ಆರ್ಥಿಕ ಹಿಂಜರಿತಕ್ಕೆ ಕನ್ನಡಿ ಹಿಡಿದ ಪಾರ್ಲೆ- ಜಿ ಬಿಕ್ಕಟ್ಟು
ಮಾರುಕಟ್ಟೆಯಲ್ಲಿ ಯಾವುದೇ ಉತ್ಪನ್ನವು ಇಂತಹ ಸಮಸ್ಯೆಗಳನ್ನು ಎದುರಿಸುವುದು ಸಹಜವಾದುದಾಗಿದೆ. ಕಂಪೆನಿಯು ಹಲವಾರು ವರ್ಷಗಳಿಂದ ತನ್ನ ನಾಯಕ ಸ್ಥಾನವನ್ನು ಕಾಯ್ದುಕೊಳ್ಳುತ್ತಾ ಬಂದಿದೆ ಹಾಗೂ ವಿಸ್ತರಿಸಿಕೊಂಡಿದೆ. ಆದರೆ ಬದಲಾಗುತ್ತಿರುವ ಜನಸಾಮಾನ್ಯರ ಅಭಿರುಚಿಗಳು ಅದರ ಮೇಲೆ ಪರಿಣಾಮವನ್ನು ಬೀರಿರಲಿಲ್ಲ. ಆದರೆ ಸರಕಾರದ ನೀತಿಗಳು ಮಾತ್ರ ಪಾರ್ಲೆಜಿ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಿವೆ. ಜಿಎಸ್ಟಿಯ ಹೇರಿಕೆಯ ಉತ್ಪನ್ನಗಳ ದರಗಳು ಏರಿಕೆಯಾಗುವಂತೆ ಮಾಡಿವೆ ಹಾಗೂ ನಿರುದ್ಯೋಗ ಮತ್ತು ಉದ್ಯೋಗನಷ್ಟವನ್ನು ಹೆಚ್ಚಿಸಿವೆ.
ತನ್ನ ಹತ್ತು ಸಾವಿರ ಮಂದಿ ಉದ್ಯೋಗಿಗಳನ್ನು ತೆಗೆದುಹಾಕಲು ನಿರ್ಧರಿಸಿರುವುದಾಗಿ ಪಾರ್ಲೆ ಪ್ರಾಡಕ್ಟ್ಸ್ ಸಂಸ್ಥೆಯ ಘೋಷಣೆಯು, ಆಟೋಮೊಬೈಲ್ ಕ್ಷೇತ್ರದಲ್ಲಿ ಉಂಟಾಗಿರುವ ಆರ್ಥಿಕ ಹಿಂಜರಿತದ ಸುದ್ದಿಯಷ್ಟೇ ದೊಡ್ಡ ಮಟ್ಟದಲ್ಲಿ ಕೋಲಾಹಲವನ್ನು ಎಬ್ಬಿಸಿದೆ. ತನ್ನ ಬಿಸ್ಕತ್ ಉತ್ಪನ್ನಗಳ ಬೇಡಿಕೆಯು ಕುಸಿಯತೊಡಗಿದ್ದು, ಸರಕಾರದ ನೀತಿಗಳು ಬಿಕ್ಕಟ್ಟನ್ನು ಇನ್ನಷ್ಟು ಉಲ್ಬಣಿಸಿದೆಯೆಂದು ಕಂಪೆನಿಯು ತಿಳಿಸಿದೆ.
ಖಂಡಿತವಾಗಿಯೂ ಜನಸಾಮಾನ್ಯರು ಬಿಸ್ಕತ್ ಪೊಟ್ಟಣವನ್ನು ಖರೀದಿಸಲು ಶಕ್ತರಲ್ಲವೇ ಎಂದು ಯಾರಾದರೂ ಪ್ರಶ್ನಿಸಬಹುದು. ಖಂಡಿತವಾಗಿಯೂ ಅದು ನಿಜ. ಆದರೆ ಈ ಸುದ್ದಿಯು ಗಾಢವಾದ ಸಮಸ್ಯೆಯೊಂದು ತಲೆಯೆತ್ತಿರುವ ಸುಳಿವನ್ನು ನೀಡುತ್ತದೆ. ಜನತೆಯ ಖರೀದಿ ಸಾಮರ್ಥ್ಯವು ಎಷ್ಟರ ಮಟ್ಟಿಗೆ ಇಳಿದಿದೆಯೆಂದರೆ ಅವರು ಈಗ ಸಣ್ಣ ಬೆಲೆಯ ಉತ್ಪನ್ನಗಳನ್ನು ಖರೀದಿಸಲು ಕೂಡಾ ಹಿಂದೆ ಮುಂದೆ ನೋಡುತ್ತಿದ್ದಾರೆ. ಈ ಎಲ್ಲಾ ವಿದ್ಯಮಾನಗಳಿಂದ ಭಾರತವು ಆರ್ಥಿಕ ಹಿಂಜರಿತವನ್ನೆದುರಿಸುತ್ತಿದೆ ಅಥವಾ ಕನಿಷ್ಠ ಪಕ್ಷ ಅರ್ಥಿಕ ಹಿಂಜರಿತದೆಡೆಗೆ ಸಾಗುತ್ತಿದೆ ಹಾಗೂ ಅದನ್ನು ಹೇಗೆ ನಿಭಾಯಿಸುವುದೆಂದು ಯಾರಿಗೂ ತೋಚುತ್ತಿಲ್ಲವೆಂಬದು ಸ್ಪಷ್ಟವಾಗುತ್ತದೆ.
ಆದರೆ ಬಿಸ್ಕತ್ತನ್ನು ಕಾರಿನ ಜೊತೆ ಹೋಲಿಸಲು ಸಾಧ್ಯವಿಲ್ಲ. ಕಾರನ್ನು ಸಾಮಾನ್ಯವಾಗಿ ಒಂದು ಸಲ ಮಾತ್ರವೇ ಖರೀದಿಸಲಾಗುತ್ತದೆ ಮತ್ತು ಅದನ್ನು ಆಗಾಗ್ಗೆ ಬದಲಾಯಿಸಲು ಸಾಧ್ಯವಿಲ್ಲ. ಆದರೆ ಗ್ರಾಹಕರು ನಿಯಮಿತವಾಗಿ ಅಂದರೆ ಒಂದು ವಾರದಲ್ಲಿ ಹಲವು ಸಲ ಬಿಸ್ಕತ್ಗಳನ್ನು ಖರೀದಿಸುತ್ತಿರುತ್ತಾರೆ. ಈ ವ್ಯಕ್ತಿಗಳು ಕಾರಿಗಾಗಿ ಕೆಲವು ಲಕ್ಷಗಳನ್ನು ವ್ಯಯಿಸಲು ಹಿಂದೇಟು ಹಾಕುವುದು ಸಹಜ. ಆದರೆ 5 ರೂ.ನಷ್ಟು ಕನಿಷ್ಠ ಬೆಲೆಯ ಬಿಸ್ಕತ್ ಖರೀದಿಸಲು ಹಿಂದೆಮುಂದೆ ನೋಡುತ್ತಿರುವುದು, ಭಾರತವನ್ನು ಗಾಢವಾದ ಆರ್ಥಿಕ ಬಿಕ್ಕಟ್ಟು ಕಾಡುತ್ತಿರುವುದರ ಸಂಕೇತವಾಗಿದೆ.
ಪಾರ್ಲೆಜಿ ಬಿಸ್ಕತ್ ದೊರೆಯದ ಸ್ಥಳ ಭಾರತದಲ್ಲಿ ಎಲ್ಲಿಯೂ ಇಲ್ಲವೆಂದು ಕಂಪೆನಿಯ ಹಿರಿಯ ಕಾರ್ಯನಿರ್ವಹಣಾಧಿಕಾರಿಯೊಬ್ಬರು ಹಿಂದೊಮ್ಮೆ ನನ್ನೊಂದಿಗೆ ಹೇಳಿದ್ದರು. ಅವರು ಹಿಮಾಲಯ ಪರ್ವತಶ್ರೇಣಿಯ ತಪ್ಪಲಲ್ಲಿರುವ ಅನತಿ ದೂರದ ಹಳ್ಳಿಗಳಿಗೂ ಪ್ರವಾಸ ಕೈಗೊಂಡವರು. ಒಳನಾಡು ಪ್ರದೇಶಗಳ ಪುಟ್ಟ ಹಳ್ಳಿಗಳಿಗೆ ಹಾಗೂ ಸಾಮಾನ್ಯವಾಗಿ ಸಂಪರ್ಕಿಸಲು ಸಾಧ್ಯವಿಲ್ಲದಂತಹ ಕಾಲ್ನಡಿಗೆಯ ಮಾರ್ಗಗಳಿಗೂ ಅವರು ಭೇಟಿ ನೀಡಿದ್ದಾರೆ. ಅಲ್ಲೆಲ್ಲಾ ಕನಿಷ್ಠ ಒಂದು ಅಂಗಡಿಯ ಕಪಾಟಿನಲ್ಲಾದರೂ ಪಾರ್ಲೆಜಿಯ ಬಿಸ್ಕತ್ ಪೊಟ್ಟಣ ಇರುವುದನ್ನು ಅವರು ಗಮನಿಸಿದ್ದಾರೆ. ದಕ್ಷವಾದ ವಿತರಣಾ ಜಾಲ ಮಾತ್ರ ಇದಕ್ಕೆ ಕಾರಣವಲ್ಲ. ಪಾರ್ಲೆಜಿ ಬಿಸ್ಕತ್ಗೆ ಅಪಾರ ಬೇಡಿಕೆಯಿದೆಯೆಂಬುದು ವಾಸ್ತವವಾಗಿದೆ ಎಂದವರು ಹೇಳುತ್ತಾರೆ. ಅಂಗಡಿಗಳ ಮಾಲಕರು ತಾವಾಗಿಯೇ ಪಾರ್ಲೆಜಿ ಬಿಸ್ಕತ್ಗಳನ್ನು ಪೂರೈಕೆ ಮಾಡುವಂತೆ ವಿತರಕರನ್ನು ಕೋರುತ್ತಿದ್ದಾರೆಂಬುದು ಇದರಿಂದ ಸ್ಪಷ್ಟವಾಗುತ್ತದೆಯೆಂದವರು ಹೇಳುತ್ತಾರೆ.
ಪಾರ್ಲೆಜಿ ಬಿಸ್ಕತ್ ಶ್ರೀಸಾಮಾನ್ಯನ ಹಲವಾರು ಬಗೆಯ ಅವಶ್ಯಕತೆಗಳನು ಈಡೇರಿಸುತ್ತದೆ ಎಂದು ಆ ಕಾರ್ಯನಿರ್ವಹಣಾಧಿಕಾರಿ ಹೇಳುತ್ತಾರೆ. ಮುಂಜಾನೆ ಒಂದು ಕಪ್ ಬಿಸಿಬಿಸಿ ಚಹಾದೊಂದಿಗೆ ಈ ಬಿಸ್ಕತ್ತನ್ನು ಸವಿಯುತ್ತಾ ದಿನಚರಿಯನ್ನು ಆರಂಭಿಸಬಹುದಾಗಿದೆ. ಮಕ್ಕಳ ತಿಂಡಿಯ ಬುತ್ತಿಯಲ್ಲಿಯೂ ಸ್ನಾಕ್ ಆಗಿ ಅದನ್ನು ಇರಿಸಬಹುದಾಗಿದೆ. ಯಾರಿಗಾದರೂ ಹಸಿವಾದಲ್ಲಿ ಮತ್ತು ಊಟಕ್ಕೆ ಇನ್ನೂ ಸಮಯವಿರುವಾಗ ದಿಢೀರ್ ತಿಂಡಿಯಾಗಿ ಅದನ್ನು ಬಳಸಬಹುದಾಗಿದೆ ಮತ್ತು ಕಾರ್ಮಿಕನಿಗೆ ಅದು ಪೌಷ್ಟಿಕವಾದ ಸಕ್ಕರೆ ಅಂಶದೊಂದಿಗೆ ಶಕ್ತಿಯನ್ನು ನೀಡಬಲ್ಲದು ಎಂದು ಆತ ಹೇಳುತ್ತಾರೆ.
ಇವೆಲ್ಲದಕ್ಕಿಂತಲೂ ಹೆಚ್ಚಾಗಿ ಅದು ತುಂಬಾ ಕಡಿಮೆ ದರದಲ್ಲಿ ಲಭ್ಯವಾಗುತ್ತದೆ. ಅದುವೇ ಕಂಪೆನಿಯ ವಿಜಯ ಮಂತ್ರವಾಗಿದೆ ಎಂದು ಆತ ಹೇಳುತ್ತಾರೆ. ವರ್ಷಗಳೇ ಕಳೆದರೂ ಪಾರ್ಲೆ ಜಿ ಬಿಸ್ಕತ್ನ ಪೊಟ್ಟಣದ ಬೆಲೆಯಲ್ಲಿ ಹೆಚ್ಚು ಬದಲಾವಣೆಯಾಗಿಲ್ಲ. ಒಂದು ವೇಳೆ ದರಗಳಲ್ಲಿ ಬದಲಾವಣೆಯಾದರೂ, ತನ್ನ ಪ್ರಾಥಮಿಕ ಮಟ್ಟದ ಉತ್ಪನ್ನಗಳ ದರಗಳು ಸ್ಥಿರವಾಗಿರುವುದನ್ನು ಕಂಪೆನಿಯು ಖಾತರಿಪಡಿಸುತ್ತದೆ. ಪ್ಯಾಕೆಟ್ಗಳ ಗಾತ್ರವನ್ನು ಬದಲಾಯಿಸುವ ಮೂಲಕ ಅಥವಾ ಇತರ ಮಾರ್ಗೋಪಾಯಗಳ ಮೂಲಕ ದರಗಳಲ್ಲಿ ಸ್ಥಿರತೆಯನ್ನು ಉಳಿಸಿಕೊಂಡೇ ಬಂದಿದೆ. ತೆರಿಗೆಗಳು ಏನಿದ್ದರೂ ಉತ್ಪನ್ನದ ಅಂತಿಮ ದರದೊಳಗೆ ಅಳವಡಿಸಿಕೊಳ್ಳುತ್ತಾ ಬಂದಿದೆ. ಗ್ರಾಹಕನಿಗೆ, ಅದರಲ್ಲೂ ಹೆಚ್ಚು ಖರ್ಚು ಮಾಡಲು ಸಾಧ್ಯವಿಲ್ಲದವರು ಎಲ್ಲಾ ಅಗತ್ಯ ಸಾಮಗ್ರಿಗಳ ದರಗಳಲ್ಲಿ ಏರಿಕೆಯಾಗಿದ್ದರೂ, ಪಾರ್ಲೆಜಿ ಮಾತ್ರ ನಿರಂತರವಾಗಿ ಸ್ಥಿರವಾಗಿ ಉಳಿದಿರುವುದನ್ನು ಗಮನಿಸುತ್ತಾ ಬಂದಿದ್ದಾರೆ. ಹೀಗಾಗಿ ಪಾರ್ಲೆಜಿ ಬಿಸ್ಕತ್ತ್ನ ಜನಪ್ರಿಯತೆ ನಿರಂತರವಾಗಿ ಉಳಿದುಕೊಂಡು ಬಂದಿದೆ.
ಪಾರ್ಲೆ ಜಿ ಬ್ರಾಂಡ್ನ ಜನಾಕರ್ಷಣೆಗೆ ಹಲವಾರು ಕಾರಣಗಳಿವೆ. ಗುಣಮಟ್ಟ ಒಂದೆಡೆಯಾದರೆ, ವಿಶ್ವಸನೀಯತೆ ಇನ್ನೊಂದು. ಇದರ ಜೊತೆ ಹಳೆಯ ದಿನಗಳ ಸ್ಮರಣೆಯಾಗಿಯೂ ಈ ಬಿಸ್ಕತ್ ವರ್ತಿಸಿದೆ. ಸಾಗರೋತ್ತರ ದೇಶಗಳಲ್ಲಿ ವಾಸಿಸುತ್ತಿರುವ ಭಾರತೀಯ ವಿದ್ಯಾರ್ಥಿಗಳು ತಮ್ಮನ್ನು ಭೇಟಿಯಾಗುವ ಸ್ನೇಹಿತರು ಹಾಗೂ ಸಂಬಂಧಿಕರಲ್ಲಿ ಪಾರ್ಲೆಜಿ ಬಿಸ್ಕತ್ ಪ್ಯಾಕೆಟ್ಗಳನ್ನು ತರುವಂತೆ ಕೇಳುತ್ತಿರುತ್ತಾರೆ.
ಈ ಶತಮಾನದಲ್ಲಿ ಭಾರತದ ಗ್ರಾಹಕರಿಗೆ ವೈವಿಧ್ಯಮಯ ಬಿಸ್ಕತ್ಗಳ ಖರೀದಿಗೆ ಆಯ್ಕೆಗಳಿವೆ ಹಾಗೂ ‘ಕಲಾತ್ಮಕವಾದ ಬಿಸ್ಕತ್’ಗಳನ್ನು ಬಯಸುವ ಜನರಿಗೆ ಪಾರ್ಲೆಜಿ ಬಿಸ್ಕತ್ ಹಳೆಯ ಶೈಲಿಯದ್ದು, ಗತಕಾಲದ ಪಳೆಯುಳಿಕೆ ಎಂದೆಲ್ಲಾ ಎನಿಸಬಹುದು.
ಮಾರುಕಟ್ಟೆಯಲ್ಲಿ ಯಾವುದೇ ಉತ್ಪನ್ನವು ಇಂತಹ ಸಮಸ್ಯೆಗಳನ್ನು ಎದುರಿಸುವುದು ಸಹಜವಾದುದಾಗಿದೆ. ಕಂಪೆನಿಯು ಹಲವಾರು ವರ್ಷಗಳಿಂದ ತನ್ನ ನಾಯಕ ಸ್ಥಾನವನ್ನು ಕಾಯ್ದುಕೊಳ್ಳುತ್ತಾ ಬಂದಿದೆ ಹಾಗೂ ವಿಸ್ತರಿಸಿಕೊಂಡಿದೆ. ಆದರೆ ಬದಲಾಗುತ್ತಿರುವ ಜನಸಾಮಾನ್ಯರ ಅಭಿರುಚಿಗಳು ಅದರ ಮೇಲೆ ಪರಿಣಾಮವನ್ನು ಬೀರಿರಲಿಲ್ಲ. ಆದರೆ ಸರಕಾರದ ನೀತಿಗಳು ಮಾತ್ರ ಪಾರ್ಲೆಜಿ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಿವೆ. ಜಿಎಸ್ಟಿಯ ಹೇರಿಕೆಯ ಉತ್ಪನ್ನಗಳ ದರಗಳು ಏರಿಕೆಯಾಗುವಂತೆ ಮಾಡಿವೆ ಹಾಗೂ ನಿರುದ್ಯೋಗ ಮತ್ತು ಉದ್ಯೋಗನಷ್ಟವನ್ನು ಹೆಚ್ಚಿಸಿವೆ. ದೇಶದ ಗಣನೀಯ ಪ್ರಮಾಣದ ಜನಸಾಮಾನ್ಯರ ಭವಿಷ್ಯ ಎಷ್ಟು ಕಳವಳಕಾರಿಯಾಗಿದೆಯೆಂದರೆ, ಒಂದು ಸಣ್ಣ ಪ್ಯಾಕೆಟ್ ಬಿಸ್ಕತ್ ಪೊಟ್ಟಣವನ್ನು ಕೂಡಾ ವಿಶೇಷ ಖರ್ಚೆಂಬ ಹಾಗೆ ನೋಡಲು ಆರಂಭಿಸಿದ್ದಾರೆ.
ಇತರ ಕಳವಳಕಾರಿ ಬೆಳವಣಿಗೆಗಳು
ಜನರಿಗೆ ಊಟವಿಲ್ಲದೆ ದಿನದೂಡಲು ಸಾಧ್ಯವಿಲ್ಲ. ಆದರೆ ಎರಡು ಕಪ್ ಚಹಾದ ಬದಲಿಗೆ ಒಂದು ಕಪ್ ಚಹಾದಲ್ಲಿ ಅವರು ತೃಪ್ತರಾಗಲು ಸಾಧ್ಯವಿದೆ. ದಿನಗೂಲಿ ಕಾರ್ಮಿಕನಿಗೆ ಅಥವಾ ಗುತ್ತಿಗೆ ಕಾರ್ಮಿಕನಿಗೆ ಪ್ರತಿಯೊಂದು ಪೈಸೆ ಕೂಡಾ ಮುಖ್ಯವಾಗಿ ಬಿಡುತ್ತದೆ. ತನಗೆ ನಾಳೆಯಿಂದ ಕೆಲಸವಿಲ್ಲದೆ ಇರಬಹುದು ಹಾಗೂ ದಿನಗೂಲಿ ಕೂಡಾ ಇರಲಾರದೆಂಬ ಆತಂಕವು ಆತನಿಗೆ ಚಿಕ್ಕಾಸು ಹಣವನ್ನು ಉಳಿತಾಯ ಮಾಡುವುದನ್ನು ಅನಿವಾರ್ಯಗೊಳಿಸುತ್ತದೆ. ವೇತನ ಪಡೆಯುವ ವ್ಯಕ್ತಿಗೆ ಕೂಡಾ ಮುಂಬರುವ ತಿಂಗಳುಗಳಲ್ಲಿ ತನ್ನ ಉದ್ಯೋಗ ಇರುವುದು ಎಂಬ ಬಗ್ಗೆ ಖಾತರಿಯಿಲ್ಲ. ಆಟೋಮೊಬೈಲ್ ವಲಯದಲ್ಲಿನ ಅನಿಶ್ಚಿತತೆಯು ಮಾಧ್ಯಮಗಳ ಗಮನವನ್ನು ಸಾಕಷ್ಟು ಸೆಳೆದಿದೆ. ಆದರೆ ಬೃಹತ್,ಮಧ್ಯಮ ಹಾಗೂಸಣ್ಣ ಕಂಪೆನಿಗಳು ಭಾರೀ ಸಂಖ್ಯೆಯ ಉದ್ಯೋಗಿಗಳನ್ನು ತೆಗೆದುಹಾಕುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುವುದೇ ಇಲ್ಲ.
ಜೆಟ್ ಏರ್ವೇಸ್ ಸಂಸ್ಥೆಯ ಪತನವು ಸಾವಿರಾರು ಮಂದಿ ಅರ್ಹ, ಕಠಿಣ ದುಡಿಮೆಯ ವೃತ್ತಿಪರರು ರಾತ್ರೋರಾತ್ರಿ ಉದ್ಯೋಗಗಳನ್ನು ಕಳೆದುಕೊಂಡರು. ಅವರಿಗೆ ತಮ್ಮ ಬಾಕಿ ವೇತನ ಪಡೆಯುವ ಅವಕಾಶ ದೊರೆಯಲಿಲ್ಲ. ಒಂದು ವೇಳೆ ದೊರೆತರೂ ಕೂಡಾ ಅದು ಅಲ್ಪಸ್ವಲ್ಪ ಮೊತ್ತವೇ ಆಗಿತ್ತು. ಅವರು ತಮ್ಮ ಆಸ್ತಿಗಳನ್ನು ಅಡವಿಟ್ಟಿರಬಹುದು, ಮನೆ ಬಾಡಿಗೆ ನೀಡಬೇಕಾಗಿರಬಹುದು ಹಾಗೂ ತಮ್ಮ ಮಕ್ಕಳ ಶಾಲಾ ಶುಲ್ಕಗಳನ್ನು ಪಾವತಿಸಬೇಕಾಗಿರಬಹುದು. ಕಟ್ಟಡ ನಿರ್ಮಾಣ ಕಾರ್ಮಿಕನಿಗೂ ಕೂಡಾ ವಿಭಿನ್ನ ರೀತಿಯಲ್ಲಿ ಇದೇ ರೀತಿಯ ಸಮಸ್ಯೆ ಎದುರಾಗಿದೆ. ಆತನಿಗೆ ಎಲ್ಲಿಯೂ ಕಟ್ಟಡದ ಕೆಲಸ ದೊರೆಯುತ್ತಿಲ್ಲ. ಹೀಗಾಗಿ ಇವರೆಲ್ಲಾ ಬಿಸ್ಕತ್ಗಳ ಪ್ಯಾಕೆಟ್ಗಳನ್ನು ಖರೀದಿಸುವ ಮುನ್ನ ಹತ್ತು ಸಲ ಯೋಚಿಸಬೇಕಾದಂತಹ ಪರಿಸ್ಥಿತಿ ಬಂದೊದಗಿದೆ.
ತಮ್ಮ ಉದ್ಯಮ ಮುಂದುವರಿಯುವುದಕ್ಕೆ ನೆರವಾಗಲು ತಮಗೆ ಸರಕಾರವು ಪರಿಹಾರ ಕ್ರಮಗಳನ್ನು ಘೋಷಿಸಬೇಕೆಂದು ಕೈಗಾರಿಕಾ ಒಕ್ಕೂಟಗಳು ಆಗ್ರಹಿಸುತ್ತಾ ಬಂದಿವೆ. ಆದರೆ ಅಪ್ಪಟ ಮುಕ್ತ ಮಾರುಕಟ್ಟೆಯ ಅರ್ಥಶಾಸ್ತ್ರಜ್ಞರು, ಉದ್ಯಮರಂಗದಲ್ಲಿ ಇಂತಹ ಏರಿಳಿತಗಳು ಸಹಜ. ಇದಕ್ಕೆಲ್ಲಾ ಕೈಗಾರಿಕೋದ್ಯಮಿಗಳು ಸರಕಾರದ ನೆರವು ಯಾಚಿಸಬಾರದು, ಪ್ರತಿಯೊಂದಕ್ಕೂ ತಂದೆಯ ಬಳಿ ಕೇಳುವ ಪುಟ್ಟ ಮಕ್ಕಳಂತೆ ವರ್ತಿಸಕೂಡದು ಎಂದು ವಾದಿಸುತ್ತಾರೆ.
ವಾಸ್ತವವಾಗಿ ಸರಕಾರವು ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಉಂಟಾಗಿರುವ ಹತಾಶೆಯ ಭಾವನೆಯನ್ನು ಹೋಗಲಾಡಿಸಬೇಕಾದ ಅಗತ್ಯವಿದೆ. ಈ ಬಿಕ್ಕಟ್ಟಿನಿಂದ ಮೇಲೆ ಬರಲು ಬೃಹತ್ ಉದ್ಯಮಗಳು ಮಾರ್ಗೋಪಾಯಗಳನ್ನು ಹುಡುಕಬಲ್ಲವು. ಉದ್ಯೋಗಿಗಳ ಸಂಖ್ಯೆಯಲ್ಲಿ ಕಡಿತ, ಉಪಘಟಕಗಳ ಮುಚ್ಚುಗಡೆ ಮತ್ತಿತರ ಕ್ರಮಗಳನ್ನು ಕೈಗೊಳ್ಳಬಹುದು. ಆದರೆ ಸಣ್ಣ ಉದ್ಯಮಿಗಳಿಗೆ ಅಂತಹ ಅವಕಾಶವಿರುವುದಿಲ್ಲ. ಅವರಿಗೆ ದೀರ್ಘಕಾಲದವರೆಗೆ ಅರ್ಥಿಕ ಬಿಕ್ಕಟ್ಟನ್ನು ಎದುರಿಸಿ, ತನ್ನ ಉದ್ಯಮವನ್ನು ಮುನ್ನಡೆಸಲು ಬೇಕಾದ ಹಣಕಾಸು ಸಾಮರ್ಥ್ಯವಿರುವುದಿಲ್ಲ.
