varthabharthi


ಭೀಮ ಚಿಂತನೆ

ಕಾರ್ಮಿಕರಿಗೆ ಜಾತಿಯಿಲ್ಲ ಎನ್ನುವವರು ಇದಕ್ಕೆ ಉತ್ತರ ಕೊಡಲಿ

ವಾರ್ತಾ ಭಾರತಿ : 6 Sep, 2019

1929ರ ಅಕ್ಟೋಬರ್ 16ನೇ ಬುಧವಾರದಂದು ಸಂಜೆ 6:30ಕ್ಕೆ ಪರೇಲ್‌ನಲ್ಲಿ ಮುಂಬೈ ಬಹಿಷ್ಕೃತ ವರ್ಗದ ಒಂದು ಜಾಹೀರು ಸಭೆಯನ್ನು ಆಯೋಜಿಸಲಾಗಿತ್ತು. ಪುಣೆಯ ಪರ್ವತಿ ಸತ್ಯಾಗ್ರಹಕ್ಕೆ ಬೆಂಬಲ ನೀಡಲು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಯಿತು. ಸಭೆಗೆಂದೇ ಪಡೆದಿದ್ದ ಹಾಲ್ ಜನರಿಂದ ಕಿಕ್ಕಿರಿದು ತುಂಬಿತ್ತು. ವೇದಿಕೆಯ ಮೇಲೆ ಭುರಕುಟೆ, ದೇವರಾವ್ ನಾಯಿಕ್, ಠಾಕರೆ, ಪ್ರಧಾನ್, ಖಾಂಡಕೆ, ಕವಳಿ, ಕದ್ರೆಕರ್, ಆಚಾರ್ಯ, ಡಾ. ಸೂರತ್‌ಕರ್‌ರಂತಹ ಮೇಲ್ಜಾತಿಯ ಜನ, ಹಾಗೆಯೇ ಶಿವತರ್ಕರ್, ಮಾಲಿ, ಆಡರೆಕರ್‌ರಂತಹ ದಲಿತರು ಕೂಡ ಉಪಸ್ಥಿತರಿದ್ದರು. ಶಿವತರ್ಕರ್ ಅವರು ಡಾ.ಅಂಬೇಡ್ಕರ್ ಅವರನ್ನು ಅಧ್ಯಕ್ಷ ಸ್ಥಾನ ಸ್ವೀಕರಿಸುವಂತೆ ವಿನಂತಿಸಿಕೊಂಡಾಗ ಖಾಂಡಕೆ ಅವರ ಅನುಮೋದನೆ ಸಿಕ್ಕಿದ ಕೂಡಲೇ ಡಾ. ಅಂಬೇಡ್ಕರ್ ಚಪ್ಪಾಳೆಯ ಕರತಾಡನದ ನಡುವೆ ಅಧ್ಯಕ್ಷ ಸ್ಥಾನದಲ್ಲಿ ಬಂದು ಕುಳಿತರು.

ಭಾಷಣದ ಆರಂಭದಲ್ಲಿ ಪುಣೆ ಸತ್ಯಾಗ್ರಹ ಇತಿಹಾಸವನ್ನು ಸ್ವಲ್ಪದರಲ್ಲಿ ಹೇಳಿ ಪುಣೆಯ ಬಹಿಷ್ಕೃತರ ಸತ್ಯಾಗ್ರಹಕ್ಕೆ ಎಲ್ಲ ಬಹಿಷ್ಕೃತರು ಬೆಂಬಲ ನೀಡುವುದು ಅವರ ಪವಿತ್ರ ಕರ್ತವ್ಯವಾಗಿದೆ ಅಂದರು. ಹಾಗೂ ‘‘ಅಗತ್ಯವಿದ್ದರೆ ನೀವೆಲ್ಲರೂ ಪುಣೆಯ ಸತ್ಯಾಗ್ರಹಕ್ಕೆ ಹೋಗಲು ಸಿದ್ಧರಿದ್ದೀರಾ?’’ ಎಂದು ಸಭಿಕರಿಗೆ ಪ್ರಶ್ನೆ ಕೇಳಿದಾಗ ಎಲ್ಲರೂ ಒಕ್ಕೊರಲಿನಿಂದ ‘‘ಹೌದು’’ ಅಂದರು.

