ಈ ದೇಶದಲ್ಲಿ ಇನ್ನು 2 ತಿಂಗಳು ಬೆಂಕಿ ಉರಿಸಲು ನಿಷೇಧ!
ಕಾರಣವೇನು ಗೊತ್ತಾ?
ಪೋರ್ಟೊ ವೆಲ್ಹೊ (ಬ್ರೆಝಿಲ್), ಆ. 29: ಬ್ರೆಝಿಲ್ನಾದ್ಯಂತ ಇನ್ನು ಎರಡು ತಿಂಗಳ ಕಾಲ ಬೆಂಕಿ ಉರಿಸುವುದನ್ನು ನಿಷೇಧಿಸುವ ಆದೇಶವೊಂದಕ್ಕೆ ದೇಶದ ಅಧ್ಯಕ್ಷ ಜೈರ್ ಬೊಲ್ಸೊನಾರೊ ಬುಧವಾರ ಸಹಿ ಹಾಕಿದ್ದಾರೆ ಎಂದು ಸರಕಾರಿ ಮೂಲಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಅಮೆಝಾನ್ ಅರಣ್ಯದಲ್ಲಿ ಉರಿಯುತ್ತಿರುವ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಬ್ರೆಝಿಲ್ ಅಧಿಕಾರಿಗಳು ಹೆಣಗಾಡುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದೆ.
ಜಾಗತಿಕ ಹವಾಮಾನವನ್ನು ನಿಯಂತ್ರಣದಲ್ಲಿ ಇಡುವ ಜಗತ್ತಿನ ಅತಿ ದೊಡ್ಡ ದಟ್ಟಾರಣ್ಯ ಅಮೆಝಾನ್ನಲ್ಲಿ ತಿಂಗಳುಗಳಿಂದ ಎಡೆ ಬಿಡದೆ ಉರಿಯುತ್ತಿರುವ ಬೆಂಕಿಯ ಬಗ್ಗೆ ಜಾಗತಿಕ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ.
ಅಮೆಝಾನ್ ಬೆಂಕಿಯ ವಿಚಾರದಲ್ಲಿ ಬ್ರೆಝಿಲ್ ಮತ್ತು ಐರೋಪ್ಯ ಒಕ್ಕೂಟದ ನಡುವೆ ಸಂಘರ್ಷ ಏರ್ಪಟ್ಟಿದ್ದು, ಮಹತ್ವದ ವ್ಯಾಪಾರ ಒಪ್ಪಂದವೊಂದನ್ನು ರದ್ದುಪಡಿಸುವ ಬೆದರಿಕೆಯನ್ನು ಐರೋಪ್ಯ ಒಕ್ಕೂಟ ಒಡ್ಡಿದೆ.
ಬೊಲ್ಸೊನಾರೊ ನೇತೃತ್ವದ ಬಲಪಂಥೀಯ ಸರಕಾರ ಬ್ರೆಝಿಲ್ನಲ್ಲಿ ಈ ವರ್ಷದ ಆರಂಭದಲ್ಲಿ ಅಧಿಕಾರಕ್ಕೆ ಬಂದಂದಿನಿಂದ ಅಮೆಝಾನ್ ಅರಣ್ಯ ನಾಶ ಪ್ರಮಾಣದಲ್ಲಿ ಹಲವು ಪಟ್ಟು ಏರಿಕೆ ಕಂಡುಬಂದಿದೆ ಎಂಬ ಆರೋಪಗಳಿವೆ. ಜಾಗತಿಕ ಪರಿಸರವನ್ನು ಕಾಪಾಡುವ ಅಮೆಝಾನ್ ದಟ್ಟಾರಣ್ಯದ ಬೆಂಕಿ ನಂದಿಸಲು ಬೊಲ್ಸೊನಾರೊ ಸರಕಾರ ಉತ್ಸುಕವಾಗಿಲ್ಲ ಎಂಬ ಆರೋಪಗಳಿವೆ.