ದೇಶದ ಆರ್ಥಿಕ ಪರಿಸ್ಥಿತಿಯನ್ನು ಕಾರ್ಪೊರೇಟ್ ವಲಯ ನಿಯಂತ್ರಿಸುತ್ತಿದೆ: ಕನ್ಹಯ್ಯ ಕುಮಾರ್
ಸಂದರ್ಶನ
ದೇಶ ಪ್ರಸ್ತುತ ಸನ್ನಿವೇಶದಲ್ಲಿ ಎದುರಿಸುತ್ತಿರುವ ಆರ್ಥಿಕ ಹಿಂಜರಿತ, ಮುಂದಿನ ರಾಜಕೀಯ ನಡೆ ಹಾಗೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವೈಫಲ್ಯಗಳ ಕುರಿತು ಜೆಎನ್ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ, ಯುವ ನಾಯಕ ಕನ್ಹಯ್ಯಾ ಕುಮಾರ್ ‘ವಾರ್ತಾಭಾರತಿ’ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿಯನ್ನು ಕಾರ್ಪೊರೇಟ್ ವಲಯ ನಿಯಂತ್ರಿಸುತ್ತಿದೆ ಎಂದು ಅಭಿಪ್ರಾಯ ಪಟ್ಟಿರುವ ಕನ್ಹಯ್ಯ, ಇದು 90ರ ದಶಕದಲ್ಲಿ ಮನಮೋಹನ್ ಸಿಂಗ್ ಅವರ ಆರ್ಥಿಕ ನೀತಿಯ ಮುಂದುವರಿದ ಭಾಗವಾಗಿದೆ. ಬಿಜೆಪಿ ಆಡಳಿತ ಕಾಲದಲ್ಲಿ ಅದು ಅತ್ಯಂತ ಕಳಪೆ ಮಟ್ಟಕ್ಕೆ ತಲುಪಿದೆ ಎನ್ನುತ್ತಾರೆ.
ಪ್ರಶ್ನೆ: ದೇಶದಲ್ಲಿ ಎದುರಾಗಿರುವ ಆರ್ಥಿಕ ಹಿಂಜರಿತದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಕನ್ಹಯ್ಯ: ದೇಶದಲ್ಲಿ ಆರ್ಥಿಕ ಹಿಂಜರಿತ ಹೊಸದೇನಲ್ಲ. ಭಾರತವು 1991ರ ನಂತರ ನೂತನ ಉದಾರೀಕರಣ ನೀತಿಯನ್ನು ಒಪ್ಪಿಕೊಂಡಿತು. ಆಗ ಮನಮೋಹನ್ಸಿಂಗ್ ಆರ್ಥಿಕ ಸಚಿವರಾಗಿದ್ದರು. ಉದಾರೀಕರಣದ ಮೊದಲ ಪ್ರತಿಪಾದಕ ಮನಮೋಹನ್ ಸಿಂಗ್. ಈಗ ನರೇಂದ್ರ ಮೋದಿ ಜಾಗದಲ್ಲಿ ಯಾರೇ ಪ್ರಧಾನಿಯಾಗಿದ್ದರೂ ಈ ಸಮಸ್ಯೆಯನ್ನು ಎದುರಿಸಲೇಬೇಕಿತ್ತು. ಆರ್ಥಿಕ ಹಿಂಜರಿತವನ್ನು ಅರ್ಥ ಮಾಡಿಕೊಂಡ ಮನಮೋಹನ್ಸಿಂಗ್, ವಿಶ್ವದ ಪ್ರಮುಖ ಸಂಸ್ಥೆಗಳ ಎದುರು ಅಭಿವೃದ್ಧಿಶೀಲ ರಾಷ್ಟ್ರಗಳ ಪರವಾಗಿ ವಾದ ಮಂಡಿಸಿ 22 ವಿಷಯಗಳಲ್ಲಿ 19 ವಿಷಯಗಳಲ್ಲಿ ಗೆದ್ದು ಬಂದರು.
