ಜಾರಿಗೆಬೈಲ್: ‘ಸೆಟಲೈಟ್ ಕರೆ’ಯ ‘ಸುಳ್ಳು ಸುದ್ದಿ ಮೂಲ’ ಇನ್ನೂ ನಿಗೂಢ !
ವ್ಯವಸ್ಥಿತವಾಗಿ ಸೃಷ್ಟಿಸಲಾಯಿತೇ ' ಸೆಟಲೈಟ್ ಕರೆ ಸುಳ್ಳು ಸುದ್ದಿ' ?
►ನ್ಯಾಯದ ನಿರೀಕ್ಷೆಯಲ್ಲಿ ಅಬ್ದುಲ್ ರವೂಫ್
►ಮಾನನಷ್ಟ ಮೊಕದ್ದಮೆ-ಮಾನನಷ್ಟ ದಾವೆ ಹೂಡಲು ನಿರ್ಧಾರ
ಮಂಗಳೂರು: ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಪಂ ವ್ಯಾಪ್ತಿಯ ನಾಳ-ಗೋವಿಂದೂರು ಮಧ್ಯೆ ಇರುವ ಜಾರಿಗೆಬೈಲ್ ಎಂಬಲ್ಲಿನ ಅಬ್ದುಲ್ ರವೂಫ್ ಎಂಬವರಿಗೆ ವಿದೇಶದಿಂದ ಸೆಟಲೈಟ್ ಕರೆ ಬಂದಿದೆ ಎಂದು ಇತ್ತೀಚಿಗೆ ಹರಡಲಾಗಿದ್ದ ಸುಳ್ಳು ಸುದ್ದಿಯ ಮೂಲ ಇನ್ನೂ ನಿಗೂಢವಾಗಿದೆ. ಜಿಲ್ಲಾ ಎಸ್ಪಿ ಅವರು ಇಂತಹ ಯಾವುದೇ ಕರೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ ಬಳಿಕವೂ ಕೆಲವು ಮಾಧ್ಯಮಗಳಲ್ಲಿ ಇದೇ ಧಾಟಿಯ ಸುದ್ದಿಗಳ ಪ್ರಸಾರ ನಿಂತಿರಲಿಲ್ಲ.
ಕೆಲವು ಟಿವಿ ಚಾನಲ್ ಗಳು ಹಾಗು ದಿನಪತ್ರಿಕೆಗಳಲ್ಲಿ ಈ ಬಗ್ಗೆ ನಿರಂತರ 'ಸುದ್ದಿ' ಪ್ರಕಟವಾಗಿ 10 ದಿನಗಳು ಕಳೆದರೂ ಕೂಡ ಈ ‘ ಸುಳ್ಳು ಸುದ್ದಿ’ ಎಲ್ಲಿಂದ ಸೃಷ್ಟಿಯಾಯಿತು? ಯಾರು ಸೃಷ್ಟಿ ಮಾಡಿದರು? ಯಾಕೆ ಮಾಡಿದರು? ವಿದೇಶಕ್ಕೆ ಸೆಟಲೈಟ್ ಕರೆ ಎಂಬ ವದಂತಿ ಸೃಷ್ಟಿಸಿದ್ದು ಯಾರು ? ಹೀಗೆ... ಪ್ರಶ್ನೆ-ಉಪಪ್ರಶ್ನೆಗಳು ಕೇಳಿ ಬರುತ್ತಿದೆಯೇ ವಿನಃ ಸ್ಪಷ್ಟ ಉತ್ತರ ಇನ್ನೂ ಸಿಗುತ್ತಿಲ್ಲ.