‘‘ಮೇಲ್ಜಾತಿ ಜನರ ವರ್ತನೆ ಹಾಗೂ ದಲಿತರ ಬಗ್ಗೆಯಿರುವ ಅವರ ದೃಷ್ಟಿಕೋನವನ್ನು ನೀವು ನಿಷೇಧಿಸುತ್ತಿರಿ, ಜೊತೆಗೆ ನಿಮ್ಮ ಬಗ್ಗೆ ಮೇಲ್ಜಾತಿಯವರ ವಿಚಾರ ಪರಿವರ್ತನೆಯಾಗುತ್ತದೆಯೇ ಅನ್ನುವುದರ ಬಗ್ಗೆ ಇನ್ನು ಸ್ವಲ್ಪ ದಿನ ಕಾದುನೋಡಿ’’ ಎಂದು ನಮಗೆ ತಿಳಿಹೇಳುವ ಜನ ಎಷ್ಟು ನೀಚ ವೃತ್ತಿಯವರಾಗಿರಬಹುದು. 31ನೆಯ ಡಿಸೆಂಬರ್ ಒಳಗೆ ಡೊಮಿನಿಯನ್ ಸ್ಟೇಟಸ್ ಕೊಡದಿದ್ದರೆ ತಮಗೆ ಬ್ರಿಟಿಷ್ ಸರಕಾರದೊಂದಿಗಿರುವ ಸಂಬಂಧವನ್ನು ಕಡಿದುಹಾಕುವೆವು ಎಂದು ಕಾಂಗ್ರೆಸ್ ಕೂಡ ಹೇಳಿದ ಮೇಲೆ ಸುಮ್ಮನೆ ದಲಿತರಿಗೆ ಸುಳ್ಳು ಹೇಳುವುದರಲ್ಲಿ ಅರ್ಥವಿದೆಯೇ? ನುಡಿದಂತೆ ನಡೆ ಅನ್ನುವುದು ಅವರಿಗೆ ಗೊತ್ತೇಯಿಲ್ಲ. ಸಾವಿರಾರು ವರ್ಷಗಳು ಕಾದರೂ ಏನನ್ನೂ ಕೊಡದ ಮೇಲ್ಜಾತಿಯವರ ನೀಚತನವೇ ಹೆಚ್ಚು ಎದ್ದು ಕಾಣುತ್ತಿದ್ದು ಇನ್ನೂ ಸ್ವಲ್ಪಕಾದು ನೋಡಿ ಎಂದು ಹೇಳುವುದು ಬರೀ ನಾಟಕ. ಇಂತಹ ಸವಿಮಾತುಗಳಿಗೆ ಮನಸೋಲುವಷ್ಟು ದಲಿತರೀಗ ಮುಗ್ಧರಲ್ಲ, ಅವರು ಸ್ವಾಭಿಮಾನಿಗಳು ಹಾಗೂ ಜಾಗೃತ ಪ್ರಜೆಗಳಾಗಿದ್ದಾರೆ. ಅದರ ಉದಾಹರಣೆಯೆ ಪುಣೆಯ ಸತ್ಯಾಗ್ರಹ. ಮುಂಬೈಯಲ್ಲಿ ಆದಷ್ಟು ಬೇಗ ದೇವಸ್ಥಾನ ಪ್ರವೇಶಿಸುವ ಸತ್ಯಾಗ್ರಹವನ್ನಾರಂಭಿಸಲಿದ್ದೇವೆ ಹಾಗೂ ಅದನ್ನು ಯಶಸ್ವಿಯಾಗಿಸಲು ಮುಂಬೈಯ ದಲಿತರು ಟೊಂಕ ಕಟ್ಟಿದ್ದಾರೆ’’ ಅಂದರು. ಪ್ರಾಸ್ತಾವಿಕ ಭಾಷಣದ ನಂತರ ಅವರು ವನಮಾಲಿಯವರಿಗೆ ಕೆಳಗಿನ ಮಸೂದೆಗಳನ್ನು ಓದಿ ಹೇಳಲು ವಿನಂತಿಸಿದರು.