ಆನಂತರ, ಕಾರ್ಪೊರೇಟ್ ವಲಯ ಮನಮೋಹನ್ ಸಿಂಗ್ರನ್ನು ಬದಲಾಯಿಸಲು ನಿರ್ಧರಿಸಿ, ಅಣ್ಣಾ ಹಝಾರೆಯನ್ನು ಬೆಂಬಲಿಸಿತು. ಅಣ್ಣಾ ಹಝಾರೆ ಹೋರಾಟ ಭ್ರಷ್ಟಾಚಾರದ ವಿರುದ್ಧವಾಗಿರಲಿಲ್ಲ, ಕಾಂಗ್ರೆಸ್ ವಿರುದ್ಧವಾಗಿತ್ತು. ಅಜಿತ್ ದೋವಲ್ ಅವರ ರಿಸರ್ಚ್ ಫೌಂಡೇಷನ್ ವತಿಯಿಂದ ವಿಚಾರ ಸಂಕಿರಣ ನಡೆಸಿ, ಅಣ್ಣಾ ಹಝಾರೆಯ ಮೂಲಕ ಆಂದೋಲನ ಮಾಡುವಂತೆ ಪ್ರೇರೇಪಿಸಲಾಯಿತು. ನ್ಯೂಯಾರ್ಕ್ ನ ದಲಾಲ್ ಸ್ಟ್ರೀಟ್ನಲ್ಲಿ ಮೊದಲು ಮೋದಿ ಪ್ರಧಾನಿ ಯಾಗಬೇಕು ಎಂಬ ಮಾತು ಕೇಳಿ ಬಂತು. ಆನಂತರ ಅದನ್ನು ಅಣ್ಣಾ ಹಝಾರೆ ಪುನರುಚ್ಚರಿಸಿದರು. ನಾವಿಂದು ಆರ್ಥಿಕ ಸಮಸ್ಯೆಯನ್ನು ಸುಧಾರಿಸಲು ಮೊದಲು ರಾಜಕೀಯದಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸಬೇಕಿದೆ. ಆರ್ಥಿಕ ನಿರ್ವಹಣೆಗೆ ಸಂಬಂಧಿಸಿ ಕಾಂಗ್ರೆಸ್ ಪಕ್ಷ ಉತ್ತಮ ಕಾರ್ಯನಿರ್ವಹಿಸಿದೆ ಎನ್ನುವಂತಿಲ್ಲ. ಆದರೆ ಬಿಜೆಪಿ ನೇತೃತ್ವದ ಸರಕಾರ ಅತ್ಯಂತ ಕಳಪೆ ರೀತಿಯಲ್ಲಿ ನಿರ್ವಹಿಸುತ್ತಿದೆ.
ಪ್ರಶ್ನೆ: ವಿಪಕ್ಷಗಳ ಸಂಘಟಿತ ಹೋರಾಟದ ಬಳಿಕವು 2014 ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆಯಲ್ಲ. ಈ ಬಗ್ಗೆ ಏನು ಹೇಳುತ್ತೀರಾ?
ಕನ್ಹಯ್ಯ: ಮೋದಿ ಭಾಷಣ ಮಾಡುವಾಗ ಅವರ ವಿರುದ್ಧ ವಿಪಕ್ಷ ಎತ್ತಿರುವ ಪ್ರಶ್ನೆಗೆ ವಿರುದ್ಧವಾಗಿ ದೊಡ್ಡ ಪ್ರಶ್ನೆ ಹಾಕಿ ಉತ್ತರ ನೀಡದಂತೆ ಮಾಡುತ್ತಾರೆ. ಇವತ್ತು ವಿರೋಧ ಪಕ್ಷ ಎಂದು ಕರೆಸಿಕೊಳ್ಳುವವರಿಗೆ ರಾಷ್ಟ್ರಮಟ್ಟದಲ್ಲಿ ಸಂಘಟನೆ ಹಾಗೂ ಸ್ಪಷ್ಟವಾದ ನಿಲುವು ಬೇಕಿದೆ. ಅದರ ಕೊರತೆ ಇರುವುದರಿಂದ, ಮೋದಿ ಫುಟ್ಬಾಲ್ ಮೈದಾನದಲ್ಲಿ ಒಬ್ಬರೇ ಆಡುತ್ತಿದ್ದಾರೆ.
