ಸಾಲವನ್ನು ಮರುಪಾವತಿ ಮಾಡುವಲ್ಲಿ ವಿಫಲರಾಗಿದ್ದೀರಾ?: ನಿಮ್ಮ ಹಕ್ಕುಗಳ ಬಗ್ಗೆ ನಿಮಗೆ ತಿಳಿದಿರಲಿ
ವ್ಯವಹಾರ, ಮನೆ ಖರೀದಿಯಂತಹ ಅಗತ್ಯಗಳಿಗಾಗಿ ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವುದು ಸಾಮಾನ್ಯ. ಇಂತಹ ಸಾಲಗಳ ಮರುಪಾವತಿ ಕಂತುಗಳನ್ನು ನಿಗದಿತ ಸಮಯದಲ್ಲಿ ತುಂಬಬೇಕಾಗುತ್ತದೆ. ಕೆಲವೊಮ್ಮೆ ಅನೀರಿಕ್ಷಿತ ವಿದ್ಯಮಾನಗಳಿಂದಾಗಿ ಸಾಲ ಪಡೆದಿರುವವರು ಹಣಕಾಸಿನ ಮುಗ್ಗಟ್ಟಿಗೆ ಸಿಲುಕಿ ಸಾಲವನ್ನು ಮರುಪಾವತಿಸುವಲ್ಲಿ ವಿಫಲರಾಗುತ್ತಾರೆ.
ಇಂತಹ ಸಂದರ್ಭಗಳಲ್ಲಿ ಸಾಲಕ್ಕೆ ಅಡಮಾನವಿರಿಸಿದ ಆಸ್ತಿಗಳು ಕೈತಪ್ಪಬಹುದು. ಜೀವಮಾನದ ಉಳಿತಾಯದಿಂದ ಸಂಪಾದಿಸಿದ ಆಸ್ತಿಗಳನ್ನು ಕಳೆದುಕೊಳ್ಳುವಾಗ ಯಾರಿಗೇ ಆದರೂ ನೋವಾಗುತ್ತದೆ. ಹೀಗಾಗಿ ಸಾಲ ಪಡೆದವರು ಇಂತಹ ಪರಿಸ್ಥಿತಿಗೆ ಸಿಲುಕದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ಆದರೆ ದುರದೃಷ್ಟವಶಾತ್ ಕೆಲವೊಮ್ಮೆ ಎಲ್ಲ ಪ್ರಾಮಾಣಿಕ ಪ್ರಯತ್ನಗಳನ್ನೂ ಮಾಡಿದರೂ ಸಾಲ ತೀರಿಸಲು ಸಾಧ್ಯವಾಗದೆ ಸುಸ್ತದಾರ ಎಂಬ ಹಣೆಪಟ್ಟಿಯನ್ನು ಅಂಟಿಸಿಕೊಳ್ಳುವ ಅನಿವಾರ್ಯತೆಯುಂಟಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಆತ ಸಾಲಕ್ಕೆ ಅಡಮಾನವಿರಿಸಿದ ಆಸ್ತಿಗಳ ಮೇಲೆ ಮತ್ತು ತನ್ನ ಆತ್ಮಗೌರವಕ್ಕೆ ಧಕ್ಕೆಯುಂಟಾಗದಂತೆ ಹಕ್ಕುಗಳನ್ನು ಹೊಂದಿರುತ್ತಾನೆ.
ಸಾಲದಾತರು ಅಗತ್ಯ ವಿಧಿವಿಧಾನಗಳನ್ನು ಅನುಸರಿಸಬೇಕು
ಸಾಲಬಾಕಿಯನ್ನು ವಸೂಲು ಮಾಡಲು ಕ್ರಮಗಳನ್ನು ಆರಂಭಿಸುವಾಗ ಸಾಲದಾತ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಸೂಕ್ತ ವಿಧಿವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಭದ್ರತೆಯುಳ್ಳ ಸಾಲಗಳು ಬಾಕಿಯಾದಾಗ ಸಾಲದಾತರು ಸಾಲಗಾರನು ಅಡಮಾನವಿರಿಸಿರುವ ಆಸ್ತಿಗಳನ್ನು ಹಣಕಾಸಿನ ಆಸ್ತಿಗಳ ಪ್ರತಿಭೂತಿಕರಣ ಮತ್ತು ಪುನರ್‌ನಿರ್ಮಾಣ ಮತ್ತು ಪ್ರತಿಭೂತಿ ಹಿತಾಸಕ್ತಿಗಳ ಜಾರಿ ಕಾಯ್ದೆಯಡಿ ಜಪ್ತಿ ಮಾಡಬಹುದು. ಆದರೆ ಇದಕ್ಕಾಗಿ ಅವರು ಸಾಕಷ್ಟು ಸಮಯಾವಕಾಶದೊಂದಿಗೆ ಸಾಲಗಾರನಿಗೆ ನೋಟಿಸ್ ಜಾರಿಗೊಳಿಸುವದು ಅಗತ್ಯವಾಗಿರುತ್ತದೆ.
