varthabharthi


ಕಾಲಂ 9

ಒಳಮೀಸಲಾತಿಯ ತತ್ವವಿಲ್ಲದೆ ಮೀಸಲಾತಿಗೆ ಸತ್ವವಿರದು

ವಾರ್ತಾ ಭಾರತಿ : 31 Aug, 2019
ಶಿವಸುಂದರ್

ಸಾಮಾಜಿಕ ನ್ಯಾಯಪ್ರಜ್ಞೆಯ ಫಲಿತವಾದ ಮೀಸಲಾತಿಯ ಫಲಾನುಭವಿಗಳೂ ಸಹ ಒಳಮೀಸಲಾತಿಯ ಪ್ರಶ್ನೆ ಬಂದಾಗ ಅದರ ವಿರುದ್ಧ ಪ್ರತಿಭೆ, ಅರ್ಹತೆಗಳೆಂಬ ಬ್ರಾಹ್ಮಣೀಯ ಕುತರ್ಕವನ್ನೇ ಬಳಸುತ್ತಿರುವುದು ಅತ್ಯಂತ ಆತ್ಮಘಾತುಕವಾಗಿದೆ. ಇಂತಹ ವಾದಗಳು ಒಳಮೀಸಲಾತಿಯನ್ನು ಮಾತ್ರವಲ್ಲದೆ ಮೀಸಲಾತಿಯ ಸಾಂವಿಧಾನಿಕ ಬುನಾದಿಯನ್ನೇ ನಿರಾಕರಿಸುವ ಮನುವಾದಿ ಚಿಂತನಾ ಕ್ರಮವೆಂಬುದನ್ನು ಅರಿಯದಷ್ಟು ಸಂಕುಚಿತತೆ ಆವರಿಸಿಕೊಂಡಿದೆ.


ಇದೊಂದು ವಿಷಮ ವೈರುಧ್ಯಗಳ ಕಾಲ. ಒಂದೆಡೆ ಕರ್ನಾಟಕದಲ್ಲಿ ಬಿಜೆಪಿ ಗೋವಿಂದ ಕಾರಜೋಳರನ್ನು ಮೊದಲನೇ ಉಪಮುಖ್ಯಮಂತ್ರಿ ಮಾಡಿದೆ. ಆ ಮೂಲಕ ದಲಿತ ಸಮುದಾಯದಲ್ಲಿ 90ರ ದಶಕದಿಂದಲೂ ತಾನು ಪೋಷಿಸುತ್ತಾ ಬಂದಿರುವ ಒಳಪಂಗಡ ಒಡಕನ್ನು ತನ್ನ ಪರವಾಗಿ ಮತ್ತಷ್ಟು ಸದೃಢೀಕರಿಸಿಕೊಂಡಿದೆ. ಹಾಗೂ ಕಾಂಗ್ರೆಸ್ ಮತ್ತು ಇನ್ನಿತರ ಪಕ್ಷಗಳಿಗಿಂತಲೂ ತಾನೇ ಹೆಚ್ಚು ದಲಿತ ಪರ ಎಂದು ಪ್ರಚಾರವನ್ನು ಮಾಡಿಕೊಳ್ಳುತ್ತಿದೆ. ಮತ್ತೊಂದೆಡೆ ಬಿಜೆಪಿಯ ಮಾತೃಸಂಸ್ಥೆಯಾದ ಆರೆಸ್ಸೆಸ್‌ನ ಸರಸಂಘ ಚಾಲಕ ಮೋಹನ್ ಭಾಗವತ್ ಮೀಸಲಾತಿಯ ಪ್ರಸ್ತುತತೆ ಏನು ಎಂಬ ಪ್ರಶ್ನೆಯನ್ನು ಮತ್ತೊಮ್ಮೆ ಪರೋಕ್ಷವಾಗಿ ದೇಶದ ಮುಂದಿಟ್ಟಿದ್ದಾರೆ. 2015ರಲ್ಲಿ ಬಿಹಾರದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ಜಾತಿ ಆಧಾರಿತ ಮೀಸಲಾತಿಯನ್ನು ಕಡಿತಗೊಳಿಸಬೇಕು ಎಂಬ ಆರೆಸ್ಸೆಸ್‌ನ ಅಸಲಿ ಅಜೆಂಡಾವನ್ನು ಇದೇ ಮೋಹನ್ ಭಾಗವತ್ ದೇಶದ ಮುಂದಿಟ್ಟಿದ್ದರು. ಆ ನಂತರದ ವರ್ಷಗಳಲ್ಲಿ ಸಂಘಪರಿವಾರದ ನೇರ ಮತ್ತು ಪರೋಕ್ಷ ಬೆಂಬಲದೊಂದಿಗೆ ಮೇಲ್ಜಾತಿ ಶಕ್ತಿಗಳು ಪ್ರಜ್ಞಾವಂತ ದಲಿತರ ಮೇಲೆ ದೇಶಾದ್ಯಂತ ದಾಳಿಗಳನ್ನು ನಡೆಸಿದರೂ ಮೋದಿ ಸರಕಾರ ಒಂದು ಭಾಷಣದಲ್ಲಿ ಮೊಸಳೆ ಕಣ್ಣೀರಿಟ್ಟಿದ್ದನ್ನು ಬಿಟ್ಟರೆ ಮತ್ತೇನನ್ನು ಮಾಡಲಿಲ್ಲ. ಭೀಮಾ ಕೋರೆಗಾಂವ್‌ನಲ್ಲಂತೂ ಸಂಘಪರಿವಾರ ನೇರವಾಗಿ ದಲಿತರ ಮೇಲೆ ಮಾರಣಾಂತಿಕ ಹಲ್ಲೆಯನ್ನೇ ನಡೆಸಿತು. ಆದರೆ ಮಹಾರಾಷ್ಟ್ರದ ಬಿಜೆಪಿ ಸರಕಾರ ಬಂಧಿಸಿದ್ದು ಮಾತ್ರ ದಲಿತರನ್ನು ಮತ್ತು ಅವರ ಬೆಂಬಲಿಗರನ್ನೇ ವಿನಾ ದಾಳಿಕೋರರನ್ನಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ಸಾಮಾಜಿಕ ತಾರತಮ್ಯಕ್ಕೊಳಗಾಗಿರುವ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸುವ ಉಪಕ್ರಮವಾಗಿ ರೂಪಿಸಲಾಗಿರುವ ಮೀಸಲಾತಿಯನ್ನು ಮೇಲ್ಜಾತಿ ಬಡವರಿಗೂ ವಿಸ್ತರಿಸಿ ಮೀಸಲಾತಿಗಿದ್ದ ಸಾಂವಿಧಾನಿಕ ಮತ್ತು ತಾತ್ವಿಕ ಬುನಾದಿಯನ್ನೇ ಭ್ರಷ್ಟಗೊಳಿಸಿದೆ. ಅದೇ ಸಮಯದಲ್ಲಿ ಜಾತಿವಾದಿ-ಕೋಮುವಾದಿ ಶಕ್ತಿಗಳು ಅಂಬೇಡ್ಕರ್ ಪ್ರತಿಮೆಗಳನ್ನು ಹಾಡ ಹಗಲಲ್ಲೇ ಧ್ವಂಸಗೊಳಿಸುತ್ತಾ ಎಚ್ಚೆತ್ತ ದಲಿತ ಪ್ರಜ್ಞೆಗೆ ಬಹಿರಂಗ ಸವಾಲು ಹಾಕುತ್ತಿದ್ದಾರೆ. ಜಾತಿವಾದಿ ಶಕ್ತಿಗಳಿಗೆ ಕುಮ್ಮಕ್ಕಾಗಿರುವ ವಿಷಯದಲ್ಲಿ ಕಾಂಗ್ರೆಸ್, ಜನತಾ ಆಥವಾ ದ್ರಾವಿಡ ಪಕ್ಷಗಳು ಮತ್ತು ಬಿಜೆಪಿಯ ನಡುವೆ ಅಷ್ಟೊಂದು ದೊಡ್ಡ ವ್ಯತ್ಯಾಸ ಕಂಡುಬರದು. ಅಧಿಕಾರದಲ್ಲಿದ್ದಾಗ ಕಮ್ಯುನಿಸ್ಟ್ ಪಕ್ಷಗಳು ಸಹ ಈ ವಿಷಯದಲ್ಲಿ ತೋರಬೇಕಾದಷ್ಟು ಸಂವೇದನೆಗಳನ್ನು ತೋರಿಲ್ಲ. ಹೀಗೆ ದಲಿತ ಅಸ್ಮಿತೆ, ಮೀಸಲಾತಿಯ ತಾತ್ವಿಕತೆ ಮತ್ತು ಮೀಸಲಾತಿಯ ಪ್ರಸ್ತುತತೆಗಳೇ ಅಪಾಯದಲ್ಲಿರುವಾಗ ಕರ್ನಾಟಕದಲ್ಲಿ ಒಳಮೀಸಲಾತಿ ಮತ್ತು ಸದಾಶಿವ ಆಯೋಗದ ವರದಿಯ ಸುತ್ತ ಮತ್ತೊಮ್ಮೆ ಅನಾರೋಗ್ಯಕರ ಮತ್ತು ಪೂರ್ವಗ್ರಹ ಪೀಡಿತ ಚರ್ಚೆಯು ಹುಟ್ಟಿಕೊಳ್ಳುವ ಲಕ್ಷಣಗಳು ಕಾಣುತ್ತಿವೆ.

ವಾಸ್ತವವಾಗಿ ಸಿದ್ದರಾಮಯ್ಯನವರ ಸರಕಾರ ಮತ್ತು ಆ ನಂತರದ ಮೈತ್ರಿ ಸರಕಾರಗಳೆರಡೂ ಸಹ ಸದಾಶಿವ ಆಯೋಗದ ಬಗ್ಗೆ ಕೊಟ್ಟ ಭರವಸೆಗಳನ್ನು ಈಡೇರಿಸದಿರುವುದು ಸಮುದಾಯಗಳಿಗೆ ಮಾಡಿರುವ ಅವಮಾನವೇ ಆಗಿದೆ, ಆದರೆ ಈ ಅವಕಾಶವಾದಿ ಪಕ್ಷಗಳು ಮಾಡಿದ ನಿಧಾನ ದ್ರೋಹದಿಂದ ಸಮುದಾಯಗಳಲ್ಲಿ ಉಂಟಾಗಿರುವ ಅಸಮಾಧಾನವನ್ನು ಮನುವಾದಿ ಬಿಜೆಪಿ ತಾನು ಮಾಡುತ್ತಿರುವ ಪ್ರತ್ಯಕ್ಷ ದ್ರೋಹಕ್ಕೆ ಕವಚವಾಗಿ ಬಳಸಿಕೊಳ್ಳುತ್ತಿದೆ. ಜೊತೆಗೆ ಸಾಮಾಜಿಕ ನ್ಯಾಯಪ್ರಜ್ಞೆಯ ಫಲಿತವಾದ ಮೀಸಲಾತಿಯ ಫಲಾನುಭವಿಗಳೂ ಸಹ ಒಳಮೀಸಲಾತಿಯ ಪ್ರಶ್ನೆ ಬಂದಾಗ ಅದರ ವಿರುದ್ಧ ಪ್ರತಿಭೆ, ಅರ್ಹತೆಗಳೆಂಬ ಬ್ರಾಹ್ಮಣೀಯ ಕುತರ್ಕವನ್ನೇ ಬಳಸುತ್ತಿರುವುದು ಅತ್ಯಂತ ಆತ್ಮಘಾತುಕವಾಗಿದೆ. ಇಂತಹ ವಾದಗಳು ಒಳಮೀಸಲಾತಿಯನ್ನು ಮಾತ್ರವಲ್ಲದೆ ಮೀಸಲಾತಿಯ ಸಾಂವಿಧಾನಿಕ ಬುನಾದಿಯನ್ನೇ ನಿರಾಕರಿಸುವ ಮನುವಾದಿ ಚಿಂತನಾ ಕ್ರಮವೆಂಬುದನ್ನು ಅರಿಯದಷ್ಟು ಸಂಕುಚಿತತೆ ಆವರಿಸಿಕೊಂಡಿದೆ. ಹೀಗಾಗಿ ಇಂದು ಒಳಮೀಸಲಾತಿ ವಿಷಯವು ಒಳಜಗಳಗಳಿಗೆ ದಾರಿಮಾಡಿಕೊಡಬಾರದೆಂದರೆ ಒಳಮೀಸಲಾತಿಯನ್ನು ಮತ್ತು ಸದಾಶಿವ ಆಯೋಗದ ವರದಿ ಜಾರಿಯಾಗಲು ಇರುವ ನಿಜವಾದ ಆತಂಕಗಳನ್ನು ಸಾಮಾಜಿಕ ನ್ಯಾಯದ ಒಳಗಣ್ಣಿನಿಂದ ಅರ್ಥಮಾಡಿಕೊಳ್ಳಬೇಕಿದೆ. ಸದಾಶಿವ ಆಯೋಗದಲ್ಲಿ ಇರುವುದೇನು? ಇಲ್ಲದಿರುವುದೇನು?

ಸದಾಶಿವ ಆಯೋಗವು 2012ರಲ್ಲೇ ವರದಿಯನ್ನು ನೀಡಿತು. ಆದರೆ ಆಗಿನ ಬಿಜೆಪಿ ಸರಕಾರದಿಂದ ಹಿಡಿದು ಆ ನಂತರ ಅಧಿಕಾರಕ್ಕೇರಿದ ಕಾಂಗ್ರೆಸ್ ಹಾಗೂ ಮೈತ್ರಿ ಸರಕಾರದವರೆಗೆ ಎಲ್ಲಾ ಸರಕಾರಗಳು ಅದನ್ನು ಸದನದಲ್ಲಿ ಮಂಡಿಸಿ, ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಡದೆ ಅದರ ಬಗ್ಗೆ ಇಲ್ಲದ ಊಹಾಪೋಹಗಳು, ಆತಂಕಗಳು ಮತ್ತು ಅನೈಕ್ಯತೆಗಳೂ ಹುಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಸದಾಶಿವ ಆಯೋಗವು ಸರಕಾರಕ್ಕೆ ವರದಿ ನೀಡಿದ ನಂತರ ನೀಡಿದ ಪತ್ರಿಕಾ ಹೇಳಿಕೆಯನ್ನು ಬಿಟ್ಟರೆ ಅದರ ಬಗ್ಗೆ ಈವರಗೆ ಯಾವುದೇ ಅಧಿಕೃತ ಮಾಹಿತಿಯನ್ನು ಸರಕಾರ ಬಿಡುಗಡೆ ಮಾಡಿಲ್ಲ. 2018ರ ರಾಜ್ಯ ವಿಧಾನ ಸಭಾ ಚುನಾವಣಾ ಸಂದರ್ಭದಲ್ಲಿ ಮತ್ತೊಮ್ಮೆ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರಬೇಕೆ ಬೇಡವೇ ಎಂಬ ವಿವಾದಗಳು ಭುಗಿಲೆದ್ದಾಗ, ಕೆಲವು ಆಸಕ್ತರು ವರದಿಯ ಪೂರ್ಣಪಾಠವನ್ನು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆ ಮಾಡಿದರು. ಆಗ ಮಾತ್ರ ವರದಿಯ ಸಮಗ್ರ ಸ್ವರೂಪ ಸಾಕಷ್ಟು ಜನರ ಗಮನಕ್ಕೆ ಬಂದಿತು. ವರದಿಯು ಆಯೋಗದ ಅಧಿಕೃತ ಪತ್ರಿಕಾ ಹೇಳಿಯಲ್ಲಿ ನೀಡಿದ ತರ್ಕ ಮತ್ತು ಅಂತಿಮ ಶಿಫಾರಸುಗಳಿಗೆ ಪೂರಕವಾದ ವಿವರಗಳನ್ನೇ ಕೊಡುತ್ತದೆ. ಅಲ್ಲದೆ ಸರಕಾರವು ಕೂಡಾ ಜನರ ನಡುವೆ ಚರ್ಚೆಯಲ್ಲಿದ್ದ ಈ ವರದಿಯ ಅಧಿಕೃತತೆಯನ್ನು ಈವರೆಗೆ ನಿರಾಕರಿಸಿಲ್ಲ. ಹೀಗಾಗಿ ಸರಕಾರವು ಸದಾಶಿವ ಆಯೋಗದ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡುವತನಕ ಇದನ್ನೇ ಅಧಿಕೃತ ಎಂದು ಭಾವಿಸುವುದರಲ್ಲಿ ಅಪಾಯವೇನಿಲ್ಲ. ಮೊದಲನೆಯದಾಗಿ ಈ ಸೋರಿದ ಸದಾಶಿವ ಆಯೋಗದ ವರದಿಯು ಯಾವ್ಯಾವ ಶಿಫಾರಾಸ್ಸು ಮಾಡಿದೆ ಮತ್ತು ಮಾಡಿಲ್ಲ ಎಂಬುದನ್ನು ಗಮನಿಸಬೇಕು.

ಸದಾಶಿವ ಆಯೋಗದಲ್ಲಿ ಹೇಳಿರುವುದು ಮತ್ತು ಹೇಳದಿರುವುದು:
1) ಕರ್ನಾಟಕದಲ್ಲಿ ಈಗಾಗಲೇ ಪರಿಶಿಷ್ಟ ಜಾತಿ ಎಂದು ವರ್ಗೀಕರಣಗೊಂಡಿರುವ (101 ಜಾತಿಗಳಲ್ಲಿ) ಯಾವ ಜಾತಿಗಳನ್ನೂ ಆ ಪಟ್ಟಿಯಿಂದ ಹೊರಹಾಕಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತದೆ. ಏಕೆಂದರೆ ಪರಿಶಿಷ್ಟ ಪಟ್ಟಿಗೆ ಸೇರಿಸುವ ಅಥವಾ ಕಿತ್ತುಹಾಕುವ ಶಾಸನಾತ್ಮಕ ಅಧಿಕಾರ ಇರುವುದು ದೇಶದ ಸಂಸತ್ತಿಗೇ ವಿನಃ ರಾಜ್ಯಗಳ ವಿಧಾನಸಭೆಗಳಿಗೆ ಅಂತಹ ಅಧಿಕಾರವಿಲ್ಲ. ಹೀಗಾಗಿ ಕರ್ನಾಟಕದ ಪರಿಶಿಷ್ಟ ಜಾತಿ ಪಟ್ಟಿಯಿಂದ ಸ್ಪೃಶ್ಯ ಜಾತಿಗಳಾದ ಲಂಬಾಣಿ, ಭೋವಿ, ಕೊರಮ, ಕೊರಚ ಜಾತಿಗಳನ್ನು ಎಸ್ಸಿ ಪಟ್ಟಿಯಿಂದ ಹೊರಗಿಡಲು ಸದಾಶಿವ ಆಯೋಗವು ಸಲಹೆ ಮಾಡಿದೆ ಎಂಬ ಪುಕಾರಿನಲ್ಲಿ ಯಾವುದೇ ಹುರುಳಿಲ್ಲ.

