ಶಿವಮೊಗ್ಗದಲ್ಲಿ 1400 ಕ್ಕೂ ಅಧಿಕ ಮನೆಗಳಿಗೆ ಹಾನಿ: ಕೋಟ್ಯಾಂತರ ರೂ. ಆಸ್ತಿಪಾಸ್ತಿ ನಷ್ಟ
ನೆರೆ ತಂದ ಕಣ್ಣೀರಧಾರೆ
ಶಿವಮೊಗ್ಗ, ಆ. 12: ಕಳೆದ ಕೆಲ ದಿನಗಳಿಂದ ಸುರಿದ ಧಾರಾಕಾರ ಮಳೆ, ತುಂಗಾ ನದಿಯ ಪ್ರವಾಹ, ಉಕ್ಕಿ ಹರಿದ ರಾಜಕಾಲುವೆ, ಚರಂಡಿಗಳಿಂದ ಶಿವಮೊಗ್ಗ ನಗರದಲ್ಲಿ ಸರಿಸುಮಾರು 1400 ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ. ಕೋಟ್ಯಾಂತರ ರೂ. ಮೌಲ್ಯದ ಆಸ್ತಿಪಾಸ್ತಿಗೆ ನಷ್ಟವಾಗಿದೆ.
ಇದರಲ್ಲಿ ಸುಮಾರು 400 ಮನೆಗಳು ಸಂಪೂರ್ಣ ಕುಸಿದು ಬಿದ್ದಿವೆ. ಉಳಿದ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಪ್ರಸ್ತುತ ಮಹಾನಗರ ಪಾಲಿಕೆ ಆಡಳಿತವು ನಗರದ ನೆರೆ ಪೀಡಿತ ಪ್ರದೇಶಗಳಲ್ಲಿ ಸಮೀಕ್ಷಾ ಕಾರ್ಯ ನಡೆಸಿ, ನೆರೆ ಹಾವಳಿಯಿಂದ ಉಂಟಾದ ಆಸ್ತಿಪಾಸ್ತಿ ನಷ್ಟದ ಅಂದಾಜು ನಡೆಸಲಾರಂಭಿಸಿದ್ದಾರೆ. ಇದು ಪೂರ್ಣಗೊಂಡ ನಂತರವಷ್ಟೆ ನಷ್ಟದ ಅಂದಾಜು ಸ್ಪಷ್ಟವಾಗಬೇಕಾಗಿದೆ.
ಕಣ್ಣೀರಧಾರೆ: ಪ್ರಸ್ತುತ ನೆರೆ ಪೀಡಿತ ಪ್ರದೇಶಗಳ ಮನೆ, ಅಂಗಡಿ-ಮುಂಗಟ್ಟುಗಳನ್ನು ಗಮನಿಸಿದರೆ ಅಪಾರ ಪ್ರಮಾಣದ ವಸ್ತುಗಳು ಹಾನಿಯಾಗಿರುವುದು ಕಂಡುಬರುತ್ತದೆ. ದಿನಸಿ ಸಾಮಗ್ರಿಗಳು, ಬಟ್ಟೆ, ಪೀಠೋಪಕರಣ, ಎಲೆಕ್ಟ್ರಾನಿಕ್ಸ್ ಉಪಕರಣಗಳು ಸೇರಿದಂತೆ ವಿವಿಧ ರೀತಿಯ ದಿನ ಬಳಕೆಯ ವಸ್ತುಗಳು ನೆರೆ ನೀರಿನಿಂದ ಹಾಳಾಗಿವೆ.
