ಸಿದ್ದರಾಮಯ್ಯರ ತಮ್ಮ ಕಾಲನ್ನು ಯಾರೂ ಎಳೆಯದಂತೆ ನೋಡಿಕೊಳ್ಳಲಿ: ಸಿ.ಟಿ.ರವಿ
ಬೆಂಗಳೂರು, ಆ.30: ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯರ ಕಾಲೆಳೆಯೋರು ಹೆಚ್ಚಾಗಿದ್ದಾರೆ. ಹೀಗಾಗಿ ಅವರು ಮೊದಲು ತಮ್ಮ ಕಾಲನ್ನು ಯಾರೂ ಎಳೆಯದಂತೆ ನೋಡಿಕೊಳ್ಳಲಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.
ಶುಕ್ರವಾರ ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾದಲ್ಲಿ ಕನ್ನಡ ಧ್ವಜಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಟ್ವೀಟ್ ಗಳಿಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ಪ್ರಶ್ನಾತೀತ ನಾಯಕ ಅಂದುಕೊಂಡಿದ್ದೆವು. ಅವರಲ್ಲಿ ಇನ್ನೂ ಪ್ರತಿಪಕ್ಷ ನಾಯಕ ಯಾರೆಂದು ನಿರ್ಧಾರ ಆಗಿಲ್ಲ. ಈ ಬಗ್ಗೆ ಅವರು ಗಮನ ವಹಿಸಲಿ ಎಂದು ವ್ಯಂಗ್ಯವಾಡಿದ್ದಾರೆ.
ಕನ್ನಡ ಧ್ವಜವನ್ನು ಸಾಂಸ್ಥಿಕವಾಗಿ ನಾನು ಪರಿಗಣಿಸುತ್ತೇನೆ. ಕನ್ನಡ ಧ್ವಜವನ್ನು ನಾನು ಹಾರಿಸಿದ್ದೇನೆ. ನನ್ನ ಕನ್ನಡ ಪ್ರೇಮದ ಬಗ್ಗೆ ಯಾವುದೇ ಅನುಮಾನ ಬೇಡ. ಆದರೆ, ಸಂವಿಧಾನದಲ್ಲಿ ಪ್ರಾದೇಶಿಕ ಧ್ವಜಕ್ಕೆ ಅವಕಾಶ ಕೊಟ್ಟಿಲ್ಲವೆಂದು ಹೇಳಿದ್ದೆ. ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದು ಅವರು ಹೇಳಿದರು.
ಅಪಘಾತ ಮಾಡಿಬಿಟ್ಟರೆ...
ನಾನು ಕಾಲು ಜಾರದೆ ಹಾಗೆ ಎಚ್ಚರದಿಂದ ನಾಲ್ಕು ದಶಕಗಳ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ನೀವು ಇನ್ನೂ ಯುವಕರು, ಹೆಚ್ಚು ಸ್ಪೀಡಾಗಿ ಹೋಗಬೇಡಿ. ಜೋಪಾನ. ಅಪಘಾತ ಮಾಡಿಬಿಟ್ಟರೆ ಎಲ್ಲ ಸಂದರ್ಭಗಳಲ್ಲಿಯೂ ರಕ್ಷಣೆಗೆ ಹಿತೈಷಿಗಳಿರುವುದಿಲ್ಲ.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