2) ಆಯೋಗವು ಎಸ್ಸಿ ಪಟ್ಟಿಯೊಳಗಿರುವ 101 ಜಾತಿಗಳನ್ನು 4 ವಿಭಾಗಗಳನ್ನಾಗಿ ವಿಂಗಡಿಸಿದೆ. ಅ) ದಲಿತ ಸಮುದಾಯದ ಶೇ.33.47ರಷ್ಟು ಜನಸಂಖ್ಯೆ ಹೊಂದಿರುವ ಮಾದಿಗ (ಎಡಗೈ) ಮತ್ತು ಇತರ 29 ಉಪಜಾತಿಗಳು. ಆ) ದಲಿತ ಸಮುದಾಯದ ಶೇ.32.01ರಷ್ಟು ಜನಸಂಖ್ಯೆ ಇರುವ ಹೊಲೆಯ (ಬಲಗೈ) ಮತ್ತು ಇತರ 24 ಉಪಜಾತಿಗಳು. ಇ) ದಲಿತ ಸಮುದಾಯದ ಶೇ.4.65ರಷ್ಟಿರುವ ಮತ್ತು ಎಡಗೈ ಅಥವಾ ಬಲಗೈ ವರ್ಗಕ್ಕೆ ಸೇರದ ಅಸ್ಪಶ್ಯ ಜಾತಿಗಳು ಮತ್ತು ಈ) ದಲಿತ ಸಮುದಾಯದ ಭಾಗವಾಗಿ ಪರಿಗಣಿಸಲ್ಪಟ್ಟಿರುವ ಶೇ.23.64ರಷ್ಟು ಜನಸಂಖ್ಯೆಯನ್ನು ಹೊಂದಿರುವ (ಲಂಬಾಣಿ, ಭೋವಿ, ಕೊರಮ, ಕೊರಚ...) ಸ್ಪೃಶ್ಯ ಜಾತಿಗಳು.

3) ಆಯೋಗದ ವರದಿಯ ಪ್ರಕಾರ ಸರಕಾರಿ ಯೋಜನೆಗಳ ಫಲಾನುಭವಿಗಳಲ್ಲಿ ಮಾದಿಗರಿಗಿಂತ ಹೊಲೆಯರು ಹೆಚ್ಚಾಗಿದ್ದಾರೆ. ಆದರೆ ಕೆಲವು ನಿರ್ದಿಷ್ಟ ಜಿಲ್ಲೆಗಳಲ್ಲಿ ಇದರಲ್ಲಿ ಸ್ವಲ್ಪ ಏರುಪೇರೂ ಇದೆ. ಹೊಲೆಯ ಮತ್ತು ಮಾದಿಗ ಸಮುದಾಯಗಳಿಗೆ ಸೇರದ ವರ್ಗೀಕರಣ 3 ರಲ್ಲಿರುವ ಇತರ ಅಸ್ಪಶ್ಯ ಜಾತಿಗಳಿಗೆ ಎಲ್ಲರಿಗಿಂತಲೂ ಅತ್ಯಂತ ಕಡಿಮೆ ಸೌಲಭ್ಯಗಳು ಮತ್ತು ಪ್ರಾತಿನಿಧ್ಯಗಳು ದಕ್ಕಿವೆ.

4) ಹೀಗಾಗಿ ದಲಿತ ಸಮುದಾಯಕ್ಕೆ ನೀಡಲಾಗಿರುವ ಶೇ.15ರಷ್ಟು ಮೀಸಲಾತಿಯನ್ನು ಮೇಲಿನ ಜನಸಂಖ್ಯಾ ಪ್ರಮಾಣಕ್ಕನುಸಾರವಾಗಿ ವರ್ಗೀಕರಿಸಬೇಕೆಂದು ಸದಾಶಿವ ಆಯೋಗವು ಶಿಫಾರಸು ಮಾಡಿದೆ.

5) ಆದರೆ ಸರಕಾರದಲ್ಲಿ ಒಟ್ಟಾರೆ ಲಭ್ಯವಿರುವ ಉದ್ಯೋಗ ಮತ್ತು ಶಿಕ್ಷಣಾವಕಾಶಗಳ ಹೋಲಿಕೆಯಲ್ಲಿ ಹೊಲೆಯರಿಗೆ ಹೆಚ್ಚೆಂದರೆ ಶೇ.2.5ರಷ್ಟು ಮತ್ತು ಮಾದಿಗರಿಗೆ ಶೇ.1.5ರಷ್ಟು ಮಾತ್ರ ದಕ್ಕಿದೆ. ಇನ್ನು ಉನ್ನತ ಶಿಕ್ಷಣದಲ್ಲಿ ಹೊಲೆಯ ಮತ್ತು ಮಾದಿಗ ಎರಡೂ ಸಮುದಾಯಗಳಿಗೂ ಒಟ್ಟೂ ಸೇರಿ ಅವರ ಜನಸಂಖ್ಯೆಯ ಶೇ.5ರಷ್ಟು ಮಾತ್ರ ಪ್ರಾತಿನಿಧ್ಯ ಸಿಕ್ಕಿದೆ. ಹೀಗಾಗಿ ಹೊಲೆಯ-ಮಾದಿಗರ ನಡುವಿನ ಅವಕಾಶಗಳಲ್ಲಿ ವ್ಯತ್ಯಾಸಗಳಿದ್ದರೂ ಒಟ್ಟಾಗಿ ನೋಡಿದರೆ ಮೀಸಲಾತಿ ಸೌಲಭ್ಯವು ಆ ಸಮುದಾಯಗಳ ಬಹುದೊಡ್ಡ ಜನಸಂಖ್ಯೆಗೆ ಇನ್ನೂ ತಲುಪೇ ಇಲ್ಲ. ಆದರೂ ಆಗಲೇ ಮೀಸಲಾತಿಯನ್ನು ತೆಗೆದು ಹಾಕಬೇಕೆಂಬ ಹುಯಿಲೆದ್ದಿದೆ. ಇದು ಮೀಸಲಾತಿಯ ಮಿತಿಗಳನ್ನು ಅದರಲ್ಲೂ ಸರಕಾರಿ ಉದ್ಯೋಗ, ಶಿಕ್ಷಣ ಎಲ್ಲವೂ ಖಾಸಗೀಕರಣವಾಗುತ್ತಿರುವ ಸಂದರ್ಭದಲ್ಲಿ ಮೀಸಲಾತಿಯ ಸೀಮಿತತೆಯನ್ನೂ ಸಹ ವಿವರಿಸುತ್ತದೆ.

