ಸರಕಾರಕ್ಕೆ ಕೋಟ್ಯಂತರ ರೂ. ನಷ್ಟ ಮಾಡಿದ ಆರೋಪ: 9 ಕಡೆ ಎಸಿಬಿ ದಾಳಿ
ಬೆಂಗಳೂರು, ಸೆ.3: ಬಿಬಿಎಂಪಿ ಹಾಗೂ ಸರಕಾರಕ್ಕೆ ಕೋಟ್ಯಂತರ ರೂ. ನಷ್ಟವುಂಟು ಮಾಡಿರುವ ಆರೋಪ ಪ್ರಕರಣ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಸೇರಿ ಒಟ್ಟು 9 ಸ್ಥಳಗಳ ಮೇಲೆ ಎಸಿಬಿ ದಾಳಿ ನಡೆಸಿದೆ.
ಬಿಬಿಎಂಪಿ ಅಭಿಯಂತರ ಕಾರ್ಯಪಾಲಕ ನಾಗರಾಜು, ಎಆರ್‌ಒ ಎಸ್.ನಂದನಾ, ಎಂ.ಕೆ.ರೋಚನ್, ವಿ.ಗಜೇಂದ್ರ, ಗೋಪಿ, ಆನೆಮ್ಮ ಅವರ ನಿವಾಸಗಳ ಮೇಲೆ ಹಾಗೂ ಕಲ್ಕೆರೆ ಮುಖ್ಯ ರಸ್ತೆಯ ಜಿ.ವಿ.ಕನ್‌ಸ್ಟ್ರಕ್ಷನ್, ಗುಡ್ ಹೋಂ ವೆಂಚರ್ಸ್ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಎಸಿಬಿ ತಿಳಿಸಿದೆ.
ಏನಿದು ಪ್ರಕರಣ?: ಕೆಲ ಸರಕಾರಿ ಅಧಿಕಾರಿಗಳು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು, ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಬಿಬಿಎಂಪಿ ರಸ್ತೆ ಅಗಲೀಕರಣಕ್ಕೆ ಜಪ್ತಿ ಮಾಡಿದ ಕಟ್ಟಡ ಮತ್ತು ನಿವೇಶನಗಳ ಜಾಗಕ್ಕಿಂತ ಹೆಚ್ಚು ಪ್ರದೇಶಕ್ಕೆ ಬೆಲೆ ನಿಗದಿ ಮಾಡಿ, ಹಣ ನೀಡಿ, ಬಿಬಿಎಂಪಿ ಮತ್ತು ಸರಕಾರಕ್ಕೆ ನಷ್ಟವುಂಟು ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು.
ಇದಕ್ಕೆ ಪೂರಕವಾಗುವಂತೆ ಇಲ್ಲಿನ ಟಿಸಿ ಪಾಳ್ಯ ಮುಖ್ಯ ರಸ್ತೆ ಹಾಗೂ ವಾರಣಾಸಿ ರಸ್ತೆ ಅಗಲೀಕರಣಕ್ಕೆ ಸರ್ವೆ ನಂ.7ಕ್ಕೆ ಸಂಬಂಧಿಸಿದ ಜಮೀನಿನಲ್ಲಿ 6,886 ಚ.ಅಡಿ ಜಾಗ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ, ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸದೆ, ಅಕ್ರಮವಾಗಿ 1,57,961 ಚ.ಅಡಿ ಬೋಗಸ್ ಟಿ.ಡಿ.ಆರ್ ಅನ್ನು ಸೃಷ್ಟಿಸಿ ಅನ್ಯ ವ್ಯಕ್ತಿಗಳಿಗೆ ಅಕ್ರಮವಾಗಿ ದುಬಾರಿ ಬೆಲೆಗೆ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಬೆಂಗಳೂರು ನಗರ ಎಸಿಬಿ ಠಾಣೆಯಲ್ಲಿ ದೂರು ದಾಖಲು ಮಾಡಿ ವಿವಿಧ ಸ್ಥಳಗಳ ಮೇಲೆ ವಾರೆಂಟ್ ಪಡೆದು ದಾಖಲೆ ಪತ್ರ ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.