ಡೆಂಗ್ ಮತ್ತು ಮಲೇರಿಯಾ ನಡುವಿನ ಈ ವ್ಯತ್ಯಾಸಗಳು ನಿಮಗೆ ತಿಳಿದಿರಲಿ
ಡೆಂಗ್ ಮತ್ತು ಮಲೇರಿಯಾ ರೋಗಗಳಿಗೆ ಸೊಳ್ಳೆ ಕಡಿತ ಕಾರಣವಾಗಿದೆಯಾದರೂ ಅವುಗಳು ಪರಸ್ಪರ ಭಿನ್ನವಾಗಿವೆ.
ಮಳೆಗಾಲ ಬಂತೆಂದರೆ ಮಲೇರಿಯಾ ಮತ್ತು ಡೆಂಗ್ ನಂತಹ ಸೊಳ್ಳೆಗಳ ಕಾಟದಿಂದ ಉಂಟಾಗುವ ರೋಗಗಳ ಪ್ರಕರಣಗಳು ಹೆಚ್ಚುತ್ತವೆ. ಸೋಂಕಿಗೊಳಗಾದ ಸೊಳ್ಳೆ ಕಡಿತ ಈ ರೋಗಗಳನ್ನು ಆಹ್ವಾನಿಸುತ್ತದೆ. ತುಲನಾತ್ಮಕವಾಗಿ ಇವೆರಡೂ ರೋಗಗಳು ಒಂದೇ ಬಗೆಯ ಲಕ್ಷಣಗಳನ್ನು ತೋರಿಸುತ್ತವೆ ಮತ್ತು ಜ್ವರ ಪ್ರಮುಖ ಲಕ್ಷಣವಾಗಿದೆ. ಜ್ವರದ ಸ್ವರೂಪ ಭಿನ್ನವಾಗಿದ್ದರೂ ಡೆಂಗ್ ಜ್ವರ ಮತ್ತು ಮಲೇರಿಯಾ ಜ್ವರಗಳನ್ನು ನಿಖರವಾಗಿ ಗುರುತಿಸುವುದು ಕಷ್ಟವಾಗುತ್ತದೆ.
ರೋಗಿಗೆ ಸರಿಯಾದ ಚಿಕಿತ್ಸೆಯನ್ನು ನೀಡಲು ಮೊದಲು ರೋಗನಿರ್ಧಾರವು ಮುಖ್ಯವಾಗುತ್ತದೆ. ರೋಗಿಯು ತನಗೆ ಮಲೇರಿಯಾ ಉಂಟಾಗಿದೆಯೆಂದು ಭಾವಿಸಬಹುದು,ಆದರೆ ಅಸಲಿಗೆ ಅದು ಡೆಂಗ್ ಆಗಿರಬಹುದು. ಎರಡೂ ರೋಗಗಳ ಕಾರಣಗಳು,ಲಕ್ಷಣಗಳು,ರೋಗ ತಗಲಲು ಅಗತ್ಯ ಕಾಲಾವಧಿ ಮತ್ತು ಚಿಕಿತ್ಸೆಯ ಬಗ್ಗೆ ಅಗತ್ಯ ಮಾಹಿತಿಗಳಿಲ್ಲಿವೆ......
ಕಾರಣಗಳು
ಸೋಂಕಿಗೊಳಗಾದ ಈಡಿಸ್ ಈಜಿಪ್ಟೈ ಸೊಳ್ಳೆಯು ಮಾರಣಾಂತಿಕ ಡೆಂಗ್ಯುವನ್ನುಂಟು ಮಾಡುತ್ತದೆ. ಡೆಂಗ್ ವೈರಸ್ ಪೀಡಿತ ವ್ಯಕ್ತಿಯನ್ನು ಕಚ್ಚಿದ ಸೊಳ್ಳೆಯು ಇತರರನ್ನು ಕಚ್ಚಿದರೆ ಅವರಿಗೂ ಈ ರೋಗವು ಹರಡುತ್ತದೆ.
