ಕೆಎಸ್ಸಾರ್ಟಿಸಿಗೆ ಅಂತರ್‌ರಾಷ್ಟ್ರೀಯ ಪ್ರಶಸ್ತಿ: ಸಿಎಂ ಯಡಿಯೂರಪ್ಪ ಅಭಿನಂದನೆ
ಬೆಂಗಳೂರು, ಆ. 19: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ)ಗೆ ಪ್ರತಿಷ್ಠಿತ ‘ಸಿಎಂಓ ಏಷ್ಯಾ ಬ್ರಾಂಡ್ ಎಕ್ಸ್‌ಲೆನ್ಸಿ ಪ್ರಶಸ್ತಿ’ ಲಭಿಸಿದ್ದು, ಸಾರಿಗೆ ಸಂಸ್ಥೆಯ ಎಲ್ಲ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಚೇರಿಯಲ್ಲಿ ಸಿಎಂ ಕಾರ್ಯದರ್ಶಿ ಹಾಗೂ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿ, ನಿಗಮದ ಉಪಕ್ರಮವಾದ ಅಂಬಾರಿ ಡ್ರೀಮ್ ಕ್ಲಾಸ್-ಕನಸಿನೊಂದಿಗೆ ಪ್ರಯಾಣಿಸಿ ಎಂಬ ಬ್ರಾಂಡಿಂಗ್‌ಗೆ, CMO Asia Brand Excellence Award ಪ್ರಶಸ್ತಿ ಲಭಿಸಿರುವ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆ ಅಂಬಾರಿ ಡ್ರೀಮ್ ಕ್ಲಾಸ್ ಬಸ್ಸಿನ ಮಾಹಿತಿಯುಳ್ಳ ಕೈಪಿಡಿಯೊಂದಿಗೆ ಬಸ್ಸಿನ ಸೇವೆ ಮತ್ತು ವಿಶಿಷ್ಟತೆಯನ್ನು ವಿವರಿಸಿದರು. ಯಡಿಯೂರಪ್ಪನವರು ಸಂತಸ ವ್ಯಕ್ತಪಡಿಸಿ, ಸಾರಿಗೆ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು. ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ಇನ್ನೂ ಉತ್ತಮ ಸೇವೆ ಕಲ್ಪಿಸಲೆಂದು ಶುಭಾಶಯ ತಿಳಿಸಿದರು.