ಜಮ್ಮು ಮತ್ತು ಕಾಶ್ಮೀರ-ಒಣ ಭಾವಾವೇಶ ಯಾಕೆ?
ಕೇಂದ್ರೀಕರಣ ಹಾಗೂ ಬ್ರಾಹ್ಮಣಶಾಹಿ ಫ್ಯಾಶಿಸ್ಟೀಕರಣದ ಸಂದರ್ಭ ಇದಾಗಿದೆ. ರಾಜ್ಯಗಳು ಅದರ ಸರಕಾರಗಳು, ಅಲ್ಲಿನ ನಿಯಮಗಳು, ಒಕ್ಕೂಟ ತತ್ವಗಳು, ಹೀಗೆ ಅವರ ನಡೆಗಳಿಗೆ ತಡೆಯಾಗಬಹುದಾದ ಎಲ್ಲವನ್ನೂ ಬದಲಾಯಿಸಿ ಅವರ ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಳ್ಳಲು ಹೊರಟಿದ್ದಾರೆ. ಹಾಗಾಗಿ ಇರುವ ಒಂದು ಮಟ್ಟದ ಸಂವಿಧಾನಾತ್ಮಕ ಅಡೆತಡೆಗಳನ್ನೂ ನಿವಾರಿಸಿಕೊಳ್ಳುವ ಧಾವಂತದಲ್ಲಿ ಭಾರೀ ಕಾರ್ಪೊರೇಟ್ ಹಾಗೂ ಆಸ್ತಿವಂತರನ್ನೊಳಗೊಂಡ ಆಳುವ ಶಕ್ತಿಗಳಿವೆ. ಯುಎಪಿಎಯಂತಹ ಕರಾಳ ಶಾಸನಗಳನ್ನು, ಏಕವ್ಯಕ್ತಿಯ ನಿರಂಕುಶ ಅಧಿಕಾರಗಳನ್ನು ಒಂದಲ್ಲಾ ಒಂದು ರೀತಿಯಲ್ಲಿ ಜನರ ಮೇಲೆ ಹೇರಲಾಗುತ್ತಿದೆ. ಚುನಾವಣೆಯೂ ಕೂಡ ಅವರ ಆಟದ ವಸ್ತುವಾಗಿ ಬಿಟ್ಟಿದೆ.
ಭಾರತದ ಆಡಳಿತದಡಿ ಇರುವ ಜಮ್ಮು ಮತ್ತು ಕಾಶ್ಮೀರ ಪ್ರದೇಶ ಸಂಪೂರ್ಣ ಸ್ತಬ್ಧತೆಗೆ ಬಂದು ಈಗಾಗಲೇ ಮೂರು ವಾರವಾಗಿವೆ. ಸಾಮಾಜಿಕ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತರ ತಂಡವೊಂದು ಕಾಶ್ಮೀರ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ವಾಸ್ತವ ಪರಿಸ್ಥಿತಿಯ ಕುರಿತಾದ ವರದಿಯೊಂದನ್ನು ಬಿಡುಗಡೆಗೊಳಿಸಿತ್ತು.
ಆ ವರದಿಯ ಪ್ರಕಾರ ಕಾಶ್ಮೀರ ಕಣಿವೆಯ ಜನರು ಕೇಂದ್ರ ಸರಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ. ಶ್ರೀನಗರ ಸಂಪೂರ್ಣ ಸ್ತಬ್ಧಗೊಂಡಿದೆ. ಎಲ್ಲಾ ಪ್ರದೇಶಗಳಲ್ಲಿ ಕರ್ಫ್ಯೂ ಹೇರಿ ಜನರನ್ನು ಅಕ್ಷರಶಃ ಗೃಹ ಬಂಧನಗಳಲ್ಲಿ ಇರಿಸಲಾಗಿದೆ. ವ್ಯಾಪಕವಾದ ಬಂಧನಗಳು ನಡೆಯುತ್ತಿವೆ. ದೂರವಾಣಿ, ಮೊಬೈಲ್, ಅಂತರ್ಜಾಲ ವ್ಯವಸ್ಥೆಯನ್ನು ಸಂಪೂರ್ಣ ಸ್ತಬ್ಧಗೊಳಿಸಲಾಗಿದೆ. ಪತ್ರಿಕಾ ಸ್ವಾತಂತ್ರ್ಯ ಕಸಿಯಲಾಗಿದೆ. ಸ್ಫೋಟಕ ವಾತಾವರಣದಡಿ ಕಾಶ್ಮೀರವಿದೆ. 