ಮಲೇರಿಯಾ ಹೆಣ್ಣು ಅನಫಿಲಿಸ್ ಸೊಳ್ಳೆಯ ಕಡಿತದಿಂದ ಉಂಟಾಗುತ್ತದೆ. ಡೆಂಗ್ ಇತರ ಸೊಳ್ಳೆಗಳಿಂದ ಹರಡಿದರೆ ಮಲೇರಿಯಾ ಹೆಣ್ಣು ಅನಫಿಲಿಸ್ ಸೊಳ್ಳೆಗಳಿಂದ ಮಾತ್ರ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ರಾತ್ರಿ ವೇಳೆಯಲ್ಲಿ ದಾಳಿಯಿಡುತ್ತವೆ.
ಲಕ್ಷಣಗಳು
ಡೆಂಗ್ ಪ್ರಕರಣದಲ್ಲಿ ದಿಢೀರನೆ ಜ್ವರ ಉಂಟಾಗುತ್ತದೆ ಮತ್ತು ಸುಮಾರು ಏಳು ದಿನಗಳ ಕಾಲ ಇರುತ್ತದೆ. ಈ ಜ್ವರವು 103.1ರಿಂದ 106.52 ಡಿಗ್ರಿ ಫ್ಯಾರೆನ್ಹೀಟ್ವರೆಗೂ ಏರಬಹುದು ಮತ್ತು ತಲೆನೋವುಗಳು ಹಾಗೂ ಮಾಂಸಖಂಡ ಅಥವಾ ಮೂಳೆ ನೋವು ಸಹ ಕಾಡುತ್ತವೆ. ಈ ಜ್ವರವು ಮಾಯವಾಗಬಹುದು ಮತ್ತು ಚರ್ಮದಲ್ಲಿ ದದ್ದುಗಳೊಂದಿಗೆ ಮತ್ತೆ ಕಾಣಿಸಿಕೊಳ್ಳಬಹುದು. ವಾಕರಿಕೆ,ವಾಂತಿ,ಹಸಿವು ಕ್ಷೀಣಿಸುವಿಕೆ,ಕಣ್ಣುಗಳಲ್ಲಿ ನೋವು ಹಾಗೂ ಕೈಕಾಲುಗಳಲ್ಲಿ ದದ್ದುಗಳು ಡೆಂಗ್ಯುವಿನ ಇತರ ಲಕ್ಷಣಗಳಾಗಿವೆ.
ಮಲೇರಿಯಾ ಉಂಟಾದಾಗ ಜ್ವರವು ಸ್ವಲ್ಪ ಸಮಯದವರೆಗೆ ಇರುತ್ತದೆ. ಚಳಿ, ರಕ್ತಹೀನತೆ, ಸಂದುಗಳಲ್ಲಿ ನೋವು, ವಾಂತಿ, ಸೆಳವುಗಳು ಮತ್ತು ಬೆವರುವಿಕೆ ಮಲೇರಿಯಾದ ಇತರ ಲಕ್ಷಣಗಳಲ್ಲಿ ಸೇರಿವೆ. ಮಲೇರಿಯಾದ ಲಕ್ಷಣಗಳು ಸಾಮಾನ್ಯವಾಗಿ ಕೋಲ್ಡ್ ಸ್ಟೇಜ್, ಹಾಟ್ ಸ್ಟೇಜ್ ಮತ್ತು ಸ್ವೆಟಿಂಗ್ ಸ್ಟೇಜ್ ಎಂಬ ಮೂರು ಹಂತಗಳಲ್ಲಿ ಗೋಚರಿಸುತ್ತವೆ. ಮೊದಲ ಹಂತದಲ್ಲಿ ಶರೀರವು ದಿಢಿರನೆ ತಣ್ಣಗಾದ ಅನುಭವವುಂಟಾಗುತ್ತದೆ. ನಂತರ ಜ್ವರ ಬರುತ್ತದೆ ಮತ್ತು ಅಂತಿಮ ಹಂತದಲ್ಲಿ ಮೈ ಬೆವರುತ್ತದೆ.
