‘ಯುಎಪಿಎ’ಗೆ ತಿದ್ದುಪಡಿ ಬೇಕಿತ್ತೇ?
ಭಾಗ-2
‘‘ಯುವಜನತೆಯ ಮನಸ್ಸಿನಲ್ಲಿ ಭಯೋತ್ಪಾದನಾ ಸಾಹಿತ್ಯ ಮತ್ತು ಭಯೋತ್ಪಾದನಾ ಸಿದ್ಧಾಂತವನ್ನು ನೆಡಲು ಯಾರೂ ‘ಪ್ರಚಾರ’ ಮತ್ತು ‘ಸನ್ನಿ’ಯ ಮೂಲಕ ಪ್ರಯತ್ನಿಸುತ್ತಾರೋ ಅವರನ್ನು ಕೂಡ ಹೊಸ ಕಾನೂನಿನ ಪ್ರಕಾರ ಭಯೋತ್ಪಾದಕರೆಂದು ಪರಿಗಣಿಸಲಾಗುವುದು’’ ಎಂದು ಶಾ ಅವರು ಸಂಸತ್ತಿಗೆ ಹೇಳಿದ್ದಾರೆ ಇಲ್ಲಿ ಸಮಸ್ಯೆ ಏನೆಂದರೆ ಭಯೋತ್ಪಾದನಾ ಸಾಹಿತ್ಯ ಮತ್ತು ಭಯೋತ್ಪಾದನಾ ಸಿದ್ಧಾಂತವೆಂದರೆ ಏನು? ಯಾವುದು?
ಕೌಸರ್ ಬಿ ಮತ್ತು ಅವರ ಪತಿ ಸೊಹ್ರಾಬುದ್ದೀನ್‌ರಂತಹ ವ್ಯಕ್ತಿಗಳಿಗೆ, ನ್ಯಾಯಾಲಯಕ್ಕೆ ಹೋಗದೆ, ಎನ್‌ಕೌಂಟರ್ ಮೂಲಕ ಮರಣದಂಡನೆ ನೀಡಲು ಪೊಲೀಸರಿಗೆ ಅವಕಾಶ ಸಿಗುತ್ತದೆ. ಅದೇ ರೀತಿ ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಘೋಷಿಸುವ ಶಾರವರ ಯೋಜನೆಯು ಸರಕಾರದ ಕೆಂಗಣ್ಣಿಗೆ ಗುರಿಯಾಗಿರುವವರನ್ನು ಒಂದು ರೀತಿಯ ಏಕಾಂಗಿತನದ ಬಂಧನದಲ್ಲಿ ಕೂಡಿ ಹಾಕಲು ಸರಕಾರಕ್ಕೆ ಅವಕಾಶ ನೀಡುತ್ತದೆ: ಅಂತಹ ವ್ಯಕ್ತಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸದೆ ಅಥವಾ ಜೈಲಿಗೆ ಕಳುಹಿಸದೆ ಅವರ ಬದುಕನ್ನು ಜೀವಂತ ನರಕವಾಗಿಸುತ್ತದೆ.
ವ್ಯಕ್ತಿಯೊಬ್ಬನನ್ನು ಭಯೋತ್ಪಾದಕನೆಂದು ಒಮ್ಮೆ ಘೋಷಿಸಿದರಾಯಿತು; ಆತ ತನ್ನ ನೌಕರಿಯನ್ನು ಕಳೆದುಕೊಳ್ಳುತ್ತಾನೆ. ಅವನ ಮನೆಯ ಮಾಲಕ ಅವನನ್ನು ಮನೆಯಿಂದ ಹೊರಗೆ ದಬ್ಬುತ್ತಾನೆ. ಅವನ ಮಕ್ಕಳಿಗೆ ಶಾಲೆಯಲ್ಲಿ ಕಷ್ಟದ ಸಮಯ, ಅವಮಾನ, ಅವಹೇಳನದ ಯುಗ ಆರಂಭವಾಗುತ್ತದೆ ಪ್ರತಿಯೊಬ್ಬರೂ ಆತನನ್ನು ಅವಮಾನದಿಂದ ಅನುಮಾನದಿಂದ ನೋಡುತ್ತಾರೆ ಮತ್ತು ಪೊಲೀಸರು ಆತ ಹಾಗೂ ಆತ ಭೇಟಿಯಾಗುವ ವ್ಯಕ್ತಿಗೆ ಕಿರುಕುಳ ನೀಡುತ್ತಲೇ ಇರುತ್ತಾರೆ.
ನಿಜ, ಯುಎಪಿಎ ತಿದ್ದುಪಡಿಗಳಲ್ಲಿ ಅಪೀಲು ಮಾಡಿಕೊಳ್ಳುವ ಪ್ರಕ್ರಿಯೆಗೆ ಅವಕಾಶವಿದೆ. ಆದರೆ ಮೂವರು ಸದಸ್ಯರ ಪರಾಮರ್ಶನ ಸಮಿತಿಯನ್ನು ನೇಮಿಸುವುದು ಸರಕಾರವೇ. ಮೂವರಲ್ಲಿ ಇಬ್ಬರು ಸದಸ್ಯರು ಸರಕಾರದ ಸೇವೆಯಲ್ಲಿರುವ ಅಧಿಕಾರಿಗಳೂ ಆಗಿರಬಹುದು. ಸಮಿತಿಯ ಅಧ್ಯಕ್ಷರು ಸೇವೆಯಲ್ಲಿರುವ ಅಥವಾ ನಿವೃತ್ತರಾದ ಹೈಕೋರ್ಟ್‌ನ ಓರ್ವ ನ್ಯಾಯಮೂರ್ತಿ ಆಗಿರುತ್ತಾರೆ. ಆದರೆ ಆಯೋಗಗಳಿಗೆ ಮತ್ತು ಸಮಿತಿಗಳಿಗೆ ಯಾವ ರೀತಿಯ ವ್ಯಕ್ತಿಗಳನ್ನು ಸರಕಾರ ಆಯ್ದು ಕೊಳ್ಳುತ್ತದೆಂದು ನಮಗೆ ಗೊತ್ತಿದೆ. ಆದ್ದರಿಂದ ತನ್ನನ್ನು ಓರ್ವ ಭಯೋತ್ಪಾದಕನೆಂದು ಘೋಷಿಸುವುದನ್ನು ಪ್ರಶ್ನಿಸಿ ಅಪೀಲು ಸಲ್ಲಿಸುವ ವ್ಯಕ್ತಿಗೆ ಒಟ್ಟು ಪರಿಸ್ಥಿತಿ ಹೇಗೆ ಪ್ರತಿಕೂಲವಾಗಿರುತ್ತದೆಂದು ನಾವು ಊಹಿಸಿಕೊಳ್ಳಬಹುದು.
‘‘ಯುವಜನತೆಯ ಮನಸ್ಸಿನಲ್ಲಿ ಭಯೋತ್ಪಾದನಾ ಸಾಹಿತ್ಯ ಮತ್ತು ಭಯೋತ್ಪಾದನಾ ಸಿದ್ಧಾಂತವನ್ನು ನೆಡಲು ಯಾರೂ ‘ಪ್ರಚಾರ’ ಮತ್ತು ‘ಸನ್ನಿ’ಯ ಮೂಲಕ ಪ್ರಯತ್ನಿಸುತ್ತಾರೋ ಅವರನ್ನು ಕೂಡ ಹೊಸ ಕಾನೂನಿನ ಪ್ರಕಾರ ಭಯೋತ್ಪಾದಕರೆಂದು ಪರಿಗಣಿಸಲಾಗುವುದು’’ ಎಂದು ಶಾ ಅವರು ಸಂಸತ್ತಿಗೆ ಹೇಳಿದ್ದಾರೆ ಇಲ್ಲಿ ಸಮಸ್ಯೆ ಏನೆಂದರೆ ಭಯೋತ್ಪಾದನಾ ಸಾಹಿತ್ಯ ಮತ್ತು ಭಯೋತ್ಪಾದನಾ ಸಿದ್ಧಾಂತವೆಂದರೆ ಏನು? ಯಾವುದು? ಎಂದು ಯುಎಪಿಎ ವ್ಯಾಖ್ಯಾನಿಸುವುದಿಲ್ಲ. ಯಾರೋ ಒಬ್ಬನ ಬಳಿ ಕಮ್ಯುನಿಸ್ಟ್ ಮ್ಯಾನಿಫೆಸ್ಟೊ ಅಥವಾ ಮಾವೋನ ರೆಡ್ ಬುಕ್ ಇದೆ ಎಂಬ ಕಾರಣಕ್ಕಾಗಿ ಆತನನ್ನು ಒಬ್ಬ ಭಯೋತ್ಪಾದಕನೆಂದು ಘೋಷಿಸುವ ಹಕ್ಕನ್ನು ಅಧಿಕಾರಿಗಳಿಗೆ ನೀಡಲು ನಾವು ನಿಜವಾಗಿಯೂ ಬಯಸುತ್ತೇವೆಯೇ?