ಸಾಲಗಾರರು ಹೊಂದಿರುವ ಹಕ್ಕುಗಳು ಹೀಗಿವೆ:
ಸೂಕ್ತ ನೋಟಿಸ್‌ನ ಹಕ್ಕು
ಸಾಲ ಮರುಪಾವತಿ ಕಂತುಗಳು 90 ದಿನಗಳನ್ನು ಮೀರಿ ಬಾಕಿಯುಳಿದರೆ ಸಾಲಗಾರನ ಖಾತೆಯನ್ನು ಅನುತ್ಪಾದಕ ಆಸ್ತಿ (ಎನ್‌ಪಿಎ) ಎಂದು ವರ್ಗೀಕರಿಸಲಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಸಾಲದಾತರು ಮೊದಲು ಸುಸ್ತಿದಾರನಿಗೆ 60 ದಿನಗಳ ನೋಟಿಸ್‌ನ್ನು ನೀಡಬೇಕಾಗುತ್ತದೆ. ಸಾಲಗಾರನು ನೋಟಿಸ್‌ನ ಅವಧಿಯಲ್ಲಿ ಸಾಲವನ್ನು ಮರುಪಾವತಿಸಲು ವಿಫಲಗೊಂಡರೆ ಬ್ಯಾಂಕು ಆತ ಅಡಮಾನವಿರಿಸಿರುವ ಆಸ್ತಿಗಳನ್ನು ಮಾರಾಟ ಮಾಡಬಹುದು. ಆದರೆ ಹೀಗೆ ಮಾರಾಟ ಮಾಡಲು ಬ್ಯಾಂಕು ಮಾರಾಟ ವಿವರಗಳನ್ನು ಉಲ್ಲೇಖಿಸಿ 30 ದಿನಗಳ ಬಹಿರಂಗ ನೋಟಿಸ್‌ನ್ನು ಹೊರಡಿಸಬೇಕಾಗುತ್ತದೆ.
ಆಸ್ತಿಗಳ ನ್ಯಾಯೋಚಿತ ವೌಲ್ಯಮಾಪನದ ಹಕ್ಕು
ಆಸ್ತಿಗಳನ್ನು ಮಾರಾಟ ಮಾಡುವ ಮುನ್ನ ಆಸ್ತಿಗಳ ನ್ಯಾಯೋಚಿತ ಬೆಲೆ,ಮೀಸಲು ಬೆಲೆ, ಹರಾಜು ಮಾರಾಟದ ದಿನಾಂಕ ಮತ್ತು ಸಮಯವನ್ನು ಉಲ್ಲೇಖಿಸಿ ಸಾಲದಾತ ಬ್ಯಾಂಕು ನೋಟಿಸೊಂದನ್ನು ಹೊರಡಿಸಬೇಕಾಗುತ್ತದೆ. ಬ್ಯಾಂಕಿನ ವೌಲ್ಯಮಾಪಕರು ಆಸ್ತಿಗೆ ಬೆಲೆಯನ್ನು ನಿಗದಿಗೊಳಿಸಿರುತ್ತಾರೆ. ತನ್ನ ಆಸ್ತಿಗೆ ಕಡಿಮೆ ಬೆಲೆಯನ್ನು ಕಟ್ಟಲಾಗಿದೆ ಎಂದು ಸಾಲಗಾರ ಭಾವಿಸಿದರೆ ಹರಾಜನ್ನು ಆತ ವಿರೋಧಿಸಬಹುದು. ಇಂತಹ ಪ್ರಕರಣದಲ್ಲಿ ನೂತನ ಖರೀದಿದಾರರನ್ನು ಹುಡುಕಿ ಅವರನ್ನು ಬ್ಯಾಂಕಿಗೆ ಪರಿಚಯಿಸುವ ಹಕ್ಕನ್ನು ಸಾಲಗಾರ ಹೊಂದಿರುತ್ತಾನೆ.
