ಕೊಚ್ಚಿ ಹೋದ ನಮ್ಮೂರ ತೂಗುಸೇತುವೆ

ಮೊಗ್ರು ಗ್ರಾಮದ ಮುಗೇರಡ್ಕಕ್ಕೆ ಸಂಪರ್ಕ ಕಲ್ಪಿಸುವ ಬೆದ್ರೋಡಿ ತೂಗುಸೇತುವೆ. ಶುಕ್ರವಾರ ಪ್ರವಾಹಕ್ಕೆ ಸಿಲುಕಿ ಈ ಸೇತುವೆ ಸಂಪೂರ್ಣ ಹಾನಿಗೀಡಾಗಿದೆ.
ಕಳೆದ ಏಳೆಂಟು ವರ್ಷಗಳಿಂದ ನಮ್ಮೂರಿ(ಬಜತ್ತೂರು)ನ ಪ್ರಮುಖ ಆಕರ್ಷಣೆಯಾಗಿದ್ದ ತೂಗು ಸೇತುವೆ ನೆರೆ ವಿಕೋಪಕ್ಕೆ ಬಲಿಯಾಗಿದೆ. ಮಂಗಳೂರು--ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ನೂರಾರು ಕುಟುಂಬಗಳು, ಮಕ್ಕಳು, ಮಹಿಳೆಯರು ತಮ್ಮ ವಾಹನ ನಿಲ್ಲಿಸಿ ಈ ತೂಗು ಸೇತುವೆಯ ಮೇಲೆ ನಡೆದಾಡಿ, ಫೋಟೊ ತೆಗೆದು ಸಂಭ್ರಮ ಪಡುತ್ತಿದ್ದರು.
ನಾಲ್ಕು ವರ್ಷಗಳ ಹಿಂದೆ ನೆರೆ ನೀರಿನ ಜೊತೆ ತೇಲಿ ಬಂದ ದೊಡ್ಡ ಮರ ಸೇತುವೆಗೆ ಬಡಿದ ಹಿನ್ನೆಲೆಯಲ್ಲಿ ಅದನ್ನು ಇನ್ನೂ ಐದಡಿ ಎತ್ತರಕ್ಕೆ ಏರಿಸಲಾಗಿತ್ತು. ಆದರೆ ಈ ಬಾರಿಯ ನೆರೆ ನೀರಿನ ಪ್ರವಾಹ ಈ ಎತ್ತರವನ್ನೂ ಮೀರಿ ಹರಿದಿದೆ. ನೆರೆ ನೀರಲ್ಲಿ ಕೊಚ್ಚಿ ಬಂದ ಕಾಡಿನ ಮರಗಳು ತೂಗು ಸೇತುವೆಯನ್ನು ಬಹುತೇಕ ನಾಶಗೊಳಿಸಿವೆ. ಈ ತೂಗು ಸೇತುವೆಯನ್ನು ಎತ್ತಿ ಹಿಡಿದಿದ್ದ ಎರಡು ಕಂಬಗಳೂ ಬಿರುಕು ಬಿಟ್ಟಿವೆ ಎಂದು ಹೇಳಲಾಗುತ್ತಿದೆ. ಹಾಗೇನಾದರೂ ಆಗಿದ್ದರೆ ಇದು ದುರಸ್ತಿ ಮಾಡಲಾಗದ ಶಾಶ್ವತ ನಷ್ಟ.
ನದಿಯಾಚೆಯ ಬೆಳ್ತಂಗಡಿ ತಾಲೂಕಿನ ಮೊಗ್ರು ಗ್ರಾಮದ ನೂರಾರು ಕುಟುಂಬಗಳು ಈ ವಿಕೋಪದಿಂದ ತೊಂದರೆಗೆ ಒಳಗಾಗಿವೆ. ಹೊಳೆಯ ಆಚೆ ಬದಿಯಿಂದ ನಮ್ಮೂರಿನ ಹಾಲಿನ ಡೈರಿಗೆ ಹಾಲು ಹಾಕುತ್ತಿದ್ದ ಸುಮಾರು 20 ಹೈನುಗಾರರು, ಸೇತುವೆ ಮೂಲಕ ದಾಟಿ ರಾ.ಹೆದ್ದಾರಿಗೆ ಬಂದು ಶಾಲೆ, ಕಾಲೇಜುಗಳಿಗೆ, ಉದ್ಯೋಗಕ್ಕಾಗಿ ಉಪ್ಪಿನಂಗಡಿ, ಪುತ್ತೂರು, ಮಂಗಳೂರಿಗೆ ಪ್ರಯಾಣ ಮಾಡುತ್ತಿದ್ದ ನೂರಾರು ಜನರ ಸಂಪರ್ಕ ವ್ಯವಸ್ಥೆ ಕಡಿದು ಹೋಗಿದೆ. ನಾವು ಸರಕಾರಿ ಕನ್ನಡ ಶಾಲೆಯಲ್ಲಿ ಹೊಸದಾಗಿ ಆರಂಭಿಸಿದ್ದ ಉಚಿತ ಯುಕೆಜಿ ತರಗತಿಗೆ ಸೇರ್ಪಡೆಯಾಗಿದ್ದ ನಾಲ್ಕು ಪುಟಾಣಿಗಳು ಸದ್ಯಕ್ಕಂತೂ ಶಾಲೆಗೆ ಬರುವಂತಿಲ್ಲ.
ತೂಗು ಸೇತುವೆ ಆಗುವುದಕ್ಕಿಂತ ಮೊದಲು ಉಪಯೋಗದಲ್ಲಿದ್ದ ದೋಣಿ ಶಾಶ್ವತವಾಗಿ ರದ್ದಾಗಿದೆ.
ನಿಜವಾಗಿಯೂ ದೊಡ್ಡ ನಷ್ಟ.
-ವಿಲ್ಫ್ರೆಡ್ ಡಿಸೋಜ