ಬದುಕು ಬದಲಾಗಲು ಕ್ಷಣ ಹೊತ್ತು ಸಾಕು
ಮೌಲಾಲಿ ಕೆ. ಆಲಗೂರ
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ರಾಣಾಘಾಟ್ ರೈಲು ನಿಲ್ದಾಣದಲ್ಲಿ ದಿನಂಪ್ರತಿ ತನ್ನ ಹೊಟ್ಟೆ ಪಾಡಿಗಾಗಿ ಹಾಡು ಹಾಡುತ್ತ ಪ್ರಯಾಣಿಕರನ್ನು ರಂಜಿಸಿ ಭಿಕ್ಷೆ ಬೇಡುತ್ತಿದ್ದ 60ರ ವಯಸ್ಸಿನ ರಾನು ಮಂಡೆಲ್ ಇಂದು ಬಾಲಿವುಡ್‌ನ ಜನಪ್ರಿಯ ಗಾಯಕಿಯಾಗಿದ್ದಾಳೆ. ರಾಣಾಘಾಟ್ ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತ ಹಾಡು ಹಾಡುತ್ತಿದ್ದ ರಾನು ಮಂಡೆಲ್ ತನ್ನಲ್ಲಿ ಗಾಯನದ ಬಹು ದೊಡ್ಡ ಪ್ರತಿಭೆ ಇದೆ ಎಂಬುದನ್ನು ತಿಳಿದಿರಲಿಲ್ಲ. ಕಳೆದ ತಿಂಗಳು ಭಿಕ್ಷೆ ಬೇಡಲು ಹಾಡು ಹಾಡುತ್ತಿದ್ದ ಆಕೆ ಇಂದು ಬಾಲಿವುಡ್‌ನ ಸ್ಟಾರ್ ಗಾಯಕಿಯಾಗಿದ್ದಾಳೆ.
ಸಮಾಜದಲ್ಲಿ ಅದೆಷ್ಟೋ ಜನರು ತಮ್ಮ ಭವಿಷ್ಯದ ಬದುಕು ಸುಂದರವಾಗಿಸಲು ಮತ್ತು ಕಂಡ ಕನಸು ಈಡೇರಿಸಿಕೊಳ್ಳಲು ಹಗಲು ರಾತ್ರಿ ಎನ್ನದೆ ಪರಿಶ್ರಮ ಪಡುತ್ತಿರುತ್ತಾರೆ. ಸಾಧನೆಯ ಗುರಿ ತಲುಪಲು ನಿರಂತರ ಪ್ರಯತ್ನದಲ್ಲಿರುತ್ತಾರೆ. ಆದರೆ ಅವರಿಗೆ ಕೆಲವೊಮ್ಮೆ ಅದೃಷ್ಟ ಕೈ ಕೊಡುತ್ತದೆ. ಕೆಲವರು ಪರಿಶ್ರಮ ಪಡದಿದ್ದರು ಅದೃಷ್ಟ ಚೆನ್ನಾಗಿದ್ದರೆ ಅವರು ಬದುಕು ಬದಲಾಗುತ್ತದೆ. ಈ ಅದೃಷ್ಟ ಎಂಬುವುದು ಹೀಗೆ ಯಾರ ಜೀವನದಲ್ಲಿ ಯಾವಾಗ ಬೇಕಾದರೂ ಬಂದು ಹೋಗಬಹುದು. ಶ್ರೀಮಂತ ಬಡವನಾಗಬಹುದು, ಬಡವ ಶ್ರೀಮಂತನಾಗಬಹುದು ಆದ್ದರಿಂದ ನಾವು ಸಮಾಜದಲ್ಲಿ ಯಾರನ್ನೂ ಆಸ್ತಿ ಅಂತಸ್ತು ನೋಡಿ ಅಳೆಯಬಾರದು. ಯಾರ ಕುರಿತು ಶ್ರೇಷ್ಠ, ಕನಿಷ್ಠ ಎಂದು ದೂರ ಬಾರದು. ಯಾರನ್ನು ಹಿಯಾಳಿಸಿ ಮಾತನಾಡಬಾರದು. ಏಕೆಂದರೆ ಸಮಾಜದಲ್ಲಿ ಇಂದು ವೇಸ್ಟ್ ಆಗಿ ಬಿದ್ದ ಪೇಪರ್ ನಾಳೆ ಗಾಳಿಪಟವಾಗಿ ಬಾನೆತ್ತರ ಹಾರಬಹುದು ಎಂದು ಅನುಭವಿಗಳು ಹೇಳಿದ್ದಾರೆ. ಹಿರಿಯರು ಹೇಳಿದ ಆ ಮಾತು ಇಂದು ಸತ್ಯವೆನಿಸಿದೆ. ಹೌದು ಆಕೆ 60 ವರ್ಷದ ವೃದ್ಧ ಮಹಿಳೆ. ನ್ಯೂರಾಜಿಕಲ್ ರೋಗ ಇವಳನ್ನು ನಿತ್ಯ ಕಾಡುತಿತ್ತು. ಅವಳಿಗೆ ಇದ್ದ ಒಬ್ಬಳೇ ಒಬ್ಬ ಮಗಳು ಕೂಡ ಕಷ್ಟದ ಸಮಯದಲ್ಲಿ ತಾಯಿಯ ಆರೈಕೆ ಮಾಡದೇ ಹೊರ ಹಾಕಿದಳು. ತನ್ನವರು ಅಂತ ಯಾರು ಇಲ್ಲದೆ ಆ ವೃದ್ಧೆಗೆ ಆಕಾಶವೇ ಕಳಿಚಿ ಬಿದ್ದ ಹಾಗೆ ಆಯಿತು. ಒಂದು ಕಡೆ ದೇಹ ಖಾಯಿಲೆಯಿಂದ ಬಳಲುತ್ತಿದ್ದರೂ ಆತ್ಮ ಸ್ಥೈರ್ಯ ಕಳೆದುಕೊಳ್ಳಲಿಲ್ಲ. ಎದೆ ಗುಂದಲಿಲ್ಲ. ಬದುಕು ಎಂಬ ಜಟಕಾ ಗಾಡಿ ಓಡಿಸಲೆ ಬೇಕು ಎಂದು ಅರಿತ ಆಕೆ ದಿನದ ಮೂರು ಹೊತ್ತಿನ ಊಟಕ್ಕಾಗಿ ತನ್ನಲ್ಲಿದ್ದ ಸುಂದರ ಕಂಠದಿಂದ ಹಾಡುಗಳನ್ನು ಹಾಡುತ್ತ ಭಿಕ್ಷೆ ಬೇಡುತಿದ್ದಳು. ಆ ವೃದ್ಧೆಯ ಪ್ರತಿಭೆಯನ್ನು ಕಂಡ ಅಲ್ಲಿನ ಪ್ರಯಾಣಿಕರು ಅಲ್ಪ ಸ್ವಲ್ಪ ದುಡ್ಡು, ತಿನ್ನಲು ತಿಂಡಿ ನೀಡುತ್ತಿದ್ದರು. ಆದರೆ ಆ ವೃದ್ಧೆ ರಾತ್ರೋರಾತ್ರಿ ತನ್ನ ಹಾಡಿನ ಮೂಲಕ ಫೇಮಸ್ ಆಗಿ ಬಾಲಿವುಡ್‌ನಲ್ಲಿ ಹಾಡಬೇಕು ಎಂಬ ಆಸೆ ಅವಳ ಕನಸು ಮನಸ್ಸಿನಲ್ಲಿ ಇರಲಿಲ್ಲ. ಆದರೆ ಅವಳ ಅದೃಷ್ಟ ಚೆನ್ನಾಗಿದೆ. ಆದ್ದರಿಂದ ಒಂದೇ ಒಂದು ರಾತ್ರಿ ಯಲ್ಲಿ ಆಕೆ ಹಾಡಿದ ಹಾಡಿನಿಂದ ಇಡೀ ಭಾರತಕ್ಕೆ ಪರಿಚ ಯವಾಗಿದ್ದಾಳೆ. ನಂಬಲು ಅಸಾಧ್ಯವೆನಿಸಿದರೂ ಸತ್ಯ. ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ರಾಣಾ ಘಾಟ್ ರೈಲು ನಿಲ್ದಾಣದಲ್ಲಿ ದಿನಂಪ್ರತಿ ತನ್ನ ಹೊಟ್ಟೆ ಪಾಡಿಗಾಗಿ ಹಾಡು ಹಾಡುತ್ತ ಪ್ರಯಾಣಿಕರನ್ನು ರಂಜಿಸಿ ಭಿಕ್ಷೆ ಬೇಡುತ್ತಿದ್ದ 60 ವಯಸ್ಸಿನ ರಾನು ಮಂಡೆಲ್ ಇಂದು ಬಾಲಿವುಡ್‌ನ ಜನಪ್ರಿಯ ಗಾಯಕಿಯಾಗಿದ್ದಾಳೆ. ರಾಣಾಘಾಟ್ ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತ ಹಾಡು ಹಾಡುತ್ತಿದ್ದ ರಾನು ಮಂಡೆಲ್ ತನ್ನಲ್ಲಿ ಗಾಯನದ ಬಹು ದೊಡ್ಡ ಪ್ರತಿಭೆ ಇದೆ ಎಂಬುದನ್ನು ತಿಳಿದಿರಲಿಲ್ಲ. ಕಳೆದ ತಿಂಗಳು ಭಿಕ್ಷೆ ಬೇಡಲು ಹಾಡು ಹಾಡುತ್ತಿದ್ದ ಆಕೆ ಇಂದು ಬಾಲಿವುಡ್‌ನ ಸ್ಟಾರ್ ಗಾಯಕಿಯಾಗಿದ್ದಾಳೆ. ಅದೊಂದು ದಿನ ಹೀಗೆ ಭಿಕ್ಷೆ ಬೇಡುವಾಗ ಆಕೆಯ ಸುಂದರ ಕಂಠಸಿರಿಗೆ ಮನ ಸೋತ ಒಬ್ಬ ಇಂಜಿನಿಯರ್ ಅವಳು ಹಾಡುತ್ತಿರುವ ಹಾಡನ್ನು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದ. ಆ ಹಾಡು ದೇಶಾದ್ಯಂತ ಬಾರಿ ವೈರಲ್ಲಾಗಿತ್ತು. ತುಂಬಾ ಜನಪ್ರಿಯತೆ ಗಳಿಸಿತ್ತು. ಜನರಿಂದ ಅಪಾರ ಮೆಚ್ಚುಗೆ ಪಡೆದಿತ್ತು. ಇದಾದ ಕೆಲವೇ ದಿನಗಳಲ್ಲಿ ಮುಂಬೈನ ಹಿಂದಿ ಖಾಸಗಿ ವಾಹಿನಿಯಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾನು ಮಂಡೆಲ್ ತನ್ನ ಹಾಡಿನ ಮೂಲಕ ಅಲ್ಲಿನ ಸಂಗೀತ ಮಹಾ ದಿಗ್ಗಜರು ಮತ್ತು ಖ್ಯಾತ ಗಾಯಕರೂ ಬೆರಗಾಗುವಂತೆ ಮಾಡಿದ್ದಳು. ಅತ್ಯುತ್ತಮ ಕಂಠ ಹೊಂದಿರುವ ರಾನು ಮಂಡೆಲ್ ರವರ ಹಾಡಿಗೆ ಎಲ್ಲರೂ ಮನ ಸೋತಿದ್ದರು. ನಿಮ್ಮಲ್ಲಿ ಅದ್ಭುತ ಧ್ವನಿ ಮತ್ತು ಪ್ರತಿಭೆ ಇದೆ ಎಂದು ಶ್ಲಾಘನೀಯ ವ್ಯಕ್ತಪಡಿಸಿದ್ದ ಬಾಲಿವುಡ್‌ನ ಖ್ಯಾತ ಸಂಗೀತ ಮಾಂತ್ರಿಕ, ಗಾಯಕ, ನಟ ಹಿಮೇಶ್ ರೇಷ್ಮಿಯಾ ರವರು ಮುಂಬರುವ ತಮ್ಮ ‘ಹ್ಯಾಪಿ ಹಾರ್ಡಿ’ ಮತ್ತು ‘ಹೀರ್’ ಎರಡು ಹೊಸ ಚಿತ್ರಗಳಿಗೆ ಹಾಡಲು ಅವಕಾಶ ನೀಡಿದ್ದಾರೆ. ಈ ಮೂಲಕ ಹೊಸ ಪ್ರತಿಭೆಯೊಂದುನ್ನು ಬಾಲಿವುಡ್‌ಗೆ ಪರಿಚಯಿಸಿದ್ದಾರೆ. ಈಗಾಗಲೇ ‘ತೇರಿ ಮೇರಿ ಕಹಾನಿ’ ಹಾಡಿಗೆ ಧ್ವನಿ ನೀಡಿರುವ ರಾನು ಮಂಡೆಲ್, ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಮಿಂಚುತಿದ್ದಾರೆ.