ರೋಗನಿರ್ಧಾರ
ಮಲೇರಿಯಾ ಮತ್ತು ಡೆಂಗ್ ರೋಗಗಳನ್ನು ನಿರ್ಧರಿಸಲು ವಿಭಿನ್ನ ಕ್ರಮಗಳನ್ನು ಅನುಸರಿಸಲಾಗುತ್ತದೆ. ಮಲೇರಿಯಾವನ್ನು ರಕ್ತಪರೀಕ್ಷೆಯಲ್ಲಿ ಸೂಕ್ಷ್ಮದರ್ಶಕದಲ್ಲಿ ಕಂಡು ಬರುವ ರೋಗಾಣುಗಳಿಂದ ಖಚಿತಪಡಿಸಿ ಕೊಳ್ಳಲಾಗುತ್ತದೆ. ಡೆಂಗ್ಯುವನ್ನು ನಿರ್ಧರಿಸಲು ಎಲಿಸಾ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದಕ್ಕಾಗಿ ರೋಗಿಯ ಶರೀರದಲ್ಲಿನ ನಿರೋಧಕ ವ್ಯವಸ್ಥೆಯಲ್ಲಿನ ಪ್ರತಿಕಾಯಗಳು ಮತ್ತು ರಾಸಾಯನಿಕಗಳನ್ನು ವಿಶ್ಲೇಷಣೆಗೊಳ ಪಡಿಸಲಾಗುತ್ತದೆ.
ಚಿಕಿತ್ಸೆ
ಮಲೇರಿಯಾದ ಚಿಕಿತ್ಸೆಗಾಗಿ ಮಲೇರಿಯಾ ನಿಗ್ರಹ ಔಷಧಿಗಳು ಲಭ್ಯವಿವೆ. ಆದರೆ ಡೆಂಗ್ ಚಿಕಿತ್ಸೆಗೆ ಯಾವುದೇ ನಿರ್ದಿಷ್ಟ ಔಷಧಿಯಿಲ್ಲ. ಪ್ಲೇಟ್ಲೆಟ್ ಮರುಪೂರಣ ಮತ್ತು ದ್ರವ ಪುನರುಜ್ಜೀವನದಂತಹ ಪೂರಕ ಕ್ರಮಗಳ ಮೂಲಕ ಡೆಂಗ್ ಗೆ ಚಿಕಿತ್ಸೆ ನೀಡಲಾಗುತ್ತದೆ.
ಅವಧಿ
ಸೊಳ್ಳೆಯು ಕಡಿದ 10ರಿಂದ 15 ದಿನಗಳಲ್ಲಿ ವ್ಯಕ್ತಿಯಲ್ಲಿ ಮಲೇರಿಯಾ ಲಕ್ಷಣಗಳು ಪ್ರಕಟಗೊಂಡರೆ ಡೆಂಗ್ ಪ್ರಕರಣ ದಲ್ಲಿ ಸೋಂಕುಪೀಡಿತ ಸೊಳ್ಳೆಯು ಕಚ್ಚಿದ ನಾಲ್ಕೈದು ದಿನಗಳಲ್ಲಿಯೇ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ತಡೆ
ರೋಗಕ್ಕೆ ಚಿಕಿತ್ಸೆೆಗಿಂತ ಅದು ಬರದಂತೆ ಮುನ್ನೆಚ್ಚರಿಕೆ ವಹಿಸುವುದು ಯಾವಾಗಲೂ ಒಳ್ಳೆಯದು. ಸೊಳ್ಳೆ ನಿವಾರಕಗಳ ಬಳಕೆ,ಮನೆಯ ಆವರಣದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು,ಸೊಳ್ಳೆ ಕಡಿತಕ್ಕೆ ಆಸ್ಪದ ನೀಡದಿರಲು ಉದ್ದ ತೋಳಿನ ಅಂಗಿಗಳನ್ನು ಧರಿಸುವುದು ಮತ್ತು ಇಡೀ ಮೈಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳುವದು ಇತ್ಯಾದಿ ಮುನ್ನೆಚ್ಚರಿಕೆ ಕ್ರಮಗಳು ಈ ರೋಗಗಳಿಗೆ ತುತ್ತಾಗುವ ಅಪಾಯವನ್ನು ತಗ್ಗಿಸುತ್ತವೆ.