ಅದರಲ್ಲಿಯೂ ಬಡ-ಮಧ್ಯಮ ವರ್ಗದ ಕೆಲ ಸಂತ್ರಸ್ತರ ಗೋಳು ಹೇಳತೀರದಾಗಿದೆ. ಕಷ್ಟಪಟ್ಟು ದುಡಿದು ಕಟ್ಟಿದ್ದ ಮನೆ ಬಿದ್ದಿರುವುದು ಹಾಗೂ ಸಂಪಾದಿಸಿದ್ದ ವಸ್ತುಗಳು ಹಾಳಾಗಿದ್ದನ್ನು ನೋಡಿ ಕಣ್ಣೀರಿಡುತ್ತಿದ್ದಾರೆ. ಮುಂದೇನು ಎಂಬ ಚಿಂತೆಯಲ್ಲಿದ್ದಾರೆ. ಸಂಪೂರ್ಣವಾಗಿ ಮನೆ ಬಿದ್ದಿರುವ ಸಂತ್ರಸ್ತರಲ್ಲಿ, ಕೆಲವರು ಗಂಜಿ ಕೇಂದ್ರಗಳಲ್ಲಿ ತಂಗಿದ್ದಾರೆ. ಇನ್ನೂ ಕೆಲವರು ಸಂಬಂಧಿ, ಪರಿಚಯಸ್ಥರ ಮನೆಗಳಲ್ಲಿದ್ದಾರೆ. ದಿಕ್ಕು ಕಾಣದೆ ಕಂಗಲಾಗಿದ್ದಾರೆ. ಆಡಳಿತ ವ್ಯವಸ್ಥೆಯ ನೆರವಿನ ನಿರೀಕ್ಷೆಯಲ್ಲಿದ್ದಾರೆ.
ತಪ್ಪಿದ ಅನಾಹುತ: ನೂರಾರು ಸಂಖ್ಯೆಯಲ್ಲಿ ಮನೆಗಳು ಉರುಳಿ ಬಿದ್ದಿದ್ದರು ಹಾಗೂ ಭಾರೀ ಪ್ರಮಾಣದ ಬಡಾವಣೆಗಳು ನೆರೆಗೆ ತುತ್ತಾದರು, ಸಾವು-ನೋವಿನಂತಹ ಘಟನೆಗಳು ವರದಿಯಾಗಲಿಲ್ಲ. ಇದಕ್ಕೆ ಮಹಾನಗರ ಪಾಲಿಕೆ ಆಡಳಿತ ಕೈಗೊಂಡ ಸಕಾಲಿಕ, ಮುನ್ನೆಚ್ಚರಿಕೆ ಕ್ರಮಗಳು ಕಾರಣವಾಗಿದೆ. ಇದರಿಂದ ಸಂಭಾವ್ಯ ಅನಾಹುತಗಳಿಗೆ ಕಡಿವಾಣ ಬೀಳುವಂತಾಯಿತು.
'ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್‍ರವರು ಹಗಲಿರುಳು ನೆರೆ ಪೀಡಿತ ಪ್ರದೇಶಗಳಲ್ಲಿ ಸಂಚರಿಸಿದರು. ನೆರೆಗೆ ತುತ್ತಾಗಬಹುದಾದ ಪ್ರದೇಶಗಳನ್ನು ಮುಂಚಿತವಾಗಿ ಗುರುತಿಸಿ, ಅಲ್ಲಿನ ನಿವಾಸಿಗಳನ್ನು ತೆರವುಗೊಳಿಸುವ ಕಾರ್ಯ ನಡೆಸಿದರು. ಕೆಲವೆಡೆ ಬಲವಂತವಾಗಿ ನಿವಾಸಿಗಳನ್ನು ಮನೆಯಿಂದ ಕರೆತರಲಾಯಿತು. ಜಲಾವೃತವಾಗಿದ್ದ ಪ್ರದೇಶಗಳಲ್ಲಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಂಡರು. ಆಯಕಟ್ಟಿನ ಪ್ರದೇಶಗಳಲ್ಲಿ ಪ್ರತ್ಯೇಕ ಅಧಿಕಾರಿಗಳ ತಂಡಗಳನ್ನು ನಿಯೋಜಿಸಿದ್ದರು. ಗಂಜಿ ಕೇಂದ್ರಗಳಲ್ಲಿನ ಸಂತ್ರಸ್ತರಿಗೆ ಆಹಾರ ಸೇರಿದಂತೆ ಉತ್ತಮ ಸೌಲಭ್ಯ ಕಲ್ಪಿಸಿಕೊಡುವುದರ ಜೊತೆಗೆ, ಆರೋಗ್ಯ ತಪಾಸಣೆಗೂ ವ್ಯವಸ್ಥೆ ಮಾಡಿದ್ದರು. ಈ ಎಲ್ಲ ಮುಂಜಾಗ್ರತ ಕ್ರಮಗಳಿಂದ ಸಂಭಾವ್ಯ ಅಪಾಯ, ಗೊಂದಲ-ಗಡಿಬಿಡಿಗಳು ತಪ್ಪುವಂತಾಯಿತು' ಎಂದು ಪಾಲಿಕೆಯ ಹಿರಿಯ ಅಧಿಕಾರಿಯೋರ್ವರು ಅಭಿಪ್ರಾಯಪಡುತ್ತಾರೆ.