ಇವಲ್ಲದೆ ಸದಾಶಿವ ಆಯೋಗವು: 6) ಒಟ್ಟಾರೆ ಮೀಸಲಾತಿಯನ್ನು ಶೇ.50ಕ್ಕಿಂತ ಹೆಚ್ಚಿಸಲು ಸಾಧ್ಯವಿಲ್ಲವೆಂದು ಸ್ಪಷ್ಟಪಡಿಸುತ್ತದೆ. ಏಕೆಂದರೆ ಆ ಮಿತಿಯನ್ನು ಸುಪ್ರೀಂ ಕೋರ್ಟಿನ ಸಂವಿಧಾನ ಪೀಠ ನಿಗದಿ ಮಾಡಿದ್ದು ರಾಜ್ಯ ವಿಧಾನ ಸಭೆಗೆ ಅದನ್ನು ತಿದ್ದುವ ಅಧಿಕಾರವಿಲ್ಲ. (ಆದರೆ ಸಂವಿಧಾನಕ್ಕೆ ತಿದ್ದುಪಡಿ ತಂದು ಶೇ.50ರ ಮಿತಿಯನ್ನು ಹೆಚ್ಚಿಸಿಕೊಳ್ಳಬಹುದು. ಅದಕ್ಕೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಬಹುಮತವೂ, ದೇಶದ ಅರ್ಧಕ್ಕಿಂತ ಹೆಚ್ಚಿನ ವಿಧಾನಸಭೆಗಳ ಸಮ್ಮತಿಯೂ ಸಿಕ್ಕರೆ ಸಾಕು. ಹಾಲಿ ಬಿಜೆಪಿಗೆ ಇದಕ್ಕೆ ಬೇಕಾದ ಸಂವಿಧಾನಿಕ ಬಲವಿದೆ.)

7) ಇದರ ಜೊತೆಗೆ ಸದಾಶಿವ ಆಯೋಗವು ಎಸ್ಸಿ ಮೀಸಲಾತಿಯಲ್ಲಿ ಕೆನೆಪದರ ನೀತಿಯನ್ನು ಅನುಸರಿಸಬೇಕೆಂಬ ಅನಗತ್ಯ ಶಿಫಾರಸನ್ನೂ ಸಹ ಮಾಡಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾದ ಸದಾಶಿವ ಆಯೋಗದ ತಾತ್ಪರ್ಯ ಮತ್ತು ಶಿಫಾರಸುಗಳು.

ಒಳಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ವಿಸ್ತರಣೆ

ಅಂಬೇಡ್ಕರ್ ಭಾರತ ಸಮಾಜದಲ್ಲಿರುವ ಜಾತಿ ಪದ್ಧತಿ ಮತ್ತು ಅಸ್ಪಶ್ಯತೆಯನ್ನು ಮತ್ತು ಅದು ಉಂಟು ಮಾಡುವ ರಾಜಕೀಯ, ಸಾಮಾಜಿಕ ಪರಿಣಾಮಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಜಾತಿ ವಿನಾಶದ ಒಂದು ಮಧ್ಯಂತರ ಉಪಕ್ರಮವಾಗಿ ಮೀಸಲಾತಿಯನ್ನು ಶಿಫಾರಸು ಮಾಡಿದ್ದರು, ಭಾರತದ ಜಾತಿ ಸಮಾಜ ಶ್ರೇಣೀಕೃತ ಅಸಮಾನತೆಯಿಂದ ಕೂಡಿದ ಸಮಾಜವೆಂದು ವಿವರಿಸಿದ್ದ ಅಂಬೇಡ್ಕರ್ ಮೇಲ್ಚಲನೆ ಪಡೆದ ದಲಿತ ಸಮುದಾಯಗಳೊಳಗೂ ಶ್ರೇಣೀಕೃತ ಅಸಮಾನತೆ ಏರ್ಪಡುವ ಬಗ್ಗೆ ಸ್ಪಷ್ಟ ಎಚ್ಚರಿಕೆಯನ್ನೂ ನೀಡಿದ್ದರು. ಮೀಸಲಾತಿ ಮತ್ತು ಒಳಮೀಸಲಾತಿಗಳೆರಡೂ ಅಂಬೇಡ್ಕರ್ ಅವರ ಈ ಸಾಮಾಜಿಕ ವಿಶ್ಲೇಷಣೆಯ ಸಹಜ ಪರಿಹಾರೋಪಾಯಗಳಾಗಿ ರೂಪುಗೊಳ್ಳುತ್ತವೆ. ಭಾರತದ ನಾಗರಿಕ ಸಮಾಜದ ಜಾತಿ ಶ್ರೇಣೀಕರಣ ಮತ್ತು ಅಸ್ಪಶ್ಯತೆಗಳೆಂಬ ಅನಾಗರಿಕತೆಯಿಂದ ಹೊರಬರುವ ತನಕ ಕೋಟಾ ಪದ್ಧತಿಯಲ್ಲೇ ಪ್ರಾತಿನಿಧ್ಯ ನಿಗದಿಯಾದರೆ ಮಾತ್ರ ಶೋಷಿತ ಸಮುದಾಯಗಳಿಗೆ ಪ್ರಾತಿನಿಧ್ಯ ದಕ್ಕಲು ಸಾಧ್ಯ ಎಂಬುದು ಅಂಬೇಡ್ಕರ್ ಅವರ ಖಚಿತ ಅಭಿಪ್ರಾಯವಾಗಿತ್ತು. ಈ ಹಿನ್ನೆಲೆಯಲ್ಲೇ ಸಾಮಾಜಿಕ ಪ್ರಾತಿನಿಧ್ಯದ ಆಶಯಗಳ ಹಿನ್ನೆಲೆಯಲ್ಲಿ ಭಾರತದ ಸಂವಿಧಾನದಲ್ಲಿ ಮೀಸಲಾತಿಯ ಅವಕಾಶಗಳು ಸೇರ್ಪಡೆಯಾಗಿದೆಯೇ ಹೊರತು ಬಡತನ ನಿವಾರಣೆಯ ಕ್ರಮವಾಗಿಯಲ್ಲ. ಆದ್ದರಿಂದಲೇ ಅದು ಜಾತಿ ನಿರ್ಮೂಲನಾ ಕ್ರಮವೂ ಅಲ್ಲ. ಅದರಲ್ಲೂ ಅಸ್ಪಶ್ಯತೆಯು ಸಾಮಾಜಿಕ ಹಿಂದುಳಿದಿರುವಿಕೆಯ ಅತ್ಯಂತಿಕ ಪುರಾವೆಯೆಂದು ಸಾಬೀತಾಗಿರುವುದರಿಂದ ಪರಿಶಿಷ್ಟ ಜಾತಿಯ ವರ್ಗೀಕರಣಕ್ಕೆ ಅಸ್ಪಶ್ಯತೆಯ ಮಾನದಂಡವನ್ನೂ ನಿಗದಿ ಮಾಡಲಾಯಿತು. ಆದರೆ ಅದೇ ಸಮಯದಲ್ಲಿ ಇತರ ಹಿಂದುಳಿದ ಜಾತಿಗಳಿಗೂ ಆಯಾ ಜಾತಿಗಳ ಹಿಂದುಳಿದಿರುವಿಕೆಗಳ ಅನುಗುಣವಾಗಿ ಮೀಸಲಾತಿ ಇರಬೇಕೆಂಬುದು ಸಂವಿಧಾನದ ಮತ್ತು ಅಂಬೇಡ್ಕರ್ ಅವರ ಆಶಯವಾಗಿತ್ತು. ತಾತ್ವಿಕ ಪ್ರಣಾಳಿಕೆಯನ್ನು ಒಪ್ಪಿಕೊಳ್ಳುವುದಾದರೆ ಒಳಮೀಸಲಾತಿಯು ಮೀಸಲಾತಿ ತರ್ಕದ ಸಹಜ ವಿಸ್ತರಣೆಯಾಗಿರುತ್ತದೆ. ಹೀಗಾಗಿ ಮೀಸಲಾತಿಗೆ ಸತ್ವ ಒದಗಬೇಕೆಂದರೆ ಒಳಮೀಸಲಾತಿಯ ತತ್ವವನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. ಅದು ಮಾತ್ರ ದಲಿತ ಸಮುದಾಯದ ಐಕ್ಯವನ್ನು ಗಟ್ಟಿಗೊಳಿಸಿ ದಲಿತ ಅಸ್ಮಿತೆಯ ಮೇಲೆ ದಾಳಿ ಮಾಡುತ್ತಿರುವ ಬ್ರಾಹ್ಮಣೀಯ ಕುತಂತ್ರಗಳನ್ನು ಸೋಲಿಸಲು ಬೇಕಾದ ತಾತ್ವಿಕ ಮತ್ತು ರಾಜಕೀಯ ಹತಾರಗಳನ್ನು ನೀಡುತ್ತದೆ. ಇಲ್ಲದಿದ್ದರೆ ಒಳಕಲಹದಲ್ಲಿ ಅಸಲೀ ಅಪಾಯವನ್ನು ಮರೆಯುವಂತಾಗುತ್ತದೆ.

ಉಷಾ ಮೆಹ್ರಾ ಸಮಿತಿ ಮತ್ತು ಬಿಜೆಪಿಯ ಮೌನದ್ರೋಹ

ಅಸಲಿ ವಿಷಯವೇನೆಂದರೆ ಒಳಮೀಸಲಾತಿ ಜಾರಿಯಾಗಲು ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಿರುವುದು ಸಂಸತ್ತಿಗೆ ಮಾತ್ರ. ಏಕೆಂದರೆ ಈಗಾಗಲೇ ಅವಿಭಜಿತ ಆಂಧ್ರಪ್ರದೇಶವೂ ತನ್ನ ರಾಜ್ಯದಲ್ಲಿ ಒಳಮೀಸಲಾತಿಯನ್ನು ಜಾರಿ ಮಾಡಿದ್ದಾಗ ಸಂತೋಷ್ ಹೆಗ್ಡೆ ನೇತೃತ್ವದ ಐದು ಜನರ ಸಾಂವಿಧಾನಿಕ ನ್ಯಾಯಪೀಠ ಅದನ್ನು ರದ್ದು ಮಾಡಿತ್ತು. ಕಾರಣ ರಾಜ್ಯದ ವಿಧಾನಸಭೆಗಳಿಗೆ ಎಸ್ಸಿ ಮೀಸಲಾತಿಯನ್ನು ಬದಲಿಸುವ ಅಧಿಕಾರವಿಲ್ಲ. ನಮ್ಮ ಸಂವಿಧಾನದ 341 (2)ನೇ ಕಲಮಿನ ಪ್ರಕಾರ ಆ ಅಧಿಕಾರ ಇರುವುದು ಸಂಸತ್ತಿಗೆ ಮಾತ್ರ. ಹೀಗಾಗಿ 2000ನೇ ಇಸವಿಯಲ್ಲಿ ಆಂಧ್ರ ವಿಧಾನ ಸಭೆಯು ಸರ್ವಸಮ್ಮತಿಯಿಂದ ಒಂದು ಗೊತ್ತುವಳಿಯನ್ನು ಅನುಮೋದಿಸಿ ಸಂವಿಧಾನಕ್ಕೆ ಸೂಕ್ತ ತಿದ್ದುಪಡಿ ತಂದು ಒಳಮೀಸಲಾತಿ ತರುವ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಂಸತ್ತಿಗೆ ಆಗ್ರಹಿಸಿತ್ತು. ಈ ಹಿಂದೆಯೂ ಇದೇ ಬಗೆಯ ಮನವಿಗಳು ಪಂಜಾಬ್ ಇನ್ನಿತರ ರಾಜ್ಯಗಳಿಂದಲೂ ಕೇಂದ್ರ ಸರಕಾರಕ್ಕೆ ಬಂದಿತ್ತು. ಆ ಆಗ್ರಹದ ಮೇರೆಗೆ ಕೇಂದ್ರ ಸರಕಾರವು ಜಸ್ಟೀಸ್ ಉಷಾ ಮೆಹ್ರಾ ಸಮಿತಿಯನ್ನು ನೇಮಿಸಿತು. ಆ ಸಮಿತಿಯು ಈ ವಿಷಯದ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡಿ 2008ರಲ್ಲಿ ವರದಿ ನೀಡಿತು.

