varthabharthi


ತುಂಬಿ ತಂದ ಗಂಧ

ಭಾರತೀಯ ಚಲನಚಿತ್ರಗಳಲ್ಲಿ ಅಸ್ಪೃಶ್ಯತೆ- ಒಂದು ನೋಟ

ವಾರ್ತಾ ಭಾರತಿ : 11 Aug, 2019
ಕೆ. ಪುಟ್ಟಸ್ವಾಮಿ

ಭಾರತೀಯ ಚಿತ್ರಗಳು ತಮ್ಮೆಲ್ಲ ಶಕ್ತಿಯನ್ನು ಕೇಂದ್ರೀಕರಿಸಿದ್ದು ಕತೆಯನ್ನು ರಂಜನೀಯವಾಗಿ ಹೇಳುವ ವಿಧಾನಗಳಿಗೆ. ರಂಜನೆಯೇ ಪ್ರಧಾನವಾಗುವುದರಿಂದ ಸಾಮಾಜಿಕ ಸಮಸ್ಯೆಗಳು ಚಿತ್ರಕತೆಯಲ್ಲಿ ನುಸುಳಿದರೂ, ಅವು ಅಂಚಿಗೆ ದೂಡಿಸಿಕೊಂಡುಬಿಡುತ್ತವೆ.

ಅದರಲ್ಲೂ ‘ಜಾತಿ’ ಎಂಬ ಸಾಮಾಜಿಕ ವಾಸ್ತವ ಮತ್ತು ಅದು ಹುಟ್ಟುಹಾಕುವ ಸಮಸ್ಯೆಗಳ ವಿವಿಧ ಮುಖಗಳು ಜನಪ್ರಿಯ ಸಿನೆಮಾಗಳಲ್ಲಿ ಮುನ್ನೆಲೆಯಲ್ಲಿ ನಿರೂಪಣೆಗೊಂಡಿರುವ ಪ್ರಕರಣಗಳು ವಿರಳಾತಿ ವಿರಳ.

ಇದು ಭಾರತೀಯ ಭಾಷೆಯ ಎಲ್ಲ ಮುಖ್ಯವಾಹಿನಿಯ ಸಿನೆಮಾಗಳಿಗೂ ಅನ್ವಯಿಸುವ ಅಭಿಪ್ರಾಯ.

ಜನಪ್ರಿಯ ಸಿನೆಮಾ ಅಥವಾ ಮುಖ್ಯವಾಹಿನಿಯ ಚಿತ್ರಗಳ ಪಾಲಿಗೆ ಸಾಮಾಜಿಕ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ವಾಸ್ತವ ನೆಲೆಗಟ್ಟಿನಲ್ಲಿ ನಿರ್ವಹಿಸುವ ಆಸಕ್ತಿ ಅಪರೂಪದಲ್ಲಿ ಅಪರೂಪ. ಆದರೆ ಅಂಥ ಪ್ರಯತ್ನಗಳನ್ನು ಕಮರ್ಷಿಯಲ್ ಚೌಕಟ್ಟಿಗೆ ಹೊಂದಿಸಿಬಿಡುವ ಕಾರಣ ಸಮಸ್ಯೆಗಳ ಅನುಭವ ಪ್ರೇಕ್ಷಕನಿಗೆ ದಾಟುವುದು ಕಡಿಮೆ. ಚಲನಚಿತ್ರಗಳ ನಿರೂಪಣೆಯ ಕ್ರಮವು ನಮಗೆ ಪ್ರಧಾನವಾಗಿರುವುದು ಹಾಲಿವುಡ್ ಸಿನೆಮಾಗಳ ಅನುಕರಣೆಯಿಂದ ಇಲ್ಲವೇ ನಮ್ಮ ವೃತ್ತಿರಂಗಭೂಮಿಯ ನಾಟಕಗಳ ಚೌಕಟ್ಟಿನಿಂದ. ಅಂದರೆ ಚಿತ್ರಕತೆಯ ರಚನೆ, ಚಿತ್ರೀಕರಣ ವಿಧಾನ, ಸ್ಟಾರ್ ಸಿಸ್ಟಂ, ಸಂಗೀತ ಸಂಯೋಜನೆ ಸಂಕಲನ ವಿಧಾನ- ಹೀಗೆ ಚಲನಚಿತ್ರ ತಯಾರಿಕೆಯ ವಿವಿಧ ಹಂತಗಳಿಂದ ಹಿಡಿದು ಅದರ ವಿತರಣೆ, ಪ್ರದರ್ಶನದವರೆಗೆ ನಾವು ಅನುಕರಿಸಿಕೊಂಡು ಬರುತ್ತಿರುವುದು ಹಾಲಿವುಡ್ ಚಿತ್ರೋದ್ಯಮ ಅನುಸರಿಸುತ್ತಿರುವ ವಿಧಾನಗಳನ್ನೇ. ಇನ್ನು ನಮ್ಮ ವೃತ್ತಿರಂಗಭೂಮಿಯ ಪ್ರಧಾನ ಉದ್ದೇಶವೇ ಮನರಂಜನೆ. ಹಾಗಾಗಿ ಭಾರತೀಯ ಚಿತ್ರಗಳು ತಮ್ಮೆಲ್ಲ ಶಕ್ತಿಯನ್ನು ಕೇಂದ್ರೀಕರಿಸಿದ್ದು ಕತೆಯನ್ನು ರಂಜನೀಯವಾಗಿ ಹೇಳುವ ವಿಧಾನಗಳಿಗೆ. ರಂಜನೆಯೇ ಪ್ರಧಾನವಾಗುವುದರಿಂದ ಸಾಮಾಜಿಕ ಸಮಸ್ಯೆಗಳು ಚಿತ್ರಕತೆಯಲ್ಲಿ ನುಸುಳಿದರೂ, ಅವು ಅಂಚಿಗೆ ದೂಡಿಸಿಕೊಂಡುಬಿಡುತ್ತವೆ. ಅದರಲ್ಲೂ ಜಾತಿ ಎಂಬ ಸಾಮಾಜಿಕ ವಾಸ್ತವ ಮತ್ತು ಅದು ಹುಟ್ಟುಹಾಕುವ ಸಮಸ್ಯೆಗಳ ವಿವಿಧ ಮುಖಗಳು ಜನಪ್ರಿಯ ಸಿನೆಮಾಗಳಲ್ಲಿ ಮುನ್ನೆಲೆಯಲ್ಲಿ ನಿರೂಪಣೆಗೊಂಡಿರುವ ಪ್ರಕರಣಗಳು ವಿರಳಾತಿ ವಿರಳ. ಇದು ಭಾರತೀಯ ಭಾಷೆಯ ಎಲ್ಲ ಮುಖ್ಯವಾಹಿನಿಯ ಸಿನೆಮಾಗಳಿಗೂ ಅನ್ವಯಿಸುವ ಅಭಿಪ್ರಾಯ. (‘ಆರ್ಟಿಕಲ್ 15’ ಚಿತ್ರ ಅಂಥದೊಂದು ವಿರಳ ಪ್ರಯತ್ನ)