ಮಂಗಳೂರಿನ ಮುಸ್ಲಿಂ ಲೇಖಕರ ಸಂಘದ ನೇತೃತ್ವದಲ್ಲಿ ಬುಧವಾರ ಸತ್ಯಶೋಧನಾ ಸಮಿತಿಯು ಈ ಸುಳ್ಳು ಸುದ್ದಿ ಅಭಿಯಾನಕ್ಕೆ ಗುರಿಯಾದ ಜಾರಿಗೆಬೈಲ್‌ನ 28ರ ಹರೆಯದ ಅಬ್ದುಲ್ ರವೂಫ್, ಸ್ಥಳೀಯ ಅಂಗಡಿ ವ್ಯಾಪಾರಿಗಳು ಮತ್ತು ಬೆಳ್ತಂಗಡಿ ಪೊಲೀಸ್ ಠಾಣೆಗೆ ತೆರಳಿ ಈ ಬಗ್ಗೆ ಸಮಾಲೋಚನೆ ನಡೆಸಿದಾಗಲೂ ಕೂಡ ‘ಸುದ್ದಿ’ಯ ಖಚಿತ ಮೂಲ ಸಿಕ್ಕಿಲ್ಲ. ಅಲ್ಲದೆ ಗಂಭೀರ ವಿಷಯಗಳಿಂದ ನಾಡಿನ ಜನರ ಗಮನ ಬೇರೆ ಕಡೆ ಸೆಳೆಯುವ ಸಲುವಾಗಿ ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಸೃಷ್ಟಿಸಿದ ‘ನಕಲಿ ಸುದ್ದಿ’ ಇದು ಎಂಬ ಅಭಿಪ್ರಾಯವೂ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.
‘‘ಈ ಸುಳ್ಳು ಸುದ್ದಿಯಿಂದ ನನಗೆ ಊರಲ್ಲಿ ತಲೆ ಎತ್ತಿ ನಡೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಘಟನೆಯ ನಂತರ ಸ್ಥಳೀಯರು ನನ್ನನ್ನು ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ. ಭಯದ ವಾತಾವರಣದಲ್ಲೇ ನಾನು ಕಾಲ ಕಳೆಯುವಂತಾಗಿದೆ. ನನ್ನ ಅಥವಾ ನನ್ನ ಸಹೋದರರ ಮೇಲೆ ಈವರೆಗೆ ಯಾವುದೇ ಪೊಲೀಸ್ ಠಾಣೆಗಳಲ್ಲಿ ಒಂದೇ ಒಂದು ಪ್ರರಣವೂ ದಾಖಲಾಗಿಲ್ಲ. ಮಾಧ್ಯಮಗಳಲ್ಲಿ ನನ್ನ ಹೆಸರು ತಳುಕು ಹಾಕಿ ಸುದ್ದಿ ಪ್ರಸಾರವಾದ ತಕ್ಷಣ ನಾನು ಮಾಜಿ ಸಚಿವ, ಹಾಲಿ ಶಾಸಕ ಯು.ಟಿ.ಖಾದರ್‌ರ ಗಮನಕ್ಕೆ ತಂದು ಜಿಲ್ಲಾ ಎಸ್ಪಿಯನ್ನು ಭೇಟಿಯಾಗಿ ವಿಷಯ ತಿಳಿಸಿದೆ. ಅವರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಅಧಿಕಾರಿಗಳು ಕೂಡ ನನ್ನ ಬಗ್ಗೆ ಯಾವುದೇ ತಪ್ಪು ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಶಂಕೆಯಿಂದ ನೋಡಿಲ್ಲ. ಆದರೆ ಯಾವೊಂದು ತಪ್ಪು ಮಾಡದ ನನ್ನನ್ನು ಕೆಲವು ಮಾಧ್ಯಮಗಳು ‘ಉಗ್ರ/ಶಂಕಿತ ಉಗ್ರ’ ಇತ್ಯಾದಿಯಾಗಿ ಉಲ್ಲೇಖಿಸಿ ಮಾನಸಿಕ ನೋವು ನೀಡಿದ್ದಾರೆ. ನನಗಾದ ನೋವು, ಅವಮಾನ, ಮಾನಸಿಕ ಹಿಂಸೆಯನ್ನು ಮರಳಿ ದೊರಕಿಸಿಕೊಡಲು ಈ ಮಾಧ್ಯಮದವರಿಗೆ ಸಾಧ್ಯವಿಲ್ಲ. ಈಗಾಗಲೆ ನನಗಾದ ಅನ್ಯಾಯದ ವಿರುದ್ಧ ಕೆಲವು ಸಂಘಟನೆಗಳು ಪ್ರತಿಭಟಿಸಿವೆ. ಆದರೂ ವೈಯಕ್ತಿಕವಾಗಿ ಮಾಧ್ಯಮಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಮತ್ತು ಮಾನನಷ್ಟ ದಾವೆ ಹೂಡಲು ನಿರ್ಧರಿಸಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಸುಳ್ಳು ಸುದ್ದಿಯನ್ನು ಯಾರು ಸೃಷ್ಟಿಸಿದರು ಎಂಬುದು ಮೊದಲು ಪತ್ತೆಯಾಗಬೇಕು ಮತ್ತು ಅವರಿಗೆ ಸೂಕ್ತ ಶಿಕ್ಷೆಯಾಗಬೇಕು. ಆವಾಗಲೇ ನನಗೆ ನೆಮ್ಮದಿ’’ ಎಂದು ಅಬ್ದುಲ್ ರವೂಫ್ ಜಾರಿಗೆ ಬೈಲ್ ಹೇಳುತ್ತಾರೆ.
ನಾನು ಅಬ್ಬಾಸ್ ಮುಸ್ಲಿಯಾರ್-ಬೀಫಾತಿಮಾ ದಂಪತಿಯ ನಾಲ್ಕು ಗಂಡು ಮತ್ತು ಒಬ್ಬ ಹೆಣ್ಣು ಮಕ್ಕಳ ಪೈಕಿ ಕೊನೆಯವ. ತಂದೆ ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ ಪರಿಸರದಲ್ಲಿ ಅತ್ತರ್ ವ್ಯಾಪಾರವನ್ನೂ ಮಾಡುತ್ತಿದ್ದರು. ನನ್ನ ಐದುವರೆ ವರ್ಷ ಪ್ರಾಯದಲ್ಲಿ ತಂದೆ ನಮ್ಮನ್ನು ಅಗಲಿದರು. ಸ್ಥಳೀಯ ಶಾಲೆಯಲ್ಲಿ ಪ್ರಾಥಮಿಕ ಶಾಲೆ ಪೂರೈಸಿ ನನ್ನ 12ರ ಹರೆಯದಲ್ಲಿ ಮಂಜನಾಡಿಯ ಅಲ್ ಮದೀನಾ ಶಿಕ್ಷಣ ಸಂಸ್ಥೆ ಸೇರಿದೆ. ಅಲ್ಲೇ ಎಸೆಸೆಲ್ಸಿ ಪೂರೈಸಿ ಮುಡಿಪುವಿನ ಖಾಸಗಿ ಟ್ಯುಟೋರಿಯಲ್‌ನಲ್ಲಿ ಪಿಯುಸಿ ಮುಗಿಸಿದೆ. ನಂತರ ಅಲ್‌ಮದೀನಾದ ಸ್ಥಾಪಕ ಅಲ್ಹಾಜ್ ಅಬ್ಬಾಸ್ ಉಸ್ತಾದರ ಖಾದಿಮ್ (ಸಹಾಯಕ)ನಾಗಿ ಕೆಲಸ ಮಾಡುತ್ತಿದ್ದೆ. ಅವರ ಸಹಕಾರದಿಂದ ಜಾರಿಗೆಬೈಲ್‌ನಲ್ಲೊಂದು ಆರ್‌ಸಿಸಿ ಮನೆ ಕಟ್ಟಿಸಿದೆ. ಈ ಮನೆಯ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಆದರೂ ಕೆಲವು ಮಾಧ್ಯಮಗಳಲ್ಲಿ ನಾನೊಂದು ಬಂಗಲೆ ಕಟ್ಟಿದ್ದೇನೆ ಎಂಬಂತೆ ಚಿತ್ರಿಸಲಾಯಿತು. ಮನೆ ನಿರ್ಮಿಸಲು ಅತ್ತಿಗೆಯ ಚಿನ್ನವನ್ನು ಬ್ಯಾಂಕ್‌ನಲ್ಲಿಟ್ಟು 2 ಲಕ್ಷ ಪಡೆದಿರುವೆ. ಅದನ್ನು ಇನ್ನೂ ಬಿಡಿಸಲು ಸಾಧ್ಯವಾಗಲಿಲ್ಲ.
