ಸಮಸ್ಯೆಗಳನ್ನು ತುರ್ತು ಬಗೆಹರಿಸಲು 15 ದಿನಗಳಿಗೊಮ್ಮೆ ಬೆಂಗಳೂರು ಸುತ್ತಾಟ: ಯಡಿಯೂರಪ್ಪ
ರಾಜಧಾನಿ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಪ್ರದಕ್ಷಿಣೆ
ಬೆಂಗಳೂರು, ಸೆ.8: ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿನ ಸಮಸ್ಯೆಗಳನ್ನು ತುರ್ತು ಬಗೆಹರಿಸಲು 15 ದಿನಗಳಿಗೊಮ್ಮೆ ನಗರ ಪ್ರದಕ್ಷಿಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ರವಿವಾರ ನಗರದ ಹಲವು ಕಡೆ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ ಬಳಿಕ ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಪ್ರತಿ 15 ದಿನಗಳಿಗೊಮ್ಮೆ ನಗರದ ಒಂದೊಂದು ಭಾಗಕ್ಕೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡಲಿದ್ದೇನೆ. ಒಟ್ಟಾರೆಯಾಗಿ ನಗರವನ್ನು ಮುಂದಿನ ದಿನಗಳಲ್ಲಿ ವಿಶ್ವದರ್ಜೆಯ ನಗರವಾಗಿ ರೂಪಿಸುವ ಗುರಿ ಹೊಂದಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದರು.
ಮೆಟ್ರೋ ಕಾಮಗಾರಿ ನಡೆಸುವ ಸ್ಥಳಗಳಲ್ಲಿ ರಸ್ತೆ ಮತ್ತು ಪಾದಚಾರಿ ರಸ್ತೆಗಳ ದುರಸ್ಥಿ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಸಂಚಾರ ದಟ್ಟಣೆ ಹೆಚ್ಚಿರುವ ಸ್ಥಳಗಳಲ್ಲಿ ಪರ್ಯಾಯ ರಸ್ತೆಗಳನ್ನು ಗುರುತಿಸಿ, ಅವುಗಳನ್ನು ಸುಸ್ಥಿತಿಯಲ್ಲಿಡುವ ಜತೆಗೆ ಒತ್ತುವರಿಯಾಗದಂತೆ ಎಚ್ಚರ ವಹಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ ಎಂದು ಮಾಹಿತಿ ನೀಡಿದರು.
ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆಯಿಂದ ಬರುವ ಜಲಮಂಡಳಿಯ ಸ್ಯಾನಿಟರಿ ಪಂಪಿಂಗ್ ಲೈನ್ ಕಾಮಗಾರಿ15 ದಿನಗಳಲ್ಲಿ ಪೂರ್ಣ ಗೊಳಿಸಲಾಗುವುದು. ಅದೇ ರೀತಿ, ಆ ಭಾಗದ ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ ಭೇಟಿ ನೀಡಿದ್ದು, ಸಂಚಾರ ದಟ್ಟಣೆ ನಿವಾರಣೆಗೆ ರೂಪಿಸಿರುವ ಯೋಜನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ ಎಂದು ಯಡಿಯೂರಪ್ಪ ತಿಳಿಸಿದರು.
ವೈಟ್‌ಫೀಲ್ಡ್ ಕಾರಿಡಾರ್‌ನ ಕೆಆರ್‌ಪುರಂ ನಲ್ಲಿ ಮೆಟ್ರೋ ಕಾಮಗಾರಿಗಳನ್ನು ಪರಿಶೀಲಿಸಿದ್ದು, ಔಟರ್‌ರಿಂಗ್ ರಸ್ತೆ ಮತ್ತು ಹಳೇ ಮದ್ರಾಸ್ ರಸ್ತೆ ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಬಸ್, ರೈಲ್ವೆ ಹಾಗೂ ಮೆಟ್ರೋ ನಿಲ್ದಾಣಗಳನ್ನು ಸಂಪರ್ಕಿಸಲು ರೂಪಿಸಿರುವ ಯೋಜನೆಯ ಕುರಿತು ಚರ್ಚಿಸಲಾಗಿದೆ ಎಂದ ಅವರು, 2021ರೊಳಗೆ ವೈಟ್‌ಫೀಲ್ಡ್ ಮೆಟ್ರೋ ಲೈನ್ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಹೆಬ್ಬಾಳ ಜಂಕ್ಷನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೆಬ್ಬಾಳ ಮೇಲ್ಸುತುವೆ 5 ಲೇನ್ ಸೇರ್ಪಡೆ ಮತ್ತು ಕೆಳ ಸೇತುವೆ ರಸ್ತೆ ನಿರ್ಮಾಣದ ಕುರಿತು ರೈಟ್ಸ್ ಸಂಸ್ಥೆ ಅಧ್ಯಯನ ನಡೆಸುತ್ತಿದ್ದು, ಈ ವರದಿಯನ್ನು ಶೀಘ್ರವೇ ಸಲ್ಲಿಸುವಂತೆ ಸೂಚಿಸಿದ್ದೇನೆ ಎಂದರು.
ಕೆಆರ್‌ಪುರ ಮತ್ತು ಸಿಲ್ಕ್ ಬೋರ್ಡ್ ಜಂಕ್ಷನ್ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವ ಪರಿಣಾಮ ಐಟಿ-ಬಿಟಿ ಕಂಪೆನಿಗಳಿಗೆ ಪ್ರತಿವರ್ಷ ಒಂದು ಸಾವಿರ ಕೋಟಿ ರೂ. ನಷ್ಟವಾಗುತ್ತಿದ್ದು, ಜನಸಂಖ್ಯೆ ಹೆಚ್ಚಿದಂತೆ ರಸ್ತೆಗಳ ವಿಸ್ತೀರ್ಣ ಸಾಕಾಗುತ್ತಿಲ್ಲ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನಮ್ಮ ಮೆಟ್ರೋ ಎರಡನೆ ಹಂತದ ಕಾಮಗಾರಿಯನ್ನು ವೇಗವಾಗಿ ಮಾಡಲು ಹಾಗೂ ಪೆರಿಫೆರಲ್ ರಿಂಗ್ ರಸ್ತೆ ಕಾಮಗಾರಿ ಶೀಘ್ರವೇ ಕೈಗೆತ್ತಿಕೊಳ್ಳಲು ಹೇಳಲಾಗಿದೆ ಎಂದು ಅವರು ತಿಳಿಸಿದರು.