ನಮ್ಮ ನಿರ್ದೇಶಕರು ಅನೇಕ ಬಗೆಯ ಸಾಮಾಜಿಕ ಸಮಸ್ಯೆಗಳನ್ನು ತಮ್ಮ ಚಿತ್ರಗಳಲ್ಲಿ ನಿರ್ವಹಿಸಿದ್ದಾರೆ. ಕನ್ನಡದ ಉದಾಹರಣೆಗಳನ್ನು ನೀಡುವುದಾದರೆ, ವಿಧವಾ ವಿವಾಹ (ಹಣ್ಣೆಲೆ ಚಿಗುರಿದಾಗ ಇತ್ಯಾದಿ), ಹಿಂದೂ-ಹಿಂದೂಯೇತರ ನಡುವಿನ ಸಂಬಂಧಗಳು(ನಾಗರಹಾವು), ಗ್ರಾಮೀಣ ಪರಿಸರದ ವಲಸೆ(ಮೇಯರ್ ಮುತ್ತಣ್ಣ, ಜೋಗಿ), ಅಂಗವೈಕಲ್ಯ(ನಾಂದಿ), ವಾಸಿಯಾಗದ ರೋಗಗಳು(ಬಂಗಾರದ ಹೂವು), ಕೌಟುಂಬಿಕ ವಿಭಜನೆ, ವೇಶ್ಯಾ ಸಮಸ್ಯೆ(ಗೆಜ್ಜೆಪೂಜೆ), ಮಾನಸಿಕ ರೋಗಗಳು ತರುವ ತಲ್ಲಣ, ನಿರುದ್ಯೋಗ, ವರದಕ್ಷಿಣೆ, ಸ್ವಾತಂತ್ರ್ಯ ಸಂಗ್ರಾಮ, ಕಾರ್ಮಿಕ ಚಳವಳಿ -ಹೀಗೆ ಅನೇಕ ಸಮಸ್ಯೆಗಳನ್ನು ಕುರಿತು ಚಿತ್ರಗಳು ನಿರ್ಮಾಣವಾಗಿವೆ. ಇವುಗಳನ್ನು ತೀವ್ರವಾಗಿ ಗಮನಿಸಿದರೆ ನೂರಕ್ಕೆ ತೊಂಬತ್ತೊಂಬತ್ತು ಭಾಗ ಅವು ಎದುರುಗೊಳ್ಳುವ ಸಾಮಾಜಿಕ ಸಮಸ್ಯೆಗಳೆಲ್ಲ ಒಂದು ಪ್ರೇಮಕತೆಯ ಹಿನ್ನೆಲೆಯಲ್ಲಿ ಬರುತ್ತವೆ. ಯುವ ಪ್ರೇಮಿಗಳ ಸುಗಮ ಬದುಕಿಗೆ ಈ ಸಮಸ್ಯೆಗಳೆಲ್ಲ ಒಂದು ಬಗೆಯ ಅಡ್ಡಿಗಳಾಗಿ ಎದ್ದು ನಿಲ್ಲುತ್ತವೆ. ಪ್ರೇಮಿಗಳು ಆ ಆತಂಕಗಳನ್ನು ನಿವಾರಿಸಿಕೊಳ್ಳುವುದು ಇಲ್ಲವೇ ದುರಂತಕ್ಕೀಡಾಗುವುದು ಅಥವಾ ಉದಾರವಾದಿ ಮಾನವೀಯ ನೆಲೆಯಲ್ಲಿ ಪರಿಹಾರ ಕಂಡುಕೊಳ್ಳುವುದು- ಹೀಗೆ ಒಂದು ಸಿದ್ಧಸೂತ್ರಗಳಲ್ಲೇ ಬಹುತೇಕ ಚಿತ್ರಗಳು ಅಂತ್ಯಗೊಳ್ಳುತ್ತವೆ. ಈ ಕಥನದಲ್ಲಿ ಒಂದಿಷ್ಟು ಹಾಡು, ಹಾಸ್ಯ, ಹೊಡೆದಾಟ, ಹೃದಯ ಕಲಕುವ ಸನ್ನಿವೇಶಗಳನ್ನು ಅಡಕ ಮಾಡಿ ಚಿತ್ರವನ್ನು ನಿರ್ಮಿಸುವ ಪರಿಪಾಠವನ್ನು ವ್ರತವೆಂಬಂತೆ ನಿರ್ದೇಶಕರು ಪಾಲಿಸಿಕೊಂಡು ಬಂದಿದ್ದಾರೆ. ಎಲ್ಲಿಯೂ ಸಮಸ್ಯೆಗಳು ತೀವ್ರವಾಗಿ ಪ್ರೇಕ್ಷಕನನ್ನು ತಟ್ಟುವುದಿಲ್ಲ. ಕಥನ ನಿರೂಪಣೆಯಲ್ಲಿ ಉಳಿದೆಲ್ಲ ಸಾಮಾಜಿಕ ವಾಸ್ತವಗಳು ಅಂಚಿಗೆ ಸರಿದಿರುತ್ತವೆ. ಇಲ್ಲಿ ಜಾತಿಯ ಸಮಸ್ಯೆಯನ್ನು ಎತ್ತಿಕೊಂಡರೂ ಬಹುತೇಕ ಅದು ಎರಡು ಜಾತಿಯ ನಡುವಿನ ಪ್ರೇಮಿಗಳ ಹೋರಾಟಕ್ಕೆ ಸೀಮಿತವಾಗಿರುತ್ತದೆಯೇ ಹೊರತು ಅದೆಂದೂ ಸಾಮಾಜಿಕ ಆಯಾಮವನ್ನು ಪಡೆಯುವುದು ವಿರಳ.

