ಅಧಿಕ ರಕ್ತದೊತ್ತಡ ಮತ್ತು ಹೃದಯದ ಆರೋಗ್ಯ: ಗಮನದಲ್ಲಿಡಬೇಕಾದ 10 ವಿಷಯಗಳು
ಹೈಪರ್ಟೆನ್ಶನ್ ಅಥವಾ ಅಧಿಕ ರಕ್ತದೊತ್ತಡವು ಇತರ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಧಿಕ ರಕ್ತದೊತ್ತಡಕ್ಕೆ ಸೂಕ್ತ ಚಿಕಿತ್ಸೆ ಪಡೆಯದೆ ಕಡೆಗಣಿಸಿದರೆ ಅದು ರಕ್ತನಾಳಗಳಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ರಕ್ತನಾಳಗಳ ಭಿತ್ತಿಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹಗೊಳ್ಳಲು ಅವಕಾಶವನ್ನು ಕಲ್ಪಿಸುತ್ತದೆ. ಇದರಿಂದಾಗಿ ಹೃದಯದ ಸ್ನಾಯುಗಳಿಗೆ ರಕ್ತಪೂರೈಕೆಗೆ ತಡೆಯುಂಟಾಗಿ ಹೃದಯಾಘಾತ ಸಂಭವಿಸುತ್ತದೆ.
ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ತಮ್ಮ ಆರೋಗ್ಯವನ್ನು ಕಾಯ್ದುಕೊಳ್ಳಬಹುದು ಮತ್ತು ಹೃದ್ರೋಗಕ್ಕೆ ಗುರಿಯಾಗುವ ಅಪಾಯದಿಂದ ದೂರವಿರಬಹುದು.
► ಸೊಂಟದ ಸುತ್ತಳತೆಯತ್ತ ಗಮನವಿರಲಿ
ನೀವು ಅತಿಯಾದ ತೂಕವನ್ನು ಹೊಂದಿದ್ದರೆ ಅದನ್ನು ಕಡಿಮೆ ಮಾಡಿಕೊಳ್ಳುವುದು ರಕ್ತದೊತ್ತಡವನ್ನು ನಿಯಂತ್ರಿಸಲು ಅತ್ಯುತ್ತಮ ಮಾರ್ಗವಾಗಿದೆ. ಅತಿಯಾದ ತೂಕವನ್ನು ಹೊಂದಿರುವುದು ರಕ್ತದೊತ್ತಡ ಹೆಚ್ಚುವಂತೆ ಮಾಡುತ್ತದೆ ಮತ್ತು ಹೃದ್ರೋಗಕ್ಕೆ ಗುರಿಯಾಗುವ ಅಪಾಯಕ್ಕೆ ಸಿಲುಕಿಸುತ್ತದೆ. ದೇಹತೂಕದೊಂದಿಗೆ ಸೊಂಟದ ಸುತ್ತಳತೆಯ ಮೇಲೆ ನಿಗಾಯಿರಿಸುವುದೂ ಮುಖ್ಯವಾಗಿದೆ ಮತ್ತು ನಿಮ್ಮ ಸೊಂಟದ ಸುತ್ತ ಅತಿಯಾದ ಕೊಬ್ಬು ಸಂಗ್ರಹಗೊಳ್ಳಲು ಬಿಡಬೇಡಿ. ಸೊಂಟದ ಸುತ್ತಳತೆ ಹೆಚ್ಚಾದಷ್ಟೂ ರಕ್ತದೊತ್ತಡವೂ ಹೆಚ್ಚುತ್ತಿರುತ್ತದೆ. ಪುರುಷರ ಸೊಂಟದ ಸುತ್ತಳತೆ 40 ಇಂಚು ಮತ್ತು ಅದಕ್ಕೂ ಹೆಚ್ಚಿದ್ದರೆ ಮತ್ತು ಮಹಿಳೆಯರಲ್ಲಿ ಅದು 35 ಇಂಚು ಮತ್ತು ಅದಕ್ಕಿಂತ ಹೆಚ್ಚಿದ್ದರೆ ಅಂತಹವರು ಅಧಿಕ ರಕ್ತದೊತ್ತಡದ ಅಪಾಯವನ್ನು ಎದುರಿಸುತ್ತಿರುತ್ತಾರೆ.
