ಗಣೇಶ ಚತುರ್ಥಿ ನಿಮಿತ್ತ ವಿಶೇಷ ರೈಲು ಸಂಚಾರ
ಸಾಂದರ್ಭಿಕ ಚಿತ್ರ
ಬೆಂಗಳೂರು, ಆ.28: ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಸೂಚನೆಯ ಮೇರೆಗೆ ನೈಋತ್ಯ ರೇಲ್ವೆಯು ಗಣೇಶ ಚತುರ್ಥಿಯ ನಿಮಿತ್ತ ಪ್ರಯಾಣಿಕರ ಅನುಕೂಲಕ್ಕಾಗಿ ವಿಜಯಪುರ(ಬಿಜಾಪುರ)-ಮೈಸೂರು ನಡುವೆ ವಿಶೇಷ ರೈಲನ್ನು ಓಡಿಸಲಿದೆ.
ರೈಲು ಸಂಖ್ಯೆ 06583 ಶುಕ್ರವಾರ ಮೈಸೂರಿನಿಂದ ಮಧ್ಯಾಹ್ನ 12-50ಕ್ಕೆ ಹೊರಟು ಶನಿವಾರ ಬೆಳಗ್ಗೆ 10-20ಕ್ಕೆ ವಿಜಯಪುರ ತಲುಪಲಿದೆ. ಹಾಗೂ ರೈಲು ಸಂಖ್ಯೆ 06584, ಸೆ.2ರಂದು(ಸೋಮವಾರ) ಸಂಜೆ 6ಕ್ಕೆ ವಿಜಯಪುರದಿಂದ ಹೊರಟು ಮೈಸೂರಿಗೆ ಮರುದಿನ ಮಧ್ಯಾಹ್ನ 1-05ಕ್ಕೆ ತಲುಪಲಿದೆ.
ಇದರ ಮಾರ್ಗದಲ್ಲಿ ಮಂಡ್ಯ-ರಾಮನಗರ-ಬೆಂಗಳೂರು-ಯಶವಂತಪುರ -ತುಮಕೂರು-ಅರಸೀಕೆರೆ-ಚಿತ್ರದುರ್ಗ-ಬಳ್ಳಾರಿ-ಹೊಸಪೇಟೆ-ಕೊಪ್ಪಳ-ಗದಗ- ಬಾದಾಮಿ-ಬಾಗಲಕೋಟೆ-ಆಲಮಟ್ಟಿ-ಬಸವನ ಬಾಗೇವಾಡಿ ಮೊದಲಾದ ನಿಲ್ದಾಣಗಳಲ್ಲಿ ನಿಲುಗಡೆ ಕಲ್ಪಿಸಲಾಗಿದೆ. ಈ ರೈಲಿನಲ್ಲಿ ಒಟ್ಟು ಹದಿನಾರು ಕೋಚುಗಳಿದ್ದು 2 ಸಾಮಾನ್ಯ/ಲಗೇಜ್, 2 ತೃತೀಯ ಎಸಿ, 12 ಸ್ಲೀಪರ್ ಕೋಚುಗಳಿವೆ. ಅಲ್ಲದೆ, ರೈಲು ಸಂಖ್ಯೆ 06585, ಆ.31ರಂದು ಶನಿವಾರ ವಿಜಯಪುರದಿಂದ ರಾತ್ರಿ 10ಕ್ಕೆ ಹೊರಟು ಹುಬ್ಬಳ್ಳಿಗೆ ರವಿವಾರ ಬೆಳಗ್ಗೆ 4ಕ್ಕೆ ತಲುಪುವಂತೆ ಮತ್ತು ರೈಲು ಸಂಖ್ಯೆ 06586 ಹುಬ್ಬಳ್ಳಿಯಿಂದ ಸೆ.1ರಂದು ರವಿವಾರ ರಾತ್ರಿ 10-30ಕ್ಕೆ ಹೊರಟು ವಿಜಯಪುರಕ್ಕೆ ಸೋಮವಾರ ಬೆಳಗ್ಗೆ 4-45ಕ್ಕೆ ತಲುಪುವಂತೆ ವಿಶೇಷ ರೈಲಿನ ವ್ಯವಸ್ಥೆಯನ್ನು ಮಾಡಲಾಗಿದೆ. ಈ ರೈಲಿನಲ್ಲಿ ಒಟ್ಟು ಹದಿನಾರು ಕೋಚುಗಳಿದ್ದು 2 ಸಾಮಾನ್ಯ/ಲಗೇಜ್, 2 ತೃತೀಯ ಎಸಿ ಹಾಗೂ 12 ಸ್ಲೀಪರ್ ಕೋಚುಗಳಿರಲಿವೆ ಎಂದು ಪ್ರಕಟನೆ ತಿಳಿಸಿದೆ.