ಈ ಕಾಲೇಜಿನಲ್ಲೀಗ ನಿವೃತ್ತ ಪ್ರಾಂಶುಪಾಲರೂ ವಿದ್ಯಾರ್ಥಿ !
ಮಂಗಳೂರು, ಆ. 21: ಇದು ಕೊಂಚ ಆಶ್ಚರ್ಯವೆನಿಸಿದರೂ ಕುತೂಹಲಕಾರಿ. ಈ ಕಾಲೇಜಿನಲ್ಲೀಗ ನಿವೃತ್ತ ಪ್ರಾಂಶುಪಾಲರೂ ವಿದ್ಯಾರ್ಥಿ. ಅಷ್ಟು ಮಾತ್ರವಲ್ಲ, ಉಪನ್ಯಾಸಕರು, ವೈದ್ಯರು, ಗೃಹಿಣಿ, ನಿವೃತ್ತ ಬ್ಯಾಂಕ್ ಮ್ಯಾನೇಜರ್, ಮಿಸೆಸ್ ಇಂಡಿಯಾ ಟಾಪ್ ಮಾಡೆಲ್ 2019 ಪ್ರಶಸ್ತಿ ವಿಜೇತ ರೂಪದರ್ಶಿ ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ, ಸೇವೆ ಸಲ್ಲಿಸುತ್ತಿರುವ ಅನೇಕರು ಈ ಕಾಲೇಜಿನ ತರಗತಿಯಲ್ಲಿ ವಿದ್ಯಾರ್ಥಿಗಳೇ ! ಅಂದ ಹಾಗೆ, 60ರಿಂದ 72ರ ಹರೆಯದ ಹಿರಿಯರೂ ಈ ಸಾಲಿನಲ್ಲಿರುವುದು ಮತ್ತೊಂದು ವಿಶೇಷ!
ಜೀವನದಲ್ಲಿ ವೃತ್ತಿ ಜೀವನದ ಹಲವು ಮಜಲುಗಳು, ಅನುಭವಗಳು, ಘನತೆಗಳ ಹೊರತಾಗಿಯೂ ಮತ್ತೆ ವಿದ್ಯಾರ್ಥಿಗಳಾಗಲು ಇವರಿಗೆ ಪ್ರೇರಣೆ ನೀಡಿದ್ದು ತುಳು ಭಾಷೆ. ಆ ಭಾಷೆ ಮೇಲಿನ ಅಭಿಮಾನ, ಗೌರವ. ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೇರಿಸುವ ಕೂಗು ಮುಂದುವರಿದಿರುವಂತೆಯೇ ತುಳು ಭಾಷೆಯ ಮಹತ್ವಕ್ಕೂ ಒತ್ತು ನೀಡುವ ಪ್ರಕ್ರಿಯೆಗಳು ನಡೆಯುತ್ತಿವೆ. ಅದರ ಒಂದು ಭಾಗವೆಂಬಂತೆ ಈಗಾಗಲೇ ತುಳು ಭಾಷೆ ಐಚ್ಛಿಕ ವಿಷಯವಾಗಿ ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ ಪದವಿವರೆಗೆ ಕಲಿಸಲಾಗುತ್ತಿದೆ.
ಮಂಗಳೂರು ವಿಶ್ವವಿದ್ಯಾನಿಲಯ 2018-19ನೇ ಸಾಲಿನಿಂದ ತುಳು ಎಂಎ ಕೋರ್ಸ್ ಆರಂಭಿಸಿದೆ. ನಗರದ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಸಂಜೆ ತರಗತಿಗಳು ನಡೆಯುತ್ತಿದ್ದು, ಅಲ್ಲಿ ಯಾವುದೇ ವಯಸ್ಸಿನ ಬೇಧವಿಲ್ಲದೆ, ಪ್ರತಿಷ್ಠೆಯ ಅಹಂ ಇಲ್ಲದೆ ಸಾಮಾನ್ಯ ವಿದ್ಯಾರ್ಥಿಗಳಂತೆ ಇವರೆಲ್ಲಾ ತುಳು ಭಾಷೆಯ ಸ್ನಾತಕೋತ್ತರ ಪದವಿಯನ್ನು ಅಭ್ಯಸಿಸುತ್ತಿದ್ದಾರೆ. ಸದ್ಯ 38 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಪ್ರಥಮ ವರ್ಷದಲ್ಲಿ 20 ಮತ್ತು ದ್ವಿತೀಯ ವರ್ಷದಲ್ಲಿ 18 ಮಂದಿ ಕಲಿಯುತ್ತಿದ್ದಾರೆ.