ಪ್ರಶ್ನೆ: ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಅನುಭವ ಹೇಗಿತ್ತು? ಅಬ್ಬರದ ಪ್ರಚಾರ ನಡೆಸಿದರೂ ಪರಾಭವಗೊಂಡಿದ್ದಕ್ಕೆ ಕಾರಣಗಳೇನು?
ಕನ್ಹಯ್ಯ: ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ನಾವು ಈಗ ಸೋಲುವ ಸಮಯ. ನಮ್ಮ ತಪ್ಪುಗಳ ಪರಿಣಾಮವಾಗಿ ಬಿಜೆಪಿ, ಆರೆಸೆಸ್ಸ್ ಬೆಳೆದಿದೆ. ನಾವು ನಮ್ಮ ಕೆಲಸವನ್ನು ಸರಿಯಾಗಿ ಮಾಡದೇ ಇದ್ದಿದ್ದರಿಂದ, ನಮ್ಮ ವಿರೋಧಿ ಶಕ್ತಿಗಳು ಅಧಿಕಾರಕ್ಕೆ ಬರಲು ಅವಕಾಶ ಸಿಕ್ಕಿತು.
ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಜನರ ಬಳಿ ಮತ್ತಷ್ಟು ಹತ್ತಿರ ಹೋಗಲು ಸಾಧ್ಯವಾಯಿತು. ಅವರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು. ಧನಾತ್ಮಕ ವಿಚಾರಗಳೊಂದಿಗೆ ನಾವು ಜನರ ಬಳಿ ಹೋಗಿ ಕೆಲಸ ಮಾಡಿದರೆ ಅವರು ಕೇಳುತ್ತಾರೆ. ಬಿಜೆಪಿಯವರು 2 ಮಂದಿ ಗೆಲ್ಲುತ್ತಿದ್ದರು. ಈಗ 300ಕ್ಕೂ ಹೆಚ್ಚಿದ್ದಾರೆ.
ನಿರಾಶೆಯ ಘಟ್ಟವು ಜನರನ್ನು ಸಿಕ್ಕಿ ಹಾಕಿಸಿದೆ. ಈ ವೌನ ಮುಂದಿನ ಪ್ರಳಯದ ಸಂಕೇತ. ಸಾಮಾನ್ಯ ಜನರಿಗೆ ಮತದಾನದ ಬದಲು ನೋಟು ನೀಡಲಾಗುತ್ತಿದೆ. ಆದುದರಿಂದ, ಯಾವುದೇ ವಿಚಾರ ಗೊತ್ತಾಗುತ್ತಿಲ್ಲ. ಒಂದು ದಿನ ಬರುತ್ತೆ, ನೋಟು ನೀಡದೆ ಮತ ಪಡೆಯಲಾಗುತ್ತದೆ. ಅಲ್ಲದೆ, ಮತದಾನ ಮಾಡದೇ ಇರುವಂತಹ ಪರಿಸ್ಥಿತಿಯೂ ಬರಬಹುದು.
ಸಂಸದೀಯ ಪ್ರಜಾಪ್ರಭುತ್ವದ ತಳಹದಿಯಲ್ಲಿ ಹೋರಾಟ ಮಾಡುತ್ತೇವೆ. ನಮ್ಮ ಸೋಲಿಗೆ ಜನರನ್ನು ದೂಷಿಸುವುದಿಲ್ಲ.
ಪ್ರಶ್ನೆ: ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ?
ಕನ್ಹಯ್ಯ: ನಾನು ಚುನಾವಣೆಯನ್ನು ವೈಯಕ್ತಿಕವಾಗಿ ಎದುರಿಸುತ್ತಿಲ್ಲ. ನಮ್ಮ ಜೊತೆ ಇರುವವರು ಕೆಲವರು ಎದುರಿಸುತ್ತಾರೆ. ದೇಶದ ಜನರ ಸವಾಲುಗಳನ್ನು ಚುನಾವಣೆಯ ಚರ್ಚಾ ವಿಷಯ ಮಾಡುತ್ತೇವೆ. ಈ ವಿಷಯಗಳ ಮೇಲೆ ಸಹಮತ ಇದ್ದವರ ಜೊತೆ ನಾವು ಒಕ್ಕೂಟ ರೂಪಿಸಲು ಯತ್ನಿಸುತ್ತೇವೆ. ಒಕ್ಕೂಟ ಚುನಾವಣೆಗೆ ಮುನ್ನ ಹಾಗೂ ನಂತರ ಉಳಿಯಬೇಕು. ಕೇವಲ ಚುನಾವಣೆಗೆ ಮಾತ್ರವಲ್ಲ, ಹೋರಾಟದಲ್ಲಿಯೂ ಸಹಕಾರ ಇರಬೇಕು. ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಆಧಾರದಲ್ಲಿ ಮುಂದುವರಿಯಲು ಬಯಸುತ್ತೇವೆ.
