್ಯನವರ ಪಕ್ಷಾಂತರಕ್ಕೂ ಇರುವಂತಹ ವ್ಯತ್ಯಾಸವಾಗಿದೆ.
ಈ ಬಾರಿಯ ಜೂನ್ 26ರಂದು ತುರ್ತು ಪರಿಸ್ಥಿತಿ ಹೇರಿದ 44ನೇ ವರ್ಷದ ನೆನಪಿನಲ್ಲಿ ಸಂಸತ್ತಿನಲ್ಲಿ ಮತ್ತು ಸಂಸತ್ತಿನ ಹೊರಗೆ ಬಿಜೆಪಿ ತುರ್ತು ಪರಿಸ್ಥಿತಿಯನ್ನು ಕಟುವಾಗಿ ಟೀಕಿಸಿ ಮಾತನಾಡಿತು. ತುರ್ತು ಪರಿಸ್ಥಿತಿ ಒಂದು ಕರಾಳ ಅಧ್ಯಾಯ ಎಂದು ಹೇಳಿತು. ಆದರೆ 1975ರಲ್ಲಿ ತುರ್ತು ಪರಿಸ್ಥಿತಿ ಹೇರಲ್ಪಟ್ಟಾಗ ಮೊದಲು ಬಂಧನಕ್ಕೆ ಒಳಗಾದ ರಾಜಕೀಯ ಕೈದಿಯಾಗಿದ್ದವರು ಅಂದಿನ ಜನಸಂಘದ ಎ.ಕೆ. ಸುಬ್ಬಯ್ಯ ಹಾಗೂ ಕೊನೆಗೆ ಬಿಡುಗಡೆಯಾದವರೂ ಕೂಡ ಎ.ಕೆ. ಸುಬ್ಬಯ್ಯನವರೇ ಆಗಿದ್ದರು. ಯಾವುದೇ ಪಿಳ್ಳೆ ನೆವಗಳನ್ನು ಹೇಳಿ ಅವರು ಜೈಲಿನಿಂದ ಬಿಡುಗಡೆಯಾಗಲು ಪ್ರಯತ್ನಿಸಲಿಲ್ಲ.
ಅಂದು ಆರೆಸ್ಸೆಸ್ ಸಂಘಟನೆ ತುರ್ತು ಪರಿಸ್ಥಿತಿಯನ್ನು ವಿರೋಧಿಸಲಿಲ್ಲ. ಬದಲಿಗೆ ಆರೆಸ್ಸೆಸ್ನ್ನು ನಿರ್ಬಂಧಿಸಿದ್ದನ್ನು ಮಾತ್ರ ವಿರೋಧಿಸಿತ್ತು ಎಂಬುದಾಗಿ ಎ.ಕೆ. ಸುಬ್ಬಯ್ಯ ತಮ್ಮ ‘ಆರೆಸ್ಸೆಸ್ ಅಂತರಂಗ’ದಲ್ಲಿ ಹೇಳಿಕೊಂಡಿದ್ದಾರೆ. ಆ ವೇಳೆಯಲ್ಲಿ ಭೂಗತ ಚಟುವಟಿಕೆ ನಡೆಸುತ್ತಿದ್ದ ಆರೆಸ್ಸೆಸ್ನ ಎಲ್ಲಾ ಸಾಹಿತ್ಯದಲ್ಲಿಯೂ ಆರೆಸ್ಸೆಸ್ನ ಮೇಲಿನ ನಿರ್ಬಂಧವನ್ನು ತೆಗೆದು ಹಾಕಬೇಕೆಂದು ಒತ್ತಾಯಿಸಲಾಗಿತ್ತೇ ವಿನಃ, ತುರ್ತು ಪರಿಸ್ಥಿತಿ ರದ್ದು ಮಾಡಬೇಕೆಂಬ ಒತ್ತಾಯ ಇರಲಿಲ್ಲ ಎಂಬುದಾಗಿ ಸುಬ್ಬಯ್ಯನವರು ಬರೆದಿದ್ದಾರೆ.