ಬೆಳಗ್ಗಿನಿಂದ ಸಂಜೆಯವರೆಗೆ ತಮ್ಮ ವೃತ್ತಿ ನಿಭಾಯಿಸಿ ಆಯಾಸಗೊಂಡಿದ್ದರೂ ಸಂಜೆ ತುಳು ಭಾಷೆಯ ಮೇಲಿನ ಅಭಿಮಾನದಿಂದ ಹೊಸ ಹುರುಪಿನಿಂದಲೇ ತರಗತಿಗೆ ಆಗಮಿಸುತ್ತಾರೆ. ಅಪ್ಪಟ ವಿದ್ಯಾರ್ಥಿಗಳಂತೆ ಕೈಯಲ್ಲಿ ಪೆನ್ನು, ಪುಸ್ತಕ ಹಿಡಿದು ಅಧ್ಯಯನ ಮಾಡುತ್ತಾರೆ.
ತುಳುವಿನ ಮಹತ್ವ, ಗರಿಮೆ, ಅದರ ಆಳವನ್ನು ಅಧ್ಯಯನ ಮಾಡುವುದಕ್ಕಾಗಿ ಕನ್ನಡ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ವಾಣಿಜ್ಯಶಾಸ್ತ್ರ, ಎಂಸಿಜೆ, ಇತಿಹಾಸ ಹೀಗೆ ವಿವಿಧ ಸ್ನಾತಕೋತ್ತರ ಪದವಿ ಪಡೆದು ಎನ್‌ಇಟಿ, ಎಂಫಿಲ್ ಮುಗಿಸಿ ವಿವಿಧ ವಿಷಯಗಳಲ್ಲಿ ಉಪನ್ಯಾಸಕರಾಗಿರುವವರೂ ತುಳು ಎಂಎ ವಿದ್ಯಾರ್ಥಿಗಳು. ಬಿಎ, ಬಿಕಾಂ ಪದವೀಧರರೂ ತುಳು ಎಂಎ ಕೋರ್ಸ್‌ನ ಅಧ್ಯಯನ ಮಾಡುತ್ತಿದ್ದಾರೆ.
ಹಿರಿಯ ಸಾಹಿತಿ ಡಾ .ಕಯ್ಯರ ಕಿಂಞಣ್ಣ ರೈಯವರ ಹಾಡಿನಂತೆ ‘ಏತ್ ಪೊರ್ಲುದ ಬಾಸೆ ನಮ್ಮ ತುಳು ಸಾರೊ ಎಸಳ್‌ದ ತಾಮರೆ. ಪಂಡಿಬಾಯಿಡ್ ಕೇಂಡಿ ಕೆಬಿಟ್ ಉರ್ಕುಂಡಮೃತೊದ ನುರೆ ನುರೆ’... ತುಳು ಭಾಷೆಯ ಹಿರಿಮೆ, ಗರಿಮೆಗೆ ಸಾಟಿಯೇ ಇಲ್ಲ. ಈ ಅಭಿಮಾನದ, ಹೆಮ್ಮೆಯ ನುಡಿಗಳು ಈ ತುಳು ಕಲಿಯುವ, ಕಲಿಸುವರದ್ದು ಕೂಡಾ.
