varthabharthi


ಭೀಮ ಚಿಂತನೆ

ಬದುಕುವುದಾದರೆ ಗಟ್ಟಿತನದಿಂದ ಬದುಕಿ

ವಾರ್ತಾ ಭಾರತಿ : 16 Aug, 2019

ಫೆಬ್ರವರಿ 18, 1933 ಶನಿವಾರದಂದು ಠಾಣೆ ಜಿಲ್ಲೆಯ ಕಸಾರಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು. ರಾತ್ರಿ 8 ಗಂಟೆ ಹೊತ್ತಿಗೆ ಡಾ. ಅಂಬೇಡ್ಕರ್ ಅವರು ಮುಂಬೈನಿಂದ ವಾಹನದಲ್ಲಿ ಕಸಾರಿಗೆ ಬಂದಿಳಿದರು. ಅವರೊಂದಿಗೆ ಶ್ರೀಯುತ ಶಿವತರಕರ್, ದಿವಾಕರ್ ಪಗಾರೆ ಮತ್ತು ಗಣಪತಬುವಾ ಜಾಧವ ಇದ್ದರು. ಡಾ. ಅಂಬೇಡ್ಕರ್ ಅವರನ್ನು ಸ್ವಾಗತಿಸುವುದಕ್ಕಾಗಿ ಕಲ್ಯಾಣದಲ್ಲಿ ಸಮತಾ ಸೈನಿಕ ದಳದ ಕಾರ್ಯಕರ್ತರು ಮತ್ತು ಸುತ್ತಲಿನ ಅಸ್ಪಶ್ಯ ಪ್ರತಿನಿಧಿಗಳು ಆಗಮಿಸಿದ್ದರು. ನಾಸಿಕ್‌ನಿಂದ ಭಾವುರಾವ್ ಗಾಯಕವಾಡ್, ಕೆ.ಬಿ. ಜಾಧವ ಮತ್ತು ಲಿಂಬಾಜಿರಾವ್ ಭಾಲೇರಾವ್ ಮತ್ತು ರೋಖಡೆ ಆಗಮಿಸಿದ್ದರು.

ಡಾ. ಅಂಬೇಡ್ಕರ್ ಅವರನ್ನು ಸಭೆಯ ವೇದಿಕೆಗೆ ಮೆರವಣಿಗೆಯಲ್ಲಿ ಕರೆತಂದ ಬಳಿಕ ಸಭೆಯ ಕಲಾಪಗಳಿಗೆ ಚಾಲನೆ ದೊರೆಯಿತು. ಮೊದಲಿಗೆ ಸಭೆಯ ಸ್ವಾಗತಾಧ್ಯಕ್ಷ ಶಂಕರಾನಂದ ಬರ್ವೆ ಎಲ್ಲರನ್ನು ಸ್ವಾಗತಿಸಿ, ಡಾ. ಅಂಬೇಡ್ಕರ್ ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳುವಂತೆ ಮಾಡಿದ ವಿನಂತಿಗೆ ರೋಖಡೆ ಅನುಮೋದಿಸಿದರು. ಭಾರೀ ಕರತಾಡನದೊಂದಿಗೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಸಭೆಯ ಅಧ್ಯಕ್ಷತೆ ವಹಿಸಿಕೊಂಡರು.

