ಬಿಬಿಎಂಪಿಯಿಂದ ಉಚಿತ ರೋಟಾ ವೈರಸ್ ಲಸಿಕೆ: ಮೇಯರ್ ಗಂಗಾಂಬಿಕೆ
ಬೆಂಗಳೂರು, ಆ.28: ಮಕ್ಕಳಲ್ಲಿ ರೋಟಾ ವೈರಸ್ ಸೋಂಕು(ಅತಿಸಾರ ಭೇದಿ) ತಡೆಗಟ್ಟುವ ಉದ್ದೇಶದಿಂದ ಸರಕಾರ ಹಾಗೂ ಪಾಲಿಕೆಯಿಂದ ಉಚಿತವಾಗಿ ರೋಟಾವೈರಸ್ ಲಸಿಕೆ ಹಾಕಲಾಗುತ್ತಿದೆ ಎಂದು ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಹೇಳಿದ್ದಾರೆ.
ಬುಧವಾರ ನಗರದ ಸಿದ್ದಯ್ಯ ರೆಫರಲ್ ಆಸ್ಪತ್ರೆ ಆವರಣದಲ್ಲಿ ಬಿಬಿಎಂಪಿ ವತಿಯಿಂದ ಒಂದು ವರ್ಷದೊಳಗಿನ ಮಕ್ಕಳಿಗೆ ಉಚಿತವಾಗಿ ರೋಟಾ ವೈರಸ್ ಲಸಿಕೆ ಹಾಕುವ ಯೋಜನೆಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ಪಾಲಿಕೆಯ ಆರೋಗ್ಯ ಇಲಾಖೆಯಿಂದ ಎಲ್ಲಾ ಹೆರಿಗೆ ಆಸ್ಪತ್ರೆ, ರೆಫರಲ್ ಆಸ್ಪತ್ರೆ, ಜಿಲ್ಲಾಸ್ಪತ್ರೆ, ಆರೋಗ್ಯ ಕೇಂದ್ರಗಳು, ಔಷಧಾಯಲಗಳು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಪ್ರತಿ ಮಂಗಳವಾರ ಮತ್ತು ಗುರುವಾರ ಉಚಿತವಾಗಿ ಲಸಿಕೆ ನೀಡಲಾಗುವುದು. ಇದನ್ನು ಎಲ್ಲರೂ ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಸರಕಾರ ಹಾಗೂ ಬಿಬಿಎಂಪಿ ವತಿಯಿಂದ ಬಡವರ ಪರವಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಅದರ ಸದುಪಯೋಗವನ್ನು ಎಲ್ಲರೂ ಪಡೆಯಬೇಕು. ಅಲ್ಲದೆ ವೈದ್ಯಕೀಯ ವಿಷಯಕ್ಕೆ ಸಂಬಂಧಿಸಿದಂತೆಯೂ ಅನೇಕ ಸೌಲಭ್ಯಗಳನ್ನು ಜಾರಿಗೊಳಿಸಲಾಗಿದೆ ಎಂದರು.
ಮಕ್ಕಳಿಗೆ ಪಾಲಿಕೆಯಿಂದ ಉಚಿತವಾಗಿ ರೋಟಾ ವೈರೆಸ್ ಲಸಿಕೆ ಹಾಕಲಾಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಒಂದು ಸಲ ಲಸಿಕೆ ಹಾಕಿಸಬೇಕಾದರೆ 2 ಸಾವಿರ ರೂ. ವ್ಯಯಿಸಬೇಕು. ಆದರೆ, ಪಾಲಿಕೆಯಿಂದ ಉಚಿತವಾಗಿ ಮೂರು ಬಾರಿ ಲಸಿಕೆ ಹಾಕುತ್ತಿದ್ದೇವೆ ಎಂದು ನುಡಿದರು.
ಆಶಾಕಾರ್ಯಕರ್ತೆಯರು, ಸಹಾಯಕ ಆರೋಗ್ಯಾಧಿಕಾರಿಗಳು ಹಾಗೂ ಆರೋಗ್ಯಾಧಿಕಾರಿಗಳು ಮಕ್ಕಳ ಪೋಷಕರಿಗೆ ಈ ಲಸಿಕೆ ಕುರಿತ ಮಾಹಿತಿ ನೀಡಿ ಲಸಿಕೆ ಹಾಕಿಸುವಂತೆ ಸೂಚಿಸಿ ಎಂದು ತಿಳಿಸಿದರು.
ಪಾಲಿಕೆಯ 198ವಾರ್ಡ್‌ಗಳಲ್ಲಿನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸುಮಾರು 98 ಲಕ್ಷ ಜನಸಂಖ್ಯೆಯಿದ್ದು, ಪ್ರತಿ ವರ್ಷ ಸುಮಾರು 1.50 ಲಕ್ಷ ಮಕ್ಕಳು ಜನಿಸುತ್ತಿದ್ದಾರೆ. ಈ ಮಕ್ಕಳ ಆರೋಗ್ಯದ ಕಡೆ ಗಮನ ಹರಿಸುವುದು ಆಡಳಿತದಲ್ಲಿರುವವರ ಕರ್ತವ್ಯವಾಗಿದೆ ಎಂದು ಹೇಳಿದರು.
ದೇಶದಲ್ಲಿ ಪ್ರತೀ ವರ್ಷವು ಮಾರಕ ರೋಗಗಳಿಂದ ಲಕ್ಷಾಂತರ ಮಕ್ಕಳು ಮರಣ ಹೊಂದುತ್ತಿದ್ದಾರೆ. ಈ ಸಂಬಂಧ ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಸರಕಾರವು ಅನೇಕ ಲಸಿಕಾ ಕಾರ್ಯಕ್ರಮಗಳನ್ನು ಜಾರಿಗೆ ತಂದು ಲಸಿಕೆ ನೀಡಲಾಗುತ್ತಿದೆ. ಇದರ ಉಪಯೋಗವನ್ನು ಬಡಜನರು ಪಡೆದುಕೊಳ್ಳಬೇಕು ಎಂದು ತಿಳಿಸಿದರು.