1947ರಲ್ಲಿ ಬ್ರಿಟಿಷರು ಭಾರತದ ಅಧಿಕಾರವನ್ನು ಹಸ್ತಾಂತರಿಸಿದ ನಂತರ ಕಾಶ್ಮೀರ, ಹೈದರಾಬಾದ್, ಜುನಾಗಡ್ನಂತಹ ರಾಜ ಸಂಸ್ಥಾನಗಳು ಭಾರತದೊಡನೆ ವಿಲೀನವಾಗದೇ ಸ್ವತಂತ್ರವಾಗುಳಿಯಲು ಬಯಸಿದ್ದವು. ಅದೇ ಸಂದರ್ಭದಲ್ಲಿ ನೆಹರೂ ಸರ್ದಾರ್ ಪಟೇಲ್ ಮಾತುಕತೆ ಮತ್ತು ಬಲಗಳನ್ನು ಪ್ರಯೋಗಿಸಿ ಈ ಸಂಸ್ಥಾನಗಳನ್ನು ಭಾರತದೊಳಗೆ ಸೇರಿಸಿಕೊಳ್ಳತೊಡಗಿದರು. ಹಾಗೆ ಸೇರಿಸಿಕೊಳ್ಳುವ ಸಂದರ್ಭದಲ್ಲಿ ಕಾಶ್ಮೀರ ಸೇರಿದಂತೆ ಹಲವು ಸಂಸ್ಥಾನಗಳ ರಾಜಪ್ರಭುತ್ವಗಳು ಬಯಸಿದಂತೆ ಭಾರತ ಒಕ್ಕೂಟದೊಳಗಡೆಯೇ ಕೆಲವು ವಿಶೇಷ ಹಕ್ಕುಗಳನ್ನು ನೀಡುವ ಒಪ್ಪಂದಗಳಿಗೆ ಸಹಿ ಮಾಡಲಾಗಿತ್ತು. ಆದರೆ ಅವುಗಳು ಎಷ್ಟರ ಮಟ್ಟಿಗೆ ಪಾಲನೆಯಲ್ಲಿ ಚಾಲ್ತಿಯಲ್ಲಿದ್ದವು ಎನ್ನುವುದು ಚರ್ಚಾರ್ಹ ವಿಚಾರ. ಕಾಶ್ಮೀರದ ಆಗಿನ ರಾಜ ಹರಿಸಿಂಗ್ ಭಾರತ 1947ರ ಕಾಲದಲ್ಲಿ ಜಮ್ಮು ಕಾಶ್ಮೀರದ ಬಹುಸಂಖ್ಯಾತ ಮುಸ್ಲಿಂ ಜನಸಮುದಾಯದ ಮೇಲೆ ಭೀಕರ ದಾಳಿ ನಡೆಸಲಾರಂಭಿಸಿದ. ಈತ ಆರೆಸ್ಸೆಸ್ ನಿರ್ದೇಶನದಂತೆ 'ಕಾಶ್ಮೀರ ಪ್ರಜಾ ಪರಿಷತ್' ಎಂಬ ಸಂಘಟನೆಯನ್ನು ಪ್ರಾಯೋಜಿಸಿ ಅದರ ಮೂಲಕ ಮುಸ್ಲಿಂ ದ್ವೇಷವನ್ನು ಹರಡುವುದಕ್ಕೆ ಪ್ರಾರಂಭಿಸಿದ್ದ. ಈತನ ದಾಳಿಯಲ್ಲಿ ಹತ್ತಾರು ಸಾವಿರ ಮುಸ್ಲಿಮರು ಕೊಲ್ಲಲ್ಪಟ್ಟರು. ಲಕ್ಷಾಂತರ ಸಂಖ್ಯೆಯ ಮುಸ್ಲಿಮ್ ಜನಸಮುದಾಯ ತಮ್ಮ ಊರು ನೆಲೆಗಳನ್ನು ತೊರೆದು ವಲಸೆ ಹೋಗಬೇಕಾಯಿತು.
ರಾಜ ಹರಿಸಿಂಗ್ ನಡೆಸಿದ ಈ ದಾಳಿಗಳ ಮುಖ್ಯ ಉದ್ದೇಶ ಜಮ್ಮು ಕಾಶ್ಮೀರದಲ್ಲಿ ಬಹುಸಂಖ್ಯಾತ ಮುಸ್ಲಿಮ್ ಸಮುದಾಯವನ್ನು ಕಡಿಮೆ ಮಾಡಿ ಅಲ್ಲಿ ತನ್ನ ಸಮುದಾಯವಾದ ಡೋಗ್ರಾ ಸಮುದಾಯವನ್ನು ನೆಲೆಸುವಂತೆ ಮಾಡುವುದಾಗಿತ್ತು. ಹಾಗೆ ಮಾಡಿ ಜಮ್ಮುವಿನ ಶೇ. 