ಡಿಕೆಶಿ ಬಂಧನದ ಹಿಂದೆ ಸಿದ್ದರಾಮಯ್ಯ ಕೈವಾಡ: ನಳಿನ್ ಕುಮಾರ್ ಕಟೀಲ್
ಬಾಗಲಕೋಟೆ, ಸೆ. 8: ಜಾರಿ ನಿರ್ದೇಶನಾಲಯ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮೇಲೆ ಪ್ರಕರಣ ದಾಖಲಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರೇ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಕ್ರಮ ಕೈಗೊಂಡಿರುವುದು ದ್ವೇಷದ ರಾಜಕಾರಣ ಅಲ್ಲ. ಭ್ರಷ್ಟಾಚಾರದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ಸ್ಪಷ್ಟಣೆ ನೀಡಿದರು.
ಶಿವಕುಮಾರ್ ಅವರ ಮೇಲೆ 2017ರಲ್ಲಿ ಈಡಿ ದಾಳಿ ನಡೆಸಿದ್ದು, ದ್ವೇಷದ ರಾಜಕಾರಣವೆ ಆಗಿದ್ದರೆ ಚುನಾವಣೆಗೆ ಮೊದಲೇ ಬಂಧಿಸಬಹುದಿತ್ತು. ಆದರೆ, ಇದೀಗ ಮಾಡುವ ಅವಶ್ಯಕತೆ ಇರಲಿಲ್ಲ. ಮುಖ ಮುಚ್ಚಿಕೊಳ್ಳುವ ಸಲುವಾಗಿ ಈಗ ಸಲ್ಲದ ಆರೋಪ ಮಾಡುತ್ತಿದ್ದಾರೆಂದು ಟೀಕಿಸಿದರು.
2017ರಲ್ಲಿ ಈಡಿ ದಾಳಿ ನಡೆದಾಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದರು. ಒಂದು ವೇಳೆ ಡಿ.ಕೆ.ಶಿವಕುಮಾರ್ ಅವರ ಮೇಲೆ ವಿಶ್ವಾಸವಿದ್ದರೆ ದಾಳಿ ತಪ್ಪಿಸಬಹುದಿತ್ತು ಎಂದ ಕಟೀಲ್, ಡಿಕೆಶಿ ಪ್ರಭಾವಿಯಾಗಿ ಬೆಳೆಯುತ್ತಿದ್ದು, ಅವರನ್ನು ಮಟ್ಟಹಾಕುವ ಕಾರಣಕ್ಕಾಗಿ ಸಿದ್ದರಾಮಯ್ಯರೆ ಪಿತೂರಿ ನಡೆಸಿರಬಹುದು ಎಂದು ಸಂಶಯ ವ್ಯಕ್ತಪಡಿಸಿದರು.
ಲೋಕಾಯುಕ್ತ ಅಥವಾ ಸಿಐಡಿ ಶಿವಕುಮಾರ್ ಮೇಲೆ ದಾಳಿ ಮಾಡಿಲ್ಲ. ಹೀಗಾಗಿ ಬಿಜೆಪಿ ಸರಕಾರಕ್ಕೂ, ಶಿವಕುಮಾರ್ ಪ್ರಕರಣಕ್ಕೂ ಸಂಬಂಧವಿಲ್ಲ. ಮೊದಲು ಐಟಿ ದಾಳಿಯಾಗಿದೆ. ತಪ್ಪುಗಳು ಕಂಡು ಬಂದರೆ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸುತ್ತದೆ.
ಪರಿಶೀಲಿಸಿದ ನಂತರವೇ ಪ್ರಕರಣ ದಾಖಲಿಸಲಾಗಿದೆ. ಅನಗತ್ಯವಾಗಿ ಯಾರ ವಿರುದ್ಧವೂ ಈಡಿ ಪ್ರಕರಣ ದಾಖಲಿಸುವುದಿಲ್ಲ ಎಂದ ನಳೀನ್ ಕುಮಾರ್ ಕಟೀಲ್, ವರ್ಗಾವಣೆಯಲ್ಲಿ ಯಾವುದೇ ಹಸ್ತಕ್ಷೇಪವಿಲ್ಲ ಎಂದು ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ನೀಡಿದರು.