2018ರ ಆಗಸ್ಟ್ 15ರಂದು ನನ್ನ ಈ ಮನೆಯ ಗೃಹಪ್ರವೇಶ ಅತ್ಯಂತ ಸರಳ ರೀತಿಯಲ್ಲಿ ನಡೆಯಿತು. ಅಲ್ಲದೆ ಮರುದಿನ ಇದೇ ಮನೆಯಲ್ಲಿ ನನ್ನ ಮದುವೆಯೂ ನೆರವೇರಿತು. ಎರಡು ತಿಂಗಳ ಹಿಂದೆ ನನ್ನ ಪತ್ನಿ ಹೆಣ್ಮಗುವಿಗೆ ಜನ್ಮ ನೀಡಿದ್ದು, ಆಕೆ ಇನ್ನೂ ಆತೂರಿನ ಅವಳ ತವರು ಮನೆಯಲ್ಲೇ ಇದ್ದಾಳೆ. ನಾನು ಹೆಚ್ಚಾಗಿ ಮಂಜನಾಡಿಯಲ್ಲೇ ಇದ್ದು, ವಾರಕ್ಕೊಮ್ಮೆ ನನ್ನೀ ಮನೆಗೆ ಬಂದು ಹೋಗುತ್ತಿದ್ದೆ. ಪತ್ನಿ ಹೆರಿಗೆಗೆ ಹೋದ ಬಳಿಕ ಈ ಮನೆಯಲ್ಲಿ ಯಾರೂ ಇರುತ್ತಿರಲಿಲ್ಲ. ಹೆಚ್ಚಾಗಿ ಬಾಗಿಲು ಹಾಕಲ್ಪಡುತ್ತಿತ್ತು.
ನನ್ನ ಇಬ್ಬರು ಅಣ್ಣಂದಿರು ಬಸ್‌ನಲ್ಲಿ ಕಂಡೆಕ್ಟರ್ ಆಗಿದ್ದರು. ಇನ್ನೊಬ್ಬ ಅಣ್ಣ ಬೆಂಗಳೂರಿನಲ್ಲಿ ಇಲೆಕ್ಟ್ರಾನಿಕ್ ಅಂಗಡಿಯಲ್ಲಿದ್ದಾನೆ. ತಾಯಿ ನಮ್ಮೊಡನೆ ಇದ್ದಾರೆ. ಊರಲ್ಲಿ ನಾವು ಯಾರೊಂದಿಗೂ ದ್ವೇಷ ಕಟ್ಟಿಕೊಂಡವರಲ್ಲ. ಯಾರೊಂದಿಗೂ ಗಲಾಟೆ ಮಾಡಿದವರಲ್ಲ. ಯಾರ ತಂಟೆ-ತಕರಾರಿಗೂ ಹೋದವರಲ್ಲ. ನಾವು ನಮ್ಮಷ್ಟಕ್ಕೆ ಕಷ್ಟದ ಬದುಕು ಸಾಗಿಸುತ್ತಿದ್ದೇವೆ. ಅಗತ್ಯವಿದ್ದರೆ ಇಲ್ಲೇ ಚಂದ್ರಶೇಖರ್ ಅಥವಾ ಮುಹಮ್ಮದ್ ಅವರ ಅಂಗಡಿಗೆ ಹೋಗಿ ಸಾಮಾನು ತರುತ್ತಿರುವೆ. ಅದು ಬಿಟ್ಟು ಪೇಟೆ ಸುತ್ತಿದವನಲ್ಲ. ನನ್ನ ಅಣ್ಣಂದಿರು ಅಷ್ಟೆ, ಅವರ ಪಾಡಿಗೆ ಅವರಿದ್ದಾರೆ.