60ರಷ್ಟಿದ್ದ ಮುಸ್ಲಿಂ ಜನಸಂಖ್ಯೆಯನ್ನು ದಾಳಿಗೊಳಪಡಿಸಿ, ಕಗ್ಗೊಲೆ, ನಿರ್ವಸಿತರನ್ನಾಗಿ ಮಾಡಿ ಅಲ್ಪಸಂಖ್ಯಾತ ಮಟ್ಟಕ್ಕೆ ಇಳಿಸಲಾಯಿತು. ರಾಜ ಹರಿಸಿಂಗ್ನ ಬೆಂಬಲಕ್ಕೆ ಆಗ ಆರೆಸ್ಸೆಸ್ ನಿಂತಿದ್ದಲ್ಲದೆ ಜೊತೆಗೂಡಿ ಮುಸ್ಲಿಮರ ಮೇಲೆ ದಾಳಿ ನಡೆಸಿತ್ತು. ಪಾಕಿಸ್ತಾನದ ಭಾಗದಲ್ಲಿ ಮುಸ್ಲಿಂ ಮೂಲಭೂತವಾದವನ್ನು ಪ್ರತಿಪಾದಿಸುವ ಶಕ್ತಿಗಳು ಅಲ್ಲಿನ ಮುಸ್ಲಿಮೇತರ ಜನಸಮುದಾಯದ ಮೇಲೆ ದಾಳಿ ಮಾಡಿದವು. ದೇಶ ವಿಭಜನೆಯ ಬಿಕ್ಕಟ್ಟಿನ ಸಂದರ್ಭವನ್ನು ಮತೀಯ ಹಾಗೂ ಕೋಮುವಾದವನ್ನು ಹರಡಲು, ದಾಳಿಗಳನ್ನು ನಡೆಸಲು ಈ ಶಕ್ತಿಗಳು ಚೆನ್ನಾಗಿಯೇ ಉಪಯೋಗಿಸಿಕೊಂಡವು. ರಾಜ ಹರಿಸಿಂಗ್ ತನ್ನ ದಾಳಿಗಳನ್ನು ವಿಸ್ತರಿಸತೊಡಗಿದಾಗ ಜಮ್ಮುವಿನಲ್ಲಿ ಬಂಧು ಬಳಗಗಳನ್ನು ಹೊಂದಿದ್ದ ಪಾಕಿಸ್ತಾನದ ಬುಡಕಟ್ಟು ಸೇನೆ ಜೊತೆಗೆ ಪಾಕಿಸ್ತಾನಿ ಸರಕಾರಿ ಸೇನೆ ರಾಜ ಹರಿಸಿಂಗ್ನ ಸೇನೆಯ ಮೇಲೇರಿ ಬಂದವು. ಅದನ್ನು ತಾಳಿಕೊಳ್ಳಲಾಗದೇ ಕಾಶ್ಮೀರದಿಂದ ಜಮ್ಮುವಿಗೆ ಓಡಿದ ರಾಜ ಹರಿಸಿಂಗ್ ತನ್ನ ಸ್ಥಾನ ಪಲ್ಲಟವಾಗುವ ಭಯದಿಂದ ಭಾರತದ ಸಹಾಯವನ್ನು ಕೋರಿದ.
ಈ ಸಂದರ್ಭವನ್ನು ನೆಹರೂ ಹಾಗೂ ಸರ್ದಾರ್ ಪಟೇಲರು ಉಪಯೋಗಿಸಿ ಭಾರತದೊಂದಿಗೆ ಕಾಶ್ಮೀರವನ್ನು ವಿಲೀನಗೊಳಿಸುವ ಪ್ರಸ್ತಾವನೆ ಇಟ್ಟು ಒಪ್ಪಂದಕ್ಕೆ ಬಂದರೆ ಸಹಾಯ ಮಾಡುವುದಾಗಿ ಭರವಸೆ ನೀಡಿ, ಒತ್ತಡ ಹೇರಿ ರಾಜ ಹರಿಸಿಂಗ್ನೊಂದಿಗೆ ವಿಲೀನ ಒಪ್ಪಂದಕ್ಕೆ 1947ರ ಅಕ್ಟೋಬರ್ 26ರಂದು ಸಹಿ ಮಾಡಿದರು. ನಂತರ ಭಾರತ ಸೇನೆ ಪ್ರದೇಶದ ಬುಡಕಟ್ಟು ಸೇನೆ ಹಾಗೂ ಸರಕಾರಿ ಸೇನೆಯೊಂದಿಗೆ ಯುದ್ಧದಲ್ಲಿ ತೊಡಗುತ್ತದೆ. ಇದರೊಂದಿಗೆ ಜಮ್ಮು ಕಾಶ್ಮೀರದ ಹಲವು ಭಾಗವನ್ನು ಪಾಕಿಸ್ತಾನ ಸೇನೆ ಹಾಗೂ ಭಾರತ ಸೇನೆ ತಮ್ಮ ತಮ್ಮ ಹಿಡಿತಗಳಿಗೆ ತೆಗೆದುಕೊಂಡು ಸೇನಾ ಜಮಾವಣೆಗೊಳಿಸುತ್ತದೆ. ಇದರಲ್ಲಿ ಬ್ರಿಟಿಷ್ ವಸಾಹತುಶಾಹಿ ಹಿತಾಸಕ್ತಿ ಕೂಡ ಇತ್ತು. ಈ ವಿಚಾರ ಅಂತರ್ರಾಷ್ಟ್ರೀಯಗೊಂಡು ವಿಶ್ವಸಂಸ್ಥೆಯ ಮಧ್ಯ ಪ್ರವೇಶವಾಗಿ ಒಪ್ಪಂದಕ್ಕೆ ಬಂದು ಕಾಶ್ಮೀರದ ಬಗ್ಗೆ ನಿರ್ಧರಿಸಲು ಜನಮತಗಣನೆ ನಡೆಸಬೇಕೆಂಬ ತೀರ್ಮಾನವಾಗುತ್ತದೆ. ಮೊದಲು ಎರಡೂ ದೇಶಗಳ ಸೇನೆ ಹಿಂದೆ ಸರಿದು ಜನಮತಗಣನೆಗೆ ಪೂರಕವಾದ ವಾತಾವರಣ ನಿರ್ಮಿಸಬೇಕೆಂದು ತೀರ್ಮಾನಿಸಲಾಗುತ್ತದೆ. ಆದರೆ ಅದು ಜಾರಿಯಾಗುವುದಿಲ್ಲ. ಎರಡೂ ದೇಶಗಳು ಪರಸ್ಪರ ಆರೋಪಗಳಲ್ಲಿ ಮುಳುಗುತ್ತವೆ. ಪಾಕಿಸ್ತಾನಕ್ಕೆ ಕಾಶ್ಮೀರದ ವಿಚಾರದಲ್ಲಿ ಯಾವ ಹಕ್ಕುಗಳೂ ಇಲ್ಲ ಯಾಕೆಂದರೆ ಈಗಾಗಲೇ ರಾಜ ಹರಿಸಿಂಗ್ರೊಂದಿಗೆ ವಿಲೀನ ಒಪ್ಪಂದಕ್ಕೆ ಭಾರತ ಸಹಿ ಹಾಕಿರುವುದರಿಂದ ಆ ಪ್ರಕ್ರಿಯೆ ಮುಗಿದಿದೆ. ಹಾಗಾಗಿ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಭಾರತ ವಾದಿಸುತ್ತಾ ಬಂದಿದೆ. ಹಾಗಾಗಿ ಇತರ ದೇಶಗಳಿಗೆ ಕಾಶ್ಮೀರ ವ್ಯವಹಾರಗಳಲ್ಲಿ ಮಧ್ಯ ಪ್ರವೇಶ ಮಾಡುವ ಹಕ್ಕಿಲ್ಲವೆಂದು ಹೇಳುತ್ತಿದೆ. ಪಾಕಿಸ್ತಾನ ಕೂಡ ತನಗೆ ಹಕ್ಕಿದೆಯೆಂದು, ರಾಜ ಹರಿಸಿಂಗ್ ಮೊದಲು ತಮ್ಮಿಂದಿಗೆ ಒಪ್ಪಂದಕ್ಕೆ ಸಿದ್ಧರಾಗಿದ್ದರು ಭಾರತ ಆತನಿಗೆ ಬೆದರಿಕೆಯೊಡ್ಡಿ ಬಲವಂತವಾಗಿ ತನ್ನೊಳಗೆ ವಿಲೀನಗೊಳಿಸಿದೆ ಎಂದೆಲ್ಲಾ ತನ್ನ ವಾದ ಮಂಡಿಸುತ್ತಾ ಬಂದಿದೆ. ಆದರೆ ಡೋಗ್ರಾ ರಾಜ ಹರಿಸಿಂಗ್ ಜಮ್ಮು ಕಾಶ್ಮೀರದ ಜನರ ಪ್ರತಿನಿಧಿಯಾಗಿರಲಿಲ್ಲ, ಆತನ ಹಿಡಿತವೂ ಜಮ್ಮು ಕಾಶ್ಮೀರದ ಎಲ್ಲಾ ಭೂಭಾಗಗಳ ಮೇಲೆ ಇರಲಿಲ್ಲ, ಹಾಗಾಗಿ ಆ ವಿಲೀನ ಒಪ್ಪಂದ ಊರ್ಜಿತವಾಗುವುದಿಲ್ಲ ಎನ್ನುವುದು ಕಾಶ್ಮೀರಿಗರಲ್ಲಿನ ಒಂದು ದೊಡ್ಡ ಸಂಖ್ಯೆಯವರ ವಾದ. ಅಂತರ್ರಾಷ್ಟ್ರೀಯವಾಗಿಯೂ ಈ ವಾದಕ್ಕೆ ಮನ್ನಣೆ ಇದೆ.