ತುಳು ಭಾಷೆ ಸಾಗರದಂತೆ
‘‘ತುಳು ಭಾಷೆ ಒಂದು ಸಾಗರವಿದ್ದಂತೆ, ಅದರಲ್ಲಿ ಕಲಿಯಬೇಕಾದ್ದು ತುಂಬಾ ಇದೆ. ನಾನು ಕೇವಲ ತುಳು ಎಂಎ ಪದವಿ ಪಡೆಯುವ ಉದ್ದೇಶದಿಂದ ಬರುತ್ತಿಲ್ಲ. ನಮ್ಮ ಭಾಷೆ ನಮ್ಮ ಸಂಸ್ಕೃತಿಯ ಬಗೆಗಿನ ಅಭಿಮಾನ, ಅದರ ಬಗೆಗೆ ಆಳವಾಗಿ ತಿಳಿದುಕೊಳ್ಳುವ ಆಸಕ್ತಿಯಿದೆ’’ ಎನ್ನುವುದು ವುಣಿ ಎಂ. ರೈ ಅವರ ಹೆಮ್ಮೆಯ ನುಡಿ.
‘‘ತುಳುವರಾಗಿ ತುಳುನಾಡಿನಲ್ಲಿ ನಾವು ಹಲವು ಆಚರಣೆಗಳನ್ನು ಆಚರಿಸಿಕೊಂಡು ಬರುತ್ತಿದ್ದರೂ ಕೆಲವು ಆಚರಣೆಗಳ ಹಿನ್ನೆಲೆ, ಯಾಕಾಗಿ ಆಚರಿಸುತ್ತೇವೆ ಎಂಬ ಕಲ್ಪನೆಯೇ ಇಲ್ಲ. ಅದಕ್ಕೊಂದು ಈ ಅವಕಾಶ’’ ಎನ್ನುತ್ತಾರವರು. ಗಲ್ಫ್‌ನಲ್ಲಿ ಉದ್ಯೋಗವನ್ನು ತೊರೆದು ಇದೀಗ ಮಂಗಳೂರಿನಲ್ಲಿ ನೆಲೆಸಿರುವ ಅವರು, ತುಳು ಎಂಎ ಪ್ರಥಮ ವರ್ಷದ ವಿದ್ಯಾರ್ಥಿ.
ಬಗೆದಷ್ಟು ಮೊಗೆಯುವುದು ತುಳು
‘‘ತುಳು ನಮ್ಮ ಮಣ್ಣಿನ ಭಾಷೆ. ಆದರೆ ಅದರೊಳಗೆ ಅರಿಯುವ, ತಿಳಿಯುವ ವಿಷಯಗಳು ಇನ್ನಷ್ಟು ತಿಳಿಯಬೇಕಿದೆ. ಅದಕ್ಕಾಗಿ ಸೇರಿದ್ದೇನೆ ’’ ಎನ್ನುವುದು ಎರಡನೇ ವರ್ಷದ ತುಳು ಎಂಎ ಮಾಡುತ್ತಿರುವ ರಾಮಕುಂಜ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಸುಭಾಶ್ಚಂದ್ರ ಕಣ್ವತೀರ್ಥ ಅಭಿಪ್ರಾಯ. ತುಳು ಕಲಿಕೆಯೊಂದಿಗೆ ತುಳು ನಾಡಗೀತೆ ರಚನೆಯ ಕಾರ್ಯದಲ್ಲೂ ಇವರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕಲಿಕೆಗೆ ವಯಸ್ಸಿನ ಹಂಗಿಲ್ಲ
‘‘ನಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಹೆಮ್ಮೆಯಿದೆ. ತುಳು ಭಾಷೆಯಲ್ಲಿ ಎಂಎ ಮಾಡಬೇಕೆಂಬ ಹಂಬಲ ಇತ್ತು. ನನಗೀಗ 72 ವರ್ಷ. ಈ ವಯಸ್ಸಿನಲ್ಲೆಂತ ಕಲಿಕೆ ಎಂದು ಮೂದಲಿಸುವವರೂ ಇದ್ದಾರೆ. ಆದರೆ ಕಲಿಕೆಗೆ ವಯಸ್ಸಿನ ಹಂಗಿಲ್ಲ ಎನ್ನುತ್ತಾರೆ ಹಿರಿಯ ನಾಟಕಕಾರ ಶಿವಾನಂದ ಕರ್ಕೇರಾ. ಇವರು ಇಲ್ಲಿ ಸದ್ಯ ತುಳು ಎಂಎ ದ್ವಿತೀಯ ವರ್ಷದ ವಿದ್ಯಾರ್ಥಿ.