ಸಹಜ ಸ್ಥಿತಿಗೆ: ಸೋಮವಾರ ಗಾಜನೂರಿನ ತುಂಗಾ ಜಲಾಶಯದಿಂದ ಹೊರಬಿಡುತ್ತಿರುವ ನೀರಿನ ಪ್ರಮಾಣ ಸಂಪೂರ್ಣ ಕಡಿಮೆಯಾಗಿದ್ದು, 50 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಇದರಿಂದ ಶಿವಮೊಗ್ಗ ನಗರದಲ್ಲಿ ಪ್ರವಾಹ ಸೃಷ್ಟಿಸಿದ್ದ ತುಂಗಾ ನದಿ ಶಾಂತವಾಗಿದೆ. ಹಾಗೆಯೇ ನಗರದ ಬಹುತೇಕ ಬಡಾವಣೆಗಳು ಜಲಾವೃತ ಮುಕ್ತವಾಗಿದ್ದು, ಸಹಜ ಸ್ಥಿತಿಗೆ ಮರಳಿವೆ.
ಬಹುತೇಕ ಜಲಾವೃತ ಬಡಾವಣೆಗಳ ನಿವಾಸಿಗಳು ಕಳೆದೆರೆಡು ದಿನಗಳಿಂದ ಮನೆ, ಕಟ್ಟಡಗಳನ್ನು ಸ್ವಚ್ಚಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಕಡಿತಗೊಂಡಿದ್ದ ವಿದ್ಯುತ್ ಪೂರೈಕೆ ಕೂಡ ಯಥಾಸ್ಥಿತಿಗೆ ಮರಳಿದೆ. ಬಾಗಿಲು ಮುಚ್ಚಿದ್ದ ಅಂಗಡಿ-ಮುಂಗಟ್ಟು, ಇತರೆ ವಾಣಿಜ್ಯ ಕಟ್ಟಡಗಳು ಬಾಗಿಲು ತೆರೆಯಲಾರಂಭಿಸಿದ್ದು, ನೆರೆ ಪೀಡಿತ ಬಡಾವಣೆಗಳಲ್ಲಿನ ಜನಜೀವನ ಸಹಜ ಸ್ಥಿತಿಗೆ ಮರಳಾರಂಭಿಸಿದೆ.
ಪರಿಶೀಲನೆ: ಸೋಮವಾರ ಸ್ಥಳೀಯ ಶಾಸಕ ಕೆ.ಎಸ್.ಈಶ್ವರಪ್ಪ, ಪಾಲಿಕೆ ಮೇಯರ್ ಲತಾ ಗಣೇಶ್, ಉಪ ಮೇಯರ್ ಚೆನ್ನಬಸಪ್ಪ, ಆಯುಕ್ತೆ ಚಾರುಲತಾ ಸೋಮಲ್ ಸೇರಿದಂತೆ ಪಾಲಿಕೆಯ ಜನಪ್ರತಿನಿಧಿಗಳು ನಗರದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿಯಿತ್ತು ಪರಿಶೀಲನೆ ನಡೆಸಿದರು. ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.