ಡಾ. ಅಂಬೇಡ್ಕರ್ ತಮ್ಮ ಭಾಷಣದಲ್ಲಿ ಹೇಳಿದ್ದು ಈ ಮಾತುಗಳನ್ನು:

ಠಾಣೆ ಜಿಲ್ಲೆಯ ನಾನು ಈ ಮೊದಲು ಬಂದವನಲ್ಲ ಹೀಗಾಗಿ ತಮ್ಮಂದಿಗೆ ನನಗೆ ಅಷ್ಟು ಪರಿಚಯ ಸಾಧ್ಯವಾಗಿಲ್ಲ. ನನ್ನ ಈ ಭೇಟಿಗೆ ಕಾರಣರಾದ ಮಹಾಂತ ಶಂಕರದಾಸ್ ಬುವಾ ಮತ್ತು ಠಾಣಾ ಜಿಲ್ಲೆಯ ಎಲ್ಲ ಪ್ರತಿನಿಧಿಗಳಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಈ ಸಂದರ್ಭದಲ್ಲಿ ಕೆಲವೇ ಮಾತುಗಳು ಆದರೆ ಮಹತ್ವದ ಸೂಚನೆಗಳ ಬಗ್ಗೆ ಹೇಳಬೇಕಾಗಿರುವ ಕಾರಣ ನೀವು ಅವುಗಳನ್ನು ಗಮನ ಇಟ್ಟು ಕೇಳಿಸಿಕೊಳ್ಳುತ್ತೀರಿ ಎಂಬ ಭರವಸೆ ಇದೆ. ಇಂದು ನಿಮಗೆ ಏನು ಲಭಿಸಿದೆಯೋ ಅದರ ಬಗ್ಗೆ ಒಂದಿಷ್ಟು ವಿಚಾರ ಮಾಡಿದರೆ ನಿರುಮ್ಮಳ ಭಾವ ನಿಮ್ಮಲ್ಲಿ ಮೂಡಬಹುದು. ಮಹಾತ್ಮಾ ಗಾಂಧೀಜಿ ಮತ್ತು ಹಿಂದೂ ಸನಾತನಿ ಜನರೊಂದಿಗೆ ಅಸ್ಪಶ್ಯತೆ ನಿರ್ಮೂಲನೆ ಸಂಬಂಧ ಕಳೆದ ಎಂಟು ಹತ್ತು ದಿನಗಳಿಂದ ಮಾತುಕತೆ ಮಾಡುತ್ತಿದ್ದೇನೆ. ಅಸ್ಪಶ್ಯತೆ ನಿರ್ಮೂಲನೆಗಾಗಿ ಮಹಾತ್ಮಾ ಗಾಂಧೀಜಿ ಅವರು ಮಂದಿರಗಳ ದ್ವಾರ ತೆರೆಯುವ ಮತ್ತು ಅಸ್ಪಶ್ಯತೆಯನ್ನು ತೊಡೆದುಹಾಕುವ ಚಳವಳಿ ಕೈಗೆತ್ತಿಕೊಂಡಿದ್ದಾರೆ. ಈ ವಿಷಯದಲ್ಲಿ ನಾನು ಸ್ಪಷ್ಟವಾಗಿ ಹೇಳಿದ್ದು ಒಂದೇ ಮಾತು ಅಸ್ಪಶ್ಯತೆ ನಿವಾರಣೆಗೆ ಮಂದಿರ ಪ್ರವೇಶಿಸುವುದು ಅನಿವಾರ್ಯ ಅಲ್ಲ. ನಮಗೆ ಹಿಂದೂ ಧರ್ಮದಲ್ಲಿ ಸಮಾನತೆ ಲಭಿಸಿ ಚಾತುರ್ವರ್ಣ್ಯ ವ್ಯವಸ್ಥೆ ತೊಲಗಿದರೆ ಮಾತ್ರ ನಾವು ಹಿಂದೂ ಧರ್ಮಕ್ಕೆ ಮಾನ್ಯತೆ ನೀಡುವುದಕ್ಕೆ ಸಿದ್ಧ. ಮಹಾತ್ಮಾ ಗಾಂಧೀಜಿ ಅವರೊಂದಿಗೆ ನನ್ನ ಅಭಿಪ್ರಾಯಭೇದ ಇದ್ದೇ ಇದೆ. ಅವರು ಮಂದಿರದ ದ್ವಾರ ತೆರೆಯುವುದಕ್ಕೆ ಸಿದ್ಧವಿಲ್ಲ. ಚಾತುರ್ವರ್ಣ್ಯ ವ್ಯವಸ್ಥೆಗೆ ಕೊಡಲಿ ಏಟು ಕೊಡುವುದಕ್ಕೆ ತಯಾರಿಲ್ಲ. ನಮ್ಮ ನೆರಳಿನಡಿ ಬದುಕುವುದಕ್ಕೆ ಅವರು ಸಿದ್ಧವಿಲ್ಲ. ನಮ್ಮ ಉನ್ನತಿ ಮಾರ್ಗ ಇದೀಗ ಆರಂಭವಾಗಿದೆ. ಪೊಲೀಸ್ ಇಲಾಖೆಯಲ್ಲಿ ನಮ್ಮ ಜನರು ಇರಲಿಕ್ಕಿಲ್ಲ. ಆದರೆ ಇಂದು ಮೆಟ್ರಿಕ್ ಪಾಸಾದ ಅನೇಕ ಅಸ್ಪಶ್ಯ ಯುವಕರು ಪೊಲೀಸ್ ತರಬೇತಿ ಪಡೆಯುತ್ತಿದ್ದಾರೆ. ನಮ್ಮ ಕೈಕೆಳಗೆ ಸ್ಪಶ್ಯ ವರ್ಗ ಕೆಲಸ ಮಾಡಬೇಕಾದರೆ ನಮ್ಮಲ್ಲಿ ಇನ್ನೂ ಹೆಚ್ಚು ಅಧಿಕಾರಿ ವರ್ಗ ಬೆಳೆದು ಸಮಾಜದ ಸ್ಥಾನಮಾನ ಎತ್ತರಿಸಬೇಕು. ಇಂದು ಕೆಲವೇ ಕೆಲವು ಜನರು ಡೆಪ್ಯೂಟಿ ಕಲೆಕ್ಟರ್, ಮಾಮಲೇದಾರ ಅಥವಾ ಪೊಲೀಸ್ ಇನ್‌ಸ್ಪೆಕ್ಟರ್ ಆಗಿದ್ದಿರಬಹುದು.

ಆದರೆ ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಲಿದೆ. ನಮ್ಮ ಸಮಾಜದ ಜನರು ಅಧಿಕಾರಿಗಳಾದರೆ ಮಾತ್ರ ನಮ್ಮ ಮೇಲಿನ ಶೋಷಣೆ ತಗ್ಗುತ್ತದೆ. ಇಂದು ನಮಗೆ ದೊರೆತಿರುವ ರಾಜಕೀಯ ಹಕ್ಕುಗಳು ಕುರುಡನ ಹಾದಿಯಲ್ಲಿ ಬಿದ್ದಿರುವ ಮುತ್ತು ರತ್ನಗಳಂತೆ ಆಗಬಾರದು. ಕುರುಡನಿಗೆ ಯಾವುದು ಮುತ್ತು ರತ್ನ ಎನ್ನುವುದು ತಿಳಿಯುವುದು ಇಲ್ಲವೋ ಅಂತಹದ್ದೆ ಪರಿಸ್ಥಿತಿ ಆಗಬಾರದು. ಈ ದೇಶದಲ್ಲಿ ಎಂದೂ ನಡೆಯದಂತಹ ಘಟನೆ ರಾಜಕೀಯ ಕ್ಷೇತ್ರದಲ್ಲಿ ಸಂಭವಿಸಿದೆ. ಈ ದೇಶದಲ್ಲಿ ಕೆಳಗಿನವರು ಬೀಸಿದ ಹಿಟ್ಟಿಗೆ ಮೇಲಿನವರ ವಾರಸುತನದ ಪರಿಸ್ಥಿತಿ ಇದೆ. ಪರಕೀಯ ಬ್ರಿಟಿಷರ ಆಡಳಿತ ಈ ದೇಶದಲ್ಲಿದ್ದರೂ ಕ್ರಾಂತಿ ಒಡಮೂಡಲಿಲ್ಲ. ಆಡಳಿತ ನಡೆಸುವುದಕ್ಕಾಗಿ ಅವರಿಗೆ ಉಚ್ಚವರ್ಗದ ನೆರವು ಪಡೆಯಲೇ ಬೇಕಾಗುತ್ತದೆ. ಉಚ್ಚವರ್ಗದ ಮಾತುಗಳ ಮೇಲೆ ನಡೆಯುವ ಈ ಸರಕಾರದಿಂದ ನಮ್ಮ ಪರಿಸ್ಥಿತಿಯಂತೂ ಬದಲಾಗಿಲ್ಲ. ಆದರೆ ಭವಿಷ್ಯದ ಸರಕಾರದಲ್ಲಿ ನಮ್ಮದೇ ಆಡಳಿತ ನಡೆದು ಉಚ್ಚ-ನೀಚ ಭೇದ ಅಂತ್ಯವಾಗಲಿದೆ.

