ರಾಜಧಾನಿಯಲ್ಲಿ ಅಧಿಕವಾಗುತ್ತಿದೆ ಸಂಚಾರ ದಟ್ಟಣೆ: ಸಾರ್ವಜನಿಕರಿಂದ ದೂರುಗಳ ಸುರಿಮಳೆ
‘ಜನಸ್ಪಂದನ-2019’ ಕಾರ್ಯಕ್ರಮ
ಬೆಂಗಳೂರು, ಆ.24: ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಅಧಿಕವಾಗುತ್ತಿರುವ ಸಂಚಾರ ದಟ್ಟಣೆ ಸಂಬಂಧ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಭೆ ನಡೆಸಿ ಚರ್ಚಿಸಿದರು.
ಶನಿವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸಂಚಾರ ಪೊಲೀಸ್ ಇಲಾಖೆ ಆಯೋಜಿಸಿದ್ದ ‘ಜನಸ್ಪಂದನ-2019’ ಕಾರ್ಯಕ್ರಮದಲ್ಲಿ ಬಿಬಿಎಂಪಿ, ಬಿಡಿಎ, ಬಿಎಂಟಿಸಿ, ಬೆಸ್ಕಾಂ ಹಾಗೂ ಬಿಎಂಆರ್‌ಸಿಎಲ್ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಸಲಹೆಗಳನ್ನು ನೀಡಿದರು.
ಅಡ್ಡಾದಿಡ್ಡಿಯಾಗಿ ಬೈಕ್, ಸೈಕಲ್ ನಿಲ್ದಾಣ, ಅವೈಜ್ಞಾನಿಕ ರಸ್ತೆ ಉಬ್ಬುಗಳ ನಿರ್ಮಾಣ, ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ ಪಾರ್ಕ್ ನಿರ್ಮಾಣ, ನೋ ಪಾರ್ಕಿಂಗ್ ಜಾಗದಲ್ಲೂ ವಾಹನಗಳು ನಿಂತಿರುತ್ತವೆ. ಅನಗತ್ಯವಾಗಿ ಬಹಳಷ್ಟು ಕಡೆ ರಸ್ತೆ ವಿಭಜಕ ನಿರ್ಮಿಸಲಾಗಿದೆ ಎಂದೆಲ್ಲಾ ಆರೋಪಿಸಿ ಸಾರ್ವಜನಿಕರು ದೂರು ಸಲ್ಲಿಸಿದರು.
ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುವ ವಾಹನಗಳು ನಿಯಮ ಪಾಲಿಸುತ್ತಿಲ್ಲ, ರಸ್ತೆ ಗುಂಡಿಗಳು ಹೆಚ್ಚಾಗಿವೆ. ಗಾಂಜಾ ಹಾಗೂ ಮಾದಕ ವಸ್ತುಗಳ ಹಾವಳಿಯೂ ನಿಂತಿಲ್ಲ. ಮೆಟ್ರೋ ಸ್ಟೇಷನ್ ಕೆಳಗೆ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಬೇಡಿ ಸೇರಿದಂತೆ ಹಲವು ಸಲಹೆಗಳು ಸಹ ಸಭೆಯಲ್ಲಿ ಕೇಳಿ ಬಂದವು.
ವಾಟ್ಸ್ ಆ್ಯಪ್: ಮದ್ಯ ಸೇವಿಸಿ ವಾಹನ ಚಲಾಯಿಸುವ ಯುವಕರು ಪೊಲೀಸರಿಂದ ತಪ್ಪಿಸಿಕೊಳ್ಳಲು ವಾಟ್ಸ್ ಆ್ಯಪ್ ಗ್ರೂಪ್ ಮಾಡಿಕೊಂಡಿದ್ದು, ಎಲ್ಲೆಲ್ಲಿ ತಪಾಸಣೆ ನಡೆಯುತ್ತಿದೆ ಎಂಬ ಮಾಹಿತಿಯನ್ನು ಹಂಚಿಕೊಂಡು ಬೇರೆ ದಾರಿಯಲ್ಲಿ ಹೋಗುತ್ತಿದ್ದಾರೆಂದು ಸಾರ್ವಜನಿಕರು ಪೊಲೀಸ್ ಆಯುಕ್ತರಿಗೆ ತಿಳಿಸಿದರು.
ನಗರದ ಹೊರವಲಯ ಹಾಗೂ ಪ್ರಮುಖ ಪ್ರದೇಶಗಳಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಸುಲ್ತಾನ್ ಪೇಟೆ, ಚಿಕ್ಕಪೇಟೆಗಳಲ್ಲಿ ರಸ್ತೆ ಅಗೆದು ಮಣ್ಣನ್ನು ನಡು ರಸ್ತೆಯಲ್ಲಿ ಬಿಟ್ಟಿದ್ದಾರೆ. ಇದರಿಂದ ಸಾರ್ವಜನಿಕರು ಓಡಾಡುವುದು ಕಷ್ಟವಾಗುತ್ತಿದೆ ಎಂದು ಸಾರ್ವಜನಿಕರೊಬ್ಬರೂ ಮನವರಿಕೆ ಮಾಡಿದರು.
ನಂತರ ಸಮಸ್ಯೆ ಆಲಿಸಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ಸಾರ್ವಜನಿಕರು ಮತ್ತು ಸ್ವಯಂ ಸೇವಾ ಸಂಸ್ಥೆಯವರು ಸಂಚಾರಿ ನಿಯಮ ಹಾಗೂ ಸಮಸ್ಯೆಗಳ ಬಗ್ಗೆ ನೀಡಿರುವ ಸಲಹೆ ಮತ್ತು ಸೂಚನೆಗಳನ್ನು ಪಾಲಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರು ನೀಡಿದ ಸಂಚಾರಿ ನಿಯಮಗಳು ಮತ್ತು ಸಮಸ್ಯೆಗಳ ಬಗ್ಗೆ ದೂರು ಮತ್ತು ಸಲಹಾ ಸೂಚನೆಗಳನ್ನು ಆಲಿಸಿದ ಅಧಿಕಾರಿಗಳು, ತಮ್ಮ ಸಲಹೆಗಳನ್ನು ಪರಿಹರಿಸಿಕೊಡುವುದಾಗಿ ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ, ಉಪಪೊಲೀಸ್ ಆಯುಕ್ತ ಕೆ.ವಿ.ಜಗದೀಶ್, ಸಂಚಾರಿ ವಲಯದ ಪೊಲೀಸ್ ಅಧಿಕಾರಿಗಳಾದ ಸೌಮ್ಯಲತಾ, ಸಾರಾ ಫಾತೀಮಾ ಸೇರಿದಂತೆ ಪ್ರಮುಖರಿದ್ದರು.
ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಜನಸ್ಪಂದನ ಕಾರ್ಯಕ್ರಮ ನಡೆಸಿ ಜನರ ಸಮಸ್ಯೆಗಳ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಸಭೆಯಲ್ಲಿ ನಾಗರಿಕರು ವಿವಿಧ ಸಮಸ್ಯೆ ಹಾಗೂ ಸಲಹೆಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಮಸ್ಯೆಗಳ ಪರಿಹಾರಕ್ಕಾಗಿ ನಡೆಸಿ ಕ್ರಮ ಕೈಗೊಳ್ಳಲಾಗುವುದು.
-ಭಾಸ್ಕರ್ ರಾವ್, ನಗರ ಪೊಲೀಸ್ ಆಯುಕ್ತ.