‘‘ಸಮಾಜ ಸಮತಾ ಸಂಘ ಮತ್ತು ಭಾರತೀಯ ಬಹಿಷ್ಕೃತ ಸೇವಾ ಸಂಘ ಇವರ ಆಶ್ರಯದಲ್ಲಿ ತೆಗೆದುಕೊಂಡ ಈ ಸಭೆ ಪುಣೆಯಲ್ಲಿ ಬಹಿಷ್ಕೃತ ಹಿಂದೂಗಳು ತಮ್ಮ ನ್ಯಾಯ ಹಾಗೂ ಹಕ್ಕುಗಳಿಗಾಗಿ ಆರಂಭಿಸಿರುವ ಸತ್ಯಾಗ್ರಹಕ್ಕೆ ತಮ್ಮ ಸಂಪೂರ್ಣ ಬೆಂಬಲ ಕೊಡುತ್ತಿದ್ದು ಇದಕ್ಕೆ ಸಹಾಯ ಮಾಡಿದ ಮೇಲ್ಜಾತಿಯ ಜನರಿಗೆ ಮನಃಪೂರ್ವಕ ಕೃತಜ್ಞತೆ ವ್ಯಕ್ತಪಡಿಸುತ್ತದೆ. ತಮ್ಮ ದೃಢ ನಿರ್ಧಾರವನ್ನು ಅಲುಗಾಡಿಸದೆ ಸತ್ಯಾಗ್ರಹದ ಹೋರಾಟವನ್ನು ಮುಂದುವರಿಸುವಂತೆ ದಲಿತರಿಗೆ ವಿನಂತಿಸುತ್ತದೆ.’’

ಮೇಲಿನ ನಿರ್ಧಾರವನ್ನು ಮಂಡಿಸುವಾಗ ವನಮಾಲಿಯವರು ‘‘ದಲಿತರು ದೇವಸ್ಥಾನದೊಳಗೆ ಕಾಲಿಡುವ ತಮ್ಮ ಹಕ್ಕು ಪಡೆಯುತ್ತಿರುವಾಗ ಮೇಲ್ಜಾತಿಯವರೇಕೆ ವಿರೋಧಿಸಬೇಕು?’’ ಅನ್ನುವುದರ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರು.
ವಡವಲಕರ್ ಅವರು ಮಸೂದೆಯ ಪರ ಭಾಷಣ ಮಾಡಿದರು. ನಂತರ ಶಾಂತವಾಗಿ ಸತ್ಯಾಗ್ರಹ ಮಾಡುವ ಜನರ ಮೇಲೆ ಹಲ್ಲೆ ನಡೆಸುವ ಮೇಲ್ಜಾತಿ ಜನರನ್ನು ಈ ಸಭೆ ನಿಷೇಧಿಸುತ್ತದೆ ಅನ್ನುವ ಅರ್ಥದ ಮಸೂದೆಯನ್ನು ಕೆ. ಸಿ. ಠಾಕರೆಯವರು ಮಂಡಿಸಿದರು.
ಮೇಲಿನ ನಿರ್ಧಾರದ ಪರ ದ.ವಿ. ಪ್ರಧಾನರವರು ಮಾತನಾಡಿದರು.
ಖಟಾವಕರ್ ಹಾಗೂ ಆಚಾರ್ಯರವರ ಭಾಷಣಗಳಾದ ಮೇಲೆ ಮಸೂದೆಯನ್ನು ಮಂಜೂರು ಮಾಡಲಾಯಿತು. ಮೂರನೆಯ ಮಸೂದೆಯಲ್ಲಿ ದಲಿತರ ಮೇಲಾಗುತ್ತಿರುವ ಹಲ್ಲೆಗಳನ್ನು ನೋಡಿಯೂ ಕೂಡ ಕಲೆಕ್ಟರ್ ಸಾಹೇಬರು ಯಾವುದೇ ಬಂದೋಬಸ್ತು ಮಾಡಲಿಲ್ಲ ಅನ್ನುವುದಕ್ಕೆ ದುಃಖ ವ್ಯಕ್ತಪಡಿಸಲಾಯಿತು. ಈ ಸಭೆಯಲ್ಲಿ ದೇವರಾವ್ ನಾಯಿಕ್ ಹಾಗೂ ಭುಸ್ಕುಟೆಯವರು ಕೂಡ ಭಾಷಣ ಮಾಡಿದರು. ‘‘ಯಾವುದೇ ದಬ್ಬಾಳಿಕೆಯ ಇಲ್ಲವೆ ಕ್ರೂರ ಸರಕಾರದ ವಿರುದ್ಧ ಅನ್ಯಾಯಕ್ಕೊಳಗಾದವರು ಸತ್ಯಾಗ್ರಹ ಮಾಡಬಹುದು ಎಂದು ಡಾ. ಅಂಬೇಡ್ಕರ್ ಹೇಳುತ್ತಾರೆ. ಹಾಗಾದರೆ ಗಿರಣಿಯ ಮಾಲಕರ ವಿರುದ್ಧ ಗಿರಣಿ ಕಾರ್ಮಿಕರು ಮಾಡುತ್ತಿರುವ ಸತ್ಯಾಗ್ರಹವನ್ನು ಅಂಬೇಡ್ಕರರು ವಿರೋಧಿಸಿದ್ದೇಕೆ?’’ ಅನ್ನುವ ಪ್ರಶ್ನೆಯನ್ನು ಸಭೆಯಲ್ಲಿದ್ದವನೊಬ್ಬ ಆರಂಭದಲ್ಲಿ ಕೇಳಿದ್ದ, ಅದಕ್ಕೆ ಸಭೆಯ ಕೊನೆಗೆ ಈ ಪ್ರಶ್ನೆಗೆ ಉತ್ತರಿಸುತ್ತೇನೆ ಎಂದು ಅಂಬೇಡ್ಕರರು ಅವನಿಗೆ ಆಶ್ವಾಸನೆ ಕೊಟ್ಟಿದ್ದರು, ಹಾಗಾಗಿ ಸಭೆ ಮುಗಿಯುತ್ತಿದ್ದಂತೆ ಅವನ ಪ್ರಶ್ನೆಗೆ ಉತ್ತರ ಕೊಡಲು ಅಂಬೇಡ್ಕರ್ ಮಾತನಾಡಲಾರಂಭಿಸಿದರು.

