ಕನ್ನಡ ಸಾಹಿತ್ಯದ ಮೊಗಸಾಲೆ
ಕೆ. ಶಾರದಾ ಭಟ್ ಉಡುಪಿ
ಕನ್ನಡಕ್ಕೊದಗಿದ ಅಪೂರ್ವ ಜೋಗಿ ಜಂಗಮ ಸಾರಸತ್ವ ಲೋಕದ ಕಾಯಕ ಯೋಗಿ ಡಾ.ನಾ ಮೊಗಸಾಲೆಯವರು ಸಾಹಿತ್ಯ ರಚನೆ ಹಾಗೂ ಸಾಹಿತ್ಯ ಸಂಘಟನೆಯಲ್ಲಿ ಕ್ರಮಿಸಿದ ದೂರ ಯೋಚನೆಗೆ ನಿಲುಕದ್ದು. ‘ವಾಗರ್ಥಮಿವ ಸಂಪ್ರಕ್ತೌ’ ಎಂಬ ಕವಿವಾಣಿಯಂತೆ ಮಾತು ಮತ್ತು ಮಾತಿನ ಅರ್ಥ ಒಂದರೊಳಗೊಂದು ಮಿಳಿತವಾಗಿರುವಂತೆ ಸಾಹಿತ್ಯ ರಚನೆ ಹಾಗೂ ಸಾಹಿತ್ಯ ಸಂಘಟನೆ ಇವರಲ್ಲಿ ಒಂದರೊಳಗೊಂದು ಮಿಳಿತವಾಗಿದೆ ಎಂದರೆ ತಪ್ಪಿಲ್ಲ. ಅವರ ಬದುಕಿನತ್ತ ಒಂದು ಹಿನ್ನೋಟ ಹರಿಸಿದರೆ ಬಿಚ್ಚಿಕೊಳ್ಳುವ ಸುರುಳಿಯಲ್ಲಿ ಮೊದಲಿಗೆ ಕಾಣಸಿಗುವುದು ಕಾಸರಗೋಡಿನ ಕೊಳ್ಯೂರು ಎಂಬ ಪುಟ್ಟ ಹಳ್ಳಿ. ಅಲ್ಲೇ ಜನಿಸಿದ ಮೊಗಸಾಲೆಯವರು ತನ್ನ ಪ್ರೌಢಶಾಲಾ ವಿದ್ಯಾಭ್ಯಾಸದ ನಂತರ ಉಡುಪಿಯ ಆಯುರ್ವೇದ ಕಾಲೇಜಿನಲ್ಲಿ ವೈದ್ಯಕೀಯ ಕಲಿತು ಕಾರ್ಕಳದ ಸಮೀಪದಲ್ಲಿರುವ ಕಾಂತಾವರವೆಂಬ ಹಳ್ಳಿಯ ಸರಕಾರಿ ಆರೋಗ್ಯ ಕೇಂದ್ರದಲ್ಲಿ 1965ರಲ್ಲಿ ವೈದ್ಯಾಧಿಕಾರಿಯಾಗಿ ನೇಮಕಗೊಳ್ಳುತ್ತಾರೆ. ದಕ್ಷಿಣ ಕನ್ನಡದ ಆಗಿನ ಭೂಪಟ ಹಿಡಿದು ಸೂಕ್ಷ್ಮದರ್ಶಕದ ಮೂಲಕ ನೋಡಿದರೂ ಸುಲಭವಾಗಿ ಕಣ್ಣುಗಳಿಗೆ ಗೋಚರಿಸದಂಥ ಕುಗ್ರಾಮ ಈ ಕಾಂತಾವರ. ಆದರೆ ಇದೇ ಕಾಂತಾವರಕ್ಕೆ ಅದೃಷ್ಟ ಕಾದಿತ್ತು. ಹಾಗಾಗಿಯೇ ತನ್ನ ಜೋಳಿಗೆ ತುಂಬಾ ಕನಸುಗಳನ್ನು ತುಂಬಿಕೊಂಡು ಈ ಯುವ ವೈದ್ಯ ಕಾಂತಾವರದ ನೆಲದಲ್ಲಿ ಕಾಲಿಟ್ಟ ದಿನದಿಂದ ಇದೇ ಕಾಂತಾವರ ನಿಧಾನವಾಗಿ ಎಲ್ಲರ ಕಣ್ಣುಗಳಿಗೆ ಕಾಣುವಂತಾಗಿ ಈಗ ರಾಷ್ಟ್ರಮಟ್ಟದಲ್ಲೂ ಹೆಸರು ಗಳಿಸಿದೆ. ಈ ಯುವ ವೈದ್ಯ ಕಾಂತಾವರಕ್ಕೆ ದಕ್ಕಿದ ಪುಣ್ಯವೆನ್ನಬೇಕು. ಅಲ್ಲಿ ಅಂದು ಕಾಲೂರಿದ ವೈದ್ಯನಿಗೆ ಈ ಗ್ರಾಮ ಶಾಶ್ವತ ನೆಲೆಯಾಯಿತು. ಗ್ರಾಮದ ಜನರಿಗೆ ಆರೋಗ್ಯ ಸೇವೆ ನೀಡುವುದರ ಜತೆಯಲ್ಲಿ ತಾನು ಜೋಳಿಗೆಯಲ್ಲಿ ತಂದಿದ್ದ ಕನಸುಗಳನ್ನು ಈ ವೈದ್ಯ ಒಂದೊಂದಾಗಿ ಬಿತ್ತುತ್ತಾ ಹೋದ. ಅವು ಮೊಳಕೆಯೊಡೆದು ಪುಟ್ಟ ಸಸಿಯಾಗಿ ಈಗ ಮರಗಳಾಗಿ ಆ ಮರದಿಂದ ಉದುರಿದ ಹಣ್ಣುಗಳನ್ನು ಮುಂದಿನ ದಿನಗಳಲ್ಲಿ ಜನರಿಗೆ ನೀಡುವಂತೆ ಮಾಡುವುದರಲ್ಲಿ ಆ ಯುವ ವೈದ್ಯನ ಅಂದಿನ ಒಳನೋಟ ಸ್ಪಷ್ಟವಾಗಿ ಗೋಚರಿಸುತ್ತದೆ.
ಕೃಷಿ ಸಂಸ್ಕೃತಿಯನ್ನು ಉತ್ತೇಜಿಸಲು ಇವರು ಮೊದಲು 1966ರಲ್ಲಿ ಹಾಗಿದ್ದು ರೈತ ಯುವಕ ವೃಂದ. ನಂತರ ಕನ್ನಡ ಪರ ಚಟುವಟಿಕೆಗಳನ್ನು ನಡೆಸಲು 1976ರಲ್ಲಿ ಹುಟ್ಟು ಪಡೆದ ಕನ್ನಡ ಸಂಘ ಕಾಂತಾವರ. ನಂತರದ ದಿನಗಳಲ್ಲಿ ಕರ್ನಾಟಕ ಏಕೀಕರಣದ ನೇತಾರ ಕಾಂತಾವರ ಬಾರಾಡಿ ಬೀಡಿನ ಜಿನರಾಜ ಹೆಗ್ಡೆ ನೆನಪಿನಲ್ಲಿ ಜಿನರಾಜ ಹೆಗ್ಡೆ ಸ್ಮಾರಕ ಟ್ರಸ್ಟ್ ಹಾಗೂ ಜತೆಯಲ್ಲಿಯೇ ಅವರ ಕುರಿತಾದ ಧವಳಕೀರ್ತಿ ಎಂಬ ಸಂಸ್ಮರಣಾ ಗ್ರಂಥ ಬಿಡುಗಡೆಯನ್ನೂ ಇವರು ಮಾಡಿಸಿದರು. 1976ರಲ್ಲಿ ಕನ್ನಡ ಸಂಘ ಕಾಂತಾವರನ್ನು ಹುಟ್ಟು ಹಾಕಿದ ಇವರು ಅಂದಿನಿಂದ ಇಂದಿನವರೆಗೆ ಅನೇಕ ಕನ್ನಡದ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಮೊದಲಿಗೆ ಯಾರೂ ಮಾಡಿರದ ದ.ಕ ಕಾವ್ಯ (1901-1976) ನಂತರ ದ.ಕ ಶತಮಾನದ ಕಾವ್ಯ (1900-2000) ಎಂಬೆರಡು ಅ್ಯಂಥಾಲಜಿಗಳನ್ನು ಈ ಸಂಘ ಹೊರತಂದಿದೆ. 