ಆದರೆ ಜಾತಿಯಂತಹ ಸಾಮಾಜಿಕ ಕಟುವಾಸ್ತವವನ್ನು ಸಾಮಾಜಿಕ ಚಿತ್ರಗಳಲ್ಲಿ ನಿರ್ವಹಿಸುವುದಕ್ಕಿಂತ ಅದನ್ನು ಭಕ್ತಿಚಿತ್ರಗಳಲ್ಲಿ ನಿರ್ದೇಶಕರು ಸುಲಭವಾಗಿ ನಿರೂಪಿಸಿರುವುದು ಕಂಡುಬರುತ್ತದೆ. ಕನ್ನಡದಲ್ಲಿ ಬೇಡರ ಕಣ್ಣಪ್ಪ, ಜಗಜ್ಯೋತಿ ಬಸವೇಶ್ವರ, ಭಕ್ತ ಕನಕದಾಸ, ಭಕ್ತಚೇತ, ಕೈವಾರ ಮಹಾತ್ಮೆ, ಸತ್ಯ ಹರಿಶ್ಚಂದ್ರ ಮುಂತಾದ ಚಿತ್ರಗಳಲ್ಲಿ ಜಾತಿಯ ಅವಮಾನಗಳನ್ನು ಕುರಿತು ಹೇಳುವ ಪ್ರಯತ್ನಗಳಿವೆ. ನಿರ್ದೇಶಕರಿಗೆ ಇಂಥ ಚಿತ್ರಗಳಲ್ಲಿ ಜಾತೀಯ ಅವಮಾನಗಳು, ಅದರ ಸಮಸ್ಯೆಗಳನ್ನು ಹೇಳಲು ಕೆಲವು ಅನುಕೂಲಗಳಿವೆ. ಈ ಕತೆಗಳು ಈಗಾಗಲೇ ಜನಸಾಮಾನ್ಯರಿಗೆ ಪರಿಚಿತವಾಗಿರುವುದು. ಕೀಳುಜಾತಿಯಲ್ಲಿ ಹುಟ್ಟಿದ ಭಕ್ತರೆಲ್ಲರೂ ದೈವಾಂಶಸಂಭೂತರಾಗಿದ್ದವರು ಮತ್ತು ಯಾವುದೋ ಅಪಚಾರವೆಸಗಿ ಶಾಪ ಪಡೆದು ಕೀಳು ಜಾತಿಯಲ್ಲಿ ಹುಟ್ಟಿದವರೆಂಬ ನಂಬಿಕೆಗಳೇ ಚಿತ್ರವನ್ನು ವಾಸ್ತವದಿಂದ ದೂರ ಇಡುತ್ತವೆ. ಇದರಿಂದ ಅಂತಹ ವಸ್ತುಗಳನ್ನು ನಿರ್ವಹಿಸುವುದು ಸುಲಭ. ಆದರೆ ಜಾತಿಯನ್ನು ಸಾಮಾಜಿಕ ವಾಸ್ತವದಲ್ಲಿ ನಿರೂಪಿಸಲು ಮಾಡಿದ ಪ್ರಯತ್ನಗಳು ಭಕ್ತಿ ಮತ್ತು ಪ್ರೇಮಕತೆಯ ಚೌಕಟ್ಟನ್ನು ಮೀರುವುದು ಅಪರೂಪದಲ್ಲಿ ಅಪರೂಪ.