► ವ್ಯಾಯಾಮ ಅಗತ್ಯ
ರಕ್ತದೊತ್ತಡ ಮಟ್ಟವನ್ನು ಇಳಿಸಲು ದಿನಕ್ಕೆ ಕನಿಷ್ಠ 30 ನಿಮಿಷಗಳ ವ್ಯಾಯಾಮವು ನೆರವಾಗುತ್ತದೆ. ನಿಯಮಿತ ದೈಹಿಕ ಚಟುವಟಿಕೆಗಳು ಶರೀರದ ಒಟ್ಟಾರೆ ಆರೋಗ್ಯವನ್ನು ಕಾಯ್ದುಕೊಳ್ಳಲು ಮತ್ತು ವಯಸ್ಸಾಗುವುದನ್ನು ನಿಧಾನಗೊಳಿಸಲು ನೆರವಾಗುತ್ತವೆ. ಯಾವುದೇ ವಿಧದ ವ್ಯಾಯಾಮವಾದರೂ ಸರಿ,ಅದನ್ನು ನಿಯಮಿತವಾಗಿ ಮಾಡಿ.
► ಆರೋಗ್ಯಕರ ಆಹಾರ ಸೇವಿಸಿ
ಆರೋಗ್ಯ ಮತ್ತು ದೈಹಿಕ ಕ್ಷಮತೆಯನ್ನು ಕಾಯ್ದುಕೊಳ್ಳಲು ಆರೋಗ್ಯಕರ ಆಹಾರ ಸೇವನೆಯು ಅತ್ಯಂತ ಮುಖ್ಯವಾಗಿದೆ. ಅಧಿಕ ರಕ್ತದೊತ್ತಡದಿಂದ ದೂರವಿರಲು ನಿಮ್ಮ ಆಹಾರದಲ್ಲಿ ಇಡಿಯ ಧಾನ್ಯಗಳು,ಹಣ್ಣುಗಳು,ತರಕಾರಿಗಳು ಮತ್ತು ಕಡಿಮೆ ಕೊಬ್ಬಿನ ಡೇರಿ ಉತ್ಪನ್ನಗಳನ್ನು ಸೇರಿಸಿಕೊಳ್ಳಿ.
► ಉಪ್ಪಿಗೆ ‘ನೋ’ಎನ್ನಿ
ಉಪ್ಪು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ,ಹೀಗಾಗಿ ನೀವು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ನಿಮ್ಮ ಆಹಾರದಲ್ಲಿ ಸೋಡಿಯಂ ಬಳಕೆಗೆ ಕಡಿವಾಣ ಹಾಕಬೇಕಾಗುತ್ತದೆ. ಆಹಾರದಲ್ಲಿ ಉಪ್ಪನ್ನು ಬಳಸುವ ಬದಲು ವಿವಿಧ ಮಸಾಲೆಗಳನ್ನು ಸೇರಿಸಿಕೊಳ್ಳಿ. ದಿಢೀರ್ನೆ ಉಪ್ಪನ್ನು ವರ್ಜಿಸಲಾಗದಿದ್ದರೆ ದಿನೇ ದಿನೇ ಅದರ ಪ್ರಮಾಣವನ್ನು ಕಡಿಮೆ ಮಾಡುತ್ತಿದ್ದರೆ ಕಾಲಕ್ರಮೇಣ ಅದರ ಸೇವನೆಯನ್ನು ಬಿಡಲು ಸಾಧ್ಯವಾಗುತ್ತದೆ. ಇದರಿಂದ ಹೃದ್ರೋಗಗಳಿಗೆ ಗುರಿಯಾಗುವ ಅಪಾಯವನ್ನು ತಗ್ಗಿಸಬಹುದು.
► ಧೂಮ್ರಪಾನ ಬೇಡ
ಧೂಮ್ರಪಾನಿಗಳು ಇತರರಿಗಿಂತ ಹೆಚ್ಚು ಅಧಿಕ ರಕ್ತದೊತ್ತಡಕ್ಕೆ ಗುರಿಯಾಗುವ ಅಪಾಯವನ್ನು ಎದುರಿಸುತ್ತಿರುತ್ತಾರೆ. ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗಗಳ ಅಪಾಯದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಬಯಸುವವರು ಈ ಚಟವನ್ನು ಬಿಡುವುದು ಅತ್ಯಗತ್ಯವಾಗುತ್ತದೆ.
► ಮದ್ಯಪಾನ
ಎಲ್ಲೋ ಅಪರೂಪಕ್ಕೆ ಕೊಂಚ ಮದ್ಯವನ್ನು ಸೇವಿಸುವುದು ಸಮಸ್ಯೆಯನ್ನುಂಟು ಮಾಡಲಿಕ್ಕಿಲ್ಲ. ಆದರೆ ಅದೇ ಒಂದು ಚಟವಾಗಿ,ದಿನವೂ ಅದರಲ್ಲೇ ತೇಲುತ್ತಿದ್ದರೆ ಅಧಿಕ ರಕ್ತದೊತ್ತಡಕ್ಕೆ ಗುರಿಯಾಗುವ ಅಪಾಯವು ಹೆಚ್ಚಾಗುತ್ತದೆ.