ಆಗಿನಿಂದಲೂ ಪಾಕಿಸ್ತಾನ, ಭಾರತ ಹಾಗೂ ಚೀನಾ ಜಮ್ಮು ಕಾಶ್ಮೀರದ ಭೂಭಾಗಗಳನ್ನು ತಮ್ಮ ಅಧೀನದಲ್ಲಿಟ್ಟುಕೊಂಡಿವೆ. ಅದರಲ್ಲಿ ಭಾರತ ಸುಮಾರು ಶೇ.55ರಷ್ಟು ಭೂಭಾಗವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದರೆ, ಪಾಕಿಸ್ತಾನ ಶೇ.30ರಷ್ಟು ಭೂಭಾಗವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಚೀನಾ ಜನವಸತಿಯಿರದ ಶೇ. 15ರಷ್ಟು ಭೂಭಾಗವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿದೆ. ಈಗಿರುವ ಗಡಿಗಳನ್ನೇ ಮೂರೂ ದೇಶಗಳ ಗಡಿ ನಿಯಂತ್ರಣ ರೇಖೆಯೆಂದು ಕರೆಯಲಾಗುತ್ತಿದೆ. ಪಾಕಿಸ್ತಾನದ ಹಿಡಿತವಿರುವ ಭಾಗ ಆಝಾದ್ ಕಾಶ್ಮೀರ ಹಾಗೂ ಗಿಲ್ಗಿಟ್ ಬಾಲ್ಟಿಸ್ತಾನವೆಂದು ಮಾಡಿಡಲಾಗಿದೆ. ಅದರಲ್ಲಿ ಆಝಾದ್ ಕಾಶ್ಮೀರ ಈಗಲೂ ಪ್ರತ್ಯೇಕ ಅಧ್ಯಕ್ಷ ಸಂಸತ್ತು ಹಾಗೂ ಪ್ರಧಾನಿಯನ್ನು ಹೊಂದಿದೆ. ಅದರದೇ ಪ್ರತ್ಯೇಕ ಸರ್ವೋಚ್ಚ ನ್ಯಾಯಾಲಯ ಹಾಗೂ ಉಚ್ಚ ನ್ಯಾಯಾಲಯವನ್ನು ಹೊಂದಿದೆ. ಆಝಾದ್ ಕಾಶ್ಮೀರ ಸರಕಾರದೊಂದಿಗೆ ಸಂಪರ್ಕ ಸಂವಹನವನ್ನು ನಡೆಸಲೆಂದೇ ಪಾಕಿಸ್ತಾನ ಸರಕಾರದಡಿ ಪ್ರತ್ಯೇಕ ಸಚಿವಾಲಯವಿದೆ. ಆದರೆ ವಿಶ್ವಸಂಸ್ಥೆ ಈಗಲೂ ಜಮ್ಮು ಮತ್ತು ಕಾಶ್ಮೀರವನ್ನು ವಿವಾದಿತ ಪ್ರಕ್ಷುಬ್ದ ಪ್ರದೇಶವೆಂದೇ ಪರಿಗಣಿಸಿದೆ. ಮೋದಿ ಸರಕಾರ ಈಗ ತೆಗೆದುಕೊಂಡ ಕ್ರಮವನ್ನೂ ಕೂಡ ವಿಶ್ವಸಂಸ್ಥೆ ಅಂಗೀಕರಿಸಿಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಳೆದ ಎಪ್ಪತ್ತು ವರ್ಷಗಳಲ್ಲಿ ಮೊದಲ ಬಾರಿ ಕಾಶ್ಮೀರದ ಬಗೆಗಿನ ಭಾರತ ಸರಕಾರದ ಈಗಿನ ಕ್ರಮವನ್ನು ಚರ್ಚೆ ನಡೆಸುವಷ್ಟು ವಿಷಯ ಅಂತರ್ರಾಷ್ಟ್ರೀಯಗೊಂಡಿದೆ. ಅಲ್ಲಿ ಮೊದಲಿನಿಂದಲೂ ಸ್ವತಂತ್ರ ಕಾಶ್ಮೀರಕ್ಕಾಗಿನ ಕೂಗು ಕೂಡ ಇದ್ದರೂ ಅದನ್ನು ಪರಿಗಣಿಸಲು ಯಾರೂ ತಯಾರಿಲ್ಲ. ರಾಜ ಹರಿಸಿಂಗ್ ಜೊತೆಗಿನ ಮೊದಲಿನ ಒಪ್ಪಂದ ಹಾಗೂ ವಿಶ್ವಸಂಸ್ಥೆಯ ತೀರ್ಮಾನದಂತೆ ಜನಮತ ಗಣನೆ ಇಲ್ಲಿಯವರೆಗೂ ನಡೆದಿಲ್ಲ. ಅದಕ್ಕೆ ಹಲವು