ಯಾಕೆ ಹೀಗೆ? ಬಹುಶಃ ನಮ್ಮ ನಿರ್ದೇಶಕರಿಗೆ ಜಾತಿ ಮತ್ತು ವರ್ಗದ ನಡುವೆ ಗೊಂದಲವೇ ಇಲ್ಲದಿರುವುದು ಕಾರಣವಿರಬಹುದು ಅಥವಾ ಜಾತಿಯಂತಹ ಕಟುವಾಸ್ತವ ಅದರಲ್ಲೂ ಅಸ್ಪಶ್ಯತೆಯಂತಹ ಹೀನ ವ್ಯವಸ್ಥೆ ತಂದೊಡ್ಡುವ ಸಮಸ್ಯೆಗಳು, ಅದು ಎತ್ತುವ ಪ್ರಶ್ನೆಗಳನ್ನು ಕೈಗೆತ್ತಿಕೊಳ್ಳಲು ಬೇಕಾದ ಧೈರ್ಯ ಮತ್ತು ನಿರೂಪಿಸಲು ಅಗತ್ಯವಿರುವ ಸಿದ್ಧತೆಯ ಅಭಾವವೂ ಕಾರಣವಿರಬಹುದು. ಚಲನಚಿತ್ರಗಳ ಮುಖ್ಯ ಉದ್ದೇಶವೇ ರಂಜನೆಯನ್ನು ಒದಗಿಸುವುದು ಎಂಬ ಸಿದ್ಧಾಂತವನ್ನು ಗಾಢವಾಗಿ ನಂಬಿಕೊಂಡ ಕಾರಣ ಸಾಮಾಜಿಕ ಸಮಸ್ಯೆಗಳನ್ನು ಲಘುವಾಗಿ, ರಂಜನೀಯವಾಗಿ ಹೇಳುವುದು ಅನುಕೂಲಕರವಾಗಿದೆ. ಅದನ್ನೂ ಸೂತ್ರಮೀರದ ರೀತಿಯಲ್ಲಿ ನಿರೂಪಿಸುತ್ತಾರೆ. ಅಂತರ್ಜಾತಿ ಯುವಕ ಯುವತಿಯರ ಸಾಮಾಜಿಕ ಪ್ರೇಮಕಥೆಗಳಲ್ಲಿ ಹೆಣ್ಣು ಮಾತ್ರ ಕೆಳಜಾತಿಗೆ ಸೇರಿದವಳಾಗಿರುತ್ತಾಳೆ! ಬಹುತೇಕ ಭಕ್ತಿಪ್ರಧಾನ ಚಿತ್ರಗಳಲ್ಲಿ ನಾಯಕ ಕೀಳುಜಾತಿಯಲ್ಲಿ ಹುಟ್ಟಿದವನಾಗಿರುತ್ತಾನೆ. ನಿರ್ದೇಶಕರು ಜಾತಿಗಿಂತ ವರ್ಗ ತಾರತಮ್ಯದ ಕಡೆಯೇ ಹೆಚ್ಚು ಗಮನ ಹರಿಸಿದ್ದರಿಂದ ಬಡವ ಮತ್ತು ಶ್ರೀಮಂತರ ನಡುವಿನ ಹೋರಾಟ, ಸವಾಲು, ಸಂಘರ್ಷಗಳ ಚಿತ್ರಗಳೇ ಹೆಚ್ಚು ತಯಾರಾಗಿವೆ. ಪ್ರೇಕ್ಷಕರೂ ಇಂತಹ ಸರಳ ವಿಭಜನೆಯ ಸೂತ್ರಗಳನ್ನು ಅಂಗೀಕರಿಸಿದ್ದಾರೆ. ಆದ್ದರಿಂದ ಒಂದು ಸಿದ್ಧಸೂತ್ರದಲ್ಲಿಯೇ ಸಾಮಾಜಿಕ ಸಮಸ್ಯೆಗಳು ಚಿತ್ರಗಳ ಭಿತ್ತಿಯಾಗಿ ಬಂದಿವೆ.