2001ರಲ್ಲಿ ಸಂಘಕ್ಕೆ 25 ವರ್ಷ ತುಂಬಿದ ನೆನಪಿನಲ್ಲಿ ಎಪ್ರಿಲ್ 15ರಂದು ಬೆಳ್ಳಿ ಹಬ್ಬದ ಪ್ರಯುಕ್ತ ಹಿರಿಯ ಸಾಹಿತಿ ವ್ಯಾಸರಾಯ ಬಲ್ಲಾಳದ ಅಧ್ಯಕ್ಷತೆಯಲ್ಲಿ ಪೂರ್ತಿ ಒಂದು ದಿನದ ಸಾಹಿತ್ಯಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಚರಿಸಿದ್ದು ಒಂದು ಪ್ರಮುಖ ಘಟನೆ. ಕರ್ನಾಟಕ ರಾಜ್ಯದ ಸುವರ್ಣ ಸಂಭ್ರಮದಾಚರಣೆಯ ನೆನಪಿಗಾಗಿ ಪ್ರಾರಂಭವಾದ ‘‘ನಾಡಿಗೆ ನಮಸ್ಕಾರ’’ ಪುಸ್ತಕ ಮಾಲಿಕೆ ನಿರಂತರ ನಡೆದುಕೊಂಡು ಬಂದಿದೆ.ಅವಿಭಜಿತ ದ.ಕ ಜಿಲ್ಲೆಯ ಸಾಧಕರನ್ನು ಪರಿಚಯಿಸುವ ಕಿರು ಹೊತ್ತಗೆಯ ಈ ಮಾಲಿಕೆಯ ಮೂಲಕ ಪ್ರಕಟಗೊಂಡ ಪುಸ್ತಕಗಳು ಸದ್ಯವೇ ಮುನ್ನೂರರ ಸಂಖ್ಯೆಯನ್ನು ಮುಟ್ಟಲಿವೆ. ಮೊದಲು ವಿ.ಗ.ನಾಯಕರು ಈ ಮಾಲೆಯ ಸಂಪಾದಕರಾಗಿದ್ದರೆ ಈಗ ಡಾ. ಜನಾರ್ದನ ಭಟ್ಟರು ಇದನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. 2008ರ ಜನವರಿಯಿಂದ ಪ್ರತಿ ತಿಂಗಳ ಎರಡನೆಯ ಆದಿತ್ಯವಾರ ‘‘ನುಡಿ ನಮನ’’ಎಂಬ ಸಂಸ್ಕೃತಿ ಸಂವರ್ಧನ ಕಾರ್ಯಕ್ರಮ ನಡೆಯುತ್ತಿದ್ದು ಈ ಸಂದರ್ಭ ನೀಡಲ್ಪಟ್ಟ ಭಾಷಣಗಳ ಸಂಗ್ರಹ ‘ನುಡಿಹಾರ’ ಎಂಬ ಶೀರ್ಷಿಕೆಯಡಿ ಫ್ರೊ. ಅರುಣಕುಮಾರ ಅವರ ಸಂಪಾದಕತ್ವದಲ್ಲಿ ಹೊರತರಲಾಗಿದೆ. ಈ ಮಧ್ಯೆ ಕನ್ನಡದ ಸಾಹಿತ್ಯಕ ಕಾರ್ಯಕ್ರಮಗಳನ್ನು ನಡೆಸಲು 25 ಲಕ್ಷ ರೂ. ವೆಚ್ಚದಲ್ಲಿ ಕನ್ನಡ ಭವನ ನಿರ್ಮಾ ಣವನ್ನೂ ಮಾಡಲಾಗಿದೆ. ಕಾಂತಾವರ ಕನ್ನಡ ಸಂಘದ ಮೂಲಕ ಅನೇಕ ಪ್ರಶಸ್ತಿಗಳ ಆಯೋಜನೆಯಾಗಿದ್ದು ಪ್ರತಿ ವರ್ಷವೂ ಅರ್ಹ ರನ್ನು ಗುರುತಿಸಿ ಪ್ರಶಸ್ತಿ ಮೂಲಕ ಸನ್ಮಾನಿಸುವ ಕಾರ್ಯಕ್ರಮ ಹಲವಾರು