ಪ್ರಶ್ನೆ: ಪ್ರಗತಿಪರರ ನಡುವೆ ಭಿನ್ನತೆಗಳಿವೆ. ಯಾವ ರೀತಿಯಲ್ಲಿ ಯಾವ ವಿಷಯದ ಆಧಾರದ ಮೇಲೆ ಒಗ್ಗೂಡಬಹುದು?
ಕನ್ಹಯ್ಯ: ವಿಶ್ವದೆಲ್ಲೆಡೆ ಹಲವಾರು ವಿಷಯಗಳಲ್ಲಿ ಸಂಘರ್ಷಗಳಿವೆ. ಧಾರ್ಮಿಕ, ಆರ್ಥಿಕ, ಜಾತಿ, ವರ್ಗದ ಸಂಘರ್ಷಗಳಿವೆ. ಮೂಲತಃ ನಾವು ಮನುಷ್ಯರು ಎಂಬುದು ಒಂದು ಸಾಮಾನ್ಯ ಸಂಗತಿ. ಇವತ್ತು ಮನುಷ್ಯತ್ವದ ಆಧಾರದಲ್ಲಿ ನಾವು ಒಗ್ಗೂಡಬೇಕು.
ಪ್ರಶ್ನೆ: ನಿಮ್ಮ ಸಭೆ, ಸಮಾರಂಭಗಳಿಗೆ ಸಿಗುವ ಜನ ಬೆಂಬಲ, ಮತಗಳಾಗಿ ಪರಿವರ್ತನೆಯಾಗುವುದಿಲ್ಲ?
ಕನ್ಹಯ್ಯ: ನಾವು ವಿಷಯಗಳನ್ನು ಅವರ ಮುಂದಿಡುತ್ತಿದ್ದೇವೆ. ಆದರೆ, ಸದ್ಯಕ್ಕೆ ನಮ್ಮ ಬಳಿ ಯಾವುದೇ ಮಾದರಿ ಇಲ್ಲ. ಇರುವ ಮಾದರಿಗಳ ಮೇಲೆ ಹಲವಾರು ಸವಾಲುಗಳಿವೆ. ಅದು ಜನರ ತಪ್ಪಲ್ಲ. ನೀವು ಮಾದರಿ ನೀಡುವಲ್ಲಿ ಸಫಲರಾದರೆ, ಆನಂತರ ಈ ಬಗ್ಗೆ ಮಾತನಾಡಬಹುದು. ನೆಹರೂ ಒಂದು ಮಾದರಿ. ಅವರು ದೇಶಕ್ಕೆ ಸಾಕಷ್ಟು ಕೊಡುಗೆ ಕೊಟ್ಟು ಹೋಗಿದ್ದಾರೆ. ಇವತ್ತು ನೆಹರೂರನ್ನು ಟೀಕಿಸುವ ನಾಚಿಕೆಯಿಲ್ಲದ ನಾಯಕರು, ಅವರ ಅವಧಿಯಲ್ಲಿ ಸ್ಥಾಪಿಸಿರುವ ಏಮ್ಸ್ಗೆ ಹೋಗಿ ಸಾಯುತ್ತಿದ್ದಾರೆ.