ಸಾರ್ವಜನಿಕರಿಗೆ ಆಯುಕ್ತರ ಮನವಿ
'ಇತ್ತೀಚೆಗೆ ನಗರದಲ್ಲಿ ಉಂಟಾದ ನೆರೆ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ನಗರದ ವಿವಿಧೆಡೆ 15 ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಇದರಲ್ಲಿ ನೂರಾರು ಸಂತ್ರಸ್ತರು ತಂಗಿದ್ದಾರೆ. ಇದರಲ್ಲಿ ಮಹಿಳೆಯರು, ಮಕ್ಕಳು ಕಳೆದ ನಾಲ್ಕೈದು ದಿನಗಳಿಂದ ತೊಟ್ಟಿರುವ ಬಟ್ಟೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಈ ಕಾರಣದಿಂದ ಮಹಿಳೆಯರ ಮತ್ತು ಮಕ್ಕಳ ಹೊಸ ಉಡುಪುಗಳ ತುರ್ತು ಅಗತ್ಯವಿದೆ. ಉಡುಪುಗಳನ್ನು ಕೊಡಲಿಚ್ಚಿಸುವವರು ಪಾಲಿಕೆ ಕಚೇರಿ ಆವರಣದಲ್ಲಿ ತೆರೆಯಲಾಗಿರುವ ಸ್ವೀಕೃತಿ ಕೇಂದ್ರಕ್ಕೆ ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ : 9448525350 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ' ಎಂದು ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್‍ರವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಬ್ರಿಟಿಷರ ಕಾಲದ ತುಂಗಾ ಸೇತುವೆಗೆ ಧಕ್ಕೆಯಿಲ್ಲ
ನಗರದ ಹೊಳೆ ಬಸ್ ನಿಲ್ದಾಣ ಸಮೀಪ ಬ್ರಿಟಿಷರ ಆಡಳಿತಾವಧಿಯಲ್ಲಿ ತುಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಸೇತುವೆ ಸುಸ್ಥಿತಿಯಲ್ಲಿದ್ದು, ಯಾವುದೇ ಧಕ್ಕೆಯಾಗಿಲ್ಲ ಎಂದು ಬೆಂಗಳೂರಿನ ತಜ್ಞರ ತಂಡ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ತುಂಗಾ ನದಿ ಉಕ್ಕಿ ಹರಿದ ಪರಿಣಾಮ, ಹಳೇ ಸೇತುವೆಯ ಕೆಲವೆಡೆ ಬಿರುಕು ಕಾಣಿಸಿಕೊಂಡಿತ್ತು. ಈ ಕಾರಣದಿಂದ ಈ ಸೇತುವೆ ಮೇಲೆ ಜನ - ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಮಹಾನಗರ ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್‍ರವರು ಬೆಂಗಳೂರಿನಿಂದ ತಜ್ಞ ಎಂಜಿನಿಯರ್ ಗಳನ್ನು ಕರೆಸಿ ಸೇತುವೆ ತಪಾಸಣೆ ನಡೆಸಿದ್ದರು.
ಎಂಜಿನಿಯರ್ ಗಳು ಸೇತುವೆ ಬಿರುಕು ಬಿಟ್ಟ ಸ್ಥಳದ ಪರಿಶೀಲನೆ ನಡೆಸಿದ್ದರು. ಸೇತುವೆಗೆ ಯಾವುದೇ ಅಪಾಯವಾಗಿಲ್ಲ. ಸೇತುವೆ ಹಾಗೂ ರಸ್ತೆ ಸಂಪರ್ಕಿಸುವ ಸ್ಥಳದಲ್ಲಷ್ಟೆ ಬಿರುಕು ಕಾಣಿಸಿಕೊಂಡಿದೆ ಎಂದು ವರದಿ ನೀಡಿದೆ ಎಂದು ತಿಳಿದುಬಂದಿದೆ.
ಮಂಗಳವಾರ ಸಿಎಂ ಭೇಟಿ
ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ತೀರ್ಥಹಳ್ಳಿ, ಸೊರಬ, ಶಿಕಾರಿಪುರ ಹಾಗೂ ಸಾಗರ ತಾಲೂಕುಗಳ ಪ್ರವಾಹ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಆ. 13 ರಂದು ಭೇಟಿಯಿತ್ತು ಪರಿಶೀಲನೆ ನಡೆಸುತ್ತಿದ್ದಾರೆ. ಶಿವಮೊಗ್ಗ ನಗರದಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಿದ್ದಾರೆ.