ಅಷ್ಟು ಮಾತ್ರವಲ್ಲದೆ ಆರೆಸ್ಸೆಸ್ ಮುಖಂಡರು ಪ್ರಧಾನಮಂತ್ರಿಯಾಗಿದ್ದ ಇಂದಿರಾಗಾಂಧಿಯವರ ಜೊತೆಯಲ್ಲಿ ರಾಜಿ ಮಾಡಿಕೊಂಡು, ಆರೆಸ್ಸೆಸ್ ಮೇಲಿನ ನಿರ್ಬಂಧವನ್ನು ತೆಗೆಯಬೇಕೆಂಬ ಪ್ರಯತ್ನವನ್ನು ನಡೆಸಿದ್ದರು. ಇದಕ್ಕಾಗಿ ಕನ್ಯಾಕುಮಾರಿಯ ವಿವೇಕಾನಂದ ಶಿಲಾಸ್ಮಾರಕದ ಜವಾಬ್ದಾರಿಯನ್ನು ವಹಿಸಿದ್ದ ಏಕನಾಥ ರಾನಡೆಯವರನ್ನು ನಿಯುಕ್ತಿ ಮಾಡಲಾಗಿತ್ತು. ಆದರೆ ಅವರಿಗೆ ಇಂದಿರಾ ಹಾಗೂ ಸಂಜಯ ಗಾಂಧಿಯವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಆರೆಸ್ಸೆಸ್ನ ಸರ್ವೋಚ್ಚ ನಾಯಕರಾಗಿದ್ದ ಬಾಳಸಾಹೇಬ್ ದೇವರಸ್ರವರು ಮಹಾರಾಷ್ಟ್ರದ ಎರವಾಡ ಜೈಲಿನಿಂದ ಶ್ರೀಮತಿ ಇಂದಿರಾಗಾಂಧಿಯವರಿಗೆ ಎರಡು ಪತ್ರಗಳನ್ನು ಬರೆದಿದ್ದರು. ಒಂದು ಪತ್ರದಲ್ಲಿ ಇಂದಿರಾಗಾಂಧಿಯವರ 20 ಅಂಶದ ಕಾರ್ಯಕ್ರಮಗಳನ್ನು ಪ್ರಶಂಸಿಸಲಾಗಿತ್ತು ಮತ್ತು ಜೈಲಿನಲ್ಲಿರುವ ಆರೆಸ್ಸೆಸ್ ಕಾರ್ಯಕರ್ತರನ್ನು ಬಿಡುಗಡೆಗೊಳಿಸಿ, 20 ಅಂಶದ ಕಾರ್ಯಕ್ರಮ ಅನುಷ್ಠಾನಕ್ಕೆ ಅವರನ್ನು ಬಳಸಿಕೊಳ್ಳಬೇಕೆಂದು ಕೋರಲಾಗಿತ್ತು.
ಮತ್ತೊಂದು ಪತ್ರದಲ್ಲಿ ಇಂದಿರಾಗಾಂಧಿಯವರ ಲೋಕಸಭಾ ಸದಸ್ಯತ್ವ ರದ್ದಾಗಿದ್ದಾಗ, ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲ್ಪಟ್ಟಿದ್ದ ಮೇಲ್ಮನವಿಯಲ್ಲಿ ಜಯಗಳಿಸಿದ್ದಕ್ಕಾಗಿ ಅವರನ್ನು ಬಾಳಸಾಹೇಬ್ ದೇವರಸ್ರವರು ತಮ್ಮ ಪತ್ರದ ಆರಂಭದಲ್ಲಿಯೇ ಅಭಿನಂದಿಸಿದ್ದರು. ಈ ಗೆಲುವಿಗಾಗಿ ಇಂದಿರಾಗಾಂಧಿಯವರು ಕಾನೂನನ್ನು ಪೂರ್ವಾನ್ವಯವಾಗಿ ಬದಲಾಯಿಸಿದ್ದನ್ನು ಪ್ರಜಾಪ್ರಭುತ್ವವಾದಿಗಳು ವಿರೋಧಿಸಿದಾಗ, ಆರೆಸ್ಸೆಸ್ ಅವರನ್ನು ಅಭಿನಂದಿಸಿತ್ತು. ಮತ್ತು ಈ ಎರಡೂ ಪತ್ರಗಳು ಇಂದಿರಾಗಾಂಧಿಯವರ ಜೊತೆಯಲ್ಲಿ ಮಾತುಕತೆಗೆ ಅನುಕೂಲಕರ ಭೂಮಿಕೆಯನ್ನು ಸಿದ್ಧಪಡಿಸಲು ತಯಾರಿಸಲಾಗಿತ್ತು ಎಂಬುದನ್ನು ಎ.ಕೆ. ಸುಬ್ಬಯ್ಯ ಬರೆದಿದ್ದಾರೆ. 44 ವರ್ಷಗಳ ನಂತರ ತುರ್ತು ಪರಿಸ್ಥಿತಿಯನ್ನು ಕರಾಳ ಎಂದು ಬಿಜೆಪಿ ಹಾಗೂ ಸಂಘ ಪರಿವಾರ ಬಣ್ಣಿಸಿದ್ದು, ಸುಬ್ಬಯ್ಯ ಸಕ್ರಿಯರಾಗಿದ್ದರೆ, ಸಂಘ ಪರಿವಾರದ ಈ ವಿಚಾರಗಳನ್ನು ಹರಿದು ಹಾಕುತ್ತಿದ್ದರೋ ಏನೋ.