 ನಾವೇ ಕಾನೂನು ಮಾಡುವ. ಕಾನೂನು ಮಂಡಳಿಯಲ್ಲಿ ಇರುವ ನಮ್ಮ ಪ್ರತಿನಿಧಿಗಳ ಸಲಹೆ ಮೇರೆಗೆ ಇಡೀ ದೇಶಕ್ಕೆ ಆ ಕಾನೂನು ಅನ್ವಯವಾಗಲಿದೆ. ಹಳ್ಳಿಯಲ್ಲಿನ ಚಾವಡಿಗೆ ಮಹಾರ್ ಪ್ರವೇಶಿಸುವಂತಿಲ್ಲ. ಆದರೆ ಅದೇ ಮಹಾರ್ ಶಾಸಕಾಂಗ ಸಭೆಯಲ್ಲಿ ಕುಳಿತುಕೊಂಡ ಮೇಲೆ ಸ್ಪಶ್ಯರಿಗೆ ಅಸ್ಪಶ್ಯರನ್ನು ಸಮಾನತೆಯಿಂದ ಕಾಣಲೇಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ. ಆದರೆ ನನಗಿರುವ ಸಂಶಯ ಒಂದೇ. ನಿಮಗೆ ಬಂದಿರುವ ಶಕ್ತಿಯ ಸದುಪಯೋಗ ಮಾಡಿಕೊಳ್ಳುತ್ತೀರೋ ಅಥವಾ ಇಲ್ಲವೊ? ನಿಮ್ಮ ನಡುವೆ ತಾರತಮ್ಯ ಬರಲೇಬಾರದು. ಕೇವಲ ಏಕತೆಯೊಂದೇ ನಿಮ್ಮ ಮಂತ್ರವಾಗಿರಲಿ. ಭಿನ್ನಾಭಿಪ್ರಾಯ ತೊಡೆದು ಹಾಕಿ. ನಮ್ಮ ದುರ್ದೈವ ಎಂದರೆ ನಮ್ಮಲ್ಲಿ ಭಿನ್ನಾಭಿಪ್ರಾಯದ ಚಟ ಬೆಳೆದು ಎಲ್ಲೆಡೆ ಜಗಳ ಶುರುವಾಗಿಬಿಟ್ಟಿದೆ. ಇದರ ಸ್ಪಷ್ಟ ಉದಾಹರಣೆ ಎಂದರೆ ನಾಸಿಕ್ ಮತ್ತು ಕೊಂಕಣದ ಜಿಲ್ಲೆಗಳಲ್ಲಿ ಸಂಘಟನೆ ನಾಶವಾಗುತ್ತದೆ. ಈ ಎರಡು ಜಿಲ್ಲೆಗಳು ಒಂದ ಕ್ಕೊಂದು ಹೊಂದಿಕೊಂಡಿವೆ. ಕೊಂಕಣ ಮತ್ತು ನಾಸಿಕ್ ಜಿಲ್ಲೆಗಳಲ್ಲಿ ಈ ಹಿಂದೆ ಬೃಹತ್ ಸತ್ಯಾಗ್ರಹಗಳು ನಡೆಯದೆ ಹೋಗಿದ್ದರೆ ಇಂದು ನಮಗೆ ಸಿಕ್ಕಿರುವ ರಾಜಕೀಯ ಅಧಿಕಾರ ಲಭಿಸುತ್ತಿರಲಿಲ್ಲ. ನಾಸಿಕ್ ಸತ್ಯಾಗ್ರಹ ಎಷ್ಟು ಪ್ರಖರವಾಗಿತ್ತು ಎಂದರೆ ನಾನು ಇಂಗ್ಲೆಂಡಿನಲ್ಲಿದ್ದ ವೇಳೆ ಅಲ್ಲಿನ ಲಂಡನ್ ಟೈಮ್ಸ್ ನಿತ್ಯ ಪ್ರಕಟಿಸುತ್ತಿದ್ದ ಆ ಸುದ್ದಿಯನ್ನು ಓದಿದ ಇಂಗ್ಲಿಷರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದರು.