ಕಾರಣಗಳನ್ನು ಮುಂದಿಡಲಾಗುತ್ತಿದ್ದರೂ ಮುಖ್ಯವಾದ ಕಾರಣ ಜನಮತಗಣನೆ ನಡೆದರೆ ತಮಗೆ ವ್ಯತಿರಿಕ್ತವಾದ ಒಲವು ಜನರಿಂದ ಹೊರಬೀಳಬಹುದು ಎನ್ನುವುದೇ ಪ್ರಧಾನ ಕಾರಣವಾಗಿದೆ. ಕಾಶ್ಮೀರದ ಜನರ ಅಭಿಪ್ರಾಯವಾಗಲೀ, ಕಾಶ್ಮೀರ ಸ್ವತಂತ್ರ ರಾಷ್ಟ್ರದ ಪ್ರತಿಪಾದನೆಯಾಗಲೀ ಮಾನ್ಯ ಮಾಡುವುದು ಭಾರತಕ್ಕಾಗಲೀ ಪಾಕಿಸ್ತಾನಕ್ಕಾಗಲೀ ಒಪ್ಪಿಗೆಯಾದ ವಿಚಾರವಾಗಿರಲಿಲ್ಲ. ಎರಡೂ ರಾಷ್ಟ್ರಗಳೂ ಹೇಗಾದರೂ ಮಾಡಿ ತಮ್ಮಿಳಗೆ ಜಮ್ಮು ಮತ್ತು ಕಾಶ್ಮೀರವನ್ನು ವಿಲೀನಗೊಳಿಸಿಕೊಳ್ಳಲು ಮಾತ್ರ ಉತ್ಸುಕವಾಗಿದ್ದವು. 1947ರ ರಾಜ ಹರಿಸಿಂಗ್ ಜೊತೆಗಿನ ಒಪ್ಪಂದದ ಪ್ರಕಾರ ಕಾಶ್ಮೀರ ಭಾರತದ ಭಾಗವಾಗಿರುತ್ತದೆ. ಆದರೆ ರಕ್ಷಣೆ, ವಿದೇಶಾಂಗ ವ್ಯವಹಾರ, ಸಂಪರ್ಕ ಸಂವಹನದ ಕಾರ್ಯಗಳನ್ನು ಹೊರತುಪಡಿಸಿ ಉಳಿದಂತೆ ಕಾಶ್ಮೀರ ಬೇರ್ಪಡುವುದೂ ಸೇರಿದಂತೆ ಸ್ವಯಂ ನಿರ್ಣಯಾಧಿಕಾರದ ಹಕ್ಕುಗಳೊಂದಿಗೆ ಭಾರತ ಒಕ್ಕೂಟದಲ್ಲಿ ಸ್ವಾಯತ್ತ ರಾಜ್ಯವಾಗಿರುತ್ತದೆ. ಭಾರತದ ಸಂಸತ್ತು ಅನುಮೋದಿಸುವ ಮಸೂದೆಗಳು ಹಾಗೂ ತೀರ್ಮಾನಗಳು ಕಾಶ್ಮೀರದ ಸಂವಿಧಾನ ಸಭೆಯ ಒಪ್ಪಿಗೆ ಪಡೆಯದೇ ಕಾಶ್ಮೀರದಲ್ಲಿ ಲಾಗೂಗೊಳ್ಳುವುದಿಲ್ಲ. ಆದರೆ ವಾಸ್ತವದಲ್ಲಿ ಜಮ್ಮು ಕಾಶ್ಮೀರವನ್ನು ಕಳೆದ 1947 ಅಕ್ಟೋಬರ್ನಿಂದ ಇಲ್ಲಿಯವರೆಗೂ ಭಾರತದ ಸೇನಾಡಳಿತದಲ್ಲೇ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಇರಿಸಲಾಗಿದೆ. ಕಾಶ್ಮೀರದಲ್ಲಿ ರಾಜ್ಯ ಸರಕಾರ ಕೆಲವೊಮ್ಮೆ ಇದ್ದರೂ ಸೇನೆಯಿಲ್ಲದೇ ಅಲ್ಲಿನ ಆಡಳಿತ ನಡೆದುಕೊಂಡು ಬಂದಿಲ್ಲ. ದೇಶದ ಇತರೆಡೆಯಷ್ಟು ಕೂಡ ಪ್ರಜಾತಾಂತ್ರಿಕ ಅವಕಾಶಗಳು ಕಾಶ್ಮೀರದಲ್ಲಿ ಮೊದಲಿನಿಂದಲೂ ಇರಲೇ ಇಲ್ಲ ಎನ್ನಬಹುದು. ಅದನ್ನು 1990ರಿಂದಲೂ ಸಶಸ್ತ್ರ ಪಡೆಗಳ ವಿಶೇಷಾಧಿಕಾರದಡಿಯಲ್ಲೇ ಇರಿಸಲಾಗಿದೆ. ಹಾಗಿರುವಾಗ ಸಂವಿಧಾನದಡಿ ಇದ್ದ 370ನೇ ವಿಧಿ ಎನ್ನುವ ವಿಶೇಷ ಸ್ಥಾನಮಾನ ಕೇವಲ ಕಾಗದದಲ್ಲಿ ಮಾತ್ರ ಇತ್ತು. ಕೆಲವೊಂದು ವಿಚಾರಗಳಿಗೆ ತಾಂತ್ರಿಕವಾಗಿ ಮಾತ್ರ ಅನ್ವಯವಾಗುತ್ತಿತ್ತು. 