ವರ್ಷಗಳಿಂದ ನಡೆಯುತ್ತಾ ಬಂದಿದೆ. ಮುದ್ದಣ ಕಾವ್ಯ ಪ್ರಶಸ್ತಿ, ಕಾಂತಾವರ ಪುರಸ್ಕಾರ, ಮಹೋಪಾದ್ಯಾಯ ಸಂಶೋಧನಾ ಪ್ರಶಸ್ತಿ, ಕರ್ನಾಟಕ ಏಕೀಕರಣ ಸಾಂಸ್ಕೃತಿಕ ಪ್ರಶಸ್ತಿ, ಕಾಂತಾವರ ಸಾಹಿತ್ಯ ಪ್ರಶಸ್ತಿ ಹಾಗೂ ವರ್ಧಮಾನ ಪ್ರಶಸ್ತಿ ಪೀಠದಿಂದ ಕೊಡುವ ವರ್ಧಮಾನ ಪ್ರಶಸ್ತಿಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು. ಕಾಂತಾವರದ ಇತಿಹಾಸದಲ್ಲಿ ಅಲ್ಲಮಪ್ರಭು ಪೀಠದ ಸ್ಥಾಪನೆ ಒಂದು ಮಹತ್ವದ ಮೈಲುಗಲ್ಲು.2008ರಲ್ಲಿ ಸ್ಥಾಪನೆಗೊಂಡ ಈ ಪೀಠದಿಂದ 2012ರಲ್ಲಿ ಪ್ರಾರಂಭಗೊಂಡ ‘ಅನುಭವದ ನಡೆ ಅನುಭಾವದ ನುಡಿ’ ತಿಂಗಳ ಸರಣಿ ಕಾರ್ಯಕ್ರಮಗಳಲ್ಲಿ ನೀಡಲ್ಪಟ್ಟ ಉಪನ್ಯಾಸಗಳು ‘ಕರಣಕಾರಣ’ವೆಂಬ ಶೀರ್ಷಿಕೆಯಲ್ಲಿ ಸಂಪುಟ ರೂಪದಲ್ಲಿ ಹೊರಬರುತ್ತಿದ್ದು ಈಗಾಗಲೇ ಐದು ಸಂಪುಟಗಳು ಹೊರಬಂದಿವೆ. 2013ರಲ್ಲಿ ದಿ.ಡಿ.ಕೆ ಚೌಟರು ನೀಡಿದ 18ಲಕ್ಷ ರೂಪಾಯಿ ಸಹಾಯ ಧನದಲ್ಲಿ ನಿರ್ಮಾಣವಾದ ‘ಚೌಟರ ಚೌಕಿ’ ಬಯಲು ರಂಗಮಂದಿರ ನಾಟಕೋತ್ಸವಗಳನ್ನು ನಡೆಸಲು ಅನುಕೂಲವಾಗಿದೆ.ಕಾಂತಾವರದ ಕಾಂತಶಕ್ತಿ ಎಂದಿಗೂ ಕುಂದಬಾರದು ಎಂಬ ಆಶಯದಿಂದ ಮೊಗಸಾಲೆಯವರು ಕಂಡ ಕನಸು ಸಂಸ್ಕೃತಿ ಗ್ರಾಮದ ನಿರ್ಮಾಣ ಇನ್ನೇನು ಕಾರ್ಯರೂಪದಲ್ಲಿ ಬರುತ್ತಲಿದೆ. ಈ ಪರಿಕಲ್ಪನೆಗೆ ಸಂಸ್ಕೃತಿ ಚಿಂತಕರಿಂದ ಸಾಹಿತ್ಯಾಸಕ್ತರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇವೆಲ್ಲಾ ಮೊಗಸಾಲೆಯವರ ಸಂಘಟನಾ ಶಕ್ತಿಯ ಫಲಶುೃತಿಗಳು. ಇನ್ನು ಇವರ ಬರವಣಿಗೆ ವಿಸ್ತಾರವನ್ನು ಅವಲೋಕಿಸಿದರೆ ನಮ್ಮ ತಿಳಿವಿಗೆ ಬರುವುದು ಅವರ ಹದಿನೇಳು ಕಾದಂಬರಿಗಳು ಆರು ಕಥಾ ಸಂಕಲನಗಳು, ಹತ್ತು ಕವನ ಸಂಕಲನಗಳು ಜತೆಗೆ ನೂರಾರು ಸೃಜನಶೀಲ ಲೇಖನಗಳು. ‘ಬಯಲು ಬೆಟ್ಟ’ ಇವರ ಆತ್ಮಕಥನ. ಇತರ ವೈದ್ಯಕೀಯ ಕೃತಿಗಳ ಜತೆ ‘ಪೂರೂರವ’ ಎಂಬ ಗೀತ ನಾಟಕವನ್ನೂ ಇವರು ರಚಿಸಿದ್ದಾರೆ. ಇವರ ಎಲ್ಲ ಸಾಹಿತ್ಯ ಕೃತಿಗಳು ಎಲ್ಲ ಕಾಲಕ್ಕೂ ಸಲ್ಲುವ ವಿಷಯ ವೈವಿಧ್ಯಗಳನ್ನು ಹೊಂದಿದ್ದು ಸಾಹಿತ್ಯ ಲೋಕದಲ್ಲಿ ಮಹತ್ವ ಪಡೆದಿವೆ. ಇವರ ‘ಉಲ್ಲಂಘನೆ’, ಮುಖಾಂತರ ಕಾದಂಬರಿಗಳ ಜತೆಗೆ ಸೀತಾಪುರದ ಕಥೆಗಳು ಇಂಗ್ಲಿಷಿನಲ್ಲಿ ಭಾಷಾಂತರಗೊಂಡಿವೆ. ‘‘ತೊಟ್ಟಿ’’ ಕಾದಂಬರಿ ತೆಲುಗಿಗೆ ಅನುವಾದಗೊಂಡರೆ ‘ನನ್ನದಲ್ಲದ್ದು’ ಮಲೆಯಾಳಕ್ಕೆ ಭಾಷಾಂತರಗೊಂಡಿದೆ. ಇವರ ಸಾಹಿತ್ಯ ಕೃತಿಗಳ ಕುರಿತೇ ಕನ್ನಡದ ಮಹತ್ವದ ಲೇಖಕರು ವಿಮರ್ಶಾ ಕೃತಿಗಳನ್ನು ಹೊರತಂದಿದ್ದಾರೆ. ಇವರ ಬದುಕು ಬರಹಗಳ ಅಧ್ಯಯನ ನಡೆಸಿ ಮಂಡಿಸಿದ ಸಂಶೋಧನೆಗಾಗಿ ಕೆಲವರು ಪಿಎಚ್‌ಡಿ ಪದವಿ ಗಳಿಸಿದ್ದಾರೆ. ಕಸಾಪದ ತಿಂಗಳ ಕಾರ್ಯಕ್ರಮವಾದ ಸಾಧಕರೊಡನೆ ಸಂವಾದ, ಸಂಸ್ಕೃತಿ ಇಲಾಖೆಯ ಮನೆಯಂಗಳದಲ್ಲಿ ಮಾತುಕತೆ ಹಾಗೂ ಬೆಂಗಳೂರು ದೂರದರ್ಶನ ನಡೆಸುವ ಸಂದರ್ಶಗಳಲ್ಲಿ ಇವರು ಅತಿಥಿಯಾಗಿ ಭಾಗವಹಿಸಿದ್ದೂ ಇದೆ. ಇವರ ಸಾಹಿತ್ಯ ಕೃತಿಗಳಿಗೆ ಮೂರು ಬಾರಿ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳಲ್ಲದೆ ಇತರ ಸಂಘ ಸಂಸ್ಥೆಗಳಿಂದ ಇಪ್ಪತ್ತಕ್ಕೂ ಹೆಚ್ಚು ಪ್ರಶಸ್ತಿಗಳು ಇವರಿಗೆ ಸಂದಿವೆ. ವಿವಿಧೆಡೆ ನಡೆದ ಸಾಹಿತ್ಯ ಪರಿಷತ್ತಿನ ಗೋಷ್ಠಿಗಳ ಅಧ್ಯಕ್ಷತೆಯ ಗೌರವವೂ ಇವರದಾಗಿದೆ.