ಆದರೂ ಭಾರತೀಯ ಭಾಷೆಗಳಲ್ಲಿ ಅಸ್ಪಶ್ಯತೆಯನ್ನು ಕುರಿತು, ದಲಿತಲೋಕದ ಬದುಕನ್ನು ನಿರೂಪಿಸುವ ಅನೇಕ ಪ್ರಯತ್ನಗಳು ಅಲ್ಲಲ್ಲಿ ನಡೆದಿವೆ. ಭಾರತೀಯ ಸಿನೆಮಾಚರಿತ್ರೆಯನ್ನು ಗಮನಿಸಿದಾಗ ದಲಿತಲೋಕವನ್ನು ಸಮಕಾಲೀನ ಸಾಮಾಜಿಕ ನೆಲೆಯಲ್ಲಿ ನಿರೂಪಿಸಿದ ಮೊದಲ ಹೆಗ್ಗಳಿಕೆ ಸಲ್ಲಬೇಕಾದದ್ದು ತಮಿಳು ಚಿತ್ರರಂಗಕ್ಕೆ. ವಿಶೇಷವೆಂದರೆ ಈ ಸಾಹಸವನ್ನು ಕೈಗೊಂಡ ಮೊದಲ ನಿರ್ಮಾಪಕ, ನಿರ್ದೇಶಕ ಎಂದರೆ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಿಂದ ಬಂದ ಕೆ. ಸುಬ್ರಮಣ್ಯಂ.

ಹಾಗೆ ನೋಡಿದರೆ ತಮಿಳು ಟಾಕಿ ಸಿನೆಮಾಗಳು ಆರಂಭಗೊಂಡಿದ್ದೇ ಬಲವಾದ ರಾಜಕೀಯ ಪ್ರಜ್ಞೆಯೊಡನೆ. 1916ರಲ್ಲಿ ದಾದಾ ಸಾಹೇಬ್ ಫಾಲ್ಕೆ ಅವರ ಮೂಕಿಚಿತ್ರ ‘ರಾಜ ಹರಿಶ್ಚಂದ್ರ’ ಚಿತ್ರದ ಬಿಡುಗಡೆಯ ಮೂಲಕ ಭಾರತೀಯ ಚಲನಚಿತ್ರೋದ್ಯಮ ಆರಂಭವಾಯಿತು. ಅದರ ಮುಂದಿನ ಮೂರು ದಶಕಗಳು ಅಂದರೆ ಟಾಕಿಯುಗ ಆರಂಭವಾಗುವವರೆಗೆ, ತಮಿಳುನಾಡಿನ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಅತ್ಯಂತ ಚರಿತ್ರಾರ್ಹ ಅವಧಿ. ಎರಡು ದಶಕಗಳ ಕಾಲ ಮೂಕಿಸಿನೆಮಾ ನಿರ್ಮಾಣದಲ್ಲಿ ನಿರತವಾಗಿದ್ದ ತಮಿಳುನಾಡು ಸಿನೆಮಾ ಸ್ಟುಡಿಯೋಗಳಲ್ಲಿ 1933ರಲ್ಲಿ ತಮಿಳು ಮಾತಿನ ಚಿತ್ರಗಳ ಉದಯವಾಯಿತು. ರಾಷ್ಟ್ರೀಯ ಚಳವಳಿಯ ಜೊತೆಯಲ್ಲಿಯೇ ಸಿನೆಮಾ ಸಮೂಹ ಮನರಂಜನೆಯ ಮಾಧ್ಯಮವಾಗಿ ಬೆಳೆಯಿತು. ಜಲಿಯನ್ ವಾಲಾಬಾಗ್‌ನ ಮಾರಣಹೋಮ, ಗಾಂಧಿಯವರ ಅಸಹಕಾರ ಚಳವಳಿ, ಅಂಬೇಡ್ಕರ್ ಅವರ ದಲಿತವಿಮೋಚನ ಆಂದೋಲನ, ಉಪ್ಪಿನ ಸತ್ಯಾಗ್ರಹ, ಮುಂತಾದವುಗಳು ಜನರನ್ನು ಆವರಿಸಿಕೊಂಡವು. 1935ರಲ್ಲಿ ಪ್ರಾಂತೀಯ ಸರಕಾರಗಳು ಅಸ್ತಿತ್ವಕ್ಕೆ ಬಂದ ನಂತರ ಜನರಲ್ಲಿ ರಾಜಕೀಯ ಪ್ರಜ್ಞೆ ಹೆಚ್ಚಾಯಿತು. ರಾಷ್ಟ್ರೀಯ ಚಳವಳಿಗಳ ಜೊತೆಗೆ ತಮಿಳುನಾಡಿನಲ್ಲಿ ಇ.ವಿ. ರಾಮಸಾಮಿ ನಾಯ್ಕರ್(ಪೆರಿಯಾರ್) ಅವರ ನೇತೃತ್ವದಲ್ಲಿ ನಡೆದ ಸ್ವಮರ್ಯಾದೆ ಅಥವಾ ಆತ್ಮಗೌರವದ ಆಂದೋಲನವು ಸಾಮಾಜಿಕ ಸಮಾನತೆ, ಜಾತಿವಿನಾಶ ಮತ್ತು ಧಾರ್ಮಿಕ ಪ್ರಭುತ್ವದ ಮತ್ತು ಸಾಮಾಜಿಕ ತರತಮದ ವಿರುದ್ಧ ಸಾರಿದ ಯುದ್ಧವಾಗಿತ್ತು. ಅದು ವೈಚಾರಿಕ ಜಾಗೃತಿಗೆ ನಾಂದಿ ಹಾಡಿತ್ತು. ಹಾಗಾಗಿ ಸಮೂಹ ಮಾಧ್ಯಮಗಳು ಸಹಜವಾಗಿಯೇ ಇವೆಲ್ಲವುಗಳಿಂದ ಪ್ರಭಾವಗೊಂಡಿದ್ದವು. ಸಿನೆಮಾದ ಆಗಮನಕ್ಕೆ ಮೊದಲೇ ತಮಿಳುನಾಡಿನ ವೃತ್ತಿರಂಗಭೂಮಿ ರಾಜಕೀಯ ವಸ್ತುಗಳ ಪ್ರಯೋಗಕ್ಕೆ ಹೆಸರುವಾಸಿಯಾಗಿತ್ತು. ಕೆಲವು ಕಾಂಗ್ರೆಸ್ ನಾಯಕರು ನೇರವಾಗಿಯೇ ನಾಟಕ ಮತ್ತು ಚಲನಚಿತ್ರ ನಿರ್ಮಾಣ ಕ್ಷೇತ್ರಕ್ಕೆ ಇಳಿದಿದ್ದರು. ಗಾಂಧಿಯವರ ದಟ್ಟಪ್ರಭಾವಕ್ಕೆ ಒಳಗಾಗಿದ್ದ ಕೆ.ಸುಬ್ರಮಣ್ಯಂ ಅಂಥ ಹಿನ್ನೆಲೆಯಿಂದಲೇ ಬಂದವರು.