‘‘ನಾನು ಗಿರಣಿ ಕಾರ್ಮಿಕರ ಯೂನಿಯನ್‌ಗೆ ಯಾಕೆ ವಿರೋಧಿಸಿದೆ? ಬಹುಶಃ ಮುಷ್ಕರದ ಕಾರಣ ಹಾಗೂ ಪರಿಸ್ಥಿತಿಯ ಬಗ್ಗೆ ಅನೇಕರಿಗೆ ಸರಿಯಾದ ಮಾಹಿತಿಯಿಲ್ಲ. ಒಂದೋ ಈ ಮುಷ್ಕರ ಒಂದೇ ಜಾಗಕ್ಕೆ ಸೀಮಿತವಾಗಿದ್ದು ಸಾರ್ವತ್ರಿಕವಾಗಿರಲಿಲ್ಲ. ಗಿರಣಿಯಲ್ಲಿ ಕೆಲಸ ಮಾಡುವ ಒಬ್ಬ ಮುಸಲ್ಮಾನ ಕಾರ್ಮಿಕನೂ ಮುಷ್ಕರದಲ್ಲಿ ಭಾಗವಹಿಸಿರಲಿಲ್ಲ. ಅಲ್ಲದೆ ಮುಸಲ್ಮಾನ ಕಾರ್ಮಿಕರು ಹೆಚ್ಚು ಸಂಖ್ಯೆಯಲ್ಲಿ ಕೆಲಸ ಮಾಡುವ ಗಿರಣಿಗಳು ಯಾವುದೇ ಅಡೆತಡೆಗಳಿಲ್ಲದೆ ನಡೆಯುತ್ತಿದ್ದವು. ಹಾಗೆಯೇ ಮುಷ್ಕರ ಆರಂಭವಾಗುವ ಒಂದು ದಿನ ಮೊದಲು ಕಾರ್ಮಿಕ ಯೂನಿಯನ್ನಿನ ಅಧ್ಯಕ್ಷರು, ಸೆಕ್ರೆಟರಿ ಹಾಗೂ ಇನ್ನಿಬ್ಬರು ನನ್ನನ್ನು ಕಾಣಲು ಬಂದಿದ್ದರು. ದೇವರಾವ್ ನಾಯಿಕ್ ಹಾಗೂ ದ.ವಿ. ಪ್ರಧಾನರವರು ಕೂಡ ನನ್ನೊಂದಿಗಿದ್ದರು. ಸಾಕಷ್ಟು ಚರ್ಚೆಗಳಾದ ಮೇಲೆ ಮುಷ್ಕರ ಹೂಡಲು ಸರಿಯಾದ ಕಾರಣಗಳಿಲ್ಲದೆ ಹಾಗೂ ಹಣದ ಬೆಂಬಲವಿಲ್ಲದೆ ಮುಷ್ಕರ ಹೂಡುವುದು ಹುಚ್ಚುತನ ಎಂದು ನಾನು ಯುನಿಯನ್ ಜನರಿಗೆ ತಿಳಿಸಿ ಹೇಳಿದೆ. ಮುಷ್ಕರಕ್ಕೆ ಸರಿಯಾದ ಕಾರಣಗಳಿರುವುದಾದರೆ ಹಾಗೂ ನಮ್ಮ ದಲಿತರಿಗೆ ಅದರಿಂದ ಲಾಭವಾಗುವುದಾದರೆ ನಾನು ಸಂತೋಷದಿಂದ ಮುಷ್ಕರದಲ್ಲಿ ಭಾಗವಹಿಸುತ್ತೇನೆ ಎಂದು ಕೂಡ ಹೇಳಿದೆ.
ನಂತರ ನಾನು ಮುಷ್ಕರದ ಕಾರಣಗಳನ್ನು ಹುಡುಕಿ ತೆಗೆದಾಗ ಕೆಲವು ಜನ ಈ ಮುಷ್ಕರವನ್ನು ತಮ್ಮ ಸೊಕ್ಕು ತೋರಿಸಿ ಮುಂದುವರಿಸುತ್ತಿದ್ದಾರೆ. ಯೂನಿಯನ್ ಕೊಟ್ಟಿರುವ ಭರವಸೆಯನ್ನು ಯೂನಿಯನ್ ಮಾಲಕರು ಕಾಪಾಡದಿದ್ದರೆ ಯೂನಿಯನ್ ಶಬ್ದಕ್ಕೆ ಯಾವುದೇ ಬೆಲೆ ಇರುವುದಿಲ್ಲ ಅನ್ನುವ ಪರಿಸ್ಥಿತಿಯಿತ್ತು. ಮುಂಬೈ ಸರಕಾರ ನೇಮಿಸಿದ್ದ ಮುಷ್ಕರ ವಿಚಾರಣೆ ನ್ಯಾಯಾಲಯದಲ್ಲಿ ಯೂನಿಯನ್ ಅಧಿಕಾರಿಗಳು ‘‘ನಮ್ಮ ಸಂಘಟನೆ ಅಸ್ತವ್ಯಸ್ತವಾಗಿದ್ದರಿಂದ ನಾವು ಮುಷ್ಕರ ಹೂಡಿದೆವು’’ ಎಂದು ಹೇಳಿರುವುದನ್ನು ಎಲ್ಲರೂ ನೆನಪಿಡಿ.

ಮೂರನೆಯ ಮುಖ್ಯ ಕಾರಣವೆಂದರೆ ಇಲ್ಲಿಯವರೆಗಾದ ಮುಷ್ಕರಗಳಲ್ಲಿ ದಲಿತರಿಗೆ ಯಾವುದೇ ರೀತಿಯ ಲಾಭವಾಗಲಿಲ್ಲ. ಬಟ್ಟೆ ಗಿರಣೆಗಳಲ್ಲಿ ಅವರಿಗಿನ್ನೂ ಪ್ರವೇಶವಿಲ್ಲ. ಬಟ್ಟೆ ಗಿರಣಿಗಳು ದಲಿತರಿಗಾಗಿ ತೆರವಾಗಿ ಮುಂಬೈಯ ದಲಿತರು ಬಟ್ಟೆ ತಯಾರಿಸುವ ಕೆಲಸ ಕಲಿಯುವಂತಾಗಲಿ ಅನ್ನುವ ಕಾರಣಕ್ಕಾಗಿಯೂ ನಿಮ್ಮ ಮುಷ್ಕರವನ್ನು ವಿರೋಧಿಸಿದೆ. ಇಲ್ಲಿಯ ಮೇಲ್ಜಾತಿ ಜನ ಅವರಿಗೆ ಕೆಲಸ ಕಲಿಸಲು ಸಿದ್ಧರಿಲ್ಲ, ವರಾಡನಿಂದ 130 ಜನರನ್ನು ಈ ಕೆಲಸಕ್ಕಾಗಿ ಕರೆಸಿದ್ದೆ ಕೂಡ. ಆದರೆ ಮೇಲ್ಜಾತಿ ಜನರು ನಾವು ಅಸ್ಪಶ್ಯರೊಂದಿಗೆ ಕೆಲಸ ಮಾಡುವುದಿಲ್ಲ ಎಂದು ಸಾಕಷ್ಟು ಕಡೆಗಳಲ್ಲಿ ಮುಷ್ಕರ ಹೂಡಿದ್ದರಿಂದ ನಾನು ಕರೆಯಿಸಿದ ದಲಿತರು ಮರಳಿ ತಮ್ಮೂರಿಗೆ ಹೋಗಬೇಕಾಯಿತು. ದಲಿತರ ಮೇಲಾಗುತ್ತಿರುವ ದೌರ್ಜನ್ಯವೇ ಕಾರ್ಮಿಕ ಚಳವಳಿಯ ಕಾರಣ ಅನ್ನುವುದಾದರೆ ಕಾರ್ಮಿಕರಿಗೆ ಜಾತಿಯಿರುವುದಿಲ್ಲ ಎಂದು ಹೇಳುವ ಮೇಲ್ಜಾತಿಯ ನಾಯಕರು ಇದಕ್ಕೆ ಉತ್ತರಿಸಲಿ.

