ಧರ್ಮ: ಮಾನವ ಸಂಸ್ಕೃತಿ ಮತ್ತು ವಿಕಾಸ
ಈ ಹೊತ್ತಿನ ಹೊತ್ತಿಗೆ
ರಾಜ್ಯಶಾಸ್ತ್ರ ಪ್ರಾಧ್ಯಾಪಕ, ವಿಚಾರವಾದಿ, ಸಂಶೋಧಕ ಡಾ. ರಾವ್ ಸಾಹೇಬ್ ಕಸಬೆ ಅವರು ಬರೆದಿರುವ ‘ಧರ್ಮ’ ಕೃತಿಯನ್ನು ಮರಾಠಿಯಿಂದ ಕನ್ನಡಕ್ಕೆ ಚಂದ್ರಕಾಂತ ಪೋಕಳೆ ಅವರು ಅನುವಾದಿಸಿದ್ದಾರೆ. ಸುಮಾರು 56 ಪುಟಗಳ ಈ ಪುಟ್ಟ ಕೃತಿ, ಮಾನವ ಸಂಸ್ಕೃತಿ ಮತ್ತು ಅದರ ವಿಕಾಸಕ್ಕೆ ಧರ್ಮ ನೀಡಿದ ಕೊಡುಗೆ ಮತ್ತು ಮಾಡಿದ ಹಾನಿಯನ್ನು ಅತ್ಯಂತ ಗಹನವಾಗಿ ವಿಶ್ಲೇಷಿಸುತ್ತದೆ. ಮನುಷ್ಯನ ನಾಗರಿಕತೆಯ ವಿಕಾಸ ಹೇಗೆ ಧರ್ಮದ ಜೊತೆ ಜೊತೆಗೇ ಬೆಳೆದು ಬಂತು ಮತ್ತು ನಾಗರಿಕತೆ ಮತ್ತು ಧರ್ಮ ಪರಸ್ಪರ ಪೂರಕವಾಗುವ ಬದಲು, ಮುಖಾಮುಖಿಯಾಗುವಂತಹ ಸನ್ನಿವೇಶ ಎದುರಾಯಿತು ಎನು್ನವುದನ್ನು ಈ ಕೃತಿ ವಿವರಿಸುತ್ತದೆ.
‘‘20ನೇ ಶತಮಾನದ ಕೊನೆಯ ದಶಕ ಮತ್ತು 21ನೆಯ ಶತಮಾನದ ಆರಂಭವು ಜಗತ್ತಿನ ಭೀಕರ ಸಾಂಸ್ಕೃತಿಕ ಸಂಘರ್ಷದ ಕಾರಣಕ್ಕಾಗಿ ಯುದ್ಧಮಯ ಗೊಂಡಂತೆ ಕಾಣುತ್ತದೆ. ಹೀಗಾಗಿ ಇಂದು ಹಿಂದೆಂದಿಗಿಂತಲೂ ಹೆಚ್ಚು ಧರ್ಮ ಚಿಕಿತ್ಸೆಯನ್ನು ಕೈಗೊಳ್ಳಬೇಕಾದ ಅಗತ್ಯ ನಿರ್ಮಾಣವಾಗಿದೆ. ಈ ಚಿಕಿತ್ಸೆಯು ಮಾನವನ ಉದಯ, ವಿಕಾಸ, ಅವನ ಜೀವನ ಸಂಘರ್ಷದ ಮತ್ತು ಅವರ ಬದುಕಿನ ಮೂಲಭೂತ ಸಮಸ್ಯೆಗಳ ಬಗೆಗೆ ಯೋಚಿಸುವ ವಿವಿಧ ಆಧುನಿಕ ಜ್ಞಾನಶಾಖೆಗಳ ಸಹಾಯದಿಂದ ನಡೆದಾಗ ಮಾತ್ರ ಧರ್ಮದ ಮೂಲ ಸ್ವರೂಪವು ಸ್ಪಷ್ಟವಾಗಬಲ್ಲದು. ಅದರ ಸಾಮರ್ಥ್ಯ ಮತ್ತು ಮಿತಿಯನ್ನು ಗ್ರಹಿಸಬಹುದು. ಇಂದು ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಸಂಹಾರವನ್ನು ನಿಲ್ಲಿಸಲು ಅದೊಂದು ಉಪಾಯವಾಗಬಲ್ಲದು...’’ ಎಂಬ ಆಶಯವನ್ನು ಹೊತ್ತು ಈ ಕೃತಿಯನ್ನು ಬರೆಯಲಾಗಿದೆ. ನಿರ್ದಿಷ್ಟ ಸಿದ್ಧಾಂತಕ್ಕೆ ಬದ್ಧವಾಗಿರುವ ಈ ಕೃತಿ ಬುದ್ಧನಿಂದ ಮಾರ್ಕ್ಸ್‌ನ ವರೆಗೆ ಧಾರ್ಮಿಕ ಚಿಂತನೆಯನ್ನು ಅನ್ವೇಷಿಸುತ್ತದೆ. ವಿವಿಧ ಧರ್ಮಗಳ ಇತಿಹಾಸಗಳನ್ನು ಕೆದಕುತ್ತವೆಯಾದರೂ, ಭಾರತದ ಧಾರ್ಮಿಕ ಇತಿಹಾಸವನ್ನು ಕೇಂದ್ರವಾಗಿಟ್ಟುಕೊಂಡು ಈ ಕೃತಿ ಧರ್ಮವನ್ನು ಚರ್ಚಿಸುತ್ತದೆ. ಇದೇ ಸಂದರ್ಭದಲ್ಲಿ ಬುದ್ಧನಿಂದ ಹಿಡಿದು ವಿವಿಧಭಾರತೀಯ ಚಿಂತಕರು, ಸಂತರು ಧರ್ಮ ಮತ್ತು ಧರ್ಮದಾಚೆಗೆ ಬದುಕನ್ನು ನೋಡಿದ ಪರಿಯನ್ನು ವಿವರಿಸುತ್ತಾರೆ. ಹಾಗೆಯೇ ವಿದೇಶದಲ್ಲಿ ಧರ್ಮ ಹೇಗೆ ತನ್ನೊಳಗೇ ಸಂಘರ್ಷಗಳನ್ನು ಹುಟ್ಟು ಹಾಕುತ್ತಾ ಬೆಳೆಯುತ್ತಾ ಹೋಯಿತು ಎನ್ನುವುದನ್ನೂ ಕೃತಿ ದಾಖಲೆಗಳ ಸಹಿತ ಮಂಡಿಸುತ್ತದೆ. ‘‘ಮನುಷ್ಯನ ಬದುಕಿನ ಪ್ರಯೋಜನವು ಅವನಲ್ಲಿಯ ಸುಪ್ತಶಕ್ತಿಯ ಪ್ರಕಟೀಕರಣದಲ್ಲಿದೆ. ತನ್ನೊಳಗೆ ಒಂದು ಸುಪ್ತ ಸಾಮರ್ಥ್ಯವಿದೆ. ಅದನ್ನು ತಾನೇ ಪ್ರಕಟಪಡಿಸಬಲ್ಲೆ. ಅದರ ಉಪಯೋಗವನ್ನು ತನ್ನನ್ನು ಒಳಗೊಂಡಂತೆ ಲೋಕಕಲ್ಯಾಣಕ್ಕಾಗಿ ಮಾಡಬಲ್ಲೆ. ಇದರ ಬಗೆಗೆ ಮನುಷ್ಯನಿಗೆ ಬರುವ ಅರಿವು ಇದೇ ನಿಜವಾದ ಆತ್ಮಪ್ರಜ್ಞೆ. ಇದನ್ನೇ ನಾನು ಅಧ್ಯಾತ್ಮವೆಂದುಕೊಂಡಿದ್ದೇನೆ....’’ ಎಂದು ಲೇಖಕರು ಕೃತಿಯ ಕೊನೆಯಲ್ಲಿ ಅಭಿಪ್ರಾಯಪಡುತ್ತಾರೆ.
ನವಕರ್ನಾಟಕ ಪ್ರಕಾಶನ ಹೊರತಂದಿರುವ ಕೃತಿಯ ಒಟ್ಟು ುಟಗಳು 56. ಮುಖಬೆಲೆ 45 ರೂ.