ಪ್ರತಿಯೊಬ್ಬ ಮೊಬೈಲ್ ಫೋನ್‌ನಲ್ಲಿ ಇವರ ಹಾಡಿನದ್ದೆ ಸೌಂಡು. ಅಲ್ಲದೇ ಲಕ್ಷಾಂತರ ಲೈಕ್, ಕಾಮೆಂಟ್‌ಗಳ ಸುರಿ ಮಳೆಯೇ ಹರಿದು ಬಂದಿದೆ. ರಾನು ಮಂಡೆಲ್‌ರವರ ಪ್ರತಿಭೆ ಗುರುತಿಸಿ ಹಾಡಲು ಅವಕಾಶ ಮಾಡಿಕೊಟ್ಟು ಜೊತೆಗೆ ಏಳು ಲಕ್ಷ ಹಣ ಸಂಭಾವನೆಯಾಗಿ ನೀಡಿರುವ ಬಾಲಿವುಡ್ ನಟ ಗಾಯಕ ಹಿಮೇಶ ರೇಷ್ಮಿಯಾ ರವರ ಪ್ರೋತ್ಸಾಹಕ್ಕೆ ಜನರು ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ. ಗೌರವದಿಂದ ಅಭಿನಂದಿಸಿದ್ದಾರೆ. ದೇಶದ ಎಲ್ಲಾ ಟಿವಿ ಮಾಧ್ಯಮಗಳಲ್ಲಿ ರಾನು ಮಂಡೆಲ್‌ರವರದ್ದೇ ಸುದ್ದಿ. ಕೆಲವೇ ದಿನಗಳಲ್ಲಿ ಇಷ್ಟೊಂದು ಹೆಸರು ಮಾಡಿರುವುದು ನಿಜಕ್ಕೂ ಅಭಿನಂದನಾರ್ಹ. ನ್ಯೂರಾಜಿಕಲ್ ಕಾಯಿಲೆಯಿಂದ ಬಳಲುತ್ತಿದ್ದ ರಾನು ಮಂಡೆಲ್ ರವರನ್ನು ಹೆತ್ತ ತಾಯಿ ಎಂದು ಲೆಕ್ಕಿಸದೆ ಮನೆಯಿಂದ ಹೊರ ತಳ್ಳಿ ಭಿಕ್ಷೆ ಬೇಡುವಂತೆ ಮಾಡಿದ್ದ ಮಗಳು ತನ್ನ ತಾಯಿ ಇಂದು ದೇಶಾದ್ಯಂತ ಹೆಸರು ಮಾಡಿರುವುದನ್ನು ಕಂಡು ಹತ್ತು ವರ್ಷಗಳ ಬಳಿಕ ರಾನು ಮಂಡೆಲ್‌ರವರನ್ನು ಬಂದು ಸೇರಿದ್ದಾಳೆ. ಈಗಾಗಲೇ ‘ಭೋಜಪುರಿ’, ‘ಧಬಂಗ್ 3’ ಸೇರಿದಂತೆ ಹಲವು ಚಿತ್ರಗಳಿಗೆ ಹಾಡಲು ಅವಕಾಶ ಒದಗಿ ಬಂದಿವೆ. ಅಲ್ಲದೇ ಬಾಲಿವುಡ್ ನಟ ಸಲ್ಮಾನ್ ಖಾನ್ 55 ಲಕ್ಷದ ಮನೆಯನ್ನು ಇವರಿಗೆ ಕಾಣಿಕೆಯಾಗಿ ನೀಡಲು ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳ ಬರುತ್ತಿವೆ. ದೇವರು ರಾನು ಮಂಡೆಲ್ ರವರಿಗೆ ಏನು ಕೊಡದಿದ್ದರೂ ಸುಮಧುರ ಕಂಠ ನೀಡಿದ್ದಾನೆ. ಅದನ್ನೇ ಸರಿಯಾಗಿ ಬಳಸಿಕೊಂಡ ರಾನು ಮಂಡೆಲ್ ಇಂದು ದೇಶಾದ್ಯಂತ ಹೆಸರು ಮಾಡಿದ್ದಾಳೆ. ಪ್ರತಿಭೆ ಇದ್ದರೆ ಅವಕಾಶ ಒಂದಲ್ಲ ಒಂದು ದಿನ ಹುಡುಕಿಕೊಂಡು ಬರುತ್ತದೆ ಎನ್ನುವುದಕ್ಕೆ ಜೀವಂತ ಉದಾಹರಣೆ ರಾನು ಮಂಡೆಲ್ ಆದ್ದರಿಂದ ಜೀವನದಲ್ಲಿ ಯಾರನ್ನು ಕಡೆಗಣಿಸದೆ ಮತ್ತೊಬ್ಬರ ಪ್ರತಿಭೆ ಕುರಿತು ಅಪಹಾಸ್ಯ ಮಾಡದೆ ಧನಾತ್ಮಕವಾಗಿ ಚಿಂತನೆ ನಡೆಸಿ ನಮ್ಮ ಜೊತೆಗೆ ಇತರರನ್ನು ಬೆಳೆಸೋಣ.