ಉಳಿದ ಹಣವನ್ನು ಪಡೆಯುವ ಹಕ್ಕು
ಸಾಲಗಾರ ತನ್ನ ಆಸ್ತಿಯನ್ನು ಬ್ಯಾಂಕು ವಶಪಡಿಸಿಕೊಂಡಿದ್ದರೂ ಹರಾಜು ಪ್ರಕ್ರಿಯೆಯ ಮೇಲೆ ನಿಗಾಯಿರಿಸಬೇಕು. ಆಸ್ತಿ ಮಾರಾಟದ ಮೊತ್ತದಲ್ಲಿ ಸಾಲಖಾತೆಯಲ್ಲಿನ ಬಾಕಿಯನ್ನು ವಜಾ ಮಾಡಿಕೊಂಡ ಬಳಿಕ ಉಳಿಯಬಹುದಾದ ಯಾವುದೇ ಹಣವನ್ನು ಮರಳಿ ಪಡೆಯುವ ಹಕ್ಕು ಸಾಲಗಾರನಿಗೆ ಇದೆ. ಇದು ಶಾಸನಬದ್ಧವಾಗಿ ಸಾಲಗಾರನಿಗೆ ಸೇರಿದ ಹಣವಾಗಿದೆ.
ಮಾನವೀಯ ದೃಷ್ಟಿಯ ಹಕ್ಕು
ಕೆಲವೊಮ್ಮೆ ಬ್ಯಾಂಕುಗಳು ತಮ್ಮ ಸಾಲಬಾಕಿಯನ್ನು ಕಟ್ಟುವಂತೆ ಸಾಲಗಾರರನ್ನು ಬಲವಂತಗೊಳಿಸಲು ರಿಕವರಿ ಏಜೆಂಟ್‌ರನ್ನು ನಿಯೋಜಿಸಿಕೊಂಡಿರುತ್ತವೆ. ಆದರೆ ಈ ಏಜೆಂಟ್‌ಗಳು ಬ್ಯಾಂಕುಗಳು ತಮ್ಮ ಬದ್ಧತಾ ಸಹಿತೆಯ ಭಾಗವಾಗಿ ಒಪ್ಪಿಕೊಂಡಿರುವ ಗೆರೆಯನ್ನು ದಾಟುವಂತಿಲ್ಲ. ಈ ಏಜೆಂಟ್‌ಗಳು ಸುಸ್ತಿದಾರರನ್ನು ಅವರು ಸೂಚಿಸುವ ಕೆಲಸದ ಸ್ಥಳದಲ್ಲಿ ಅಥವಾ ಮನೆಯಲ್ಲಿ ಭೇಟಿಯಾಗಬಹುದು. ಇಂತಹ ಭೇಟಿಯ ಸಂದರ್ಭಗಳಲ್ಲಿ ಏಜೆಂಟ್‌ಗಳು ಸಭ್ಯತೆಯ ಗಡಿಯನ್ನು ಮೀರುವಂತಿಲ್ಲ ಮತ್ತು ನಾಗರಿಕ ವರ್ತನೆಯನ್ನು ಪ್ರದರ್ಶಿಸಬೇಕಾಗುತ್ತದೆ. ಸಾಲಗಾರರನ್ನು ಅಥವಾ ಅವರ ಕುಟುಂಬ ಸದಸ್ಯರನ್ನು ಬೆದರಿಸಲು ಅಥವಾ ಅವಮಾನಿಸಲು ಏಜೆಂಟ್‌ರು ಪ್ರಯತ್ನಿಸಿದರೆ ಸಾಲಗಾರರು ಬ್ಯಾಂಕಿನೊಂದಿಗೆ ಈ ವಿಷಯವನ್ನು ಎತ್ತಬಹುದು ಮತ್ತು ಅಂತಿಮವಾಗಿ ಬ್ಯಾಂಕಿಂಗ್ ಓಂಬುಡ್ಸ್ ಮನ್ ಕಚೇರಿಗಳಿಗೆ ದೂರು ಸಲ್ಲಿಸಬಹುದು.