ಜಾತಿ ಭೇದವನ್ನು ಪುರಸ್ಕರಿಸುವ ಮೇಲ್ಜಾತಿಯ ಕಾರ್ಮಿಕರು ಅಸ್ಪಶ್ಯ ಅಮಲದಾರರ ಕೈಕೆಳಗೆ ಕೆಲಸ ಮಾಡಲು ಸಿದ್ಧರಿರುವುದಿಲ್ಲ ಹಾಗಾಗಿ ಗಿರಣಿಯ ಯಾವುದೇ ದೊಡ್ಡ ಹುದ್ದೆಗಳನ್ನು ದಲಿತರಿಗಾಗಿ ತೆರವು ಮಾಡಿಕೊಡಲಾಗುವುದಿಲ್ಲ. ಗಿರಣಿಯ ನಲ್ಲಿಗಳ ಹತ್ತಿರದ ಜಗಳಗಳು ಹಾಗೂ ಮೇಲ್ಜಾತಿಯ ಹೆಣ್ಣುಮಕ್ಕಳಿಂದ ದಲಿತ ಹೆಣ್ಣುಮಕ್ಕಳ ಅವಮಾನ ದಿನಾಲೂ ನಡೆಯುವ ವಿದ್ಯಮಾನಗಳು. ಬಹಿಷ್ಕೃತರ ಮೇಲೆ ಅನ್ಯಾಯವಾಗುತ್ತಿರುವ ಅದನ್ನು ಮುಂದುವರಿಸುವ ಮನೋಭಾವವಿರುವ ಯಾವುದೇ ಚಳವಳಿಯನ್ನು ವಿರೋಧಿಸುವುದೇ ನಮ್ಮ ಮೊದಲ ಕರ್ತವ್ಯ. ದಲಿತರ ಬಂಧುಗಳಿಗೆ ನ್ಯಾಯ ಒದಗಿಸಿ ಅವರನ್ನು ಗುಲಾಮಗಿರಿಯಿಂದ ಹಾಗೂ ಸದ್ಯದ ಪರಿಸ್ಥಿತಿಯಿಂದ ಪಾರು ಮಾಡಲು ಯಾರಾದರೂ ತನು ಮನ ಧನದಿಂದ ಪ್ರಯತ್ನಿಸುತ್ತಿದ್ದಲ್ಲಿ ಅಂತಹವರಿಗೆ ಸಹಾಯ ಮಾಡಲು ನಾನೆಂದೂ ಹಿಂದುಳಿಯುವವನಲ್ಲ. ಆದರೆ ಪ್ರತಿಯೊಂದು ಚಳವಳಿಯ ಸೂತ್ರ ದಲಿತರಿಗೆ ನ್ಯಾಯ ದೊರಕಿಸಿ ಕೊಡುವುದು ಹಾಗೂ ಸಮಾನತೆಯ ವರ್ತನೆಯಿಟ್ಟುಕೊಳ್ಳುವುದಷ್ಟೆ ಇರುವುದಾದರೆ ಅದು ನ್ಯಾಯ. ಸ್ವಾರ್ಥಿ ಮೇಲ್ಜಾತಿಯ ಜನರ ಚಳವಳಿಯಲ್ಲಿ ನನಗ್ಯಾವ ಆಸಕ್ತಿಯಿಲ್ಲ. ಮತ್ತೊಮ್ಮೆ ನಾನೆಲ್ಲರಿಗೂ ಪರ್ವತಿ ಸತ್ಯಾಗ್ರಹಕ್ಕೆ ಸಹಾಯ ಮಾಡಲು ವಿನಂತಿಸುತ್ತೇನೆ’’ ಅಂದರು.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)