ಜಾರ್ಖಂಡ್‌ನಲ್ಲಿ ಪಾತಾಲ್‌ಗಡಿ ಚಳವಳಿಯನ್ನು ಬೆಂಬಲಿಸಿದ್ದಕ್ಕಾಗಿ ಸಾವಿರಾರು ಆದಿವಾಸಿಗಳ ಮೇಲೆ ಪೊಲೀಸರು ರಾಷ್ಟ್ರದ್ರೋಹದ, ಬುಡಮೇಲು ಕೃತ್ಯದ ಆಪಾದನೆ ಹೊರಿಸಲು ಪ್ರಯತ್ನಿಸಿದ್ದರೆಂದ ಮೇಲೆ ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಘೋಷಿಸುವ ಅಧಿಕಾರದ ದುರುಪಯೋಗ ನಡೆಯುತ್ತದೆಂಬ ಬಗ್ಗೆ ನಿಮಗೆ ಅನುಮಾನವೇ ಬೇಡ.
ಈಗಾಗಲೇ ಸುಧಾ ಭಾರದ್ವಾಜ್‌ರಂತಹ ನಿಸ್ವಾರ್ಥ, ಜನಪರ, ನಿಷ್ಠ ಮಾನವ ಹಕ್ಕು ಕಾರ್ಯಕರ್ತರ ವಿರುದ್ಧ ಸುಳ್ಳು ಮೊಕದ್ದಮೆ ಹೂಡಲು ಈಗ ಇರುವ ಯುಎಪಿಎಯನ್ನು ಬಳಸಲಾಗಿದೆ. ಸುಧಾ ಭಾರದ್ವಾಜ್ ಅವರು ಕಾರ್ಮಿಕರು, ಮಹಿಳೆಯರು, ಆದಿವಾಸಿಗಳು ಹಾಗೂ ರೈತರ ಹಕ್ಕುಗಳಿಗಾಗಿ ನ್ಯಾಯಾಲಯಗಳ ಮೂಲಕ ತನ್ನ ಇಡೀ ಜೀವಿತದುದ್ದಕ್ಕೂ ಹೋರಾಡುತ್ತಾ ಬಂದಿದ್ದಾರೆ. ಅವರನ್ನು ಕಳೆದ ವರ್ಷ ಬಂಧಿಸಲಾಯಿತು. ಈ ಆಗಸ್ಟ್ ತಿಂಗಳಿಗೆ ಇವರು ಜಾಮೀನು ಇಲ್ಲದೆ ಒಂದು ಇಡೀ ವರ್ಷವನ್ನು ಜೈಲಿನಲ್ಲಿ ಕಳೆದಿರುತ್ತಾರೆ!.
ಸುಧಾ ಭಾರದ್ವಾಜ್, ಸುರೇಂದ್ರ ಗಾಡ್ಲಿಂಗ್, ವರವರ ರಾವ್, ಗೌತಮ್ ನವ್ಲಾಖ, ಶೋಮಾ ಸೇನ್, ರೋನಾ ವಿಲ್ಸನ್, ಮಹೇಶ್ ರಾವತ್ ಮತ್ತು ಸುರೇಶ್ ದವಾಲೆ ವಿರುದ್ಧ ಹೂಡಲಾಗಿರುವ ಮೊಕದ್ದಮೆ ಪ್ರಕರಣಗಳು ಈಗ ಇರುವ ಯುಎಪಿಎ ಕಾನೂನೇ, ವಿಚಾರಣೆ ಇಲ್ಲದೆ (ವರ್ಷಗಟ್ಟಲೆ ಅಲ್ಲವಾದರೂ) ತಿಂಗಳುಗಟ್ಟಲೆ ವ್ಯಕ್ತಿಗಳನ್ನು ಜೈಲಿನಲ್ಲಿಡಲು ಅವಕಾಶ ನೀಡುವಂತಹ ಒಂದು ಭಯಂಕರವಾದ ಕಾನೂನು ಎಂಬುದಕ್ಕೆ ಪುರಾವೆ ಯಾಗಿದೆ. ಅಂತಿಮವಾಗಿ ಇವರ ವಿರುದ್ಧ ಇರುವ ಮೊಕದ್ದಮೆಗಳನ್ನು ಸಾಕಷ್ಟು ಪುರಾವೆಗಳಿಲ್ಲವೆಂದು ನ್ಯಾಯಾಲಯ ತೀರ್ಮಾನಿಸಿ ಇವರನ್ನು ಬಿಡುಗಡೆ ಮಾಡಿದಾಗ, ಈಗ ತಂದಿರುವ ತಿದ್ದುಪಡಿ ನೀಡುವ ಅಧಿಕಾರ ಇವರನ್ನು ಭಯೋತ್ಪಾದಕರೆಂದು ಘೋಷಿಸಿ ಪುನಃ ಜೈಲಿಗೆ ತಳ್ಳಲು ಸರಕಾರಕ್ಕೆ ತುಂಬಾ ಅನುಕೂಲಕರವಾದ ಅಸ್ತ್ರವಾಗುತ್ತದೆ.
ಈ ತಿದ್ದುಪಡಿಗಳನ್ನು ದುರ್ಬಳಕೆಗಾಗಿ ಮಾಡಲಾಗಿದೆ ಈ ಕಾನೂನಿನ ಬಗ್ಗೆ ಕೆಲವರು ಆತಂಕ ವ್ಯಕ್ತಪಡಿಸಿದಾಗ, ‘‘ಹಫೀಝ್ ಸಯೀದ್ ಮತ್ತು ಮಸೂದ್ ಅಜರ್‌ನಂತಹವರ ವಿರುದ್ಧ ಬಳಸಲಿಕ್ಕಷ್ಟೇ ಈ ಕಾನೂನನ್ನು ತರಲಾಗಿದೆ’’ ಎಂದು ಕೇಂದ್ರ ಸರಕಾರಿ ಅಧಿಕಾರಿಗಳು ಹಾರಿಕೆಯ ಉತ್ತರ ನೀಡಿದ್ದಾರೆ.
‘‘ನಗರ ನಕ್ಸಲರಿಗೆ ನೆರವಾಗುವವರನ್ನು ಶಿಕ್ಷಿಸದೇ ಬಿಡುವುದಿಲ್ಲ’’ ಎಂದು ಶಾರವರು ಲೋಕಸಭೆಗೆ ತಿಳಿಸಿದಾಗ ಹೊಸ ತಿದ್ದುಪಡಿಗಳ ಉದ್ದೇಶವೇನೆಂಬುದು ಗುಟ್ಟಾಗಿ ಉಳಿದಿಲ್ಲ. ಹೀಗೆ ಶಿಕ್ಷಿಸದೆ ಬಿಡುವುದಿಲ್ಲ ಎನ್ನುವಾಗ ಇವರು ಎಂದರೆ ಯಾರು? ಯಾರು ನಗರ ನಕ್ಸಲರು? ಕಳೆದ ತಿಂಗಳು ಆರೆಸ್ಸೆಸ್‌ನ ಪ್ರಚಾರ ಅಂಗವೊಂದು ಪ್ರಕಟಿಸಿದ ‘‘ಕೌನ್ ಹೇ ಅರ್ಬನ್ ನಕ್ಸಲ್ಸ್?’’ (ಯಾರು ನಗರದ ನಕ್ಸಲರು?) ಎಂಬ ಪ್ರಕಟನೆಯ ಪ್ರಕಾರ, ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ‘‘ನಕ್ಸಲ್ ಪರವಾದ ಸಾಹಿತ್ಯ’’ವನ್ನು ಬೋಧಿಸಲಾಗುತ್ತಿದೆ. ರಾಜಸ್ಥಾನ ಕೇಂದ್ರೀಯ ವಿವಿಯಲ್ಲಿ ಮಜ್ದೂರ್ ಕಿಸಾನ್ ಸಂಘಟನೆಯ ನಿಖಿಲ್ ಡೇ ಉಪನ್ಯಾಸಗಳನ್ನು ನೀಡಿರುವುದರಿಂದ ‘‘ಅದು ನಗರ ನಕ್ಸಲರ ಒಂದು ತಾಣ’’ವಾಗಿದೆ ಮತ್ತು ಪತ್ರಕರ್ತರು ಹಾಗೂ ಅಂಕಣಕಾರರು ಮಾಧ್ಯಮಗಳಲ್ಲಿ ಮಾವೋ ವಾದಿಗಳು ಹಾಗೂ ಭಯೋತ್ಪಾದಕರು ಹೇಳಿದಂತೆ ಕುಣಿಯುವುದರಲ್ಲಿ ಬಿಝಿಯಾಗಿದ್ದಾರೆ.
ಹೊಸ ಕಾನೂನನ್ನು ರಚಿಸಿರುವವರ ಮನಸ್ಥಿತಿ ಆರೆಸ್ಸೆಸ್‌ನ ಒಳಸಂಚು ಸಿದ್ಧಾಂತವಾದಿಗಳ ಮನಸ್ಥಿತಿಯನ್ನೇ ಹೋಲುತ್ತದೆ. ಈಗ ಯುಎಪಿಎ ತಿದ್ದುಪಡಿ ಪಾಸ್ ಆಗಿರುವುದರಿಂದ ಅದು ತನ್ನ ನೀತಿಗಳನ್ನು ಟೀಕಿಸುವವರ ವಿರುದ್ಧ ಬಳಸಲು ಸರಕಾರದ ಕೈಯಲ್ಲಿ ಇನ್ನೊಂದು ಅಸ್ತ್ರವಾಗಲಿದೆ.
ಕೃಪೆ: thewire.in