ನಾಸಿಕ್ ಜಿಲ್ಲೆಯ ಜನರು ತಮ್ಮ ಸ್ವಶಕ್ತಿಯ ಮೇಲೆ ಇಂತಹ ಕೆಲಸ ಮಾಡಿದ್ದರು. ಆದರೆ ಈಗ ಅದೇ ನಾಸಿಕ್ ಜಿಲ್ಲೆ ಸಂಘಟನೆ ವಿಚಾರದಲ್ಲಿ ಹಿಂದಡಿ ಇಡುತ್ತಿರುವುದನ್ನು ಹೇಳಲು ನನಗೆ ವಿಷಾದವಾಗುತ್ತಿದೆ. ಅಲ್ಲಿನ ಜನರಂತೂ ಇದೀಗ ಸಾಮಾಜಿಕ ಕಾರ್ಯಗಳತ್ತ ಸನ್ಯಾಸ ಸ್ವೀಕರಿಸಿದ್ದೇವೆಯೋ ಎನ್ನುವಂತೆ ವರ್ತಿಸುತ್ತಿದ್ದಾರೆ. ಕಾರಣ ಕೇಳಿದರೆ ವೈಯಕ್ತಿಕ ದ್ವೇಷವೇ ಉತ್ತರವಾಗುತ್ತಿದೆ. ಇದಕ್ಕೆ ಉದಾಹರಣೆಯಾಗಿ ಈಗತ್‌ಪುರಿ ಘಟನೆಯೊಂದು ಸಾಕು. ಈಗತ್‌ಪುರಿಯಲ್ಲಿ ಆಯೋಜಿಸಿದ್ದ ಅಸ್ಪಶ್ಯರ ಸಭೆಯ ಅಧ್ಯಕ್ಷತೆ ಯಾರು ವಹಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ವಾದ ವಿವಾದ ಬೆಳೆಯಿತು. ಅಂತಿಮವಾಗಿ ಕಂಬಕ್ಕೆ ಅಧ್ಯಕ್ಷತೆಯ ಗೌರವ ನೀಡಿ ಸಭೆ ನಡೆಸಬೇಕಾಯಿತು. ಅಧ್ಯಕ್ಷ ಯಾರಾಗಬೇಕು. ಕಾರ್ಯದರ್ಶಿ ಯಾರು ಆಗಬೇಕು. ಖಜಾಂಚಿ ಯಾರಾದರೆ ಒಳ್ಳೆಯದು ಇಂತಹದ್ದೇ ವಿಚಾರಗಳನ್ನು ಮುಂದಿರಿಸಿಕೊಂಡು ಪರಸ್ಪರರು ವೈಯಕ್ತಿಕ ದ್ವೇಷ ಬೆಳೆಸಿಕೊಳ್ಳುತ್ತಿದ್ದಾರೆ. ಒಂದು ವೇಳೆ ಇದೇ ಪರಿಸ್ಥಿತಿ ಮುಂದುವರಿದಿದ್ದೇ ಆದಲ್ಲಿ ಕಷ್ಟಪಟ್ಟು ನಾವು ಸಂಪಾದಿಸಿದ ಅಧಿಕಾರ ನಿರುಪಯುಕ್ತವಾಗುತ್ತದೆ. ನಿಸ್ವಾರ್ಥದಿಂದ ಕೆಲಸ ಮಾಡುವ ಪ್ರತಿನಿಧಿಯೊಬ್ಬ ನಾಸಿಕ್‌ನಲ್ಲಿ ಇದ್ದಾನೆ ಎಂದಾದರೆ ಅಂತಹ ವ್ಯಕ್ತಿಗಾಗಿ ಕೆಲಸ ಮಾಡಿ.

ಜಾಣರು ಯಾರು, ಹುಚ್ಚರು ಯಾರು ವಿಚಾರ ಮಾಡಿ. ಗೌರವ, ಮಾನ-ಸನ್ಮಾನಗಳಿಗೆ ಹಪಹಪಿಸುತ್ತಿರುವ ಮೂರ್ಖರ ಮಾತಿಗೆ ಕಿವಿಗೊಡಬೇಡಿ. ಯಾರು ಬೇಕಾದರೂ ದೀಪ ಹಚ್ಚುವ ಕೆಲಸ ಮಾಡಲಿ. ಆದರೆ ನಮ್ಮಿಳಗಿನ ಭಿನ್ನಮತಕ್ಕೆ ಆಸ್ಪದ ಕೊಡಬೇಡಿ. ನಿಮ್ಮ ಸಮಸ್ಯೆಗಳ ಪರಿಹಾರ ಮಾಡಿಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳಿ. ಸಭೆಯಲ್ಲಿನ ನಿರ್ಣಯಗಳತ್ತ ನಿರ್ಲಕ್ಷ ಬೇಡ. ನಿರ್ಣಯ ಸೂಕ್ತ ಅಲ್ಲ ಎಂದು ಬಡಬಡಿಸುವ ಬದಲು ಅದನ್ನು ಸರಿಪಡಿಸುವ ಕೆಲಸ ಮಾಡಿ. ನಿಮ್ಮ ಮನೆಯವರೆಗೆ ಯಾರಾದರೂ ಬಂದು ಪರಿಸ್ಥಿತಿ ಏನು ಎಂದು ಹೇಳಲಿಕ್ಕಾಗುವುದಿಲ್ಲ. ಮಾಹಿತಿಗಾಗಿ ‘ಜನತಾ’ ಪತ್ರಿಕೆ ಓದಿ. ಇನ್ನೊಂದು ವಿಷಯ ಎಂದರೆ ಪುಣೆಯಲ್ಲಿ ಮಾಡಿಕೊಂಡ ಪುಣೆ ಒಪ್ಪಂದ ಹಿಂದೂಗಳಿಗೆ ಇಷ್ಟವಿಲ್ಲ. ನಿಜವಾಗಿ ಹೇಳಬೇಕು ಎಂದರೆ ಹಿಂದೂ ಧರ್ಮವನ್ನು ನಾವು ರಕ್ಷಿಸಬಹುದು. ಆದರೆ ಹಿಂದೂಗಳು ಹೇಗಿದ್ದಾರೆ ಎಂದರೆ, ಪುಣೆ ಒಪ್ಪಂದದ ಲಾಭ ನಮಗೆ ಆಗಬಾರದು ಎನ್ನುವ ಕಾರಣಕ್ಕೆ ಭವಿಷ್ಯದಲ್ಲಿ ಹಿಂದೂ ಮತ್ತು ಮುಸ್ಲಿಮರು ಕೌನ್ಸಿಲ್‌ನಲ್ಲಿ ಒಂದಾಗಿ ನಮ್ಮನ್ನು ಮೂಲೆಗುಂಪು ಮಾಡಬಹುದು. ಭಿನ್ನಾಭಿಪ್ರಾಯ ಏನೇ ಇದ್ದರೂ ನಮ್ಮ ಪಾಲಿನ ಅಧಿಕಾರ ನಮಗೆ ಲಭಿಸಲೇಬೇಕು. ಮಹಾಭಾರತದ ಕೌರವ-ಪಾಂಡವ ಯುದ್ಧದಲ್ಲಿ ಭೀಷ್ಮಚಾರ್ಯರು ನಿಜವಾಗಿ ಪಾಂಡವರ ಪಕ್ಷಪಾತಿ. ಆದರೆ ಕೌರವನ ಆಶ್ರಯದಲ್ಲಿದ್ದ ಕಾರಣ ಅವರ ಪರವಾಗಿಯೇ ನಿಲ್ಲಬೇಕಾಯಿತು. ಇದರರ್ಥ ಇಷ್ಟೇ ‘‘ಅರ್ಥಸ್ಯ ಪುರುಷೋ ದಾಸಃ’’ ಇಂತಹ ಸ್ಥತಿ ನಿಮಗೆ ಬಾರದಂತೆ ನೋಡಿಕೊಳ್ಳಿ. ಜನರ ತಂತ್ರ ಗುರುತಿಸಿ ಅದಕ್ಕೆ ತಕ್ಕಂತೆ ನಿಮ್ಮ ಪ್ರತಿತಂತ್ರವಿರಲಿ. ಪರಮೇಶ್ವರನೇ ನಮ್ಮನ್ನು ಅಸ್ಪಶ್ಯರನ್ನಾಗಿ ಹುಟ್ಟಿಸಿದ್ದಾನೆ. ಇದೆಲ್ಲ ದೈವೇಚ್ಛೆ ಎನ್ನುವಂತಹ ಭಾವನೆಗಳಿಗೆ ಆಸ್ಪದ ನೀಡಬೇಡಿ.

ಸದ್ಯದ ಮಟ್ಟಿಗೆ ನೀವು ಪರಮೇಶ್ವರನ ಕುರಿತು ಚಿಂತನೆ ಮಾಡಬೇಕು. ನಮ್ಮ ಇಂದಿನ ದುಸ್ಥಿತಿಗೆ ಕಾರಣ ಇತರರ ಸ್ವಾರ್ಥ ಸಾಧನೆಯಿಂದಾಗಿ ನಮಗೆ ಆಗಿರುವ ಹಾನಿ ವಿನಃ ಅದು ಹಿಂದಿನ ಜನ್ಮದ ಪಾಪಕರ್ಮದ ಫಲವಲ್ಲ. ಮಹಾರ್‌ನಿಗೆ ಜಮೀನು ಇಲ್ಲ ಎಂದರೆ ಅದಕ್ಕೆ ಕಾರಣ ಬೇರೆಯವರು ಅವನ ಜಮೀನು ಕಿತ್ತುಕೊಂಡಿದ್ದು, ಬೇರೆಯವರು ಉದ್ಯೋಗ ಕಿತ್ತುಕೊಂಡಿದ್ದಕ್ಕೆ ಇಂದು ಅಸ್ಪಶ್ಯನಿಗೆ ಉದ್ಯೋಗವಿಲ್ಲದಂತಾಗಿದೆ. ಇಂತಹ ದುಷ್ಕೃತ್ಯಗಳನ್ನು ಸುಧಾರಿಸುವ ಕಾರ್ಯ ನಮ್ಮ ಸಾಮರ್ಥ್ಯಕ್ಕೆ ಮಿಗಿಲಾದುದು ಅಂತೂ ಅಲ್ಲ. ಇದಕ್ಕೆ ಉದಾಹರಣೆ ನೀಡಬೇಕೆಂದರೆ ರೈಲ್ವೆಯ ಆಡಳಿತವು ವೈಸರಾಯ್ ಅವರ ಕಾನೂನು ಮಂಡಳಿಯ ಮುಖಾಂತರ ನಡೆಯುತ್ತದೆ. ರೈಲ್ವೆಯಲ್ಲಿ ಕಾರ್ಮಿಕರ ಸಂಖ್ಯೆ ಕಡಿತ ಮಾಡಬೇಕು