ಎಚ್ಚರಿಕೆ,ಈ ನಾಲ್ಕು ಗಂಭೀರ ಕಾಯಿಲೆಗಳು ಅಂಗವೈಕಲ್ಯಕ್ಕೆ ಕಾರಣವಾಗಬಲ್ಲವು
ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳು ಆಗುತ್ತಲೇ ಇರುತ್ತವೆ. ಹಿಂದೆ ಮಾರಣಾಂತಿಕವೆಂದೇ ಪರಿಗಣಿಸಲಾಗಿದ್ದ ಹಲವಾರು ರೋಗಗಳಿಗೆ ಇಂದು ಸೂಕ್ತ ಚಿಕಿತ್ಸೆ ಲಭ್ಯವಿದ್ದು,ರೋಗಿಯು ಗುಣಮುಖಗೊಂಡ ನಂತರ ಯಾವುದೇ ತೊಂದರೆ ಶಾಶ್ವತವಾಗಿ ಬಾಧಿಸುವುದಿಲ್ಲ. ಆದರೆ ಚಿಕಿತ್ಸೆಗೂ ಬಗ್ಗದ ಕೆಲವು ಕಾಯಿಲೆಗಳಿದ್ದು,ಇವು ಶಾಶ್ವತವಾಗಿ ಅಂಗವೈಕಲ್ಯಗಳನ್ನುಂಟು ಮಾಡುತ್ತವೆ.
ರೋಗಿಗೆ ಜೀವಮಾನದಲ್ಲೆಂದೂ ತನ್ನ ಕೈಕಾಲುಗಳನ್ನು ಬಳಸಲು ಸಾಧ್ಯವಾಗದಿರಬಹುದು. ಇಂತಹ ಕಾಯಿಲೆಗಳು ಆರಂಭಿಕ ಹಂತದಲ್ಲಿ ಸಾಮಾನ್ಯವೆಂದು ಕಂಡುಬರುವ ಲಕ್ಷಣಗಳನ್ನು ತೋರಿಸಬಹುದು. ಆದರೆ ಇವು ಕಾಲಕ್ರಮೇಣ ವ್ಯಕ್ತಿಯನ್ನು ಭಾಗಶಃ ಅಥವಾ ಸಂಪೂರ್ಣ ಅಂಗವಿಕಲನ ನ್ನಾಗಿಸಬಹುದು. ಇಂತಹ ಕೆಲವು ಕಾಯಿಲೆಗಳನ್ನು ಸಕಾಲದಲ್ಲಿ ಪತ್ತೆ ಹಚ್ಚಿ,ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡರೆ ಗಂಡಾಂತರದಿಂದ ಪಾರಾಗಬಹುದು.
► ಪಾರ್ಕಿನ್ಸನ್ ಕಾಯಿಲೆ
ಪಾರ್ಕಿನ್ಸನ್ ಕಾಯಿಲೆಯನ್ನು ಭಾರತದಿಂದ ಮೂಲೋತ್ಪಾಟನೆ ಮಾಡಲಾಗಿದೆ ಎಂಬ ಹೇಳಲಾಗಿತ್ತಾದರೂ ದೇಶದ ವಿವಿಧ ಭಾಗಗಳಲ್ಲಿ ಹೊಸ ಹೊಸ ಪ್ರಕರಣಗಳು ಈಗಲೂ ಇವೆ ಮತ್ತು ಕೆಲವೊಮ್ಮೆ ಸಾಮಾಜಿಕ ಕಾರಣಗಳಿಂದ ಅವುಗಳನ್ನು ನಿರ್ಲಕ್ಷಿಸಲಾಗುತ್ತದೆ. ಪಾರ್ಕಿನ್ಸನ್ ಕಾಯಿಲೆಯು ರೋಗಿಯ ಶರೀರವು ನಿರಂತರವಾಗಿ ನಡುಗುವಂತೆ ಮಾಡಬಹುದು. ಹೆಚ್ಚಿನವರಲ್ಲಿ ಈ ರೋಗದ ಲಕ್ಷಣಗಳು ನಂತರದ ಹಂತಗಳಲ್ಲಿ ಕಂಡು ಬರುತ್ತವೆ. ಈ ರೋಗಪೀಡಿತರಿಗೆ ಕುಳಿತುಕೊಳ್ಳುವುದು ಮತ್ತು ನಿಂತುಕೊಳ್ಳುವುದು ಸೇರಿದಂತೆ ದೈನಂದಿನ ಚಟುವಟಿಕೆಗಳು ತುಂಬ ಕಷ್ಟವಾಗುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಮೂತ್ರವನ್ನು ನಿಯಂತ್ರಿಸುವಲ್ಲಿ ಸಮಸ್ಯೆಯೂ ಈ ರೋಗಕ್ಕೆ ಕಾರಣವಾಗುತ್ತದೆ ಎಂದು ಪಾರ್ಕಿನ್ಸನ್ ಯುಕೆ ತನ್ನ ವರದಿಯಲ್ಲಿ ಹೇಳಿದೆ.
► ಮಲ್ಟಿಪಲ್ ಸ್ಲೆರೊಸಿಸ್
ಮಲ್ಟಿಪಲ್ ಸ್ಲೆರೊಸಿಸ್ ಅಥವಾ ಬಹು ಅಂಗಾಂಶ ಗಟ್ಟಿಗೊಳ್ಳುವ ಕಾಯಿಲೆಯು ಮಿದುಳಿನ ರೋಗವಾಗಿದ್ದು,ಕೇಂದ್ರ ನರಮಂಡಲದ ಮೇಲೆ ದಾಳಿಯನ್ನು ಮಾಡುತ್ತದೆ. ಅದು ಒಂದು ವಿಧದ ಸ್ವರಕ್ಷಿತ ರೋಗವೂ ಹೌದು. ಅದು ರಕ್ತದ ಮೂಲಕ ಮಿದುಳನ್ನು ತಲುಪುತ್ತದೆ ಮತ್ತು ತನ್ನ ದುಷ್ಪರಿಣಾಮಗಳನ್ನು ತೋರಿಸತೊಡಗುತ್ತದೆ. ಆರಂಭದಲ್ಲಿ ಕೇವಲ ಊತವಷ್ಟೇ ಕಾಣಿಸಿಕೊಳ್ಳುತ್ತದೆ ಮತ್ತು ಕ್ರಮೇಣ ಅದು ದೇಹದ ರೋಗ ನಿರೋಧಕ ವ್ಯವಸ್ಥೆಯನ್ನು ಆಕ್ರಮಿಸಿಕೊಳ್ಳು ತ್ತದೆ. ವರದಿಗಳಂತೆ ಇಂದು ವಿಶ್ವಾದ್ಯಂತ ಸುಮಾರು 2.3 ಮಿಲಿಯ ಜನರು ಮಲ್ಟಿಪಲ್ ಸ್ಲೆರೊಸಿಸ್ನಿಂದ ನರಳುತ್ತಿದ್ದಾರೆ. ಈ ರೋಗವು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಶರೀರದ ನಿರೋಧಕ ಶಕ್ತಿಯು ಕಡಿಮೆಯಾದಾಗ ಈ ರೋಗವು ತನ್ನ ಹಿಡಿತವನ್ನು ಬಿಗಿಗೊಳಿಸುತ್ತದೆ. ಜೀವಕೋಶಗಳ ಬೆಳವಣಿಗೆಯು ಸ್ಥಗಿತಗೊಳ್ಳುತ್ತದೆ ಮತ್ತು ಮಿದುಳು ಬಳ್ಳಿಯಲ್ಲಿ ರಕ್ತ ಹೆಪ್ಪುಗಟ್ಟತೊಡಗುತ್ತದೆ. ಸಕಾಲದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಇದು ಕಾಯಂ ಅಂಗವೈಕಲ್ಯವನ್ನುಂಟು ಮಾಡುತ್ತದೆ.
► ಸೆರೆಬ್ರಲ್ ಪಾಲ್ಸಿ
ಸೆರೆಬ್ರಲ್ ಪಾಲ್ಸಿ ಅಥವಾ ಮಸ್ತಿಷ್ಕ ಪಾರ್ಶ್ವವಾಯುವು ಶರೀರದ ಭಾಗಗಳ ಚಲನೆಯನ್ನು ಮತ್ತು ದೈನಂದಿನ ಚಟುವಟಿಕೆಗಳನ್ನು ಕಷ್ಟವಾಗಿಸುತ್ತದೆ. ಸಕಾಲದಲ್ಲಿ ಈ ರೋಗವನ್ನು ಗುರುತಿಸಿ ಸೂಕ್ತ ಚಿಕಿತ್ಸೆಯನ್ನು ಪಡೆಯದಿದ್ದರೆ ವಿಕಲತೆಯು ಶರೀರದ ಇತರ ಅಂಗಗಳಿಗೂ ಹರಡುತ್ತದೆ. ಈ ರೋಗವು ವ್ಯಕ್ತಿಯ ಸಮತೋಲನ ಮತ್ತು ಚಲನವಲನಕ್ಕೆ ವ್ಯತ್ಯಯವನ್ನುಂಟು ಮಾಡುತ್ತದೆ ಮತ್ತು ಕ್ರಮೇಣ ಶರೀರಕ್ಕೆ ಸರಿಪಡಿಸಲಾಗದ ಹಾನಿಯನ್ನುಂಟು ಮಾಡುತ್ತದೆ.
► ಡ್ಯುಪ್ಯಿಟ್ರೆನ್ಸ್ ಕಾಯಿಲೆ
ಇದೊಂದು ಆನುವಂಶಿಕ ರೋಗವಾಗಿದ್ದು,ಹೆಚ್ಚಿನ ಜನರು ಇದರ ಹೆಸರನ್ನೇ ಕೇಳಿರಲಿಕ್ಕಿಲ್ಲ. ಈ ಸ್ಥಿತಿಯಲ್ಲಿ ಅಂಗೈಗಳಲ್ಲಿ ಗಾಯದಂತಹ ಅಂಗಾಂಶವು ರೂಪುಗೊಳ್ಳುತ್ತದೆ ಮತ್ತು ಇದರಿಂದಾಗಿ ಕೈಗಳು ಸೆಟೆದುಕೊಳ್ಳುತ್ತವೆ ಹಾಗೂ ಬೆರಳುಗಳು ಮುರುಟಿಕೊಳ್ಳುತ್ತವೆ. ಹೀಗಾದಾಗ ಸಾಮಾನ್ಯ ಚಟುವಟಿಕೆಗಳನ್ನು ನಡೆಸುವುದೂ ಕಷ್ಟವಾಗುತ್ತದೆ. ಕೈಗಳು ಮತ್ತು ಪಾದಗಳ ಜೊತೆಗೆ ಗುಪ್ತಾಂಗಗಳನ್ನೂ ಈ ರೋಗವು ಬಾಧಿಸುತ್ತದೆ.