1949ರಲ್ಲಿ ಸಂವಿಧಾನಕ್ಕೆ ಸೇರ್ಪಡೆಗೊಂಡಿದ್ದ ರೂಪದಲ್ಲಿ ಈ ವಿಧಿಗಳು ಉಳಿದಿರಲಿಲ್ಲ. ಭಾರತದ ಸಂವಿಧಾನ ಅಂಗೀಕಾರಗೊಂಡಂದಿನಿಂದಲೂ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಇರುವ ವಿಶೇಷ ಹಕ್ಕುಗಳನ್ನು ಮೊಟಕುಗೊಳಿಸುವ ಕಾರ್ಯ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನಡೆಯುತ್ತಾ ಬಂದಿವೆ. ಈಗ ಮೋದಿ-2 ಸರಕಾರ ಕಾಗದದಲ್ಲಿ ಉಳಿಸಿದ್ದ 370ನೇ ಹಾಗೂ 35ಎ ವಿಧಿಗಳನ್ನು ಕೂಡ ರದ್ದು ಮಾಡಿದೆ. ದೇಶದ ಎಲ್ಲಾ ರಂಗಗಳಲ್ಲಿನ ಸಂಪೂರ್ಣ ವೈಫಲ್ಯಗಳನ್ನು ರೋಚಕತೆ ಭಾವಾವೇಶದಲ್ಲಿ ಮುಚ್ಚಿಹಾಕಿ ದೇಶದ ಯುವ ಸಮುದಾಯದ ಗಮನವನ್ನು ಇಂತಹ ಕ್ರಮಗಳ ಮೂಲಕ ಬೇರೆಡೆಗೆ ತಿರುಗಿಸಲು ಶ್ರಮಿಸುತ್ತಿದೆ. ದೇಶದ ಜನಸಾಮಾನ್ಯರನ್ನು ಪ್ರಪಾತದೆಡೆಗೆ ನೂಕುತ್ತಿರುವ ತನ್ನ ಆರ್ಥಿಕ ಹಾಗೂ ರಾಜಕೀಯ ನೀತಿಗಳು ಜನರಿಗೆ ಕಾಣಿಸದಂತೆ ಮಾಡಲು ಶ್ರಮಿಸುತ್ತಿದೆ
ಮೋದಿ ಸರಕಾರ -2 ಅಧಿಕಾರಕ್ಕೆ ಬಂದಮೇಲೆ ಕಾನೂನು ತಿದ್ದುಪಡಿಗಳು ಸಂವಿಧಾನಾತ್ಮಕ ವಿಧಿಗಳನ್ನು ರದ್ದುಪಡಿಸುವ ಕಾರ್ಯಗಳನ್ನು ತೀವ್ರಗೊಳಿಸತೊಡಗಿದೆ. ಇವುಗಳು ಬಿಡಿ ನಡೆಗಳಲ್ಲ. ವ್ಯವಸ್ಥಿತವಾದ ಯೋಜನೆಯ ಭಾಗವಾಗಿಯೇ ನಡೆಯುತ್ತಿವೆ. ಹಾಗಂತ ಇದು ಮೋದಿ ಸರಕಾರವೇ ಶುರುಮಾಡಿದ್ದು ಎಂದು ಹೇಳಲಾಗದು. ಯಾಕೆಂದರೆ ಸಂವಿಧಾನಾತ್ಮಕ ವಿಧಿಗಳನ್ನು ಸಡಿಲಗೊಳಿಸುವುದು, ಕಾರ್ಯಗತಗೊಳಿಸದೇ ಇರುವುದು, ಕೇವಲ ಪುಸ್ತಕದ ವಿಧಿಗಳಾಗಿ ಉಳಿಸುವುದು, ಕೇವಲ ತಮ್ಮ ಅನುಕೂಲದ ಉಲ್ಲೇಖಗಳಿಗೆ ಸೀಮಿತಗೊಳಿಸುವುದು, ಭಾಗಶಃ ಇಲ್ಲವೇ ಪೂರ್ಣ ಅನುಷ್ಠಾನರಹಿತಗೊಳಿಸುವುದು, ತುರ್ತು ಪರಿಸ್ಥಿತಿ ಹೇರಿ ಸಂವಿಧಾನವನ್ನೇ ಸ್ತಂಭನಗೊಳಿಸುವುದು, ತಿರುಚಿ ಉಲ್ಲೇಖಿಸುವುದು, ಉಲ್ಲಂಘಿಸುವುದು, ಸಂವಿಧಾನ ವಿರೋಧಿ ಕರಾಳ ಶಾಸನಗಳನ್ನು ಹೇರುವುದು, ಸೇನಾ ಆಡಳಿತವನ್ನು ಹೇರುವುದು.. ಹೀಗೆಲ್ಲಾ ಜಮ್ಮು ಕಾಶ್ಮೀರ, ಈಶಾನ್ಯ ಭಾರತ ಸೇರಿದಂತೆ ದೇಶದ ಎಲ್ಲಾ ಭಾಗಗಳಲ್ಲೂ ಮಾಡುತ್ತಾ ಬರಲಾಗಿದೆ ಕೇಂದ್ರ ಸರಕಾರ ಬಯಸಿದಲ್ಲಿ ಸಂವಿಧಾನಾತ್ಮಕ ರಚನೆ ಹಾಗೂ ವಿಧಿಗಳನ್ನು ಎಷ್ಟು ಸುಲಭವಾಗಿ ಬದಲಾಯಿಸಲು ಸಾಧ್ಯ ಎನ್ನುವುದನ್ನು ಕೇಂದ್ರ ಸರಕಾರದ ಈ ನಡೆ ಮತ್ತೊಮ್ಮೆ ಬಹಳ ಸ್ಪಷ್ಟವಾಗಿ ತೋರಿಸಿಕೊಟ್ಟಿದೆ. ಕಾಶ್ಮೀರದ ಬಗೆಗಿನ ಈ ನಡೆಗಳ ವಿಚಾರ ಈಗ ಸರ್ವೋಚ್ಚ ನ್ಯಾಯಾಲಯದ ಕಟ್ಟೆ ಏರಿದ್ದರೂ ಅಲ್ಲಿ ಸಾಂವಿಧಾನಿಕ ವಿಧಿಗಳು ರಕ್ಷಣೆಯಾಗಿ ಪುನರ್ ಸ್ಥಾಪನೆಯಾಗಿಬಿಡುತ್ತವೆ ಎನ್ನಬಹುದಾದ ಕಾಲಘಟ್ಟ ಕೂಡ ಇದಲ್ಲ. ಕೇಂದ್ರೀಕರಣ ಹಾಗೂ ಬ್ರಾಹ್ಮಣಶಾಹಿ ಫ್ಯಾಶಿಸ್ಟೀಕರಣದ ಸಂದರ್ಭ ಇದಾಗಿದೆ. ರಾಜ್ಯಗಳು ಅದರ ಸರಕಾರಗಳು, ಅಲ್ಲಿನ ನಿಯಮಗಳು, ಒಕ್ಕೂಟ ತತ್ವಗಳು, ಹೀಗೆ ಅವರ ನಡೆಗಳಿಗೆ ತಡೆಯಾಗಬಹುದಾದ ಎಲ್ಲವನ್ನೂ ಬದಲಾಯಿಸಿ ಅವರ ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಳ್ಳಲು ಹೊರಟಿದ್ದಾರೆ. ಹಾಗಾಗಿ ಇರುವ ಒಂದು ಮಟ್ಟದ ಸಂವಿಧಾನಾತ್ಮಕ ಅಡೆತಡೆಗಳನ್ನೂ ನಿವಾರಿಸಿಕೊಳ್ಳುವ ಧಾವಂತದಲ್ಲಿ ಭಾರೀ ಕಾರ್ಪೊರೇಟ್ ಹಾಗೂ ಆಸ್ತಿವಂತರನ್ನೊಳಗೊಂಡ ಆಳುವ ಶಕ್ತಿಗಳಿವೆ. ಯುಎಪಿಎಯಂತಹ ಕರಾಳ ಶಾಸನಗಳನ್ನು, ಏಕವ್ಯಕ್ತಿಯ ನಿರಂಕುಶ ಅಧಿಕಾರಗಳನ್ನು ಒಂದಲ್ಲಾ ಒಂದು ರೀತಿಯಲ್ಲಿ ಜನರ ಮೇಲೆ ಹೇರಲಾಗುತ್ತಿದೆ. ಚುನಾವಣೆಯೂ ಕೂಡ ಅವರ ಆಟದ ವಸ್ತುವಾಗಿ ಬಿಟ್ಟಿದೆ.
ಪ್ರಸ್ತುತ ದೇಶವನ್ನು ಅಪಾಯಕಾರಿ ಪರಿಸ್ಥಿತಿಗಳಿಗೆ ತಳ್ಳುತ್ತಿರುವ ಶಕ್ತಿಗಳು ಮತ್ತು ಅವರ ನಡೆಗಳ ಬಗ್ಗೆ ಬಹಳ ಎಚ್ಚರ ವಹಿಸಬೇಕಿದೆ. ಅಂತಹವುಗಳ ಮೇಲಿನ ಗಮನವನ್ನು ತಪ್ಪಿಸದೆ ನಮ್ಮ ಚರ್ಚೆ ಹಾಗೂ ನಡೆಗಳು ಇರಬೇಕು. ಇದನ್ನು ಜೋಡಿಸಿಕೊಳ್ಳದೆ ಸರಕಾರದ ಇಂತಹ ಜನರ ದಿಕ್ಕು ತಪ್ಪಿಸುವ ಕ್ರಮಗಳ ಬಗ್ಗೆ ಮಾತ್ರ ಪ್ರತಿಕ್ರಿಯೆಗಳಿಗೆ ಇಳಿದರೆ ಅದು ಅವರ ಬಲೆಯೊಳಗೆ ನಾವೇ ಹೋಗಿ ಸಿಲುಕುವಂತಾಗುತ್ತದೆ. ಅವರ ಉದ್ದೇಶವೂ ಪ್ರಧಾನವಾಗಿ ಅದೇ ಆಗಿರುತ್ತದೆ.
ಮಿಂಚಂಚೆ: nandakumarnandana67gmail.com