ಏಮ್ಸ್, ಐಐಎಸ್ಸಿಯಂತಹ ಸಂಸ್ಥೆಗಳ ಸ್ಥಾಪನೆಯಿಂದಾಗಿ ದೇಶ ಮುಂದುವರಿಯುತ್ತಿದೆ. ಆ ಮಾದರಿಯನ್ನೇ ನೋಡಲು ಜನ ಬಯಸುತ್ತಿಲ್ಲ. ಎಲ್ಲದಕ್ಕೂ ಒಂದು ಸಮಯ ಇರುತ್ತದೆ. ಅದಕ್ಕೆ ತಕ್ಕಂತೆ ಕೆಲಸಗಳು ಆಗುತ್ತವೆ. ನೀವು ಹೋರಾಟದಲ್ಲಿ ಸಕಾರಾತ್ಮಕ ಅಥವಾ ನಕಾರಾತ್ಮಕ ಪಾತ್ರ ನಿರ್ವಹಿಸಬೇಕೋ ಎಂಬುದನ್ನು ಮೊದಲು ತೀರ್ಮಾನಿಸಬೇಕು.
ಪ್ರಶ್ನೆ: ಎಡರಂಗ ದಿನದಿಂದ ದಿನಕ್ಕೆ ದುರ್ಬಲವಾಗು ತ್ತಿದೆ. ಅದರ ಕಾರ್ಯಕರ್ತರು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ ಎಂದು ನಿಮಗೆ ಅನಿಸುತ್ತಿಲ್ಲವೇ?
ಕನ್ಹಯ್ಯ: ಎಡ-ಬಲ ಎಂಬ ಪ್ರಶ್ನೆಯೇ ಇಲ್ಲ. ಈ ವಿಚಾರವನ್ನು ಎತ್ತಿರುವುದೇ ಬಲಪಂಥೀಯರು. ಯಾವುದೋ ಒಂದು ಶಕ್ತಿ ನಿರ್ನಾಮವಾಗಿದೆ ಎಂದರೇ ಅದನ್ನು ಪದೇ ಪದೇ ಹೇಳುವ ಅಗತ್ಯವೇನಿದೆ. ಎಡರಂಗದಲ್ಲಿ ಎಷ್ಟು ವಿಧಗಳಿವೆ ಎಂಬುದನ್ನು ನೀವು ಹೇಳಲು ಸಾಧ್ಯವಿಲ್ಲ. ಯುವಕರ ಬಗ್ಗೆ ಹೇಳುವುದಾದರೆ, ಒಂದು ಕಡೆ ಮಾಹಿತಿ ಇರುವ ಸಣ್ಣ ಗುಂಪು ಇದೆ. ಇನ್ನೊಂದೆಡೆ ಮಾಹಿತಿಯ ಕೊರತೆ ಇರುವ ದೊಡ್ಡ ಸಮೂಹವೇ ಇದೆ. ಚಿಕ್ಕ ಚಿಕ್ಕ ವಿಷಯಗಳನ್ನು ಮುಂದಿಟ್ಟುಕೊಂಡು ದಿಕ್ಕು ತಪ್ಪಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ.
ಪ್ರಶ್ನೆ: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ನಿಜವಾದ ಅಪರಾಧಿಗಳ ಬಂಧನವಾಗಿದೆ ಎಂದು ನಿಮಗೆ ಅನಿಸುತ್ತಿದೆಯೇ?
ಕನ್ಹಯ್ಯ: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ನಿಜವಾದ ಅಪರಾಧಿಗಳನ್ನು ಬಂಧಿಸಲಾಗಿಲ್ಲ. ಗಾಂಧೀಜಿಯನ್ನು ಕೊಂದ ನಾಥೂರಾಮ್ ಗೋಡ್ಸೆ ನಿಜವಾದ ಅಪರಾಧಿಯಾಗಿದ್ದನೇ? ಇಲ್ಲ. ನಿಜವಾದ ಅಪರಾಧಿಯ ಭಾವಚಿತ್ರ ಸಂಸತ್ತಿನಲ್ಲಿ ಹಾಕಿದ್ದಾರೆ. ಈ ಬಗ್ಗೆ ಸತ್ಯ ಹೇಳಿದರೆ ಗುಂಪು ಹಲ್ಲೆಯಾಗಬಹುದು. ಕರ್ನಾಟಕ ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ಆದರೆ, ತಳಮಟ್ಟದಲ್ಲಿ ಯಾವ ರೀತಿಯಲ್ಲಿ ಕೆಲಸವಾಗುತ್ತದೆ ಗೊತ್ತಿಲ್ಲ. ನ್ಯಾಯಾಂಗ ವ್ಯವಸ್ಥೆಯ ಮೇಲೆ ವಿಶ್ವಾಸ ಇಡಬೇಕು. ನ್ಯಾಯ ಎಂಬುದು ಸುಲಭವಾಗಿ ಸಿಗುವುದಿಲ್ಲ. ಗೌರಿ ಯಾವ ವೌಲ್ಯಗಳನ್ನು ಮುಂದಿಟ್ಟುಕೊಂಡು ಮುನ್ನಡೆಯುತ್ತಿದ್ದರೋ ಅದನ್ನು ನಾವು ಮುಂದುವರಿಸಬೇಕಿದೆ.