ಆಗಸ್ಟ್ 18ರಂದು ರಾತ್ರಿ ಟಿವಿ 9 ಮತ್ತು ನ್ಯೂಸ್ 9ನಲ್ಲಿ ಸೆಟಲೈಟ್ ಕರೆ ಸುದ್ದಿ ಪ್ರಸಾರವಾಯಿತು.ಆಗಸ್ಟ್ 19ರಂದು ನ್ಯೂಸ್ 18ನಲ್ಲಿ ಈ ಸುದ್ದಿ ಪ್ರಸಾರವಾಯಿತು. ಕೆಲವು ಪತ್ರಿಕೆಗಳಲ್ಲೂ ಪ್ರಕಟವಾಯಿತು. ನನ್ನ ಗುರು ಮಂಜನಾಡಿ ಅಬ್ಬಾಸ್ ಉಸ್ತಾದರ ಅಗಲಿಕೆಯಿಂದ ಶಿಷ್ಯಂದಿರೆಲ್ಲಾ ದು:ಖಿತರಾಗಿದ್ದೆವು. ಅಷ್ಟರಲ್ಲೇ ನನ್ನನ್ನು ಗುರಿಯಾಗಿಸಿಕೊಂಡು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿರುವ ಬಗ್ಗೆ ಮಾಹಿತಿ ಬಂತು. ತಕ್ಷಣ ನಾನು ಯು.ಟಿ. ಖಾದರ್‌ರ ಗಮನ ಸೆಳೆದೆ. ಅವರ ಸಲಹೆಯಂತೆ ಜಿಲ್ಲಾ ಎಸ್ಪಿಯನ್ನು ಭೇಟಿಯಾದೆ. ಆವಾಗಲೇ ನನಗೆ ಬೆಳ್ತಂಗಡಿ ಮತ್ತು ಕೊಣಾಜೆ ಠಾಣೆಯ ಅಧಿಕಾರಿಗಳಿಂದಲೂ ಕರೆ ಬಂತು. ನಾನು ಎಸ್ಪಿ ಕಚೇರಿಯಲ್ಲಿರುವ ಬಗ್ಗೆ ಮಾಹಿತಿ ನೀಡಿದೆ. ಈ ಮಧ್ಯೆ ಪೊಲೀಸರು ಅಲ್‌ಮದೀನಾ ಸಂಸ್ಥೆಗೆ ತೆರಳಿ ನನ್ನನ್ನು ವಿಚಾರಿಸಿಕೊಂಡು ಹೋದರಂತೆ. ಅಲ್ಲದೆ ಸ್ಥಳೀಯ ಪೊಲೀಸರು ಕೂಡ ನನ್ನ ಮನೆ ಮತ್ತು ಕುಟುಂಬದ ಎಲ್ಲಾ ಸದಸ್ಯರ ಮಾಹಿತಿ ಕಲೆ ಹಾಕಿದ ಬಗ್ಗೆ ಮಾಹಿತಿ ಸಿಕ್ಕಿತು. ವಿಷಯ ತಿಳಿದ ತಾಯಿ ಮೂರ್ಛೆ ಹೋದರು. ಅನಿವಾರ್ಯವಾಗಿ ನಾನು ನೇರ ಮನೆಗೆ ಬಂದು ತಾಯಿಯನ್ನು ಉಪಚರಿಸಬೇಕಾಯಿತು. ಘಟನೆ ನಡೆದು ಇದೀಗ 10 ದಿನವಾಯಿತು. ಸುಳ್ಳು ಸುದ್ದಿಯ ಮೂಲ ಯಾವುದು ಎಂಬುದು ಈವರೆಗೂ ನನಗೆ ಗೊತ್ತಾಗಿಲ್ಲ. ಈ ಸುದ್ದಿಯನ್ನು ಸೃಷ್ಟಿಸಿದವರು ಯಾರು ಎಂದು ಗೊತ್ತಾಗಬೇಕು ಮತ್ತು ಅವರಿಗೆ ಶಿಕ್ಷೆಯಾಗಬೇಕು. ಇದೇ ನನ್ನ ಆಗ್ರಹವಾಗಿದೆ.
