ಸೌಮ್ಯ ಸ್ವಭಾವದವರಾಗಿದ್ದರೂ ಯಾವುದೇ ಒತ್ತಡಕ್ಕೆ ಮಣಿಯದ ಸಸಿಕಾಂತ್ ಸೆಂಥಿಲ್
ಜನಪರ ಕಾರ್ಯವೈಖರಿ ಮೂಲಕ ಗಮನ ಸೆಳೆದಿದ್ದ ಐಎಎಸ್ ಅಧಿಕಾರಿ
ಶಿವಮೊಗ್ಗ, ಸೆ. 6: ದಿಢೀರ್ ಆಗಿ ಐಎಎಸ್ ಹುದ್ದೆಗೆ ರಾಜೀನಾಮೆ ಸಲ್ಲಿಸಿರುವ ದ.ಕ ಜಿಲ್ಲೆಯ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು, ಈ ಹಿಂದೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ಆಗಿ ಕಾರ್ಯನಿರ್ವಹಿಸಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ಜನಪರ ಕಾರ್ಯವೈಖರಿ, ಸರಳತೆ, ಪ್ರಾಮಾಣಿಕ ವ್ಯಕ್ತಿತ್ವದ ಮೂಲಕ ಗಮನ ಸೆಳೆದಿದ್ದರು. ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದರು.
ಸಸಿಕಾಂತ್ ಸೆಂಥಿಲ್ ರವರು 5-2-2013 ರಿಂದ 12-8-2014 ರವರೆಗೆ, ಸರಿಸುಮಾರು 18 ತಿಂಗಳ ಕಾಲ ಸಿಇಓ ಆಗಿ ಕಾರ್ಯನಿರ್ವಹಿಸಿದ್ದರು. ಇದು ಅವರ ವೃತ್ತಿ ಜೀವನದ ಆರಂಭದಲ್ಲಿ ಅವರು ನಿರ್ವಹಿಸಿದ ಮೊದಲ ದೊಡ್ಡ ಹುದ್ದೆಯಾಗಿತ್ತು. ಸಿಇಓ ಆಗಿದ್ದ ವೇಳೆಯೇ, 10 ದಿನಗಳ ಪ್ರಭಾರ ಜಿಲ್ಲಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದರು.
'ಸಸಿಕಾಂತ್ ಸೆಂಥಿಲ್ ರವರು ಅತ್ಯಂತ ಸರಳ, ಸಜ್ಜನ ವ್ಯಕ್ತಿತ್ವದವರಾಗಿದ್ದರು. ತಾವೊಬ್ಬ ಐಎಎಸ್ ಅಧಿಕಾರಿ ಎಂಬ ಯಾವುದೇ ಗರ್ವ, ಅಹಂ ಭಾವ ಅವರಲ್ಲಿರಲಿಲ್ಲ. ತಮ್ಮ ಕೆಳಹಂತದ ಅಧಿಕಾರಿ-ಸಿಬ್ಬಂದಿಗಳನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ತಮಗೆ ಗೊತ್ತಿಲ್ಲದ ವಿಷಯಗಳನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು. ಅಹವಾಲು ಕೋರಿಕೊಂಡು ಕಚೇರಿಗೆ ಆಗಮಿಸುವ ನಾಗರಿಕರನ್ನು ಭೇಟಿಯಾಗಿ, ಅವರ ಅಹವಾಲು ಆಲಿಸುತ್ತಿದ್ದರು. ಸಮಸ್ಯೆಗಳಿದ್ದರೆ ಪರಿಹಾರಕ್ಕೆ ಅಗತ್ಯ ಕ್ರಮಕೈಗೊಳ್ಳುತ್ತಿದ್ದರು. ಅವರೊಬ್ಬ ಜನಪರ ಅಧಿಕಾರಿಯಾಗಿದ್ದರು. ಸಾಮಾಜಿಕ ಕಳಕಳಿ ಹೊಂದಿದ್ದರು. ಶೋಷಿತ ವರ್ಗಗಳ ಬಗ್ಗೆ ವಿಶೇಷ ಕಾಳಜಿ ಅವರಲ್ಲಿತ್ತು' ಎಂದು ಶಿವಮೊಗ್ಗ ಜಿ.ಪಂ.ನ ಸಿಬ್ಬಂದಿಯೋರ್ವರು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.
