ಒತ್ತಡಕ್ಕೂ ಹೃದಯದ ಆರೋಗ್ಯಕ್ಕೂ ಏನು ಸಂಬಂಧ...?
ಒತ್ತಡವು ಇಂದು ನಮ್ಮ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಜನರು ತಮ್ಮ ಜೀವನದ ಎಲ್ಲ ಹಂತಗಳಲ್ಲಿಯೂ ಒತ್ತಡವನ್ನು ಅನುಭವಿಸುತ್ತಾರೆ ಎನ್ನುವುದನ್ನು ಅಧ್ಯಯನಗಳು ಬೆಳಕಿಗೆ ತಂದಿವೆ. ಆದರೆ ಈಗ ಉದ್ಯೋಗಕ್ಕೆ ಸಂಬಂಧಿಸಿದ ಒತ್ತಡ ಹೆಚ್ಚಿನ ಚರ್ಚೆಗೊಳಗಾಗಿದೆ. ಹೆಚ್ಚಿನ ವಯಸ್ಕರು ತಾವು ಎಚ್ಚರವಿರುವ ದಿನದ ಅವಧಿಯ ಅರ್ಧಕ್ಕೂ ಹೆಚ್ಚನ್ನು ಕೆಲಸಕ್ಕಾಗಿ ಬಳಸುತ್ತಿರುವುದು ಇದಕ್ಕೆ ಕಾರಣವಾಗಿದೆ.
ನಾವು ಕೆಲಸ ಮಾಡುವ ಸ್ಥಳವು ನಮ್ಮ ಆರೋಗ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮುಖ್ಯ ಸ್ಥಳವಾಗಿದೆ. ಆದರೆ ಕೆಲಸದ ಒತ್ತಡ, ಸಹೋದ್ಯೋಗಿಗಳನ್ನು ಹಿಂದಿಕ್ಕಬೇಕೆಂಬ ಪ್ರಯತ್ನ ಇತ್ಯಾದಿಗಳಿಂದಾಗಿ ಹೆಚ್ಚಿನ ಜನರು ತಮ್ಮ ಆರೋಗ್ಯವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಇದು ದೀರ್ಘಾವಧಿಯಲ್ಲಿ ದೈಹಿಕ ಮತ್ತು ಮಾನಸಿಕವಾಗಿ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುವ ಜೊತೆಗೆ ಹೃದಯ ಸೇರಿದಂತೆ ಶರೀರದ ಪ್ರಮುಖ ಅಂಗಗಳಿಗೆ ಅಪಾಯವನ್ನೂ ತರುತ್ತದೆ. ಹೃದಯದ ಅರೋಗ್ಯಕ್ಕೂ ಕೆಲಸದ ಒತ್ತಡ,ಸಂಬಂಧದಲ್ಲಿ ಸಮಸ್ಯೆಗಳು,ಸಾಮಾಜಿಕ ಒಂಟಿತನ ಇತ್ಯಾದಿಗಳಂತಹ ಮಾನಸಿಕ ವಿಷಯಗಳಿಗೂ ನಂಟು ಇದೆ ಎನ್ನುವುನ್ನು ಅಧ್ಯಯನಗಳು ಸಾಬೀತುಗೊಳಿಸಿವೆ.
ದೀರ್ಘಕಾಲಿಕ ಒತ್ತಡವು ಅನಾರೋಗ್ಯಕರ ಜೀವನಶೈಲಿಗೆ ಕಾರಣವಾಗುತ್ತದೆ ಮತ್ತು ತೀವ್ರ ಅನಾರೋಗ್ಯಗಳಿಗೆ ಚಿಕಿತ್ಸೆ ನೀಡುವುದನ್ನು ಕಷ್ಟವಾಗಿಸುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೀರ್ಘಕಾಲಿಕ ಉದ್ಯೋಗ ಸಂಬಂಧಿತ ಒತ್ತಡದಿಂದ ಬಳಲುತ್ತಿರುವವರು ಜಡ ಜೀವನಶೈಲಿ,ತಗ್ಗಿದ ವ್ಯಾಯಾಮ, ಅನಾರೋಗ್ಯಕರ ಆಹಾರ ಸೇವನೆ ಶೈಲಿ,ಧೂಮಪಾನ ಮತ್ತು ಮದ್ಯಪಾನದ ಚಟ ಇತ್ಯಾದಿಗಳಿಗೆ ಒಳಗಾಗುವ ಅಪಾಯವು ಹೆಚ್ಚಾಗಿರುತ್ತದೆ ಮತ್ತು ಅವರಲ್ಲಿ ಬೊಜ್ಜು ಬೆಳೆಯಲು ಕಾರಣವಾಗುತ್ತದೆ. ಇದನ್ನು ನಿಯಂತ್ರಿಸದಿದ್ದರೆ ಅದು ಅಧಿಕ ರಕ್ತದೊತ್ತಡ,ಅಧಿಕ ಕೊಲೆಸ್ಟ್ರಾಲ್ ಮಟ್ಟ ಮತ್ತು ಮಧುಮೇಹದಂತಹ ಸಮಸ್ಯೆಗಳಿಗೆ ಗುರಿಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಇವೆಲ್ಲ ಹೃದಯನಾಳೀಯ ರೋಗಕ್ಕೆ ಕಾರಣವಾಗುತ್ತವೆ.
ಅಲ್ಲದೆ ವ್ಯಕ್ತಿಯು ಒತ್ತಡದಲ್ಲಿದ್ದಾಗ ಅತಿಯಾಗಿ ತಿನ್ನುವ ಮತ್ತು ಅನಾರೋಗ್ಯಕರ ಚಟಗಳಿಗೆ ಬಲಿಯಾಗುವ ಹೆಚ್ಚಿನ ಸಾಧ್ಯತೆಗಳಿರುತ್ತವೆ. ಇದರ ಜೊತೆಗೆ ವ್ಯಕ್ತಿಯು ಒತ್ತಡದಲ್ಲಿದ್ದಾಗ ಶರೀರದಲ್ಲಿ ಹಲವಾರು ಹಾರ್ಮೋನ್ ಬದಲಾವಣೆಗಳು ನಡೆಯುತ್ತವೆ. ಈ ಎಲ್ಲ ಅಂಶಗಳು ಹೃದಯದ ಮೇಲೆ ಸಂಚಿತ ಪರಿಣಾಮವನ್ನುಂಟು ಮಾಡುತ್ತವೆ.
ದೀರ್ಘ ಸಮಯದ ಒತ್ತಡವು ಅಡ್ರೆನಾಲಿನ್ ಮತ್ತು ಕಾರ್ಟಿಸಾಲ್‌ಗಳಂತಹ ಹಾರ್ಮೋನ್‌ಗಳ ಮಟ್ಟವು ಹೆಚ್ಚಲು ಕಾರಣವಾಗುತ್ತದೆ ಮತ್ತು ಈ ಹಾರ್ಮೋನ್‌ಗಳು ಹೃದಯಕ್ಕೆ ಅಪಾಯಕಾರಿಯಾಗಿವೆ. ಇನ್ನೊಂದೆಡೆ ತೀವ್ರ ಒತ್ತಡವು ರಕ್ತದೊತ್ತಡದಲ್ಲಿ ದಿಢೀರ್ ಏರಿಕೆಯನ್ನುಂಂಟು ಮಾಡುತ್ತದೆ ಮತ್ತು ಇದು ಅಂತಿಮವಾಗಿ ಹೃದಯಾಘಾತಕ್ಕೆ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು.