ಓ ಮೆಣಸೇ…
ನನಗೆ ಅಧಿಕಾರ ದಾಹ ಇಲ್ಲ - ಡಿ.ಕೆ. ಶಿವಕುಮಾರ್, ಮಾಜಿ ಸಚಿವ
ನೀರು ಕುಡಿಸಲು ಬಂದ ಈಡಿ ಅಧಿಕಾರಿಗಳ ಮುಂದೆ ಸ್ಪಷ್ಟೀಕರಣವೇ?
---------------------
ಬಿಜೆಪಿಗೂ ಬರಲಿದೆ ಸಮ್ಮಿಶ್ರ ಸರಕಾರದ ಗತಿ - ಬಸವರಾಜ ಹೊರಟ್ಟಿ, ವಿ.ಪ. ಸದಸ್ಯ
ಒಟ್ಟಿನಲ್ಲಿ ಮತ್ತೆ ಒಂದಿಷ್ಟು ಶಾಸಕರು ಅನರ್ಹರಾಗಲು ಸಿದ್ಧರಾಗುತ್ತಿದ್ದಾರೆ ಎಂದಾಯಿತು.
---------------------
ದೇಶದ ಮುದ್ರಣ ಮಾಧ್ಯಮಗಳ ಮೇಲೆ ನನಗೆ ಅಪಾರ ವಿಶ್ವಾಸ - ಪ್ರಣವ್ ಮುಖರ್ಜಿ, ಮಾಜಿ ರಾಷ್ಟ್ರಪತಿ
ನಿಮಗೆ ಭಾರತರತ್ನ ಸಿಕ್ಕಿರುವ ವರದಿ ಸುಂದರವಾಗಿ ಮುದ್ರಣವಾಗಿರಬೇಕು.
---------------------
ಸಾಹಿತ್ಯ ಸೃಷ್ಟಿ ತಪಸ್ಸಿನಂತಾಗಬೇಕು - ಎಸ್.ಎಲ್. ಬೈರಪ್ಪ, ಸಾಹಿತಿ
ಕಪಟ ಸನ್ಯಾಸಿಯ ತಪಸ್ಸು ಸಮಾಜಕ್ಕೆ ಅಪಾಯಕಾರಿ.
---------------------
ಬಿಜೆಪಿಯ ಹಿರಿಯ ಮುಖಂಡರ ನಿಧನಕ್ಕೆ ವಿರೋಧಪಕ್ಷಗಳ ವಾಮಾಚಾರವೇ ಕಾರಣ - ಪ್ರಜ್ಞಾಸಿಂಗ್, ಸಂಸದೆ
ದೇಶದ ಆರ್ಥಿಕ ಹಿಂಜರಿತಕ್ಕೂ ಅದೇ ಕಾರಣವಾಗಿರಬೇಕಲ್ಲ?
---------------------
ಯಾವತ್ತೂ ಅಧಿಕಾರ ಬೇಡ ಎಂದು ಹೇಳಿದವನು ನಾನಲ್ಲ - ಎಸ್. ಅಂಗಾರ, ಶಾಸಕ
ದುರದೃಷ್ಟಕ್ಕೆ ಬೇಕಾ? ಎಂದು ಯಾರೂ ಕೇಳಿಲ್ಲ.
---------------------
ಬಿಜೆಪಿ ಹೈಕಮಾಂಡ್‌ಗೆ ಸಿಎಂ ಯಡಿಯೂರಪ್ಪ ಒಲ್ಲದ ಶಿಶು - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಶಿಶು-ಪಾಲನ ತಲೆದಂಡಕ್ಕೆ ತಪ್ಪುಗಳನ್ನು ಕಲೆ ಹಾಕಲಾಗುತ್ತಿದೆ.
---------------------
ನಾನು ಜೆಡಿಎಸ್ ಮೂಲದವ, ಬಿಜೆಪಿ ಸಿದ್ಧಾಂತ ಒಪ್ಪಿಕೊಳ್ಳಲು ಕಷ್ಟವಾಗುತ್ತಿದೆ - ಗೂಳಿಹಟ್ಟಿ ಶೇಖರ್, ಶಾಸಕ
ಗೂಳಿಯ ಬೀಜ ಒಡೆದ ಬಳಿಕವೇ ಬಿಜೆಪಿಗೆ ಸೇರಿಸಲಾಗುತ್ತದೆ.
---------------------
ನನ್ನನ್ನು ಮುಗಿಸಲು ಬಂದವರೆಲ್ಲ ಮುಳುಗಿ ಹೋಗಿದ್ದಾರೆ - ದೇವೇಗೌಡ, ಮಾಜಿ ಪ್ರಧಾನಿ
ರಾಮಕೃಷ್ಣ ಹೆಗಡೆಯವರಿಗೆ ಹೀಗೊಂದು ಶ್ರದ್ಧಾಂಜಲಿ.
---------------------
ರಾಜ್ಯದಲ್ಲಿ ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರಕಾರ ಪತನಕ್ಕೆ ಬಿಜೆಪಿಯ ಕೆಲವು ಶಕುನಿಗಳು ಕಾರಣ - ವಿ.ಎಸ್. ಉಗ್ರಪ್ಪ, ಮಾಜಿ ಸಚಿವ
ಜೆಡಿಎಸ್-ಕಾಂಗ್ರೆಸ್‌ನೊಳಗೆ ಶಕುನಿಗಳಿಗೇನು ಬರವೇ?
---------------------
ಶಿಕ್ಷಣ ಮತ್ತು ಸಾಹಿತ್ಯ ಜೋಡೆತ್ತುಗಳಿದ್ದಂತೆ - ಎಚ್.ಎಸ್. ವೆಂಕಟೇಶ ಮೂರ್ತಿ, ಸಾಹಿತಿ
ಸೆಗಣಿಯಂತೆ ಹೊರಬರುತ್ತಿರುವ ಸಾಹಿತ್ಯ ಮತ್ತು ಪದವೀಧರರನ್ನು ನೋಡುವಾಗ ನಿಜ ಅನ್ನಿಸುತ್ತದೆ.
---------------------
ನರೆಂದ್ರ ಮೋದಿಗೆ ಇಂಗ್ಲಿಷ್ ಚೆನ್ನಾಗಿ ಗೊತ್ತು ಆದರೆ ಮಾತನಾಡಲು ಇಷ್ಟವಿಲ್ಲ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಅವರು ಇಂಗ್ಲಿಷ್ ಮಾತನಾಡಿದ ಕಾರಣಕ್ಕಾಗಿಯೇ ಬ್ರಿಟಿಷರು ದೇಶ ಬಿಟ್ಟು ಹೋದರಂತೆ.
---------------------
ಅತೃಪ್ತಿ ಎಲ್ಲ ಕಾಲದಲ್ಲೂ ಇದ್ದದ್ದೇ - ಯಡಿಯೂರಪ್ಪ, ಮುಖ್ಯಮಂತ್ರಿ
ಎಲ್ಲ ಕಾಲದಲ್ಲೂ ಅತೃಪ್ತಿಯೇ ಸರಕಾರವನ್ನು ಬಲಿತೆಗೆದುಕೊಂಡಿರುವುದು ಎನ್ನುವ ಎಚ್ಚರಿಕೆಯೂ ಇರಲಿ.
---------------------
ಪಕ್ಷ ನಿಷ್ಠೆಯೇ ನನ್ನ ಶಕ್ತಿ ಮತ್ತು ದೌರ್ಬಲ್ಯ - ಸಿ.ಟಿ. ರವಿ, ಸಚಿವ
ಆ ದೌರ್ಬಲ್ಯದ ಕಾರಣಕ್ಕಾಗಿ ಕನ್ನಡ ಬಾವುಟದ ಮೇಲೆ ಶಕ್ತಿ ಪ್ರದರ್ಶನವೇ?
---------------------
ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಇನ್ನಷ್ಟು ಬಲ ನೀಡಲು ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮಾಡಲಾಗಿದೆ - ಡಾ. ಸಿ.ಎಸ್. ಅಶ್ವತ್ಥ ನಾರಾಯಣ, ಉಪಮುಖ್ಯಮಂತ್ರಿ
ಒಟ್ಟಿನಲ್ಲಿ ಯಡಿಯೂರಪ್ಪ ಪಾಲಿನ ಬಲ ಪಂಥೀಯರು ನೀವು.
---------------------
ಉಪಮುಖ್ಯಮಂತ್ರಿ ಎಂಬುದು ಅಸಾಂವಿಧಾನಿಕ ಹುದ್ದೆ - ಜಗದೀಶ ಶೆಟ್ಟರ್, ಸಚಿವ
ಅಸಾಂವಿಧಾನಿಕವಾಗಿ ರಚನೆಯಾದ ಸರಕಾರದಲ್ಲಿ ಎಲ್ಲವೂ ನಡೆಯುತ್ತದೆ.
---------------------
ಹಳೆ ಬೇರಿನೊಂದಿಗೆ ಹೊಸ ಚಿಗುರು ಎಂಬಂತೆ ನೂತನ ಮಂತ್ರಿ ಮಂಡಲ ರಚನೆಯಾಗಿದೆ - ಡಿ.ವಿ. ಸದಾನಂದ ಗೌಡ, ಕೇಂದ್ರ ಸಚಿವ
ಯಾವ ಮರದ ಚಿಗುರು ಎನ್ನುವುದನ್ನು ಕಾದು ನೋಡಬೇಕು.
---------------------
ಆರ್‌ಬಿಐ ನಿಂದ ಕೇಂದ್ರ ಸರಕಾರ ದುಡ್ಡು ಎತ್ತಿದ್ದು ಕಳ್ಳತನಕ್ಕೆ ಸಮ - ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಕಳ್ಳರು ಹಾಡಹಗಲೇ ಕದಿಯುವುದಿಲ್ಲ.
---------------------
ದೇಶದ ಭದ್ರತೆ ಬಲವಾಗಿರದಿದ್ದರೆ ಆರ್ಥಿಕ ಪ್ರಗತಿ ಸಾಧ್ಯವಿಲ್ಲ - ಅಮಿತ್ ಶಾ, ಕೇಂದ್ರ ಸಚಿವ
ಅದಕ್ಕಾಗಿ ಸೇನೆ, ಪೊಲೀಸ್ ಇಲಾಖೆಯೊಳಗೆ ಬಲ ಪಂಥೀಯರನ್ನು ತುರುಕುತ್ತಿದ್ದೀರಿ.
---------------------
ನಮ್ಮ ಪಕ್ಷದ ನಾಯಕರೇ ನನ್ನನ್ನು ಸೋಲಿಸಿದರು - ಕೆ.ಎಚ್. ಮುನಿಯಪ್ಪ, ಕಾಂಗ್ರೆಸ್ ನಾಯಕ
ಯಾರೇ ಇರಲಿ, ಒಳ್ಳೆಯ ಕೆಲಸವನ್ನೇ ಮಾಡಿದರು.
---------------------
ನನ್ನನ್ನು ಜೈಲಿಗಟ್ಟಿದರೂ ನಾನು ಬಿಜೆಪಿಗೆ, ಮೋದಿ ಸರಕಾರಕ್ಕೆ ತಲೆ ಬಾಗುವುದಿಲ್ಲ - ಮಮತಾ ಬ್ಯಾನರ್ಜಿ, ಪ.ಬಂ.ಮುಖ್ಯಮಂತ್ರಿ
ಜೈಲಿಗಟ್ಟುವ ಕೆಲಸ ಅದೇನು ಮಾಡಿದ್ದೀರಿ?
---------------------
ನನ್ನ ಜಾತಿಯನ್ನೇ ಮಾನದಂಡ ಮಾಡಿಕೊಂಡು ಮಂತ್ರಿಸ್ಥಾನ ನೀಡುವುದಾದರೆ ನನಗೆ ಬೇಡ - ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಾಸಕ
ಜಾತಿ ಬಿಟ್ಟರೆ ತಮಗೆ ಸ್ಥಾನಮಾನ ನೀಡಲು ಬೇರೆ ಇರುವ ಅರ್ಹತೆಯನ್ನಾದರೂ ಹೇಳಿ.
---------------------
ಮುಖ್ಯಮಂತ್ರಿ ಯಡಿಯೂರಪ್ಪರ ಕಾರ್ಯವೈಖರಿ ಕಂಡು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಟ್ಟೆ ಕಿಚ್ಚು ಪಡುತ್ತಿದ್ದಾರೆ - ಕೋಟ ಶ್ರೀನಿವಾಸ ಪೂಜಾರಿ, ಸಚಿವ
ಆ ಮಟ್ಟಿಗೆ ದುಡ್ಡು ದೋಚುತ್ತಿದ್ದಾರೆಯೇ?
---------------------
ಭಾರತದ ಅರ್ಥವ್ಯವಸ್ಥೆ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿದೆ - ಅಮಿತ್ ಶಾ, ಕೇಂದ್ರ ಸಚಿವ
ಬಹುಶಃ ಬೆಳೆಯುತ್ತಿರುವ ಸಾಲವನ್ನೇ ಅರ್ಥವ್ಯವಸ್ಥೆ ಎಂದು ತಿಳಿದಿರಬೇಕು.
---------------------
ಯೋಗ ನನ್ನನ್ನು ಮುನ್ನಡೆಸುತ್ತಿದೆ - ನರೇಂದ್ರ ಮೋದಿ, ಪ್ರಧಾನಿ
ದೇಶವನ್ನು ಹಿನ್ನಡೆಸುತ್ತಿರುವುದು ಯಾವುದು?
---------------------
ನಾವು ಕಟ್ಟಿದ ಮನೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಸಾರ ಮಾಡುತ್ತಿದ್ದಾರೆ - ಎಂ.ಟಿ.ಬಿ. ನಾಗರಾಜ್, ಅನರ್ಹ ಶಾಸಕ
ಮನೆ ಕಟ್ಟಿದವರೇ ಸಂಸಾರ ಮಾಡುವುದಾಗಿದ್ದರೆ, ಬೆಂಗಳೂರಿನಲ್ಲಿರುವ ಎಲ್ಲ ಮಹಡಿ ಮನೆಗಳಲ್ಲೂ ಉತ್ತರ ಕರ್ನಾಟಕದ ಕಟ್ಟಡ ಕಾರ್ಮಿಕರು ವಾಸಿಸಬೇಕಾಗಿತ್ತು.