ನನಗೆ ಸೆಟಲೈಟ್ ಅಂದರೆ ಏನೂಂತ ಗೊತ್ತಿರಲಿಲ್ಲ. ಅದನ್ನು ಈವರೆಗೂ ನಾನು ನೋಡಿಯೂ ಇಲ್ಲ. ಈಗ ನೋಡುವ ಮನಸ್ಸಾಗಿದೆ. ನನ್ನಂತಹವನಿಗೆ ಉಗ್ರ/ಶಂಕಿತ ಉಗ್ರ ಎಂಬ ಹಣೆಪಟ್ಟಿ ಕಟ್ಟಿರುವುದರಿಂದ ತುಂಬಾ ಬೇಸರವಾಗಿದೆ. ಕಡು ಬಡತನವಿದ್ದರೂ ಮರ್ಯಾದೆಗೆ ಅಂಜಿ ಬದುಕುವವರನ್ನು ಸಮಾಜದಲ್ಲಿ ಹೀಗೆ ಬಿಂಬಿಸಿದರೆ ಹೇಗೆ? ಈ ಪರಿಸರದಲ್ಲಿ ರವೂಫ್ ಎಂಬ ಹೆಸರಿನ ಐದಾರು ಮಂದಿ ಇದ್ದಾರೆ. ಆದರೆ ಧಾರ್ಮಿಕ ಸಂಸ್ಥೆಯಲ್ಲಿರುವವ ನಾನು ಮಾತ್ರ. ನನ್ನನ್ನು ಮೌಲವಿ ಎಂದು ಚಿತ್ರಿಸಲಾಗಿದೆ. ನಾನು ಮೌಲವಿ ಅಲ್ಲ, ಉಸ್ತಾದರ ಸಹಾಯಕ ಮಾತ್ರ. ನನ್ನ ಉಸ್ತಾದ್ ಅಬ್ಬಾಸ್ ಮುಸ್ಲಿಯಾರ್ ತೀವ್ರ ಅನಾರೋಗ್ಯಕ್ಕೀಡಾದ ಸಂದರ್ಭ ಅವರ ಆರೋಗ್ಯವನ್ನು ವಿಚಾರಿಸಿಕೊಂಡು ಉಸ್ತಾದರ ಇಬ್ಬರು ಆತ್ಮೀಯರು ನನ್ನ ಮೊಬೈಲ್‌ಗೆ ಇಂಟರ್‌ನೆಟ್ ಕರೆ ಮಾಡಿದ್ದರು. ಅದು ಬಿಟ್ಟು ಬೇರೆ ಯಾರೂ ನನಗೆ ವೈಯಕ್ತಿಕವಾಗಿ ಕರೆ ಮಾಡಿಲ್ಲ. ನಾನೂ ಯಾರಿಗೂ ಕರೆ ಮಾಡಲು ಹೋಗಿಲ್ಲ. ಸೆಟಲೈಟ್ ಕರೆಯಂತೂ ಏನೆಂದೇ ನನಗೆ ಗೊತ್ತಿಲ್ಲ .
