ಕ್ಯಾಲಿಫೋರ್ನಿಯಾ ನ್ಯಾಯಾಧೀಶೆಯಾಗಿ ಭಾರತೀಯ ಮೂಲದ ಶಿರೀನ್ ಮ್ಯಾಥ್ಯೂಸ್
ವಾಶಿಂಗ್ಟನ್, ಸೆ.1: ಕ್ಯಾಲಿಫೋರ್ನಿಯಾದ ದಕ್ಷಿಣ ಜಿಲ್ಲೆಯ ನ್ಯಾಯಾಧೀಶೆಯಾಗಿ ಭಾರತೀಯ ಮೂಲದ ಶಿರೀನ್ ಮ್ಯಾಥ್ಯೂಸ್ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ನೇಮಕಗೊಳಿಸಿದ್ದಾರೆ. ಒಂದು ವೇಳೆ ಈ ನೇಮಕವು ದೃಢೀಕೃತಗೊಂಡಲ್ಲಿ, ಮ್ಯಾಥ್ಯೂಸ್ ಅವರು ಕ್ಯಾಲಿಫೋರ್ನಿಯಾ ದಕ್ಷಿಣ ಜಿಲ್ಲೆಯಲ್ಲಿ ಆರ್ಟಿಲ್ ಅಡಿ ಫೆಡರಲ್ ಜಡ್ಜ್ ಹುದ್ದೆಗೇರಿದ ಪ್ರಪ್ರಥಮ ಏಶ್ಯನ್ ಪೆಸಿಫಿಕ್ ಮಹಿಳೆಯೆನಿಸಿಕೊಳ್ಳಲಿದ್ದಾರೆ.
ವೃತ್ತಿಯಲ್ಲಿ ಉತ್ತಮ ಚಾರಿತ್ರ, ಸನ್ನಡತೆಯನ್ನು ಪ್ರದರ್ಶಿಸಿದ ನ್ಯಾಯಾಧೀಶರನ್ನು ಆರ್ಟಿಕಲ್ ದರ್ಜೆಯ ನ್ಯಾಯಾಧೀಶರನ್ನಾಗಿ ನೇಮಿಸಲಾಗುತ್ತದೆ. ಈ ಶ್ರೇಣಿಯ ನ್ಯಾಯಾಧೀಶರು ಕೆಲವೇ ಕೆಲವು ಸಂದರ್ಭಗಳನ್ನು ಹೊರತುಪಡಿಸಿ, ಜೀವಿತಾವಧಿಯ ವರೆಗೂ ಹುದ್ದೆಯಲ್ಲಿ ಮುಂದುವರಿಯಲು ಅರ್ಹರಾಗಿದ್ದಾರೆ.
ಪ್ರಸಕ್ತ ಮ್ಯಾಥ್ಯೂಸ್ ಅವರು ಅಮೆರಿಕದ ಸ್ಯಾನ್‌ಡಿಯೆಗ್‌ನಲ್ಲಿರುವ ದೇಶದ ಐದನೆ ಅತಿ ದೊಡ್ಡ ಕಾನೂನು ಸಂಸ್ಥೆಯಾದ ಜೋನ್ಸ್ ಡೇನ ಪಾಲುದಾರರಾಗಿದ್ದಾರೆ.ಜೋನ್ಸ್ ಡೇಗೆ ಸೇರ್ಪಡೆಗೊಳ್ಳುವ ಮುನ್ನ ಮ್ಯಾಥ್ಯೂಸ್ ಅವರು ಕ್ಯಾಲಿಫೋರ್ನಿಯಾದ ದಕ್ಷಿಣ ಜಿಲ್ಲೆಯ ಅಟಾರ್ನಿ ಕಾರ್ಯಾಲಯದ ಕ್ರಿಮಿನಲ್ ವಿಭಾಗದಲ್ಲಿ ಸಹಾಯಕ ಅಟಾರ್ನಿಯಾಗಿ ಕಾರ್ಯನಿರ್ವಹಿಸಿದ್ದರು.