ತಮಿಳು ಚಿತ್ರರಂಗಕ್ಕೆ ಭದ್ರಬುನಾದಿ ಹಾಕಿದ ಸುಬ್ರಮಣ್ಯಂ ಕೃಷ್ಣಸ್ವಾಮಿ ಆರಂಭದಲ್ಲಿಯೇ ಅನೇಕ ಸಾಮಾಜಿಕ ಸಮಸ್ಯೆಯ ಚಿತ್ರಗಳನ್ನು ನಿರ್ಮಿಸಿ ಪ್ರೇಕ್ಷಕರಿಗೆ ಆಘಾತ ನೀಡಿದ್ದರು. ನ್ಯಾಯಶಾಸ್ತ್ರದಲ್ಲಿ ಪದವಿಯನ್ನು ಪಡೆದು ಚಿತ್ರ ನಿರ್ಮಾಣಕ್ಕೆ ಬಂದ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದ ಕೆ.ಸುಬ್ರಮಣ್ಯಂ, ತನ್ನದೇ ಸಮಾಜದ ಓರೆಕೋರೆಗಳನ್ನು ಚಿತ್ರದಲ್ಲಿ ಎತ್ತಿ ತೋರಿಸಿದರು. ಸಾಮಾಜಿಕ ಬದಲಾವಣೆಗೆ ಚಲನಚಿತ್ರವು ಬಲವಾದ ಸಾಧನವೆಂದು ಅವರು ನಂಬಿ ಅಂತಹ ಚಿತ್ರಗಳನ್ನೇ ತಯಾರಿಸಿದರು. ಅವರು ನಿರ್ಮಿಸಿದ ಬಾಲಯೋಗಿನಿ (1936) ವಿಧವಾ ವಿವಾಹದ ವಸ್ತುವನ್ನು ಆಧರಿಸಿತ್ತು. ಆ ಕಾಲಕ್ಕೆ ಕ್ರಾಂತಿಕಾರಿಯೆನಿಸಿದ ವಸ್ತು. ಬ್ರಾಹಣ ಸಮುದಾಯವು ಆಚರಿಸುತ್ತಿದ್ದ ಅಮಾನವೀಯ ಪದ್ಧತಿಯ ವಿರುದ್ಧ ದೊಡ್ಡ ದನಿಯೆತ್ತಿದ ಚಿತ್ರವದು. ಆ ಕಾಲದ ಮಧ್ಯಮವರ್ಗದ ಸಂಪ್ರದಾಯ ಬ್ರಾಹ್ಮಣ ಕುಟುಂಬದಲ್ಲಿ ಬಾಲವಿಧವೆಯರು ಅನುಭವಿಸುತ್ತಿದ ಸಂಕಟವನ್ನು ಚಿತ್ರಿಸಿದ ದಿಟ್ಟ ಪ್ರಯತ್ನ ಅದಾಗಿತ್ತು. ಚಲನಚಿತ್ರ ಇತಿಹಾಸಕಾರ ಥಿಯಡೋರ್ ಭಾಸ್ಕರ್ ಅವರ ಅಭಿಪ್ರಾಯದಲ್ಲಿ ಬಾಲಯೋಗಿನಿ ಚಿತ್ರವು ಜಾತಿ ಪದ್ಧತಿಯನ್ನು ಟೀಕಿಸಿತ್ತು. ಪುರೋಹಿತಶಾಹಿಯ ಹಿಪಾಕ್ರಸಿಯನ್ನು ಬೆತ್ತಲು ಮಾಡಿತ್ತು. ವಿಧವೆಯರನ್ನು ಸಹಾನುಭೂತಿಯಿಂದ ನೋಡಲು ಪ್ರೇರೇಪಿಸಿತ್ತು. ಓರ್ವ ಬ್ರಾಹ್ಮಣ ವಿಧವೆ ಮತ್ತು ಅವಳ ಪುಟ್ಟ ಮಗಳಿಗೆ ಅಸ್ಪಶ್ಯನೊಬ್ಬ ಸಹಾನುಭೂತಿಯಿಂದ ಆಶ್ರಯ ನೀಡಲು ಮುಂದಾಗುವ ಹೃದಯಂಗಮ ದೃಶ್ಯಗಳು ಅದರಲ್ಲಿದ್ದವು. ಅವರ ಮುಂದಿನ ಚಿತ್ರ ‘ಸೇವಾ ಸದನಂ’ (1938)- ವಯಸ್ಸಾದ ಗಂಡಸರು ಎರಡನೆಯ ಪತ್ನಿಯಾಗಿ ಎಳೆಯ ಹುಡುಗಿಯರನ್ನು ಮದುವೆಯಾಗುವಂಥ ಹೀನ ಪದ್ಧತಿಯನ್ನು ಟೀಕೆಗೊಳಪಡಿಸಿದ ಚಿತ್ರವಾಗಿತ್ತು. ಜೊತೆಗೆ ವರದಕ್ಷಿಣೆಯ ಅಸಹ್ಯವನ್ನು ಮೊದಲಬಾರಿಗೆ ತೆರೆಯ ಮೇಲೆ ತಂದ ಚಿತ್ರ. ಬಡಕುಟುಂಬದ ಎಳೆಯ ಹುಡುಗಿಯೊಬ್ಬಳನ್ನು ಮದುವೆಯಾದ ನಂತರ ಆಕೆಯ ಭಾವನೆಗಳನ್ನು ಅರ್ಥಮಾಡಿಕೊಂಡು ಬದಲಾದ ಮುದುಕ ಯಜಮಾನ ಅಸಹ್ಯಗೊಂಡು ತನ್ನ ಜಾತಿಯ ಹಿರಿಮೆಯ ಸಂಕೇತವಾದ ಜನಿವಾರವನ್ನು ಕಿತ್ತೆಸೆಯುವ ದೃಶ್ಯ ಅಂದಿನ ಸಂಪ್ರದಾಯಸ್ಥ ಸಮಾಜವನ್ನು ದಿಗ್ಭ್ರಮೆಗೊಳಿಸಿತ್ತು. ಈ ಚಿತ್ರದ ಮತ್ತೊಂದು ವಿಶೇಷವೆಂದರೆ ವಿಧವೆಯೊಬ್ಬಳ ಪಾತ್ರಕ್ಕೆ ನಿಜಜೀವನದಲ್ಲೂ ವಿಧವೆಯಾಗಿದ್ದ ಮಹಿಳೆಯನ್ನೇ ಆರಿಸಿದ್ದರು. ಜಾತಿಯ ವಿರುದ್ಧ ಈ ರೀತಿಯ ಟೀಕೆಗಳನ್ನು ಅಂದಿನ ಮೇಲ್ವರ್ಗದ ಸಮಾಜ ಪ್ರತಿಭಟಿಸಿತ್ತು.