ಸೆಟಲೈಟ್ ಕರೆಯ ಬಗ್ಗೆ ಕೆಲವು ಮಾಧ್ಯಮಗಳೇ ಸುದ್ದಿ ಹಬ್ಬಿಸಿದವು . ನಮಗಂತೂ ಈ ಕರೆಯ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹಾಗಾಗಿ ಸಮಾಜದ ಹಿತದೃಷ್ಟಿಯಿಂದ ಸುದ್ದಿಯ ಮೂಲದ ಬಗ್ಗೆ ಆ ಮಾಧ್ಯಮಗಳೇ ಬಹಿರಂಗಪಡಿಸಿದರೆ ಒಳ್ಳೆಯದು. ನಾನು ಈ ಠಾಣೆಗೆ ಬಂದು 3-4 ವರ್ಷವಾಯಿತು. ಜಾರಿಗೆಬೈಲು-ಗೋವಿಂದೂರು ಪರಿಸರದಿಂದ ವರ್ಷಕ್ಕೆ ಒಂದೆರಡು ದೂರುಗಳಷ್ಟೇ ಬರುತ್ತದೆ. ಅಷ್ಟೊಂದು ಶಾಂತಿಯುತ ಪ್ರದೇಶವದು. ಇನ್ನು ಅಬ್ದುಲ್ ರವೂಫ್ ಅಥವಾ ಅವರ ಸಹೋದರರ ಬಗ್ಗೆ ಈವರೆಗೆ ನಮ್ಮಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
ರವಿ ಬಿ.ಎಸ್. - ಸಬ್ ಇನ್ಸ್‌ಪೆಕ್ಟರ್,ಬೆಳ್ತಂಗಡಿ ಪೊಲೀಸ್ ಠಾಣೆ
ನಾನು ಹಲವು ವರ್ಷದಿಂದ ಅಬ್ದುಲ್ ರವೂಫ್‌ನನ್ನು ನೋಡುತ್ತಿದ್ದೇನೆ. ತುಂಬಾ ಒಳ್ಳೆಯವರು. ಯಾರು, ಯಾಕೆ ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಿದರು ಅಂತ ಗೊತ್ತಾಗುತ್ತಿಲ್ಲ.
ವಿಜಯಲಕ್ಷ್ಮಿ- ಸ್ಥಳೀಯ ಅಂಗಡಿ ವ್ಯಾಪಾರಿ
ಸುದ್ದಿ ಪ್ರಸಾರವಾದ ಸಂದರ್ಭ ಬೆಳ್ತಂಗಡಿ ಪೊಲೀಸರು ನಾನಿರುವ ಅಂಗಡಿ-ಕಟ್ಟಡದಲ್ಲಿ ಸಿಸಿ ಕ್ಯಾಮರಾ ಪರಿಶೀಲಿಸಿದ್ದಾರೆ. ಅಲ್ಲದೆ ಈ ಕಟ್ಟಡದ ಹಿಂಬದಿಯಲ್ಲಿ ವಾಸ ಮಾಡುವ ಉತ್ತರ ಭಾರತ ಮೂಲದ ಐದಾರು ಕೂಲಿ ಕಾರ್ಮಿಕರ ಮಾಹಿತಿ ಕಲೆ ಹಾಕಿದ್ದಾರೆ. ಅದು ಬಿಟ್ಟರೆ ಈ ಪರಿಸರದಲ್ಲಿ ಬೇರೇನೂ ನಡೆದಿಲ್ಲ. ಇನ್ನು ಅಬ್ದುಲ್ ರವೂಫ್ ಕುಟುಂಬದ ಒಳ್ಳೆಯತನಕ್ಕೆ ಎರಡು ಮಾತಿಲ್ಲ. ಕಷ್ಟಪಟ್ಟು ಬದುಕಿನಲ್ಲೊಂದು ನೆಲೆ ನಿಂತವರು.
ಮುಹಮ್ಮದ್ - ಸ್ಥಳೀಯ ಅಂಗಡಿ ವ್ಯಾಪಾರಿ
ಈ ರವೂಫ್ ಪಾಪದ ಹುಡುಗ. ನಾನು ಅವನ ತಂದೆಯ ಕಾಲದಿಂದಲೇ ಅವರ ಕುಟುಂಬದವರನ್ನು ಬಲ್ಲೆ. ಈ ಸೆಟಲೈಟು... ಫೋನ್ ಕರೆ... ನನಗೆ ಒಂದೂ ಅರ್ಥವಾಗುತ್ತಿಲ್ಲ. ನಮ್ಮ ಊರಿಗೆ ಈವರೆಗೆ ಯಾವ ಕೆಟ್ಟ ಹೆಸರೂ ಬಂದಿಲ್ಲ. ನಾವೆಲ್ಲಾ ಇಲ್ಲಿ ಅನ್ಯೋನ್ಯತೆಯಿಂದಲೇ ಇದ್ದೇವೆ. ಈ ಸುಳ್ಳು ಸುದ್ದಿ ಹಬ್ಬಿಸಿದ್ದರಿಂದ ಇವರಿಗೆ ಯಾವ ಲಾಭವಾಯಿತೋ ನನಗೆ ಗೊತ್ತಾಗುತ್ತಿಲ್ಲ.
