ವೋಟು ಬ್ಯಾಂಕುಗಳನ್ನು ಕೂಡ ಮೋದಿ ವಿಲೀನ ಮಾಡಲಿದ್ದಾರೆ....!
‘‘ಮೇಡಂ ಈ ಬ್ಯಾಂಕ್ ಇನ್ನೂ ವಿಲೀನವಾಗಿಲ್ವ?’’
ಒಳಗೆ ಕುಳಿತ ಮಹಿಳೆ ಹೊರಗೆ ನಿಂತು ಪ್ರಶ್ನಿಸುತ್ತಿರುವ ವ್ಯಕ್ತಿಯನ್ನೇ ನೋಡಿ ‘‘ಇಲ್ಲ ಯಾಕೆ?’’
‘‘ನೋಡಿ...ಈ ದೇಶದ ಆರ್ಥಿಕತೆ ಈಗ ಮೊದಲಿಗಿಂತ ಗಟ್ಟಿಯಾಗಿದೆ...ನೀವು ಯಾಕೆ ಮೋದಿಯವರ ಸಲಹೆಯಂತೆ ನಿಮ್ಮ ಬ್ಯಾಂಕನ್ನು ವಿಲೀನ ಮಾಡಬಾರದು...’’
‘‘ಇದು ಜನರ ಸಹಕಾರದಿಂದ ನಡೆಯುತ್ತಿರುವ ಬ್ಯಾಂಕ್. ಜನರು ತಮ್ಮ ರಕ್ತ, ಪ್ರಾಣ ಒತ್ತೆಯಿಟ್ಟು ಕಟ್ಟಿರುವ ಬ್ಯಾಂಕ್. ಇದನ್ನು ನಾವು ಹಾಗೆಲ್ಲ ವಿಲೀನ ಗೊಳಿಸುವುದಕ್ಕೆ ಆಗುವುದಿಲ್ಲ...’’ ಮಹಿಳೆ ಹೇಳಿದರು.
‘‘ನೋಡಿ ಮೇಡಂ...ಮೋದಿಯವರು ಛಿದ್ರವಾಗಿರುವ ಭಾರತವನ್ನು ವಿಲೀನಗೊಳಿಸುವ ಮಹತ್ವದ ಉದ್ದೇಶ ಹೊಂದಿದ್ದಾರೆ. ಅದಕ್ಕಾಗಿ ಎಲ್ಲ ಬ್ಯಾಂಕುಗಳನ್ನು ವಿಲೀನಗೊಳಿಸುವ ಉದ್ದೇಶ ಹೊಂದಿದ್ದಾರೆ. ನೀವು ಕೂಡ ಸಹಕರಿಸಿ ಬ್ಯಾಂಕುಗಳ ಜೊತೆಗೆ ವಿಲೀನಗೊಳ್ಳಲು ಸಮ್ಮತಿ ನೀಡಬೇಕು’’
‘‘ಬೇರೆ ಏನೇನು ವಿಲೀನಗೊಳಿಸಿದ್ದಾರೆ?’’ ಮಹಿಳೆ ಕೇಳಿದಳು.
‘‘ಕಾಶ್ಮೀರವನ್ನು ಭಾರತದೊಳಗೆ ವಿಲೀನಗೊಳಿಸಿಲ್ವಾ?’’ ಆತ ಮರು ಪ್ರಶ್ನಿಸಿದ.
‘‘ಮೊದಲು ಅದು ಎಲ್ಲಿತ್ತು?’’
‘‘ಮೊದಲು ಅದು ಪಾಕಿಸ್ತಾನದಲ್ಲಿತ್ತು. ಈಗ ಅದು ಭಾರತದ್ದಾಗಿದೆ...’’
‘‘ಮೊದಲು ಭಾರತೀಯರು ಅಲ್ಲಿಗೆ ಹೋಗಿ ಬರುವುದಕ್ಕೆ ಅವಕಾಶ ಇತ್ತು. ವಿಲೀನ ಆಗಿದೆ ಎಂದ ಮೇಲೆ ಮತ್ತೇಕೆ ಕಾಶ್ಮೀರಕ್ಕೆ ಹೋಗುವುದಕ್ಕೆ ಆಗ್ತಾ ಇಲ್ಲ...ಮೊದಲಿಗಿಂತ ಐದು ಪಟ್ಟು ಸೈನಿಕರು ಅಲ್ಲಿ ಯಾಕಿದ್ದಾರೆ?’’ ಮಹಿಳೆ ಊರ್ಮಿಳಾ ಮಾತೋಂಡ್ಕರ್ ಥರ ಕೇಳಿದಳು.
