ರಾಜ್ಯದಲ್ಲಿ ಆಗಸ್ಟ್ ನಲ್ಲಿ ಸುರಿದಿದ್ದು 'ಶತಮಾನದ ಮಳೆ' !
ಸಾಂದರ್ಭಿಕ ಚಿತ್ರ
ಬೆಂಗಳೂರು, ಆ.15: ರಾಜ್ಯದಲ್ಲಿ ಆಗಸ್ಟ್ 3ರಿಂದ 10ರವರೆಗೆ ಸುರಿದ ಮಳೆ ಶತಮಾನದ ದಾಖಲೆ ಮಳೆಯಾಗಿದೆ ಎಂದು ಹವಾಮಾನ ಕೇಂದ್ರದ ನಿರ್ದೇಶಕ ಜಿ.ಎಸ್.ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.
ಕಳೆದ 118 ವರ್ಷದಲ್ಲಿ ಇದೇ ಮೊದಲ ಬಾರಿಗೆ ಏಳು ದಿನಗಳಲ್ಲಿ ಸಾಮಾನ್ಯಕ್ಕಿಂತ ಸರಾಸರಿ 2ರಿಂದ 3ಪಟ್ಟು ಅಧಿಕ ಮಳೆ ಸುರಿದಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ಮತ್ತು ನಿರ್ವಹಣಾ ಕೇಂದ್ರದ ಮಾಹಿತಿಯ ಪ್ರಕಾರ ಆಗಸ್ಟ್ 3ರಿಂದ 10ರವರೆಗೆ ರಾಜ್ಯದಲ್ಲಿ ಒಟ್ಟಾರೆ 22.4 ಸೆಂ.ಮೀ ಮಳೆ ಬಿದ್ದಿದ್ದು, ಇದು ವಾಡಿಕೆಗಿಂತ ಶೇ.279 ರಷ್ಟು ಹೆಚ್ಚಾಗಿದೆ.
1901ರ ಬಳಿಕ ರಾಜ್ಯದಲ್ಲಿ ಸುರಿದ ಮಳೆ ದಾಖಲೆ, ಇತ್ಯಾದಿ ವಿವರಗಳ ಸಹಿತ, ಪ್ರಕೃತಿ ವಿಕೋಪ, ಮಳೆ ಪ್ರಮಾಣದ ವರದಿಯನ್ನು ಹವಾಮಾನ ಕೇಂದ್ರವು ರಾಜ್ಯ ಸರಕಾರಕ್ಕೆ ಸಲ್ಲಿಸಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಈ ಅವಧಿಯಲ್ಲಿ 5.9 ಸೆಂಮೀ ಮಳೆಯಾಗುತ್ತದೆ. 2005ರಲ್ಲಿ 15.5ಸೆಂಮೀ ಮಳೆಯಾಗಿತ್ತು. ಈ ಬಾರಿ ಈ ಎಲ್ಲ ದಾಖಲೆ ಮುರಿದು ಹೊಸ ದಾಖಲೆ ಸೃಷ್ಟಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಉತ್ತರ ಕರ್ನಾಟಕ ಭಾಗವಲ್ಲದೆ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಉತ್ತರ ಕರ್ನಾಟಕದಲ್ಲಿ ಬೆಳಗಾವಿ, ಧಾರವಾಡ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.