down to earth ಕೇರಳದ ಕಣ್ಣೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಇವರ ಸಾಹಿತ್ಯದ ಕುರಿತು ವಿಚಾರ ಸಂಕಿರಣ ಇತ್ತೀಚೆಗೆ ನಡೆದಿದೆ. ಕರ್ನಾಟಕದ ಬೇರೆ ಬೇರೆ ಕಾಲೇಜುಗಳ ಕನ್ನಡ ವಿಭಾಗಗಳಲ್ಲಿ ನಿರಂತರ ಇಂಥ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಇಂಥದ್ದೊಂದು ಮೇರು ಪ್ರತಿಭೆ ನಮ್ಮ ಆಸುಪಾಸಿನಲ್ಲಿಯೇ ಇದೆ ಎಂಬುದು ನಾವೆಲ್ಲರೂ ಹೆಮ್ಮೆ ಪಡುವ ವಿಚಾರ. ಇಷ್ಟೆಲ್ಲ ಇದ್ದರೂ ಇವರೊಬ್ಬ ಎಂಬಂಥ ವ್ಯಕ್ತಿ. ತನ್ನ ಸರಳ ಸಜ್ಜನಿಕೆಯಿಂದ ಎಲ್ಲರನ್ನೂ ಒಳಗೊಳ್ಳುವ ಸ್ವಭಾವದ ಇವರಿಗೆ ‘ವಸುಧೈವ ಕುಟುಂಬಕಂ’ ಎನ್ನುವ ಸೂಕ್ತಿ ಸರಿ ಹೊಂದುತ್ತದೆ. ‘ಕೊಡುವುದೇನು ಕೊಂಬುದೇನು ಒಲವು ಸ್ನೇಹ ಪ್ರೇಮ ಅಷ್ಟೆ’ ಎಂಬ ಬೇಂದ್ರೆಯ ಏಕ ಕವನದ ಸಾಲು ಇಲ್ಲಿ ನೆನಪಿಗೆ ಬಂದರೂ ಅಚ್ಚರಿಯಿಲ್ಲ.
ಇವರ ಈ ಎಲ್ಲ ಕೆಲಸಗಳ ಹಿಂದೆ ಪ್ರೇರಣೆಯಾಗಿ ನಿಂತವರು ಇವರ ಕುಟುಂಬದವರು ಮುಖ್ಯವಾಗಿ ಇವರ ಮಗ ನಿರಂಜನ ಮೊಗಸಾಲೆ ದಂಪತಿ ಹಾಗೂ ಇವರ ಪತ್ನಿ ಪ್ರೇಮಾ ಮೊಗಸಾಲೆ. ಜತೆಗೆ ಸಾಹಿತ್ಯ ಕಾಲಕ್ಷೇಪದಲ್ಲಿ ಅಥವಾ ಸಾಹಿತ್ಯ ಕೈಂಕರ್ಯದಲ್ಲಿ ಇವರೊಡನೆ ತೊಡಗಿಸಿಕೊಳ್ಳುವ ಸಾಹಿತಿ ಹಾಗೂ ಸಾಹಿತ್ಯಾಸಕ್ತರ ಪಡೆ. ಕಾಂತಾವರವನ್ನು ತನ್ನ ಚುಂಬಕ ಶಕ್ತಿಯಿಂದ ಅಯಸ್ಕಾಂತಾವರವನ್ನಾಗಿ ಮಾಡಿದ ಇವರಿಗೆ ‘ಅಯಸ್ಕಾಂತಾವರ’ವೆಂಬ ಅಭಿನಂದನಾ ಗ್ರಂಥ ಸಮರ್ಪಿಸಿದ್ದು ಸೂಕ್ತವಾಗಿದೆ. ಇದೀಗ ತನ್ನ ಜೀವಿತದ 75 ವರ್ಷಗಳನ್ನು ಪೂರೈಸಿರುವ ಇವರ ಕುರಿತಾಗಿ ಎಲ್ಲೆಡೆಯಿಂದಲೂ ಮೆಚ್ಚುಗೆಯ ಮಾತುಗಳು ಬಂದಿವೆ. ವಿಶ್ರಾಂತ ಕುಲಪತಿ ಪ್ರೊ.ಬಿ.ಎ. ವಿವೇಕ ರೈ ಇವರ ಕುರಿತು ಹೇಳುತ್ತಾ ಮೊಗಸಾಲೆಯವರು ಕಾಂತಾವರವನ್ನು ಕಾಂತಾಮರವಾಗಿಸಿದ್ದಾರೆ ಎಂದಿರುವುದೇ ಇದಕ್ಕೆ ಸಾಕ್ಷಿ.