► ಕೆಫೀನ್ ಸೇವನೆಗೆ ಮಿತಿಯಿರಲಿ
ಕಾಫಿಯು ಕೆಫೀನ್ ಅನ್ನು ಒಳಗೊಂಡಿರುತ್ತದೆ ಮತ್ತು ಪ್ರತಿದಿನ ಅತಿಯಾದ ಕಾಫಿ ಸೇವನೆಯು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ ಮತ್ತು ಜೀವವನ್ನು ಗಂಡಾಂತರಕ್ಕೆ ಸಿಕ್ಕಿಸಬಲ್ಲದು. ಈ ಅಪಾಯದಿಂದ ದೂರವಿರಲು ಕಾಫಿ ಸೇವನೆಯ ಮೇಲೆ ಮಿತಿಯಿರಲಿ.
► ಒತ್ತಡವನ್ನು ದೂರ ಮಾಡಿ
ಒತ್ತಡವೂ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ನೀವು ಒತ್ತಡವನ್ನು ಅನುಭವಿಸುತ್ತಿದ್ದರೆ ಅದಕ್ಕೆ ನಿಮ್ಮ ಉದ್ಯೋಗ ಅಥವಾ ಕುಟುಂಬ ಅಥವಾ ಗೆಳೆಯರು ಕಾರಣರೇ ಎನ್ನುವುದನ್ನು ನಿರ್ಧರಿಸಿ ಸಮಸ್ಯೆಯನ್ನು ಮೂಲದಲ್ಲಿ ನಿವಾರಿಸಲು ಪ್ರಯತ್ನಿಸಿ ಮತ್ತು ಧನಾತ್ಮಕ ಧೋರಣೆಯೊಂದಿಗೆ ಬದುಕಿ. ಜೀವನದಲ್ಲಿ ಧನಾತ್ಮಕತೆ ಬಹಳಷ್ಟನ್ನು ಮಾಡಬಲ್ಲದು ಎನ್ನುವುದು ನೆನಪಿನಲ್ಲಿರಲಿ.
► ಕೊಲೆಸ್ಟ್ರಾಲ್ ಮಟ್ಟಗಳ ಮೇಲೆ ನಿಗಾಯಿರಲಿ
ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಅಧಿಕವಾಗಿದ್ದರೆ ಅದು ಹೃದ್ರೋಗಕ್ಕೆ ಕಾರಣವಾಗಬಲ್ಲದು. ಸಾಮಾನ್ಯವಾಗಿ ಕೊಲೆಸ್ಟ್ರಾಲ್ ಮಟ್ಟ 200 ಎಂಜಿ/ಡಿಎಲ್ಗಿಂತ ಕಡಿಮೆಯಿರಬೇಕು. ಕೊಲೆಸ್ಟ್ರಾಲ್,ಸ್ಯಾಚ್ಯುರೇಟೆಡ್ ಫ್ಯಾಟ್ ಮತ್ತು ಸಂಸ್ಕರಿತ ಸಕ್ಕರೆ ಕಡಿಮೆಯಿರುವ ಮತ್ತು ನಾರು ಹೆಚ್ಚಿರುವ ಆಹಾರಗಳನ್ನು ಸೇವಿಸುವ ಮೂಲಕ ಆರೋಗ್ಯಕರ ಕೊಲೆಸ್ಟ್ರಾಲ್ ಮಟ್ಟವನ್ನು ಕಾಯ್ದುಕೊಳ್ಳಬಹುದು.
► ರಕ್ತದಲ್ಲಿ ಸಕ್ಕರೆಯ ಮಟ್ಟದ ಮೇಲೆ ನಿಯಂತ್ರಣವಿರಲಿ
ಮಧುಮೇಹ ಹೃದ್ರೋಗಕ್ಕೆ ಪ್ರಮುಖ ಕಾರಣಗಳಲ್ಲೊಂದಾಗಿದೆ. ಹೀಗಾಗಿ ವ್ಯಕ್ತಿ ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿದ್ದರೆ ಅದು ಅತ್ಯಂತ ಅಪಾಯಕಾರಿಯಾಗಬಹುದು. ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವುದು ಮತ್ತು ಮಧುಮೇಹವಿದ್ದರೆ ಸೂಕ್ತ ಔಷಧಿಗಳ ಮೂಲಕ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ.