varthabharthi


ಕೃತಿ ಪರಿಚಯ

ಈ ಹೊತ್ತಿನ ಹೊತ್ತಿಗೆ

ಸಾಮಾಜಿಕ ಕ್ರಾಂತಿಯ ಹರಿಕಾರ ಸಯಾಜಿರಾವ

ವಾರ್ತಾ ಭಾರತಿ : 26 Aug, 2019
-ಕಾರುಣ್ಯಾ

ರೈತನ ಒಬ್ಬ ಅಶಿಕ್ಷಿತ ಪೋರ, ಬೆಳೆದು ಆಕಸ್ಮಿಕವಾಗಿ ರಾಜನಾಗಿ ಛಂದ ಶಿಕ್ಷಣವನ್ನು ಪಡೆದು, ಸ್ವಂತ ಬಲದಿಂದ ಸಮಾಜದಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರುತ್ತಾನೆ. ಶಿಕ್ಷಣದಿಂದಲೇ ಪರಿವರ್ತನೆ, ಪ್ರಗತಿ ಸಾಧ್ಯವೆಂದು ನಂಬಿದ ಈ ರಾಜನು ಅಸ್ಪಶ್ಯರಿಗೆ, ಬುಡಕಟ್ಟು ಸಮಾಜದವರಿಗೆ ಶಿಕ್ಷಣ ನೀಡಬೇಕೆಂದು ರಾಜಾಜ್ಞೆಯನ್ನು ಹೊರಡಿಸುತ್ತಾನೆ. ವಂಚಿತರ ಬಾಗಿಲಿಗೆ ಶಿಕ್ಷಣದ ಗಂಗೆಯನ್ನು ಹರಿಸುತ್ತಾನೆ. ಕಡ್ಡಾಯ ಪ್ರಾಥಮಿಕ ಶಿಕ್ಷಣ, ಜೀತ ವಿಮೋಚನೆ, ಅಸ್ಪಶ್ಯ ನಿವಾರಣೆಯ ಕಾನೂನು ಜಾರಿಗೆ ತರುತ್ತಾನೆ. ಲೋಕಕಲ್ಯಾಣ, ಉತ್ತಮ ಆಡಳಿತ, ಮೂಢನಂಬಿಕೆಯ ಉಚ್ಚಾಟನೆಯ ಮೂಲಕ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡುತ್ತಾನೆ. ಮಹಾತ್ಮ ಫುಲೆ, ಡಾ. ಅಂಬೇಡ್ಕರ್, ಶಾಹೂ, ಗೋಖಲೆ, ರಾನಡೆ ಮುಂತಾದ ನಾಯಕರ ಬೆನ್ನ ಹಿಂದೆ ಈ ರಾಜನ ನೆರಳಿದೆ. ಇಂತಹ ಅಪರೂಪದ ರಾಜ ಬರೋಡೆಯ ಸಯಾಜಿರಾವ ಗಾಯಕವಾಡ ಮಹಾರಾಜರ ಕಿರು ಪರಿಚಯವನ್ನು ಬಾಬಾ ಭಾಂಡವರವರು ‘ಸಾಮಾಜಿಕ ಕ್ರಾಂತಿಯ ಹರಿಕಾರ - ಲೋಕರಾಜ ಸಯಾಜಿ ರಾವ ಗಾಯಕವಾಡ’’ ಕೃತಿಯಲ್ಲಿ ಮಾಡಿದ್ದಾರೆ. ಚಂದ್ರಕಾಂತ ಪೋಕಳೆ ಅವರು ಈ ಮೂಲ ಮರಾಠಿ ಕೃತಿುನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಸಯಾಜಿ ರಾವ ಗಾಯಕವಾಡ ಅವರ ಕುರಿತಂತೆ ಇತಿಹಾಸದಲ್ಲಿ ದಾಖಲಾಗಿರುವುದು ಅತಿ ಕಡಿಮೆ. ಗೋಪಾಲ ಎನ್ನುವ ಅನಕ್ಷರಸ್ಥ ಬಾಲಕನಿಗೆ ಅನಿರೀಕ್ಷಿತವಾಗಿ ರಾಜನಾಗುವ ಅವಕಾಶ ಒದಗಿ ಬರುವುದು, ಆತನಿಗೆ ರಾಣಿ ಆಧುನಿಕ ಶಿಕ್ಷಣವನ್ನು ಕಲಿಸುವುದು, ಆತ ಬೆಳೆದಂತೆಯೇ ಆಧುನಿಕತೆಯ ಚಿಂತನೆಗಳನ್ನು ರೂಢಿಸಿಕೊಳ್ಳುವುದು ಮತ್ತು ಅದನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ತರುವ ಮೂಲಕ ಬ್ರಿಟಿಷರಿಗೇ ತಲೆನೋವಾಗುವುದು ಈ ಕೃತಿಯಲ್ಲಿ ಅತ್ಯಂತ ಕುತೂಹಲಕಾರಿಯಾಗಿ ನಿರೂಪಿಸಲಾಗಿದೆ. ಬ್ರಿಟಿಷರ ಕಾಲದಲ್ಲಿ ಉಳಿದ ರಾಜರು ಸುಖ ಲೋಲುಪತನದಿಂದ ಕಾಲ ಕಳೆಯುತ್ತಿರುವ ಹೊತ್ತಿನಲ್ಲಿ ಸಯಾಜಿ ರಾವ ಓದು, ಬರಹ, ಚಿಂತನೆಗಳನ್ನು ಅರಸುತ್ತಾ ಓಡಾಡಿದ್ದು, ವಿದ್ವಾಂಸರ ಜೊತೆಗೆ ಸಂಸರ್ಗವನ್ನಿಟ್ಟುಕೊಂಡು ಶೋಷಿತ ಸಮುದಾಯವನ್ನು ಮೇಲೆತ್ತಲು ಹವಣಿಸಿದ್ದು ವಿಸ್ಮಯ ಹುಟ್ಟಿಸುತ್ತದೆ. ದಲಿತ ಚಿಂತನೆಗಳು ಆಧುನಿಕ ಜಗತ್ತಿಗೆ ತೆರೆದುಕೊಳ್ಳುವುದರ ಹಿಂದೆ ಇದ್ದ ಸಯಾಜಿ ರಾವ ಗಾಯಕವಾಡ ಅವರ ಪ್ರಯತ್ನವನ್ನು ನಾವು ಮರೆಯುವಂತಿಲ್ಲ. ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ ಹಲವು ನಾಯಕರು ಇವರ ಸಂಪರ್ಕದಲ್ಲಿದ್ದರು ಎನ್ನುವುದೇ ಯಾಜಿ ಹಿರಿಮೆಯನ್ನು ತೋರಿಸುತ್ತದೆ.
ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 80. ಮುಖಬೆಲೆ ರೂ. 65.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)