‘‘ಕಾಶ್ಮೀರದ ಜನರ ರಕ್ಷಣೆಗಾಗಿ ವಿಶೇಷ ಸೇನಾ ಸ್ಥಾನಮಾನ ಅದಕ್ಕೆ ಮೋದಿಯವರು ನೀಡಿದ್ದಾರೆ. ಈಗ ಸೇನೆಯ ಕಣ್ಗಾವಲಲ್ಲಿ ಕಾಶ್ಮೀರದ ಜನರು ಸುಭದ್ರರಾಗಿದ್ದಾರೆ. ಅವರು ನೆಮ್ಮದಿಯಿಂದಿದ್ದಾರೆ. ಮುಂದಿನ ದಿನಗಳಲ್ಲಿ ದೇಶದ ಎಲ್ಲ ಭಾಷೆಗಳನ್ನು ಹಿಂದಿ ಭಾಷೆಯೊಳಗೆ ವಿಲೀನ ಮಾಡಲಿದ್ದಾರೆ...ಗೊತ್ತಾ...ಇದರಿಂದಾಗಿ ದೇಶಕ್ಕೆ ಎಷ್ಟು ಉಳಿತಾಯ ಆಗುತ್ತೆ ಗೊತ್ತಾ?’’ ಆತ ಹೊಸ ವಿಷಯವೊಂದನ್ನು ಘೋಷಿಸಿದ.
‘‘ಇದರಿಂದ ಉಳಿತಾಯ ಹೇಗೆ?’’ ಮಹಿಳೆ ಅಚ್ಚರಿಯಿಂದ ಕೇಳಿದಳು.
‘‘ಎಂತ ಉಳಿತಾಯ ಹೇಗೆ? ಎಲ್ಲ ರಾಜ್ಯಗಳ ಬೇರೆ ಬೇರೆ ಭಾಷೆಗಳಲ್ಲಿ ಬರೆಯುವ ಪುಸ್ತಕಗಳನ್ನು ಒಂದೇ ಹಿಂದಿ ಭಾಷೆಯಲ್ಲಿ ಬರೆಯುವುದರಿಂದ ಪುಸ್ತಕ ಎಷ್ಟು ಉಳಿಯಿತು? ಲೆಕ್ಕ ಮಾಡಿ....ಕನ್ನಡ ಟೀಚರ್, ಮರಾಠಿ ಟೀಚರ್, ತುಳು ಟೀಚರ್, ತೆಲುಗು ಟೀಚರ್ ಅಂತ ಬೇರೆ ಬೇರೆ ಭಾಷೆಗಳಲ್ಲಿ ಈ ದೇಶದಲ್ಲಿ ಟೀಚರ್‌ಗಳೆಷ್ಟು ಉಂಟು....ಅವರಿಗೆಲ್ಲ ಕೊಡುವ ಸಂಬಳ ದೇಶಕ್ಕೆ ಲಾಭ ಅಲ್ವಾ?’’
ಮಹಿಳೆ ಅವನನ್ನೇ ಕಣ್ಣು ಬಿಟ್ಟು ನೋಡತೊಡಗಿದಳು.
‘‘ನೋಡುವುದೆಂತದು...? ಇನ್ನು ನೋಡಿ ಎಲ್ಲ ವಿಲೀನವೆ? ಈ ಕಾಂಗ್ರೆಸ್‌ನವರು ವೋಟ್ ಬ್ಯಾಂಕ್ ಅಂತ ಮಾಡಿದ್ರು ನೋಡಿ....ಆ ಬ್ಯಾಂಕ್‌ಗಳನ್ನು ಕೂಡ ಮೋದಿಯವರು ವಿಲೀನ ಮಾಡಲಿದ್ದಾರೆ....ದಲಿತ ವೋಟ್ ಬ್ಯಾಂಕ್...ಮುಸ್ಲಿಮ್ ವೋಟ್ ಬ್ಯಾಂಕ್....ಕ್ರೈಸ್ತ ವೋಟ್ ಬ್ಯಾಂಕ್...ಇವುಗಳೆಲ್ಲ ಕಳೆದ ಚುನಾವಣೆಯಲ್ಲೇ ಸಾಕಷ್ಟು ವಿಲೀನ ಆಗಿವೆ....ಮುಂದಿನ ಚುನಾವಣೆಯಲ್ಲಿ ಪೂರ್ಣ ಪ್ರಮಾಣದಲ್ಲಿ ವಿಲೀನ ಆಗಲಿವೆ....’’
‘‘ಅದು ಹೇಗೆ?’’
‘‘ಹೇಗೆ ಅಂದರೆ? ನಮ್ಮ ಇವಿಎಂ ಇರುವುದು ಯಾಕೆ ಮತ್ತೆ? ಬಟನ್ ಒತ್ತಿದರೆ ಸಾಕು ಎಲ್ಲ ಬ್ಯಾಂಕ್‌ಗಳು ಮೋದಿ ಬ್ಯಾಂಕಿನೊಳಗೆ ವಿಲೀನವಾಗಿ ಬಿಡುತ್ತದೆ....’’ ಆತ ವಿವರಿಸಿ ಹೇಳಿದ.
‘‘ನೀವು ಯಾವ ಬ್ಯಾಂಕನ್ನು ಬೇಕಾದರೆ ವಿಲೀನಗೊಳಿಸಿ....ಆದರೆ ಇದನ್ನು ವಿಲೀನಗೊಳಿಸಲು ಜನರು ಬಿಡುವುದಿಲ್ಲ....ಮೋದಿಯಿಂದ ಸಾಧ್ಯವೂ ಇಲ್ಲ....’’
‘‘ದೇಶದ್ರೋಹಿಗಳು ನೀವು...ನಿಮ್ಮ ಬ್ಯಾಂಕಿನಲ್ಲಿ ನಾವು ಠೇವಣಿ ಇಡುವುದಿಲ್ಲ...ಹೋಗಿ ಪಾಕಿಸ್ತಾನಕ್ಕೆ....’’
‘‘ಈ ಬ್ಯಾಂಕಿನಲ್ಲಿ ನೀವು ವ್ಯವಹಾರ ಮಾಡದೇ ದಿನ ಸಾಗಿಸುವುದು ಕಷ್ಟ....’’ ಅವಳು ನಕ್ಕು ಹೇಳಿದಳು.
‘‘ಅಂದೇನದು...ಇದು ಕಾಂಗ್ರೆಸ್‌ನವರ ಬ್ಯಾಂಕಾ? ಹಾಗಾದರೆ ಐಟಿ ರೈಡ್ ಮಾಡಿಸಿ ವಿಲೀನ ಮಾಡಿಸ್ತಾರೆ ಬಿಡಿ....’’ ಆತ ಮೀಸೆ ತಿರುಗಿಸಿದ.
‘‘ಎಲವೋ ಮೂರ್ಖ...ಇದು ನೀನು ಗ್ರಹಿಸಿದ ಹಣದ ಬ್ಯಾಂಕ್ ಅಲ್ಲ...ಇದು ಬ್ಲಡ್ ಬ್ಯಾಂಕ್....ಬೋರ್ಡ್ ಸರಿ ಓದು...’’ ಮಹಿಳೆ ಒಮ್ಮೆಲೆ ಅಬ್ಬರಿಸಿದಳು. ಅವನು ಒಮ್ಮೆಲೆ ವೌನವಾದವನು, ಮತ್ತೆ ವಾದಿಸ ತೊಡಗಿದ ‘‘ಬ್ಲಡ್ ಬ್ಯಾಂಕ್ ಆದರೆ? ಬ್ಯಾಂಕ್ ಬ್ಯಾಂಕೇ ಅಲ್ಲವೆ? ಅಷ್ಟಷ್ಟು ದೊಡ್ಡ ಬ್ಯಾಂಕ್ ವಿಲೀನವಾಗಿರುವಾಗ ನಿಮ್ಮ ಬ್ಲಡ್ ಬ್ಯಾಂಕ್ ವಿಲೀನವಾದರೆ ದೇಶಕ್ಕೆ ಎಷ್ಟು ಲಾಭ ಉಂಟು...’’
ಆಕೆಯ ರಕ್ತ ಕುದಿಯತೊಡಗಿತು ‘‘ಬ್ಲಡ್ ಬ್ಯಾಂಕ್‌ನ್ನು ವಿಲೀನ ಮಾಡುವುದು ಹೇಗೋ ಮಾರಾಯ?’’
‘‘ನೋಡಿ...ಈ ಎ ಪಾಸಿಟಿವ್...ಬಿ ಪಾಸಿಟಿವ್....ಒ ಪಾಸಿಟಿವ್...ಎಂದು ಬೇರೆ ಬೇರೆಯಾಗಿ ರಕ್ತವನ್ನು ವಿಭಜಿಸುವುದರಿಂದ ದೇಶಕ್ಕೆ ಎಷ್ಟೆಲ್ಲ ನಷ್ಟ. ಆ ರಕ್ತವನ್ನೆಲ್ಲ ಒಂದಾಗಿ ವಿಲೀನಗೊಳಿಸಿದರೆ ಎಷ್ಟು ಲಾಭ ಉಂಟು....’’ ಅವನು ಸಲಹೆ ನೀಡಿದ.
ಭಕ್ತನ ತಲೆಯೊಳಗೆ ‘ಗೊಬ್ಬರ’ವಷ್ಟೇ ಇರುತ್ತದೆ ಎನ್ನುವ ಸಂಗತಿ ಒಮ್ಮೆಲೆ ನೆನಪಿಗೆ ಬಂದು ‘‘ಸರಿ ಸಾರ್...ನಮ್ಮ ಬ್ಯಾಂಕುಗಳನ್ನು ವಿಲೀನಗೊಳಿಸೋಣವಂತೆ...’’ ಎಂದಳು.
‘‘ಹಾಗೆ ದಾರಿಗೆ ಬನ್ನಿ....’’ ಎಂದವನೇ ‘ಹರ ಹರ ಮೋದಿ’ ಎನ್ನುತ್ತಾ ಅಲ್ಲಿಂದ ನಡೆದ.