4ಕೆ ಸೆಟ್-ಟಾಪ್ ಬಾಕ್ಸ್, ಬ್ರಾಡ್ ಬ್ಯಾಂಡ್, ದೂರವಾಣಿ ಇನ್ನಿತರ ಸೇವೆಗಳ ‘ಜಿಯೋ ಫೈಬರ್’ ಆರಂಭ
ಇದನ್ನು ಪಡೆಯುವುದು ಹೇಗೆ?: ಇಲ್ಲಿದೆ ವಿವರ
ಹೊಸದಿಲ್ಲಿ, ಸೆ.5: ರಿಲಯನ್ಸ್ ಜಿಯೋ ಟೆಲಿಕಾಂ ಸಂಸ್ಥೆ ಸೆಪ್ಟೆಂಬರ್ 5, 2016ರಂದು ಕಾರ್ಯಾರಂಭಗೊಂಡು ಮೂರು ವರ್ಷ ಪೂರೈಸಿರುವುದರಿಂದ ಇಂದು ಸಂಸ್ಥೆಯ ಮೂರನೇ ವಾರ್ಷಿಕೋತ್ಸವದ ಸಂದರ್ಭ ರಿಲಿಯನ್ಸ್ ಜಿಯೋ ತನ್ನ ಜಿಯೋ ಫೈಬರ್ ಬ್ರಾಡ್ ಬ್ಯಾಂಡ್ ಸೇವೆಗಳನ್ನು ದೇಶಾದ್ಯಂತ ಆರಂಭಿಸಿದೆ.
ಆರಂಭಿಕ ಆಫರ್ ಅನ್ವಯ ಜಿಯೋ ಫೈಬರ್ ಗ್ರಾಹಕರಿಗೆ ಉಚಿತ ಸೆಟ್-ಟಾಪ್ ಬಾಕ್ಸ್, ಝೀರೋ ಇನ್ ಸ್ಟಾಲೇಶನ್ ಶುಲ್ಕ ಹಾಗೂ 1-2 ತಿಂಗಳು ಕಾಂಪ್ಲಿಮೆಂಟರಿ ಪ್ಲ್ಯಾನ್ ಒದಗಿಸುವ ನಿರೀಕ್ಷೆಯಿದೆ.
ಜಿಯೋ ಫೈಬರ್ ಪ್ಲ್ಯಾನ್ ಗಳು
ತನ್ನ ಬ್ರಾಡ್ ಬ್ಯಾಂಡ್ ಪ್ಲ್ಯಾನ್ ಗಳ ವಿಸ್ತೃತ ದರಗಳ ವಿವರವನ್ನು ರಿಲಯನ್ಸ್ ಜಿಯೋ ಇನ್ನಷ್ಟೇ ಘೋಷಿಸಬೇಕಿದೆ. ಆದರೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷರು ಈಗಾಗಲೇ ಮಾಸಿಕ ಪ್ಲ್ಯಾನ್ ಗಳು ರೂ 700ರಿಂದ ಆರಂಭಗೊಂಡು ಹೆವಿ-ಡ್ಯೂಟಿ ಬಳಕೆದಾರರಿಗೆ ರೂ 10,000 ತನಕ ಇರಬಹುದೆಂದು ಘೋಷಿಸಿದ್ದಾರೆ. ರೂ. 700ರ ಪ್ಲ್ಯಾನ್ ಆಯ್ದುಕೊಳ್ಳುವವರಿಗೆ ಅಂತರ್ಜಾಲ ಸೇವೆಗಳು 100 ಎಂಬಿಪಿಎಸ್ ಸ್ಪೀಡ್ ನಲ್ಲಿ ಲಭ್ಯವಾಗಲಿದೆ. ಪ್ಲ್ಯಾನ್ ದರ ಏರಿಕೆಯಾದಂತೆ ಸ್ಪೀಡ್ ಕೂಡ ಏರಿಕೆಯಾಗಿ 1 ಜಿಬಿಪಿಎಸ್ ಆಗಬಹುದು.