ಪ್ರಶ್ನೆ: ದೇಶದಲ್ಲಿ ಕೋಮು ದ್ವೇಷ, ಅಸಹನೆ, ಗುಂಪು ಹತ್ಯೆಗಳು ಹೆಚ್ಚುತ್ತಿವೆ. ಇದು ಎಲ್ಲಿಗೆ ತಲುಪಬಹುದು? ಇದನ್ನು ಎದುರಿಸುವ ಬಗೆ ಹೇಗೆ?
ಕನ್ಹಯ್ಯ: ಗುಂಪು ಹಲ್ಲೆಗಳ ಬೆಳವಣಿಗೆ ಕಾರಣ ಏನು ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕು. ಮನುಷ್ಯ ತಾನು ನಾಗರಿಕ ಎಂಬುದನ್ನು ಎಲ್ಲಿ ಮರೆಯುತ್ತಾನೋ ಆಗ ಇಂತಹ ಕೃತ್ಯಗಳಾಗುತ್ತವೆ. ಈಗ ಕೇವಲ ಗೋಮಾಂಸದ ಹೆಸರಿನಲ್ಲಿ ಮಾತ್ರ ಗುಂಪು ಹಲ್ಲೆಗಳು ನಡೆಯುತ್ತಿಲ್ಲ. ಮಕ್ಕಳ ಕಳ್ಳರೆಂದು ಮಹಿಳೆಯರು, ಕಲಾವಿದರ ಹತ್ಯೆಯಾಗುತ್ತಿದೆ. ತಮಗಿಂತ ಯಾರಾದರೂ ಭಿನ್ನವಾಗಿ ಕಂಡರೆ ಅವರ ಮೇಲೆ ಹಲ್ಲೆ ಮಾಡುವುದು ಸಾಮಾನ್ಯವಾಗುತ್ತಿದೆ. ನಾಗರಿಕರೆಂಬ ಕಲ್ಪನೆಯನ್ನು ಮೀರಿದಾಗ ಮನುಷ್ಯ ಇಂತಹ ಕೃತ್ಯ ಎಸಗುತ್ತಾನೆ. ನಾವು ಭಾರತೀಯರು, ಈ ವ್ಯವಸ್ಥೆಯಲ್ಲಿ ನಮಗೆ ನ್ಯಾಯ ಸಿಗುತ್ತದೆ ಎಂಬ ಭರವಸೆ ಬಂದಾಗ ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳುವುದಿಲ್ಲ. ಈ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ.
ಮೋದಿ ಭಾಷಣ ಮಾಡುವಾಗ ಅವರ ವಿರುದ್ಧ ವಿಪಕ್ಷ ಎತ್ತಿರುವ ಪ್ರಶ್ನೆಗೆ ವಿರುದ್ಧವಾಗಿ ದೊಡ್ಡ ಪ್ರಶ್ನೆ ಹಾಕಿ ಉತ್ತರ ನೀಡದಂತೆ ಮಾಡುತ್ತಾರೆ. ಇವತ್ತು ವಿರೋಧ ಪಕ್ಷ ಎಂದು ಕರೆಸಿಕೊಳ್ಳುವವರಿಗೆ ರಾಷ್ಟ್ರಮಟ್ಟದಲ್ಲಿ ಸಂಘಟನೆ ಹಾಗೂ ಸ್ಪಷ್ಟವಾದ ನಿಲುವು ಬೇಕಿದೆ. ಅದರ ಕೊರತೆ ಇರುವುದರಿಂದ, ಮೋದಿ ಫುಟ್ಬಾಲ್ ಮೈದಾನದಲ್ಲಿ ಒಬ್ಬರೇ ಆಡುತ್ತಿದ್ದಾರೆ.