ಆದರೂ ಇವುಗಳಿಗೆ ಸೊಪ್ಪು ಹಾಕದ ಸುಬ್ರಮಣ್ಯಂ ಅವರು ಅಂದು ಬ್ರಿಟಿಷ್ ಸರಕಾರ ನಿಷೇಧಿಸಿದ್ದ ಕಲ್ಕಿ ಕೃಷ್ಣಮೂರ್ತಿಯವರ ಕಾದಂಬರಿಯನ್ನು ಆಧರಿಸಿ ತ್ಯಾಗಭೂಮಿ (1939) ಎಂಬ ಮತ್ತೊಂದು ಸಾಮಾಜಿಕ-ರಾಜಕೀಯ ಆಯಾಮದ ಚಿತ್ರ ತಯಾರಿಸಿದರು. ಅದು ಉಪ್ಪಿನ ಸತ್ಯಾಗ್ರಹದ ಹಿನ್ನೆಲೆಯಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಅಸ್ಪಶ್ಯತೆಯ ಸಮಸ್ಯೆಯನ್ನು ನಿರೂಪಿಸಿದ ಚಿತ್ರ. ಈ ಚಿತ್ರವು ಅಂದಿನ ಸ್ವಾತಂತ್ರ್ಯ ಸಂಗ್ರಾಮ, ಅಸ್ಪಶ್ಯತಾ ಆಂದೋಲನ, ಅಂಬೇಡ್ಕರ್‌ರವರ ದೇವಾಲಯ ಪ್ರವೇಶ ಮತ್ತು ಪೆರಿಯಾರ್‌ರವರ ಸ್ವಾಭಿಮಾನ ಚಳವಳಿಯಿಂದ ಪ್ರೇರಣೆ ಪಡೆದ ಕಥನವಾಗಿತ್ತು. ಮಾರನೆಯ ವರ್ಷ ನಿರ್ಮಿಸಿದ ‘ಭಕ್ತಚೇತ’ (1940) ಹರಿಜನ ಸಂತನೊಬ್ಬ ಸನಾತನಿಗಳ ಮೇಲೆ ನೇರವಾಗಿ ಸಂಘರ್ಷಕ್ಕಿಳಿಯುವ ವಸ್ತುವನ್ನೊಳಗೊಂಡಿತ್ತು. ಮಹಾಭಾರತದ ಉಪಕತೆಯೊಂದಾದ ವಿಷ್ಣುಭಕ್ತನಾದ ಚೇತ ಎಂಬ ಚಮ್ಮಾರನ ಭಕ್ತಿಯ ಕತೆಯನ್ನು ಇದು ಆಧರಿಸಿತ್ತು. (ಮುಂದೆ ಕನ್ನಡದಲ್ಲೂ ತಯಾರಾಯಿತು. ರಾಜ್‌ಕುಮಾರ್ ಚೇತನಾಗಿ ಅಭಿನಯಿಸಿದ್ದರು.) ಬ್ರಾಹ್ಮಣ ಸಂಪ್ರದಾಯವಾದಿಗಳು ಪ್ರಭುತ್ವದ ಜೊತೆಗೂಡಿ ಅನುಷ್ಠಾನಗೊಳಿಸುವ ದಮನಕಾರಿ ನೀತಿಯನ್ನು ಅದು ಪ್ರಶ್ನಿಸಿತ್ತು. ಇದು ಅಂದಿನ ಸನಾತನಿಗಳಿಗೆ ಪಥ್ಯವಾಗಲಿಲ್ಲ. ಈ ಚಿತ್ರದ ವಿರುದ್ಧ ಇಬ್ಬರು ಸಂಪ್ರದಾಯವಾದಿಗಳು ಮಧುರೈ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿ ಈ ಚಿತ್ರವು ಹಿಂದೂ ಧರ್ಮವನ್ನು ಅವಹೇಳನಕಾರಿಯಾಗಿ ಚಿತ್ರಿಸುವುದರಿಂದ ಹಾಗೂ ದೇವಾಲಯ ಪ್ರವೇಶ ಕುರಿತ ರಾಜಕೀಯಕ್ಕೆ ಬೆಂಬಲ ನೀಡುವುದರಿಂದ ಚಿತ್ರವನ್ನು ನಿಷೇಧ ಮಾಡಬೇಕೆಂದು ಆಗ್ರಹಿಸಿದ್ದರು. (‘ದೇವಾಲಯ ಪ್ರವೇಶ ರಾಜಕೀಯ’ ಎಂಬುದು ಕಾಂಗ್ರೆಸ್ ಶಾಸಕ ಮಧುರೈ ವೈದ್ಯನಾಥ ಅಯ್ಯರ್ ಅವರು ಅಂದಿನ ಕಾಲದಲ್ಲಿ ದಲಿತರಿಗೆ ಪ್ರವೇಶ ನಿರಾಕರಿಸಲಾದ ಮಧುರೈ ದೇವಾಲಯವೂ ಸೇರಿದಂತೆ ಎಲ್ಲ ದೇವಾಲಯಗಳಿಗೆ ಪ್ರವೇಶ ಆಗ್ರಹಿಸಿ ನಡೆಸುತ್ತಿದ್ದ ಆಂದೋಲನವಾಗಿತ್ತು)