ಫೈಬರ್ ಕೇಬಲ್ ತಂತ್ರಜ್ಞಾನವನ್ನು ಬಳಸಲಿರುವ ಜಿಯೋ ಫೈಬರ್ ಮೂಲಕ ಸ್ಥಿರ ದೂರವಾಣಿ, ಟಿವಿ ಹಾಗೂ ಬ್ರಾಡ್ ಬ್ಯಾಂಡ್ ಸೇವೆಗಳು ಜತೆಯಾಗಿ ಲಭ್ಯವಾಗಲಿವೆ. ಜಿಯೋ ಬ್ರಾಡ್ ಬ್ಯಾಂಡ್ ಸಂಪರ್ಕ ಪಡೆಯುವವರು ಉಚಿತ ಸ್ಥಿರ ದೂರವಾಣಿ ಸಂಪರ್ಕ ಪಡೆಯಲಿದ್ದು, ಅನಿಯಮಿತ ಕರೆಗಳು ಜೀವನಪರ್ಯಂತ ಲಭ್ಯವಾಗಲಿವೆ. ಆದರೆ ಡಾಟಾ ಬಳಕೆಗೆ ಮಿತಿಯಿರಬಹುದು.
ಜಿಯೋ ಫೈಬರ್ ಆರಂಭಿಕ ಆಫರ್
ಡಿಟಿಎಚ್ ಹಾಗೂ ಕೇಬಲ್ ಟಿವಿ ಬಳಕೆದಾರರನ್ನು ಆಕರ್ಷಿಸಲು ರಿಲಯನ್ಸ್ ಜಿಯೋ ಪ್ರತಿಯೊಂದು ಬ್ರಾಡ್ ಬ್ಯಾಂಡ್ ಸಂಪರ್ಕಕ್ಕೆ ಉಚಿತ ಸೆಟ್ ಟಾಪ್ ಬಾಕ್ಸ್ ಒದಗಿಸಲಿದೆ. ಜಿಯೋ ಫೊರೆವರ್ ವಾರ್ಷಿಕ ಪ್ಲ್ಯಾನ್ ಆಯ್ದುಕೊಳ್ಳುವವರಿಗೆ ಎಚ್‍ಡಿ ಅಥವಾ 4ಕೆ ಎಲ್‍ಇಡಿ ಟಿವಿ ಹಾಗೂ 4ಕೆ ಸೆಟ್ ಟಾಪ್ ಬಾಕ್ಸ್ ಉಚಿತವಾಗಿ ಲಭ್ಯವಾಗಲಿವೆ.
ಜಿಯೋ ಫೈಬರ್ ಚಂದಾದಾರರು ರೂಟರ್ ಅಥವಾ ಒಎನ್‍ಟಿ ಸಾಧನ ಪಡೆಯುವ ಸಲುವಾಗಿ ರೂ. 25000 ರಿಫಂಡೇಬಲ್ ಸೆಕ್ಯುರಿಟಿ ಡೆಪಾಸಿಟ್ ನೀಡಬೇಕಿದೆ.
ಜಿಯೋ ಫೈಬರ್ ಗೆ ಅರ್ಜಿ ಸಲ್ಲಿಸುವುದು ಹೇಗೆ ?
ಈಗಾಗಲೇ ಸುಮಾರು 5 ಲಕ್ಷ ಜನ ಜಿಯೋ ಫೈಬರ್ ಗೆ ಅರ್ಜಿ ಸಲ್ಲಿಸಿದ್ದಾರೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸರಳ ಹಾಗೂ ಆನ್ಲೈನ್ ಮುಖಾಂತರ ಸಲ್ಲಿಸಬಹುದಾಗಿದೆ. ಜಿಯೋ ಫೈಬರ್ ವೆಬ್ ತಾಣದ ಮೂಲಕ ಬ್ರಾಡ್ ಬ್ಯಾಂಡ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.