ಎಂದು ತೀರ್ಮಾನವಾದ ಕೂಡಲೇ ಮೊತ್ತ ಮೊದಲಿಗೆ ಅಸ್ಪಶ್ಯ ಕಾರ್ಮಿಕರ ಮೇಲೆ ಗದಾಪ್ರಹಾರ ಮಾಡಲಾಗುತ್ತದೆ ವಿನಃ ಇತರ ವರ್ಗದ ಕಾರ್ಮಿಕರ ಮೇಲೆ ಗದಾಪ್ರಹಾರವಾಗುವುದಿಲ್ಲ ಏಕೆಂದರೆ ಇತರ ಜಾತಿಯ ಮತ್ತು ಧರ್ಮದ ಕಾರ್ಮಿಕರ ಪ್ರತಿನಿಧಿಗಳು ಕೌನ್ಸಿಲ್‌ನಲ್ಲಿ ಇದ್ದಾರೆ. ನಮ್ಮ ವರ್ಗದ ಏಕೈಕ ಪ್ರತಿನಿಧಿ ಇದ್ದಾರೆ. ಆದರೆ ಅವರು ತಮ್ಮ ವರ್ಗದ ಪರವಾಗಿ ಏನೂ ಮಾತನಾಡುವುದೇ ಇಲ್ಲ. ಆದರೆ ಇನ್ನು ಮುಂದೆ ವೈಸ್‌ರಾಯ್ ಅವರ ಕಾನೂನು ಮಂಡಳಿಗೆ ಶೇ. 18ರಷ್ಟು ಪ್ರತಿನಿಧಿಗಳು ನಮ್ಮ ವರ್ಗದಿಂದ ಆಯ್ಕೆಯಾಗಲಿದ್ದಾರೆ. ಪ್ರತಿನಿಧಿಗಳ ಆಯ್ಕೆ ಸಂದರ್ಭದಲ್ಲಿ ನೀವು ಎಚ್ಚರದಿಂದ ಇದ್ದು, ಕೆಲಸ ಮಾಡುವ ವ್ಯಕ್ತಿಗಳನ್ನೇ ಆಯ್ಕೆ ಮಾಡಬೇಕಾಗುತ್ತದೆ.

ಕೊನೆಯದಾಗಿ ಒಂದು ಮಾತು ಹೇಳುತ್ತೇನೆ. ದೇವರ ಮೇಲೆ ನಂಬಿಕೆ ಇರಿಸಿ ಕೆಲಸ ಮಾಡುವುದಕ್ಕಿಂತ ನಿಮಗೆ ಏನಾದರೂ ಮಾಡುವುದು ಇದ್ದಲ್ಲಿ ಅದನ್ನು ಮಾನಸಿಕ ಸಾಮರ್ಥ್ಯದ ಮೇಲೆ ಮಾಡಿ. ಇಲ್ಲಿಯವರೆಗೆ ತಾವು ಶಾಂತಚಿತ್ತದಿಂದ ನನ್ನ ಭಾಷಣ ಕೇಳಿದ್ದೀರಿ. ಅಲ್ಲದೆ ಈ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದ್ದಕ್ಕೆ ನಾನು ತಮ್ಮೆಲ್ಲರಿಗೂ ಆಭಾರಿಯಾಗಿದ್ದೇನೆ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)