ವಿಶ್ವಮಾನ್ಯತೆ ಸಿಗಲಿ
ತುಳು ಭಾಷೆಗೆ ವಿಶ್ವಮಾನ್ಯತೆ ಸಿಗಬೇಕು. ಅದು ಸಿಗುತ್ತದೆ ಎಂಬ ವಿಶ್ವಾಸವಿದೆ. ಆದ್ದರಿಂದ ತುಳು ಭಾಷೆಯಲ್ಲಿ ಸಂಶೋಧನೆಗಳು ಹೆಚ್ಚಾಗಿ ನಡೆಯಬೇಕು. ಇದಕ್ಕೆ ತುಳು ಅಕಾಡೆಮಿ ಬೆಂಬಲವಾಗಿ ನಿಲ್ಲಬೇಕು.
ಸುಭಾಶ್ಚಂದ್ರ ಕಣ್ವತೀರ್ಥ,
ರಾಮಕುಂಜ ಕಾಲೇಜಿನ ನಿವೃತ್ತ ಪ್ರಾಂಶುಪಾಲರು
ಮತ್ತು ತುಳು ಎಂಎ ದ್ವಿತೀಯ ವರ್ಷದ ವಿದ್ಯಾರ್ಥಿ
ತುಳು ಸಂಶೋಧನೆ ಹೆಚ್ಚಾಗಲಿ
ತುಳು, ಪರಂಪರೆ, ಸಂಸ್ಕೃತಿ ಸೇರಿದಂತೆ ವಿವಿಧ ವಿಷಯಗಳ ತಿಳುವಳಿಕೆ ನೀಡುವ ಶಿಕ್ಷಣ. ತುಳು ಸಂಸ್ಕೃತಿಯನ್ನು ಬೆಳೆಸುವ ಆಯಾಮಗಳು ಇಲ್ಲಿವೆ. ಈ ನೆಲೆಯಲ್ಲಿಯೇ ಪಠ್ಯಕ್ರಮ ರೂಪಿಸಲಾಗಿದೆ. ಸ್ಥಳೀಯ ಚರಿತ್ರೆಗೆ ಆದ್ಯತೆ ನೀಡಲಾಗಿದೆ. ತುಳುವಿನಲ್ಲಿ ಹೆಚ್ಚಿನ ಸಂಶೋಧನೆಗಳಾಗಬೇಕು. ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಮುಂದೆ ಈ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂಬ ಸದುದ್ದೇಶದಿಂದ ಸಂಶೋಧನೆಗೆ ಒತ್ತು ನೀಡಲಾಗಿದೆ. ತುಳುವಿನ ಮೂಲ ಪರಂಪರೆಯನ್ನು ಆಧುನಿಕತೆ ಜೊತೆ ಮೈಗೂಡಿಸಿಕೊಂಡಾಗ ನಮ್ಮ ಶಕ್ತಿ ಏನು ಎಂಬುದರ ಅರಿವಾಗಲು ಸಾಧ್ಯ. ವಿವಿಧ ಉದ್ಯೋಗಗಳಲ್ಲಿ ತೊಡಗಿಕೊಂಡು ಸಂಜೆಯ ವೇಳೆಗೆ ಕಲಿಯಲು ಬರುವ ಈ ವಿದ್ಯಾರ್ಥಿಗಳು ಯಾವುದೇ ಹಮ್ಮು ಇಲ್ಲದೆ ಆಸಕ್ತಿಯಿಂದ ಪಾಠದಲ್ಲಿ ತಲ್ಲೀನರಾಗುತ್ತಾರೆ. ಹೊಸತನ್ನು ತಿಳಿಯುವ ಆಸಕ್ತಿ ಅವರಲ್ಲಿದೆ.
-ಡಾ.ಬಿ.ಶಿವರಾಮ ಶೆಟ್ಟಿ, ಪ್ರಾಧ್ಯಾಪರು ಮತ್ತು ವಿಭಾಗ ಸಂಯೋಜಕರು.