ಹೀಗೆ ಸ್ವಾತಂತ್ರಾನಂತರದ ಚಿತ್ರಗಳಿಗಿಂತ ಮೂವತ್ತು ನಲವತ್ತರ ದಶಕದಲ್ಲಿಯೇ ಅಸ್ಪಶ್ಯತೆಯ ಸಮಸ್ಯೆಯನ್ನು, ಜಾತೀಯ ಸಂಘರ್ಷಗಳನ್ನು ಧೈರ್ಯವಾಗಿ ಹೇಳುವ ಚಿತ್ರಗಳು ತಯಾರಾಗಿದ್ದವು. ಆದರೆ ಸ್ವಾತಂತ್ರ್ಯದ ನಂತರ ಗಾಂಧಿ-ಅಂಬೇಡ್ಕರ್ ಪ್ರಭಾವ ಕಡಿಮೆಯಾಗಿ ನೆಹರೂ ಅವರ ರಾಷ್ಟ್ರೀಯ ಪುನರ್‌ನಿರ್ಮಾಣ ನೀತಿ ಜನಪ್ರಿಯವಾದ ಕಾರಣ ಜಾತಿ ಸಮಸ್ಯೆಗಿಂತ ಶಿಕ್ಷಣ, ಉದ್ಯೋಗ, ಕೌಟುಂಬಿಕ ವಿಘಟನೆ ಮತ್ತು ಕೋಮು ಸಾಮರಸ್ಯದ ಕಥನಗಳು ಮುಂಚೂಣಿಗೆ ಬಂದವು.

(ಮುಂದುವರಿಯುವುದು)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)