ರಾಜ್ಯಕ್ಕೇ ಮೊದಲಿತ್ತು: ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಸಾಕಷ್ಟು ಒತ್ತು ನೀಡಿದ್ದರು. ಹಳ್ಳಿಗಳಿಗೆ, ಗ್ರಾಮ ಪಂಚಾಯತ್ ಗಳಿಗೆ ಖುದ್ದು ಭೇಟಿಯಿತ್ತು ಯೋಜನೆಯ ಸಾಧನೆ ಗಮನಿಸುತ್ತಿದ್ದರು. ಅನುಷ್ಠಾನದಲ್ಲಿ ಲೋಪ ಎಸಗುವ ಅಧಿಕಾರಿ, ಸಿಬ್ಬಂದಿಗಳ ವಿರುದ್ದ ಕಾನೂನು ಕ್ರಮಗಳನ್ನು ಜರುಗಿಸಿದ್ದರು. ಎನ್.ಆರ್.ಇ.ಜಿ. ಯೋಜನೆಯ ಅನುಷ್ಠಾನದಲ್ಲಿ ಎದುರಾಗುತ್ತಿದ್ದ ಗೊಂದಲಗಳ ಪರಿಹಾರಕ್ಕೆ, ಕೆಳ ಹಂತದ ಸಿಬ್ಬಂದಿಗಳಿಗೆ ನಿಯಮಿತವಾಗಿ ತರಬೇತಿ ಕಾರ್ಯಾಗಾರ ಆಯೋಜಿಸಿ ಮಾಹಿತಿ ನೀಡುತ್ತಿದ್ದರು. ಬೋಗಸ್ ಬಿಲ್ ಸೃಷ್ಟಿಸಿ ನಡೆಸುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಿದ್ದರು. ಸೆಂಥಿಲ್ ಅವರ ಆಸಕ್ತಿಯ ಫಲವಾಗಿ ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನದಲ್ಲಿ, ಶಿವಮೊಗ್ಗ ಜಿಲ್ಲೆಯೂ ಇಡೀ ರಾಜ್ಯಕ್ಕೆ ಮುಂಚೂಣಿಯಲ್ಲಿತ್ತು. ಪ್ರಥಮ ಸ್ಥಾನ ಕೂಡ ಪಡೆದುಕೊಂಡಿತ್ತು ಎಂದು ಜಿ.ಪಂ.ನ ಎನ್.ಆರ್.ಇ.ಜಿ. ವಿಭಾಗದ ಮೂಲಗಳು ಮಾಹಿತಿ ನೀಡುತ್ತವೆ.
ಮಣಿಯುತ್ತಿರಲಿಲ್ಲ: ಸೌಮ್ಯ ಸ್ವಭಾವದವರಾಗಿದ್ದರೂ ಯಾವುದೇ ಒತ್ತಡ, ಕಾನೂನುಬಾಹಿರ ಕೃತ್ಯಗಳಿಗೆ ಮಣೆ ಹಾಕುತ್ತಿರಲಿಲ್ಲ. ಕಾನೂನು ಬಿಟ್ಟು ಕೆಲಸ ಮಾಡುತ್ತಿರಲಿಲ್ಲ. ಇವರ ನೇರ-ನಿರ್ಭೀತಿಯ ಕಾರ್ಯವೈಖರಿಯು ಕೆಲ ಪ್ರಭಾವಿ ಜನಪ್ರತಿನಿಧಿಗಳ ಕೆಂಗಣ್ಣಿಗೂ ಗುರಿಯಾಗಿತ್ತು. ಕೆಲವರು ಇವರ ವರ್ಗಾವಣೆಗೆ ಸಾಕಷ್ಟು ಪ್ರಯತ್ನ ಕೂಡ ನಡೆಸಿದ್ದ ಮಾಹಿತಿಗಳು ಅಂದು ಕೇಳಿಬಂದಿದ್ದವು.
ಕೇವಲ 18 ತಿಂಗಳಲ್ಲಿಯೇ, ಸಸಿಕಾಂತ್ ಸೆಂಥಿಲ್ ರನ್ನು ಶಿವಮೊಗ್ಗ ಜಿ.ಪಂ. ಸಿಇಓ ಹುದ್ದೆಯಿಂದ ರಾಜ್ಯ ಸರ್ಕಾರ ದಿಢೀರ್ ವರ್ಗಾವಣೆಗೊಳಿಸಿತ್ತು. ಅವರ ಸ್ಥಾನಕ್ಕೆ ರಾಮು ಅವರನ್ನು ನೇಮಿಸಿತ್ತು. 'ಶಿವಮೊಗ್ಗದಲ್ಲಿನ ಕಾರ್ಯನಿರ್ವಹಣೆಯ ಅನುಭವವು ತಮ್ಮ ವೃತ್ತಿ ಜೀವನದಲ್ಲಿ ಮರೆಯಲಾಗದಂತದ್ದು. ರಾಜಕೀಯ ಪ್ರಭಾವ ಹೆಚ್ಚಿರುವ ಈ ಜಿಲ್ಲೆಯಲ್ಲಿ ಕಾರ್ಯನಿರ್ವಹಣೆಯೂ ನಿಜಕ್ಕೂ ಸವಾಲಿನದ್ದು' ಎಂದು ವರ್ಗಾವಣೆಗೊಂಡ ವೇಳೆ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಹೇಳಿದ್ದರು.