ನಾರಾಯಣ ಪೂಜಾರಿ - ಸ್ಥಳೀಯ ನಿವಾಸಿ
ಆಗಸ್ಟ್ 2ನೆ ವಾರ ಸುರಿದ ಭಾರೀ ಮಳೆಗೆ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಭಾರೀ ಹಾನಿ ಸಂಭವಿಸಿತ್ತು. ಆಡಳಿತ ವರ್ಗದ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸುವ ಮುನ್ನವೇ ಈ ಸುಳ್ಳು ಸುದ್ದಿ ಹಬ್ಬಿ ಜನರ ಮನಸ್ಸನ್ನು ಬೇರೆ ಕಡೆ ಸೆಳೆಯುವ ಪ್ರಯತ್ನ ಮಾಡಿದ್ದಾರೆ . ಗೋವಿಂದೂರಿನ ಜಾರಿಗೆಬೈಲ್ ಮಾತ್ರವಲ್ಲ, ಪಟ್ರಮೆ ಗ್ರಾಮದ ಪಟ್ಟೂರ್‌ನಿಂದಲೂ ಸೆಟಲೈಟ್ ಕರೆ ಹೋಗಿದೆ ಎಂದು ಕೆಲವು ಮಾಧ್ಯಮಗಳು ಸುದ್ದಿ ಮಾಡಿದವು . ಅಲ್ಲಿ ದಲಿತರು, ಬಂಟರು, ಬ್ರಾಹ್ಮಣರ ಸಹಿತ 25 ಕುಟುಂಬಗಳು ವಾಸಿಸುತ್ತಿವೆ. ಹಾಗಿದ್ದರೆ ಅಲ್ಲಿರುವವರೂ ಉಗ್ರರಾ?. ಎಲ್ಲರೂ ಸೇರಿ ಮಾನನಷ್ಟ ಮೊಕದ್ದಮೆ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸುವ ಮೂಲಕ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಪಾಠ ಕಲಿಸಬೇಕಿದೆ.
ಬಿ.ಎಂ. ಭಟ್ - ಸ್ಥಳೀಯ ನ್ಯಾಯವಾದಿ, ಕಾರ್ಮಿಕ ಸಂಘಟನೆಗಳ ನಾಯಕ
ಜಾರಿಗೆಬೈಲ್‌ನ ಅಬ್ದುಲ್ ರವೂಫ್ ವಿಚಾರದಲ್ಲೂ ಕೆಲವು ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸಿದ ಹಿನ್ನೆಲೆಯಲ್ಲಿ ಲೇಖಕರ ಸಂಘವು ಸತ್ಯ ಸಂಗತಿ ಬಹಿರಂಗಪಡಿಸಲು ಮುಂದಾಗಿದೆ. ಅಕ್ಷರ ಭಯೋತ್ಪಾದನೆಯ ವಿರುದ್ಧ ನಾವು ನಮ್ಮದೇ ರೀತಿಯಲ್ಲಿ ಔಷಧ ಕಂಡು ಹಿಡಿಯುವ ಪ್ರಯತ್ನ ಮಾಡುತ್ತಿದ್ದೇವೆ.
ಉಮರ್ ಯು.ಎಚ್. - ಅಧ್ಯಕ್ಷರು, ಮುಸ್ಲಿಂ ಲೇಖಕರ ಸಂಘ-ಮಂಗಳೂರು