ಉಷಾ ಮೆಹ್ರಾ ಸಮಿತಿಯು ಒಳಮೀಸಲಾತಿ ಅತ್ಯಗತ್ಯ ಎಂದು ಪ್ರತಿಪಾದಿಸಿತಲ್ಲದೆ ಅದನ್ನು ಜಾರಿ ಮಾಡಲು ಸಂವಿಧಾನಕ್ಕೆ ತಿದ್ದುಪಡಿ ತಂದು 341 (3) ನೇ ಕಲಮೊಂದನ್ನು ಸೇರಿಸಬೇಕು ಎಂದು ಶಿಫಾರಸು ನೀಡಿದೆ. ಇದು ಇಲ್ಲಿಯವರೆಗಿನ ಬೆಳವಣಿಗೆ. ಸದಾಶಿವ ಆಯೋಗದ ವರದಿಯನ್ನು ಕರ್ನಾಟಕ ಸರಕಾರ ಜಾರಿಗೆ ತರಲು ಸಾಧ್ಯವಿಲ್ಲ. ಅದಕ್ಕೆ ಸಂವಿಧಾನದ ತಿದ್ದುಪಡಿಯಾಗಬೇಕಾದ ಅಗತ್ಯವಿದೆ. ಅಂದರೆ ಕೇಂದ್ರ ಸರಕಾರ ಇದರ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಸಂವಿಧಾನಕ್ಕೆ ತಿದ್ದುಪಡಿಯಾಗಬೇಕೆಂದರೆ ಲೋಕಸಭೆಯೆಲ್ಲಿ ಮತ್ತು ರಾಜ್ಯಸಭೆಯಲ್ಲಿ ಬಹುಮತದಿಂದ ಅನುಮೋದನೆಗೊಳ್ಳಬೇಕು. ಅಗತ್ಯವಿರುವ ಕಡೆ ದೇಶದ ಅರ್ಧಕ್ಕೂ ಹೆಚ್ಚು ವಿಧಾನಸಭೆಗಳೂ ಅದನ್ನು ಅನುಮೋದಿಸಬೇಕು. ಇಂದು ಬಿಜೆಪಿ ಸರಕಾರಕ್ಕೆ ಲೋಕಸಭೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಬಹುಮತವಿದೆ. ರಾಜ್ಯಸಭೆಯಲ್ಲಿ ಅದೇ ದೊಡ್ಡ ಪಕ್ಷ ಮಾತ್ರವಲ್ಲದೆ ಬೇಕಿರುವಷ್ಟು ಬಹುಮತವನ್ನು ರೂಢಿಸಿಕೊಳ್ಳಬಹುದಾದ ರಾಜ್ಯಬಲ ಮತ್ತು ಧನಬಲವಿರುವುದನ್ನು ಅದು ಈಗಾಗಲೇ ಸಾಬೀತುಪಡಿಸಿದೆ. ದೇಶದ 17 ರಾಜ್ಯಗಳಲ್ಲಿ ಎನ್‌ಡಿಎ ಸರಕಾರವಿದೆ. ಹೀಗಾಗಿ ಸಂವಿಧಾನಕ್ಕೆ 341(3) ಕಲಮು ಸೇರಿಸುವ ತಿದ್ದುಪಡಿಯನ್ನು ಮಾಡುವುದು ಬಿಜೆಪಿಗೆ ಅತ್ಯಂತ ಸುಲಭದ ಕೆಲಸ. ಆದರೆ ಅದು ಮೇಲ್ಜಾತಿಗಳಿಗೆ ಮೀಸಲಾತಿ ಒದಗಿಸುವ ತಿದ್ದುಪಡಿಯನ್ನು ಕ್ಷಣಾರ್ಧದಲ್ಲಿ ತರುತ್ತದೆಯೇ ವಿನಃ ಒಳಮೀಸಲಾತಿ ತಿದ್ದುಪಡಿಯನ್ನಲ್ಲ. ಏಕೆಂದರೆ ಬಿಜೆಪಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಆಮೂಲಾಗ್ರವಾಗಿ ವಿರೋಧಿಸುತ್ತದೆ. ಏಕೆಂದರೆ ಅದು ಅವರ ಮನುವಾದಿ ಹಿಂದೂರಾಷ್ಟ್ರದ ಪರಿಕಲ್ಪನೆಗೆ ತದ್ವಿರುದ್ಧವಾದ ತಾತ್ವಿಕ ಪ್ರಣಾಳಿಯಾಗಿದೆ. ಆದ್ದರಿಂದಲೇ ಅದು ತನ್ನ ಹೊಣೆಗಾರಿಕೆಯಿಂದ ಜಾರಿಕೊಳ್ಳಲು ಇತರ ನಾಟಕಗಳನ್ನು ಆಡುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳೂ ಸಹ ಒಳಮೀಸಲಾತಿ ವಿಷಯದಲ್ಲಿ ಅದೇ ಧೋರಣೆಯನ್ನು ವ್ಯಕ್ತಪಡಿಸುತ್ತಾ ಬಂದಿವೆ.