ನರೇಗಾ ಯೋಜನೆ
ಒಂದು ಸಮಯದಲ್ಲಿ ನರೇಗಾ ಯೋಜನೆಯು ದೇಶಾದ್ಯಂತ ನಿರುದ್ಯೋಗಿಗಳಿಗೆ ಆದಾಯವನ್ನು ತಂದುಕೊಟ್ಟಿತು. ಅವರು ಉದ್ಯೋಗಗಳನ್ನು ಪಡೆದುಕೊಂಡರು, ವೇತನ ಹಾಗೂ ಘನತೆಯ ಮನೋಭಾವನೆಯನ್ನು ತಂದುಕೊಟ್ಟಿತ್ತು. ಹಿಂದಿನ ಯುಪಿಎ ಸರಕಾರದ ಆಡಳಿತದಲ್ಲಿ, ಕೈಗಾರಿಕಾ ಹಾಗೂ ಗುತ್ತಿಗೆಯಾಧಾರಿತ ವೇತನಗಳಲ್ಲಿ ಭಾರೀ ಏರಿಕೆಯಾಗಿತ್ತು. ಯಾಕೆಂದರೆ ಕಾರ್ಮಿಕರು ಗ್ರಾಮಗಳಿಗೆ ತೆರಳಿ ನರೇಗಾ ಯೋಜನೆಯಡಿ ದುಡಿಯುವುದನ್ನು ಆಯ್ಕೆ ಮಾಡಿಕೊಂಡರು. ಆದರೆ ಈಗ ಅವರಿಗೆ ವೇತನ ಪಾವತಿಸಲು ಹಣವಿಲ್ಲದೆ ಸರಕಾರವು ಗೊಂದಲದಲ್ಲಿದೆ.
ಉದ್ಯಮಗಳಿಂದ ಹೂಡಿಕೆಯ ಕೊರತೆ, ಬ್ಯಾಂಕ್ಗಳಿಂದ ಸಾಲ ನೀಡಿಕೆಯ ತಡೆಹಿಡಿಯುವಿಕೆ, ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಪತನ ಹಾಗೂ ನಗದು ಅಮಾನ್ಯತೆಯಿಂದ ಉಂಟಾದ ಗೊಂದಲ ಹಾಗೂ ಜಿಎಸ್ಟಿಯ ಕಳಪೆ ಅನುಷ್ಠಾನದಿಂದಾಗಿ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಹಳೆಯ ಉದ್ಯೋಗಗಳು ನಷ್ಟವಾಗಿವೆ, ಆರ್ಥಿಕ ಬೆಳವಣಿಗೆಯಿಲ್ಲ, ಇನ್ನೊಂದೆಡೆ ಖರ್ಚು ಮಾಡಲು ಜನರ ಕೈಯಲ್ಲಿ ಹಣವಿಲ್ಲ. ಇದು ವಿಷವರ್ತುಲವಾಗಿ ಪರಿಣಮಿಸಿದೆ. ಈ ನಡುವೆ ಕೇಂದ್ರ ಸರಕಾರವು ತನ್ನ ರಾಜಕೀಯ ಹಾಗೂ ಸೈದ್ಧಾಂತಿಕ ಅಜೆಂಡಾವನ್ನು ಈಡೇರಿಸುವಲ್ಲಿ ತಲ್ಲೀನವಾಗಿದ್ದು, ಅದಕ್ಕೆ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಸಮಯವೇ ಸಿಗುತ್ತಿಲ್ಲ.
ಕೃಪೆ: thewire.in