ತುರ್ತು ಪರಿಸ್ಥಿತಿಯ ಬಗ್ಗೆ ಈಗ ಎ.ಕೆ. ಸುಬ್ಬಯ್ಯನವರಲ್ಲಿ ಪ್ರಶ್ನಿಸಿದರೆ, ‘‘ಅಂದಿನ ಕಾಲಘಟ್ಟದಲ್ಲಿ ತಾವು ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ್ದು ನಿಜವಾಗಿದ್ದರೂ, ಈಗ ತುರ್ತು ಪರಿಸ್ಥಿತಿ ಹೇರಿದ್ದ ಬಗ್ಗೆ ಅವಲೋಕಿಸಿದರೆ, ತುರ್ತು ಪರಿಸ್ಥಿತಿ ಹೇರಿದ್ದು ಸರಿಯಾಗಿಯೇ ಇತ್ತು. ರಾಜಕೀಯ ವ್ಯಕ್ತಿಗಳಿಗೆ ತುರ್ತು ಪರಿಸ್ಥಿತಿಯಿಂದ ತೊಂದರೆಯಾಯಿತೇ ವಿನಃ, ಬಡಬಗ್ಗರಿಗೆ ಯಾವುದೇ ರೀತಿಯ ತೊಂದರೆ ಆಗಲಿಲ್ಲ. ಬದಲಿಗೆ ಒಂದಷ್ಟು ಅನುಕೂಲವೇ ಆಯಿತು’’ ಎಂದು ಹೇಳುತ್ತಾರೆ. ಅಲ್ಲದೆ ತುರ್ತು ಪರಿಸ್ಥಿತಿಯನ್ನು ಹೇರದಿದ್ದಲ್ಲಿ ದೇಶದಲ್ಲಿ ಅರಾಜಕತೆ ಹುಟ್ಟಿಕೊಳ್ಳುತ್ತಿತ್ತು ಎಂಬುದಾಗಿ ಹೇಳುತ್ತಾರೆ.
ಹೀಗೆ ತುರ್ತು ಪರಿಸ್ಥಿತಿ ಹೇರಿದ್ದ ವೇಳೆಯಲ್ಲಿ ಅದನ್ನು ವಿರೋಧಿಸಿ ಜೈಲಿಗೆ ಹೋಗಿದ್ದ ಅಂದಿನ ಜನಸಂಘದ ಎ.ಕೆ. ಸುಬ್ಬಯ್ಯ ಹಾಗೂ ಜೈಲಿನಿಂದ ಹೊರ ಬರಲು ಹವಣಿಸುತ್ತಿದ್ದ ಸಂಘ ಪರಿವಾರ ಈ ಕಾಲಘಟ್ಟದಲ್ಲಿ ತುರ್ತು ಪರಿಸ್ಥಿತಿಯನ್ನು ಯಾವ ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ ಎಂಬುದರ ಬಗ್ಗೆ ಗಮನಿಸಬಹುದಾಗಿದೆ. ತುರ್ತು ಪರಿಸ್ಥಿತಿ ಯಾವ ಉದ್ದೇಶಕ್ಕಾಗಿ ತರಲಾಯಿತೋ, ಆ ಉದ್ದೇಶ ಸರಿಯಲ್ಲ ಎಂಬುದೇ ತನ್ನ ಅಭಿಪ್ರಾಯವಾಗಿದೆ ಎಂದು ಹೇಳುತ್ತಾರೆ.
ಟಿಪ್ಪುಜಯಂತಿ ರದ್ದು ಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಎ.ಕೆ. ಸುಬ್ಬಯ್ಯ, ‘‘ಈಗ ಸರಕಾರವೂ ಟಿಪ್ಪುಜಯಂತಿಯನ್ನು ನಿರಂತರವಾಗಿ ವಿರೋಧಿಸುತ್ತಿದ್ದವರ ಕೈಯಲ್ಲಿ ಇದೆ. ಹಿಂದೆ ಟಿಪ್ಪುಜಯಂತಿಯನ್ನು ಆಚರಿಸಲು ಹೊರಟ್ಟಿದ್ದ ಸರಕಾರವೇ ಟಿಪ್ಪುಜಯಂತಿಯನ್ನು ಟಿಪ್ಪುವಿಗೆ ಅವಮಾನಿಸುವ ರೀತಿಯಲ್ಲಿ ಆಚರಿಸುತ್ತಿತ್ತು. ಹಾಗಿರುವಾಗ ಈ ಸರಕಾರಕ್ಕೆ ಟಿಪ್ಪುಜಯಂತಿಯನ್ನು ಆಚರಿಸುವಂತೆ ಒತ್ತಾಯಿಸುವುದು ಮುರ್ಖತನ’’ ಎಂದಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆಯಂತೆ ಮೋದಿ ಮತ್ತು ಅವರ ಸರಕಾರ ಹೀನಾಯವಾಗಿ ಸೋಲುತ್ತದೆ ಎಂಬ ನಿರೀಕ್ಷೆಯಲ್ಲಿ ಎ.ಕೆ. ಸುಬ್ಬಯ್ಯ ಇದ್ದರು. ಒಂದು ವೇಳೆ ಅವರ ನಿರೀಕ್ಷೆಯ ಫಲಿತಾಂಶ ಬಂದಿದ್ದರೆ ಎ.ಕೆ. ಸುಬ್ಬಯ್ಯನವರು ಮತ್ತಷ್ಟು ಆರೋಗ್ಯವಾಗಿ, ಉಲ್ಲಾಸದಾಯಕವಾಗಿ ಇರುತ್ತಿದ್ದರೇನೋ. ಅವರು ಮತ್ತಷ್ಟು ಕಾಲ ಆರೋಗ್ಯಪೂರ್ಣವಾಗಿ ಬಾಳಲಿ.