ಇದು ವಾಸ್ತವ ಸಂದರ್ಭ. ಹೀಗಾಗಿ ಸಾಮಾಜಿಕ ನ್ಯಾಯದ ಪರವಾಗಿರುವ ಎಲ್ಲಾ ಶಕ್ತಿಗಳು ಈ ಕೆಳಗಿನ ಒತ್ತಾಯಗಳನ್ನು ಪರಿಗಣಿಸಬಹುದೆನಿಸುತ್ತದೆ:

 * ರಾಜ್ಯ ಸರಕಾರವು ಸದಾಶಿವ ಆಯೋಗದ ವರದಿಯನ್ನು ಈ ಕೂಡಲೇ ವಿಧಾನ ಸಭೆಯಲ್ಲಿ ಮಂಡಿಸಿ ಸಾರ್ವಜನಿಕ ಚರ್ಚೆಗೆ ಮುಂದಾಗಬೇಕು. ಹಾಗೂ ಸಂವಿಧಾನದ 341 (3)ನೇ ತಿದ್ದುಪಡಿಗೆ ಸರ್ವಸಮ್ಮತಿಯಿಂದ ಗೊತ್ತುವಳಿಯನ್ನು ಅಂಗೀಕರಿಸಿ ಕೇಂದ್ರದ ಮೇಲೆ ಒತ್ತಡ ತರಬೇಕು.

* ಇಂದಿನ ಸಂದರ್ಭದಲ್ಲಿ ಬಿಜೆಪಿಗೆ ಈ ವಿಷಯದಲ್ಲಿ ದೊಡ್ಡ ಪಾತ್ರವಿದೆ. ಹೀಗಾಗಿ ಆ ಪಕ್ಷವು ಒಳಮೀಸಲಾತಿಯ ಪರವಾಗಿ ಸ್ಪಷ್ಟ ನಿಲುವನ್ನು ತೆಗೆದುಕೊಂಡು ಸಂವಿಧಾನ ತಿದ್ದುಪಡಿ ಕ್ರಮಗಳಿಗೆ ಸಂಸತ್ತಿನಲ್ಲಿ ಮುಂದಾಗುವಂತೆ ಹಾಗೂ ಕಾಂಗ್ರೆಸ್ ಇನ್ನಿತರ ಪಕ್ಷಗಳು ಇದರ ಬಗ್ಗೆ ಪೂರಕವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪ್ರಗತಿಪರ ಶಕ್ತಿಗಳೆಲ್ಲಾ ಒಗ್ಗಟ್ಟಾಗಿ ಬಲವಾದ ಚಳವಳಿಯನ್ನು ರೂಪಿಸಬೇಕು.

* ಸದಾಶಿವ ಆಯೋಗದಲ್ಲಿರುವ ಕೆನೆಪದರ ನೀತಿಯ ಶಿಫಾರಸನ್ನು ಕೈಬಿಡಬೇಕು.

* ಮೀಸಲಾತಿಯ ಮೇಲೆ ಹೇರಲಾಗಿರುವ ಶೇ.50ರ ಮಿತಿಯನ್ನು ತೆಗೆದು ಹಾಕಲೂ ಸಹ ಸಂವಿಧಾನ ತಿದ್ದುಪಡಿ ತರಲು ಒತ್ತಾಯಿಸಬೇಕು.

* ಖಾಸಗೀಕರಣದಿಂದಾಗಿ ಮೀಸಲಾತಿಯ ಪ್ರಸ್ತುತತೆಯೇ ಇಲ್ಲವಾಗುತ್ತಿದ್ದು ಮೀಸಲಾತಿಯನ್ನು ಖಾಸಗಿ ಕ್ಷೇತ್ರಕ್ಕೂ ವಿಸ್ತರಿಸುವಂತೆ ಹೋರಾಡುವುದರ ಜೊತೆಗೆ ಖಾಸಗೀಕರಣವನ್ನು ನಿಲ್ಲಿಸುವ ಹೋರಾಟವನ್ನು ಒಗ್ಗಟ್ಟಿನಿಂದ ಕೈಗೆತ್ತುಕೊಳ್ಳಬೇಕು.

* ಈಗ ಹಾಲಿ ಎಸ್ಸಿ ಪಟ್ಟಿಯಲ್ಲಿರುವ ಸ್ಪೃಶ್ಯ ಸಮುದಾಯಗಳು ಅಸ್ಪಶ್ಯತೆಯೊಂದನ್ನು ಹೊರತುಪಡಿಸಿ ಮಿಕ್ಕೆಲ್ಲ ರೀತಿಯಲ್ಲೂ ಹೆಚ್ಚೂ ಕಡಿಮೆ ಸಮಾನವಾಗಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವುದನ್ನು ಗುರುತಿಸಬೇಕು ಮತ್ತು ಆ ಸಮುದಾಯಗಳ ಸರಿಯಾದ ಪ್ರಾತಿನಿಧ್ಯಕ್ಕೂ ಒಟ್ಟು ಹೋರಾಟಕ್ಕೆ ಮುಂದಾಗಬೇಕು.

* ಎಲ್ಲಕ್ಕಿಂತ ಹೆಚ್ಚಾಗಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನೇ ನಾಶ ಮಾಡಲು ಮುಂದಾಗಿರುವ ಮನುವಾದಿಗಳ ವಿರುದ್ಧ ಹಾಗೂ ಮೀಸಲಾತಿಯನ್ನೇ ಅಪ್ರಸ್ತುತಗೊಳಿಸುತ್ತಿರುವ ಕಾರ್ಪೊರೇಟ್ ಬಂಡವಾಳಿಗ ಶಕ್ತಿಗಳ ವಿರುದ್ಧ ದಮನಿತ ಸಮುದಾಯಗಳ ಒಗ್ಗಟ್ಟು ಮತ್ತು ಹೋರಾಟ ಕಿಂಚಿತ್ತೂ ಸಡಿಲವಾಗದಂತಹ ತಾತ್ವಿಕ ಮತ್ತು ರಾಜಕೀಯ ಎಚ್ಚರಗಳನ್ನು ಕಾಪಾಡಿಕೊಳ್ಳಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)